ಪಾಕಿಸ್ತಾನದಲ್ಲಿ 3 ಹೆಣ್ಣುಮಕ್ಕಳ ತಾಯಿಯ ತಲೆಗೆ ಮೊಳೆ ಹೊಡೆದ ಚಿಕಿತ್ಸಕ; ಇಕ್ಕಳದಿಂದ ತೆಗೆಯಲು ಯತ್ನಿಸಿ ಆಸ್ಪತ್ರೆ ಸೇರಿದ ಗರ್ಭಿಣಿ

ಆಸ್ಪತ್ರೆಗೆ ದಾಖಲಾದ ಆಕೆಗೆ ಎಕ್ಸ್​ ರೇ ಮಾಡಲಾಯಿತು. ಆಗ ಅವಳ ತಲೆಯಲ್ಲಿ ಸುಮಾರು 2 ಇಂಚು ಉದ್ದದ ಮೊಳೆಯನ್ನು ಆಕೆಯ ಹಣೆಗಿಂತ ಸ್ವಲ್ಪ ಮೇಲ್ಭಾಗದಲ್ಲಿ ತಲೆಗೆ ಸೇರಿಸಿದ್ದು ಗೊತ್ತಾಯಿತು.

ಪಾಕಿಸ್ತಾನದಲ್ಲಿ 3 ಹೆಣ್ಣುಮಕ್ಕಳ ತಾಯಿಯ ತಲೆಗೆ ಮೊಳೆ ಹೊಡೆದ ಚಿಕಿತ್ಸಕ; ಇಕ್ಕಳದಿಂದ ತೆಗೆಯಲು ಯತ್ನಿಸಿ ಆಸ್ಪತ್ರೆ ಸೇರಿದ ಗರ್ಭಿಣಿ
ಸಾಂಕೇತಿಕ ಚಿತ್ರ
TV9kannada Web Team

| Edited By: Lakshmi Hegde

Feb 09, 2022 | 4:23 PM

ಗರ್ಭಿಣಿ ಮಹಿಳೆಯೊಬ್ಬಳ ತಲೆಗೆ ಮೊಳೆ ಹೊಡೆದ ವಿಚಿತ್ರ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಈ ಬಗ್ಗೆ ವೈದ್ಯರೊಬ್ಬರು ಮಾಹಿತಿ ನೀಡಿದ್ದು, ಮಹಿಳೆಗೆ ಗಂಡು ಮಗು ಹುಟ್ಟಲಿ ಎಂಬ ಹೆಬ್ಬಯಕೆಯಿಂದ ಮಹಿಳೆ, ನಿಗೂಢ ತಂತ್ರಗಳನ್ನು ಬಳಸಿ ಚಿಕಿತ್ಸೆ ನೀಡುವ ವೈದ್ಯನೊಬ್ಬನಿಂದ ತಲೆಗೆ ಮೊಳೆ ಹೊಡೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.  ಇಂಥ ಶೋಷಣೆ, ಮೂಢನಂಬಿಕೆ ಪಾಕಿಸ್ತಾನದಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಅತೀಂದ್ರಿಯ ಸೂಫಿ ಸಿದ್ಧಾಂತದ ಆಚರಣೆಗಳನ್ನು ಅಭ್ಯಸಿಸಿರುವ ಈ  ಚಿಕಿತ್ಸಕರು ಅದೆಷ್ಟೋ ವಿರೋಧದ ಮಧ್ಯೆಯೂ ಈ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಅಲ್ಲಿನ ಕೆಲವು ಮಾಧ್ಯಮಗಳೇ ವರದಿ ಮಾಡಿವೆ. 

ಈ ಮಹಿಳೆ ಪಾಕಿಸ್ತಾನದ ಪೇಶಾವರದ ಆಸ್ಪತ್ರೆಗೆ ದಾಖಲಾಗಿದ್ದಳು. ಅತೀಂದ್ರಿಯ ಸೂಫಿ ಚಿಕಿತ್ಸಕ ತನ್ನ ತಲೆಗೆ ಹೊಡೆದ ಮೊಳೆಯನ್ನು ಇಕ್ಕಳದ ಸಹಾಯದಿಂದ ಆಕೆ ತೆಗೆಯಲು ಯತ್ನಿಸಿದ್ದಳು. ಆಕೆಗೆ ಎಚ್ಚರವಿದ್ದರೂ, ಕೂಡ ತಡೆಯಲಾಗದಷ್ಟು ನೋವಿನಿಂದ ಬಳಲುತ್ತಿದ್ದಳು.  ಈಗಾಗಲೇ ಮೂರು ಹೆಣ್ಣುಮಕ್ಕಳ ತಾಯಿಯಾಗಿರುವ ಮಹಿಳೆ ಇದೀಗ ಮತ್ತೆ ಗರ್ಭಿಣಿ ಎಂದು ವೈದ್ಯ ಹೈದರ್​ ಖಾನ್​ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಮೊಳೆಯನ್ನು ಆಕೆಯ ತಲೆಯಿಂದ ತೆಗೆದು ಚಿಕಿತ್ಸೆ ನೀಡಿದ್ದಾರೆ.

ಆಸ್ಪತ್ರೆಗೆ ದಾಖಲಾದ ಆಕೆಗೆ ಎಕ್ಸ್​ ರೇ ಮಾಡಲಾಯಿತು. ಆಗ ಅವಳ ತಲೆಯಲ್ಲಿ ಸುಮಾರು 2 ಇಂಚು ಉದ್ದದ ಮೊಳೆಯನ್ನು ಆಕೆಯ ಹಣೆಗಿಂತ ಸ್ವಲ್ಪ ಮೇಲ್ಭಾಗದಲ್ಲಿ ತಲೆಗೆ ಸೇರಿಸಿದ್ದು ಗೊತ್ತಾಯಿತು. ಅದೃಷ್ಟವೆಂದರೆ ಆ ಮೊಳೆ ಮಹಿಳೆಯ ಮಿದುಳಿಗೆ ತಗುಲಿರಲಿಲ್ಲ. ಮೊಳೆಯನ್ನು ತಲೆಗೆ ಸೇರಿಸಲು ಸುತ್ತಿಗೆ ಅಥವಾ ಇನ್ಯಾವುದೋ ದೊಡ್ಡದಾದ ವಸ್ತುವನ್ನೇ ಬಳಸಲಾಗಿದೆ ಎಂದೂ ಖಾನ್​ ಮಾಹಿತಿ ನೀಡಿದ್ದಾರೆ.  ಈ ಬಗ್ಗೆ ಕೇಳಿದಾಗ ಮೊದಲು ಆಕೆ ಸರಿಯಾಗಿ ಉತ್ತರ ನೀಡಲಿಲ್ಲ. ಗಂಡು ಮಗುವಿನ ಆಸೆಗೆ ಒಬ್ಬ ವಾಮಾಚಾರಿ ಚಿಕಿತ್ಸಕನ ಬಳಿ ಹೋಗಿದ್ದೆವು. ಅವರ ಸಲಹೆಯಂತೆ ನಾನು ನನ್ನ ತಲೆಗೆ ಮೊಳೆ ಹೊಡೆದುಕೊಂಡೆ ಎಂದು ಹೇಳಿದ್ದಳು. ಆದರೆ ನಂತರ ಗಟ್ಟಿಯಾಗಿ ವಿಚಾರಣೆ ಮಾಡಿದಾಗ, ಆ ಚಿಕಿತ್ಸಕನೇ ಖುದ್ದಾಗಿ ಮೊಳೆ ಹೊಡೆದಿದ್ದಾನೆ ಎಂದು ಸತ್ಯ ಬಾಯ್ಬಿಟ್ಟಿದ್ದಾಳೆ.  ಈ ಬಗ್ಗೆ ಸದ್ಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಆರೋಪಿಯನ್ನು ಹಿಡಿದು ವಿಚಾರಣೆಗೆ ಒಳಪಡಿಸಲು ಸಿದ್ಧವಾಗಿದ್ದಾರೆ. ಅದಕ್ಕೂ ಮೊದಲು ಮಹಿಳೆಯನ್ನು ವಿಚಾರಣೆಗೆ ಒಳಪಡಿಸುವುದಾಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:  Karnataka Hijab Row: ಬೆಂಗಳೂರಿನಲ್ಲಿ ಶಾಲಾ-ಕಾಲೇಜು ಸುತ್ತಮುತ್ತ ನಿಷೇಧಾಜ್ಞೆ ಜಾರಿ; ಧರಣಿ, ಪ್ರತಿಭಟನೆ ನಡೆಸುವಂತಿಲ್ಲ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada