ಮೆಲಿಟೊಪೋಲ್​ ನಗರದ ಮೇಯರ್​ ಅಪಹರಣ; ರಷ್ಯಾ ಸೈನಿಕರನ್ನು ಐಸಿಸ್​ ಉಗ್ರರಿಗೆ ಹೋಲಿಸಿದ ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ

| Updated By: Lakshmi Hegde

Updated on: Mar 12, 2022 | 2:20 PM

ಮೆಲಿಟೊಪೋಲ್​​ನ ಉತ್ತರಕ್ಕೆ 120 ಕಿಮೀ ದೂರದಲ್ಲಿರುವ ಝಪೋರಿಝಿಯಾದ ಪ್ರಾದೇಶಿಕ ಮಂಡಳಿಯ ಉಪ ಮುಖ್ಯಸ್ಥನನ್ನು ರಷ್ಯಾ ಸೈನಿಕರು ಈಗೊಂದು ಎರಡು ದಿನಗಳ ಹಿಂದೆ ಅಪಹರಣ ಮಾಡಿದ್ದರು ಎಂದು ಉಕ್ರೇನ್ ಸಂಸತ್ತು ತಿಳಿಸಿದೆ.

ಮೆಲಿಟೊಪೋಲ್​ ನಗರದ ಮೇಯರ್​ ಅಪಹರಣ; ರಷ್ಯಾ ಸೈನಿಕರನ್ನು ಐಸಿಸ್​ ಉಗ್ರರಿಗೆ ಹೋಲಿಸಿದ ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ
ವೊಲೊಡಿಮಿರ್ ಝೆಲೆನ್ಸ್ಕಿ
Follow us on

ಕೀವ್​: ಉಕ್ರೇನ್​ ದಕ್ಷಿಣ ನಗರ ಮೆಲಿಟೊಪೋಲ್​ನ ಮೇಯರ್​ರನ್ನು ಅಪರಹಣ (Melitopol was kidnapped) ಮಾಡಲಾಗಿದೆ. ಈ ನಗರವನ್ನು ರಷ್ಯಾದ ಸೈನಿಕರು ಅತಿಕ್ರಮಣ ಮಾಡಿದ್ದಾರೆ ಎಂದು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ಆರೋಪಿಸಿದ್ದಾರೆ.  ರಷ್ಯಾದ ಒಟ್ಟು 10 ಆಕ್ರಮಣಕಾರರು ಮೆಲಿಟೊಪೋಲ್​​ನ ಮೇಯರ್ ಇವಾನ್ ಫೆಡೋರೊವ್​ರನ್ನು ಕಿಡ್ನ್ಯಾಪ್​ ಮಾಡಿದ್ದಾಗಿ ಉಕ್ರೇನ್​ನ ಸಂಸತ್ತು ಕೂಡ ಟ್ವೀಟ್ ಮಾಡಿ ತಿಳಿಸಿತ್ತು. ರಷ್ಯಾ ಸೈನಿಕರು ತಮಗೆ ಸಹಕಾರ ನೀಡುವಂತೆ ಮೇಯರ್​ ಬಳಿ ಕೇಳಿದ್ದಾರೆ. ಆದರೆ ಅವರು ಒಪ್ಪಲಿಲ್ಲ. ಹೀಗಾಗಿ ಅವರನ್ನೇ ಅಪಹರಣ ಮಾಡಿಕೊಂಡು ಹೋಗಿದ್ದಾರೆ ಎಂದು  ಮಾಹಿತಿ ನೀಡಿತ್ತು.

ಇದಾದ ಬಳಿಕ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ವಿಡಿಯೋ ಮೂಲಕ ಮೇಯರ್ ಅಪಹರಣವಾಗಿದ್ದನ್ನು ಖಚಿತಪಡಿಸಿದ್ದಾರೆ. ಫೆಡೊರೊವ್​ ಒಬ್ಬ ಧೈರ್ಯಶಾಲಿ ಮೇಯರ್​. ಅವರು ರಷ್ಯಾ ಆಕ್ರಮಣಕಾರರಿಂದ ಉಕ್ರೇನ್​​ನ್ನು ಮತ್ತು ತನ್ನ ಸಮುದಾಯವನ್ನು ರಕ್ಷಿಸಿಕೊಳ್ಳಲು ಹೋರಾಡಿದರು. ಆದರೆ ಕೊನೆಯಲ್ಲಿ ಸೈನಿಕರು ಅವರನ್ನೇ ಕಿಡ್ನ್ಯಾಪ್ ಮಾಡಿದ್ದಾರೆ. ಇದು ರಷ್ಯಾ ಸೈನಿಕರ ದುರ್ಬಲತೆಯನ್ನು ತೋರುತ್ತದೆ.  ರಷ್ಯಾ ಸೇನೆ ಥೇಟ್ ಭಯೋತ್ಪಾದಕರಂತೆ ವರ್ತಿಸುತ್ತಿದೆ. ಉಗ್ರವಾದದ ಹೊಸ ಹಂತಕ್ಕೆ ತಲುಪಿದ್ದು, ಉಕ್ರೇನ್​ನ ಸ್ಥಳೀಯ ಸಂಸ್ಥೆಯ ಅಧಿಕಾರಿಗಳನ್ನು, ಪ್ರತಿನಿಧಿಗಳನ್ನು ಅಪಹರಣ, ಹತ್ಯೆ ಮಾಡಲಾಗುತ್ತಿದೆ ಎಂದು ಝೆಲೆನ್ಸ್ಕಿ ಆರೋಪಿಸಿದ್ದಾರೆ.

ಮೆಲಿಟೊಪೋಲ್​ ಸಿಟಿಯ ಮೇಯರ್​ ಅಪಹರಣ ಒಂದು ಕ್ರೈಂ. ಇದು ಒಬ್ಬ ವ್ಯಕ್ತಿಯ, ಒಂದು ಸಮುದಾಯದ ಅಥವಾ ಉಕ್ರೇನ್​​  ವಿರುದ್ಧ  ಮಾಡಿದ ಅಪರಾಧವಲ್ಲ,  ಇಡೀ ಪ್ರಜಾಪ್ರಭುತ್ವದ ವಿರುದ್ಧ ಮಾಡಲಾದ ಕ್ರೈಂ. ಇಸ್ಲಾಮಿಕ್​ ಸ್ಟೇಟ್​ ಭಯೋತ್ಪಾದಕರ ರೀತಿಯಲ್ಲೇ ರಷ್ಯಾ ಸೈನ್ಯ ವರ್ತನೆ ಮಾಡುತ್ತಿರುವುದು ಖೇದಕರ ಎಂದು ಝೆಲೆನ್ಸ್ಕಿ ವಿಡಿಯೋ ಭಾಷಣದಲ್ಲಿ ಹೇಳಿದ್ದಾರೆ.  ಉಕ್ರೇನ್​​ನ ಅಧ್ಯಕ್ಷೀಯ ಆಡಳಿತದ ಉಪ ಮುಖ್ಯಸ್ಥ ಕಿರಿಲ್ಲೋ ಟಿಮೊಶೆಂಕೋ ಎಂಬವರು ಒಂದು ಟೆಲಿಗ್ರಾಂನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದರು. ರಷ್ಯಾ ಸೈನಿಕರು, ಕಪ್ಪು ಬಟ್ಟೆ ಧರಿಸಿದ ವ್ಯಕ್ತಿಯೊಬ್ಬನ ತಲೆಯನ್ನು ಕಪ್ಪುಬಟ್ಟೆಯಿಂದ ಮುಚ್ಚಿಕೊಂಡು ಕಟ್ಟಡವೊಂದರಿಂದ ಕರೆದುಕೊಂಡು ಬರುವ ದೃಶ್ಯ ಅದಾಗಿತ್ತು. ಇವರೇ ಮೇಯರ್​ ಎಂದೂ ಹೇಳಲಾಗಿದೆ.

ಈಗೊಂದು ಎರಡು ದಿನಗಳ ಹಿಂದೆ ಉಕ್ರೇನ್​ನ ಇನ್ನೊಬ್ಬ ಪ್ರಾದೇಶಿಕ ಅಧಿಕಾರಿಯನ್ನೂ ರಷ್ಯಾ ಸೇನೆ ಅಪಹರಣ ಮಾಡಿತ್ತು ಎಂಬ ವಿಚಾರವನ್ನು ಉಕ್ರೇನ್​ ಸಂಸತ್ತು ತಿಳಿಸಿದೆ. ಮೆಲಿಟೊಪೋಲ್​​ನ ಉತ್ತರಕ್ಕೆ 120 ಕಿಮೀ ದೂರದಲ್ಲಿರುವ ಝಪೋರಿಝಿಯಾದ ಪ್ರಾದೇಶಿಕ ಮಂಡಳಿಯ ಉಪ ಮುಖ್ಯಸ್ಥನನ್ನು ರಷ್ಯಾ ಸೈನಿಕರು ಅಪಹರಣ ಮಾಡಿದ್ದ, ಒಂದೆರಡು ದಿನಗಳ ಬಳಿಕ ಬಿಡುಗಡೆ ಮಾಡಿದ್ದಾರೆ. ಅದೇ ರೀತಿ ಈಗ  ಮೆಲಿಟೊಪೋಲ್ ನಗರದ ಮೇಯರ್​​ನನ್ನೂ ಅಪಹರಣ ಮಾಡಲಾಗಿದೆ ಎಂದು ಹೇಳಿದೆ. ಸದ್ಯ ರಷ್ಯಾ ಸೇನೆ ಉಕ್ರೇನ್​ನ ಕೀವ್​ ಸಮೀಪದಲ್ಲೇ ಇದೆ. ಎರಡು ದೇಶಗಳ ಶಾಂತಿ ಮಾತುಕತೆಗಳು ಫಲಿಸುವ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ.

ಇದನ್ನೂ ಓದಿ: ಗಾಂಧಿ ಹೇಳಿದ ಧರ್ಮದ ಮಾರ್ಗದಲ್ಲಿದೆ ಬಿಜೆಪಿ, ಗಾಂಧಿ ಆಶಯ ನನಸು ಮಾಡ್ತಿದ್ದಾರೆ ಮೋದಿ: ಈಶ್ವರಪ್ಪ

Published On - 2:16 pm, Sat, 12 March 22