
ರಿಯಾದ್, ಅಕ್ಟೋಬರ್ 12: ಯೆಮೆನ್ನ ಇರಾನ್ ಬೆಂಬಲಿತ ಹೌತಿ ದಂಗೆಕೋರರು ನಡೆಸಿದ ಮಾರಕ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳ ಬೆನ್ನಲ್ಲೇ, ಸೌದಿ ಅರೇಬಿಯಾದ ಪ್ರಮುಖ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯ ತಡೆಯನ್ನು ಅಕ್ಟೋಬರ್ 17ರವರೆಗೆ ವಿಸ್ತರಿಸಲಾಗಿದೆ. ವಿಮಾನಯಾನ ಸಂಸ್ಥೆಗಳು ಹಾಗೂ ಪೈಲಟ್ಗಳಿಗೆ ನೀಡಿರುವ ಅಧಿಕೃತ ಸೂಚನೆಯ ಪ್ರಕಾರ ಅಕ್ಟೋಬರ್ 17ರವರೆಗೆ ರಿಯಾದ್ ವಿಮಾನ ನಿಲ್ದಾಣವು ಸಂಪೂರ್ಣವಾಗಿ ಬಂದ್ ಆಗಿರಲಿದೆ. ಸೌದಿ ಅರೇಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರವು ವಿಮಾನ ನಿಲ್ದಾಣದ ಭದ್ರತೆ ಹಾಗೂ ಮೂಲಸೌಕರ್ಯಗಳ ಸಜ್ಜುಗೊಳಿಸುವಿಕೆಯನ್ನು ಪರಿಶೀಲಿಸುತ್ತಿದ್ದು, ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೌದಿ ಅರೇಬಿಯಾದ ಎರಡನೇ ಅತಿ ದೊಡ್ಡ ಹಾಗೂ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣದ ಈ ಸುದೀರ್ಘ ಬಂದ್ನಿಂದಾಗಿ ಜಾಗತಿಕ ವಿಮಾನಯಾನ ಸೇವೆಗಳಲ್ಲಿ ಭಾರಿ ಏರುಪೇರು ಉಂಟಾಗಿದೆ.
ಅಕ್ಟೋಬರ್ 10ರ ಶನಿವಾರ ನಡೆದ ಭೀಕರ ದಾಳಿಯಲ್ಲಿ 13 ಜನರು ಮೃತಪಟ್ಟು, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮೃತರ ಪೈಕಿ ಒಬ್ಬ ಭಾರತೀಯ ನಾಗರಿಕ ಸೇರಿದ್ದಾನೆ ಎಂಬುದನ್ನು ಭಾರತೀಯ ವಿದೇಶಾಂಗ ಸಚಿವಾಲಯ ಹಾಗೂ ಸೌದಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕೃತವಾಗಿ ದೃಢಪಡಿಸಿವೆ. ಭಾನುವಾರ ನಡೆದ ಮತ್ತೊಂದು ದಾಳಿಯಲ್ಲಿ ಒಬ್ಬರು ಮೃತಪಟ್ಟು 11 ಜನರು ಗಾಯಗೊಂಡಿದ್ದಾರೆ.
ಭಾರತ ಸರ್ಕಾರ ಖಂಡನೆ:
ನಾಗರಿಕ ವಿಮಾನ ನಿಲ್ದಾಣ ಹಾಗೂ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಈ ಭಯೋತ್ಪಾದನಾ ಕೃತ್ಯವನ್ನು ಭಾರತ ಸರ್ಕಾರ ಕಠಿಣ ಶಬ್ದಗಳಲ್ಲಿ ಖಂಡಿಸಿದೆ. ಮೃತಪಟ್ಟ ಭಾರತೀಯನ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ನೆರವು ಮತ್ತು ಮೃತದೇಹವನ್ನು ತಾಯ್ನಾಡಿಗೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ‘ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಒಪ್ಪಲಾಗದು’; ಸೌದಿ ವಿಮಾನ ನಿಲ್ದಾಣಗಳ ಮೇಲಿನ ಹೌತಿ ದಾಳಿಗೆ ಭಾರತ ಖಂಡನೆ
ಸೌದಿ ಅರೇಬಿಯಾದ್ಯಂತ ಶೇ. 46.4ರಷ್ಟು ವಿಮಾನ ಸೇವೆಗಳು ರದ್ದಾಗಿವೆ. ಲುಫ್ಥಾನ್ಸಾ, ಏರ್ ಫ್ರಾನ್ಸ್, ಎತಿಹಾದ್ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳು ರಿಯಾದ್ಗೆ ತೆರಳುವ ವಿಮಾನಗಳನ್ನು ರದ್ದುಗೊಳಿಸಿವೆ. ಡೆಲ್ಟಾ ಏರ್ಲೈನ್ಸ್ ತನ್ನ ಹೊಸ ಸೇವೆಗಳನ್ನು 2027ರವರೆಗೆ ಮುಂದೂಡಿದೆ. ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯ ನಾಗರಿಕರು ಹಾಗೂ ಪ್ರಯಾಣಿಕರಿಗೆ ಜಾಗರೂಕರಾಗಿರಲು ಮತ್ತು ತುರ್ತು ಸಂದರ್ಭಗಳಲ್ಲಿ ಕಚೇರಿಯನ್ನು ಸಂಪರ್ಕಿಸಲು ಸೂಚಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ