ಪುಟಿನ್ ಬೆಳಗ್ಗೆ ಬಣ್ಣ ಬಣ್ಣದ ಮಾತುಗಳಾಡಿ, ಸಂಜೆ ಬಾಂಬ್ ಹಾಕ್ತಾರೆ: ಡೊನಾಲ್ಡ್ ಟ್ರಂಪ್
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿದೆ. ಅಮೆರಿಕ ಮತ್ತೊಮ್ಮೆ ಉಕ್ರೇನ್‌ನೊಂದಿಗೆ ದೃಢವಾಗಿ ನಿಂತಿರುವುದು ಕಂಡುಬರುತ್ತದೆ. ಅಮೆರಿಕವು ಉಕ್ರೇನ್‌ಗೆ ಪೇಟ್ರಿಯಾಟ್ ವಾಯು ರಕ್ಷಣಾ ಕ್ಷಿಪಣಿಗಳನ್ನು ಕಳುಹಿಸಲಿದೆ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದರು. ಇಷ್ಟೇ ಅಲ್ಲ, ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಾಷಿಂಗ್ಟನ್, ಜುಲೈ 14: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮತ್ತೊಮ್ಮೆ ತಮ್ಮ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ. ‘‘ಪುಟಿನ್ ಬೆಳಗ್ಗೆ ಬಣ್ಣ ಬಣ್ಣದ ಮಾತಾಡಿ, ಸಂಜೆ ಬಾಂಬ್ ಹಾಕುವ ವ್ಯಕ್ತಿ’’ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕವು ಉಕ್ರೇನ್‌ಗೆ ಪೇಟ್ರಿಯಾಟ್ ವಾಯು ರಕ್ಷಣಾ ವ್ಯವಸ್ಥೆಯನ್ನು ನೀಡುವುದಾಗಿ ಟ್ರಂಪ್ ಘೋಷಿಸಿದರು. ಇದಕ್ಕಾಗಿ ಟ್ರಂಪ್ ಈ ವಾರ ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರನ್ನು ಭೇಟಿ ಮಾಡಲಿದ್ದಾರೆ.
ಟ್ರಂಪ್‌ಗೆ ಆಪ್ತರಾಗಿರುವ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ, ಯುದ್ಧವು ಈಗ ನಿರ್ಣಾಯಕ ತಿರುವಿನಲ್ಲಿದೆ ಎಂದು ಹೇಳಿದ್ದಾರೆ. ರಷ್ಯಾ ವಿರುದ್ಧ ಉಕ್ರೇನ್‌ಗೆ ಮಿಲಿಟರಿ ಬೆಂಬಲ ನೀಡುವುದನ್ನು ಟ್ರಂಪ್ ಬೆಂಬಲಿಸಿದ್ದಾರೆ. ಗ್ರಹಾಂ ಪ್ರಕಾರ, ಮುಂಬರುವ ದಿನಗಳಲ್ಲಿ ಉಕ್ರೇನ್‌ಗೆ ದಾಖಲೆಯ ಮಟ್ಟದಲ್ಲಿ ಶಸ್ತ್ರಾಸ್ತ್ರಗಳ ಪೂರೈಕೆ ಪ್ರಾರಂಭಿಸಲಾಗುವುದು.
ಟ್ರಂಪ್ ಅವರನ್ನು ಹಗುರವಾಗಿ ತೆಗೆದುಕೊಂಡಿರುವುದು ಪುಟಿನ್ ದೊಡ್ಡ ತಪ್ಪು, ಈಗ ನೋಡಿ ಕೆಲವು ವಾರಗಳಲ್ಲಿ ಪುಟಿನ್ ಮೇಲೆ ಒತ್ತಡ ಬೀಳಲಿದೆ ಎಂದು ಅವರು ಹೇಳಿದ್ದಾರೆ. ಕಳೆದ ವಾರ, ಟ್ರಂಪ್ ರಷ್ಯಾದ ಕುರಿತು ದೊಡ್ಡ ಘೋಷಣೆ ಮಾಡುವುದಾಗಿ ಹೇಳಿದ್ದರು. ಅಮೆರಿಕದಿಂದ ಶಸ್ತ್ರಾಸ್ತ್ರಗಳ ಪೂರೈಕೆಗೆ ಸಂಬಂಧಿಸಿದಂತೆ ನ್ಯಾಟೋ ಮಿತ್ರರಾಷ್ಟ್ರಗಳು ಮತ್ತು ಉಕ್ರೇನ್ ನಡುವೆ ಹೊಸ ಒಪ್ಪಂದಕ್ಕೆ ಬರಲಾಗಿದೆ ಎಂದು ಟ್ರಂಪ್ ಗುರುವಾರ ಹೇಳಿದ್ದರು.
ಅಮೆರಿಕವು ಉಕ್ರೇನ್‌ಗೆ 300 ಮಿಲಿಯನ್ ಡಾಲರ್ (2.5 ಸಾವಿರ ಕೋಟಿ ರೂಪಾಯಿ) ಪ್ಯಾಕೇಜ್ ಕಳುಹಿಸಲು ಸಿದ್ಧತೆ ನಡೆಸುತ್ತಿದೆ. ಇದರಲ್ಲಿ ಪೇಟ್ರಿಯಾಟ್ ಕ್ಷಿಪಣಿ ವ್ಯವಸ್ಥೆಗಳು ಮತ್ತು ಮಧ್ಯಮ ವ್ಯಾಪ್ತಿಯ ರಾಕೆಟ್‌ಗಳು ಸೇರಿವೆ.
ಮತ್ತಷ್ಟು ಓದಿ: ಇರಾನ್ ಮೇಲೆ ಅತಿ ದೊಡ್ಡ ದಾಳಿ ನಡೆಯುತ್ತಾ? ಜನರಿಗೆ ಟೆಹ್ರಾನ್ ತೊರೆಯುವಂತೆ ಟ್ರಂಪ್ ಹೇಳಿದ್ದೇಕೆ?
ಅಮೆರಿಕದ ಚುನಾವಣಾ ಪ್ರಚಾರದ ಸಮಯದಲ್ಲಿ, ಜನವರಿಯಲ್ಲಿ ಶ್ವೇತಭವನಕ್ಕೆ ಮರಳುವ ಮೊದಲು ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವುದಾಗಿ ಟ್ರಂಪ್ ಭರವಸೆ ನೀಡಿದ್ದರು. ಆದರೆ ಯುದ್ಧವನ್ನು ಕೊನೆಗೊಳಿಸಲು ಅಥವಾ ಕದನ ವಿರಾಮಕ್ಕೆ ಒಪ್ಪಿಕೊಳ್ಳಲು ಪುಟಿನ್ ಅವರನ್ನು ಮನವೊಲಿಸುವ ಅವರ ಪ್ರಯತ್ನಗಳು ಇಲ್ಲಿಯವರೆಗೆ ವಿಫಲವಾಗಿವೆ.
ಉಕ್ರೇನ್‌ನ ಉತ್ತರ ಪ್ರದೇಶದ ಸುಮಿ ನಗರವನ್ನು ಗುರಿಯಾಗಿಸಿಕೊಂಡು ರಷ್ಯಾದ ಡ್ರೋನ್ ದಾಳಿ ನಡೆಸಲಾಯಿತು. ಈ ದಾಳಿಯು ಬಹಳ ದೊಡ್ಡ ಮಿಲಿಟರಿ ಕಾರ್ಯಾಚರಣೆಯ ಭಾಗವಾಗಿತ್ತು. ಕನಿಷ್ಠ ನಾಲ್ಕು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆಸಲಾಯಿತು.
ಸ್ಥಳೀಯ ಗವರ್ನರ್ ಒಲೆಹ್ ಗ್ರಿಹೊರೊವ್ ಈ ದಾಳಿಯನ್ನು ದೃಢಪಡಿಸಿದ್ದಾರೆ. ರಷ್ಯಾದ ದಾಳಿಯು ಸುಮಿಯ ವಿದ್ಯುತ್ ಸರಬರಾಜಿನ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಈ ದಾಳಿಯು ಉಕ್ರೇನ್‌ನ ಆ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ರಷ್ಯಾದ ಆಕ್ರಮಣವನ್ನು ತೋರಿಸುತ್ತದೆ, ಅಲ್ಲಿ ನಾಗರಿಕ ಮೂಲಸೌಕರ್ಯವನ್ನು ಪದೇ ಪದೇ ಗುರಿಯಾಗಿಸಲಾಗುತ್ತಿದೆ
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




