Kannada News World Russia steps up attack in Ukraine ahead of 5th round of peace talks War likely to end by May
Russia Ukraine Conflict: ಇನ್ನೂ ಎರಡು ತಿಂಗಳು ಯುದ್ಧ ಮುಂದುವರಿಯಲಿದೆ ಎಂದ ಉಕ್ರೇನ್: ದಾಳಿ ತೀವ್ರಗೊಳಿಸಿದ ರಷ್ಯಾ
ಯುದ್ಧಗ್ರಸ್ತ ದೇಶದಿಂದ ಈವರೆಗೆ 28 ಲಕ್ಷ ಜನರು ಹೊರನಡೆದಿದ್ದಾರೆ. ಸುಮಾರು 600 ನಾಗರಿಕರು ಸಾವನ್ನಪ್ಪಿದ್ದಾರೆ. ವಾಸ್ತವದಲ್ಲಿ ಸಾವುನೋವಿನ ಪ್ರಮಾಣ ಇನ್ನೂ ಹೆಚ್ಚಾಗಿರಬಹುದು ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಉಕ್ರೇನ್ ಮತ್ತು ರಷ್ಯಾ ಅಧ್ಯಕ್ಷರು
Follow us on
ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭವಾಗಿ ಮೂರು ವಾರಗಳಾಗಿವೆ. ಕಳೆದ 20 ದಿನಗಳಿಂದ ಸತತ ದಾಳಿ ನಡೆಸುತ್ತಿರುವ ರಷ್ಯಾ,, ಉಕ್ರೇನ್ನ ಹಲವು ನಗರಗಳ ಮೇಲೆ ವಾಯುದಾಳಿ ನಡೆಯಿತು. ಯುದ್ಧಗ್ರಸ್ತ ದೇಶದಿಂದ ಈವರೆಗೆ 28 ಲಕ್ಷ ಜನರು ಹೊರನಡೆದಿದ್ದಾರೆ. ಸುಮಾರು 600 ನಾಗರಿಕರು ಸಾವನ್ನಪ್ಪಿದ್ದಾರೆ. ವಾಸ್ತವದಲ್ಲಿ ಸಾವುನೋವಿನ ಪ್ರಮಾಣ ಇನ್ನೂ ಹೆಚ್ಚಾಗಿರಬಹುದು ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೇಶದಲ್ಲಿ ‘ನೋ ಫ್ಲೈಜೋನ್’ ಜಾರಿಗೆ ತರುವ ಮೂಲಕ ನ್ಯಾಟೊ ನೆರವಾಗಬೇಕು ಎಂದು ಕೋರಿದ್ದಾರೆ. ಆದರೆ ಈವರೆಗೆ ನ್ಯಾಟೊ ಅಥವಾ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಈ ಬೆಡಿಕೆಗೆ ಮಣಿದಿಲ್ಲ. ಒಂದು ವೇಳೆ ಇಂಥ ನಿರ್ಬಂಧ ಹೇರಿದರೆ ಅದು ರಷ್ಯಾದೊಂದಿಗೆ ನೇರ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಕಾಂಗ್ರೆಸ್ಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಈವರೆಗಿನ ವಿದ್ಯಮಾನಗಳ ಮಾಹಿತಿಯನ್ನೂ ಇಂದು ನೀಡಲಿದ್ದಾರೆ. ರಷ್ಯಾ ವಿರುದ್ಧ ಉಕ್ರೇನ್ ಗಟ್ಟಿಯಾಗಿ ಕಾಲೂರಿ ಹೋರಾಟಕ್ಕೆ ನಿಂತಿದೆ. ಸಂಘರ್ಷದ ಬಗ್ಗೆ ಈವರೆಗಿನ 10 ಪ್ರಮುಖ ಬೆಳವಣಿಗೆಗಳಿವು.
ರಷ್ಯಾ-ಉಕ್ರೇನ್ ಮಾತುಕತೆಯಲ್ಲಿ ಈವರೆಗೆ ಮಹತ್ವದ ಪ್ರಗತಿ ಕಂಡುಬಂದಿಲ್ಲ. ಒಂದು ಕಡೆ ಮಾತುಕತೆ ನಡೆಯುತ್ತಿದ್ದರೆ ಮತ್ತೊಂದು ಕಡೆ ಯುದ್ಧವೂ ತೀವ್ರಗೊಂಡಿದೆ.
ತಮ್ಮನ್ನು ನೇರವಾಗಿ ಭೇಟಿಯಾಗಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ಗೆ ಮನವಿ ಮಾಡಿದ್ದಾರೆ. ಆದರೆ ರಷ್ಯಾ ಈ ಮನವಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಉಕ್ರೇನ್ ರಾಜಧಾನಿ ಕೀವ್ ನಗರದ ವಿಮಾನ ನಿರ್ಮಾಣ ಕಾರ್ಖಾನೆಯ ಮೇಲೆ ರಷ್ಯಾ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, ಹಲವು ಮಹತ್ವ ಯಂತ್ರೋಪಕರಣಗಳು ಹಾಳಾಗಿವೆ.
ಉಕ್ರೇನ್ ನಡೆದ ಮಿಸೈಲ್ ದಾಳಿಯಲ್ಲಿ ರಷ್ಯಾದ ಸುಪರ್ದಿಯಲ್ಲಿರುವ ಡೊನೆಟ್ಸ್ಕ್ ಪ್ರದೇಶದಲ್ಲಿ 20 ಜನರು ಮೃತಪಟ್ಟಿದ್ದು, 28 ಜನರು ಗಾಯಗೊಂಡಿದ್ದಾರೆ ಎಂದು ರಷ್ಯಾ ಹೇಳಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಬ್ರುಸೆಲ್ಸ್ನಲ್ಲಿ ನ್ಯಾಟೊ ದೇಶಗಳ ನಾಯಕರನ್ನು ಭೇಟಿಯಾಗಲಿದ್ದಾರೆ. ಉಕ್ರೇನ್ನಲ್ಲಿ ಬದಲಾಗುತ್ತಿರುವ ವಿದ್ಯಮಾನಗಳಿಗೆ ತಕ್ಕಂತೆ ನ್ಯಾಟೊ ಪ್ರತಿಕ್ರಿಯಿಸಬಹುದು ಎಂದು ಹಲವು ಮಾಧ್ಯಮಗಳು ವಿಶ್ಲೇಷಿಸಿವೆ.
ಉಕ್ರೇನ್ಗೆ ಆಹಾರ, ಶಸ್ತ್ರಾಸ್ತ್ರ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸಲಾಗುವುದು ಎಂದು ಅಮೆರಿಕ ಭರವಸೆ ನೀಡಿದೆ. ಈಗಾಗಲೇ ದೊಡ್ಡಮಟ್ಟದಲ್ಲಿ ಆರ್ಥಿಕ ನೆರವನ್ನೂ ಅಮೆರಿಕ ಒದಗಿಸಿದೆ.
ಈವರೆಗಿನ ಸಂಘರ್ಷದಲ್ಲಿ 636 ಜನರು ಸಾವನ್ನಪ್ಪಿದ್ದು 1,125 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಹೇಳಿದೆ.
ಉಕ್ರೇನ್ ರಾಜಧಾನಿ ಕೀವ್ ನಗರಕ್ಕೆ ಅತ್ಯಂತ ಹತ್ತಿರಕ್ಕೆ ಬಂದಿರುವ ರಷ್ಯಾ ಪಡೆಗಳು ಶೆಲಿಂಗ್ ಆರಂಭಿಸಿವೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಉಕ್ರೇನ್ ನೆಲದಲ್ಲಿ ರಷ್ಯಾದ 900ಕ್ಕೂ ಹೆಚ್ಚು ಕ್ಷಿಪಣಿಗಳು ಸ್ಫೋಟಿಸಿವೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಹೇಳಿದೆ.
ರಷ್ಯಾದ ದಾಳಿಯನ್ನು ಉಕ್ರೇನ್ ಸುದೀರ್ಘ ಅವಧಿಗೆ ಎದುರಿಸಲಿದೆ. ಆದರೆ ದಾಳಿಗೆ ಬೇಕಾಗುವ ಸಂಪನ್ಮೂಲ ಹೊಂದಿಸಲು ಸಾಧ್ಯವಾಗದೆ ಮೇ ತಿಂಗಳಲ್ಲಿ ರಷ್ಯಾ ಪಡೆಗಳು ಹಿಂದೆ ಸರಿಯಬಹುದು ಎಂದು ಉಕ್ರೇನ್ ಸರ್ಕಾರ ವಿಶ್ಲೇಷಿಸಿದೆ.