ರಷ್ಯಾ ಅಧ್ಯಕ್ಷ ಪುಟಿನ್​ರನ್ನು ನೇರವಾಗಿ ಯುದ್ಧಕ್ಕೆ ಆಹ್ವಾನಿಸಿದ ಎಲಾನ್​ ಮಸ್ಕ್​; ಮೊದಲು ನನ್ನೊಂದಿಗೆ ಹೋರಾಡು ಸೈತಾನ ಎಂದ ಡಿಮಿಟ್ರಿ ರೊಗೊಝಿನ್

ಎಲಾನ್​ ಮಸ್ಕ್​ ಉಕ್ರೇನ್​ಗೆ ನೆರವು ನೀಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಸ್ಟಾರ್​ಲಿಂಕ್​ ಬ್ರಾಡ್​ಬ್ಯಾಂಡ್​ ಇಂಟರ್​ನೆಟ್​ ಸೇವೆಯನ್ನು ಉಕ್ರೇನ್​ಗೆ ನೀಡಿದ್ದರು. ಅಂದು ಟ್ವೀಟ್​ ಮಾಡಿದ್ದ ಎಲಾನ್ ಮಸ್ಕ್​, ಉಕ್ರೇನ್​ನಲ್ಲಿ ಸದ್ಯ ಸ್ಟಾರ್​ಲಿಂಕ್​ ಇಂಟರ್​ನೆಟ್​ ಸಕ್ರಿಯವಾಗಿದೆ ಎಂದು ಹೇಳಿದ್ದರು.

ರಷ್ಯಾ ಅಧ್ಯಕ್ಷ ಪುಟಿನ್​ರನ್ನು ನೇರವಾಗಿ ಯುದ್ಧಕ್ಕೆ ಆಹ್ವಾನಿಸಿದ ಎಲಾನ್​ ಮಸ್ಕ್​; ಮೊದಲು ನನ್ನೊಂದಿಗೆ ಹೋರಾಡು ಸೈತಾನ ಎಂದ ಡಿಮಿಟ್ರಿ ರೊಗೊಝಿನ್
ಎಲಾನ್​ ಮಸ್ಕ್​ ಶೇರ್ ಮಾಡಿರುವ ಫೋಟೋ
Follow us
TV9 Web
| Updated By: Lakshmi Hegde

Updated on: Mar 15, 2022 | 5:10 PM

ಸ್ಪೇಸ್​ ಎಕ್ಸ್​ ಬಾಹ್ಯಾಕಾಶ ಸಂಸ್ಥೆಯ ಸಂಸ್ಥಾಪಕ, ಟೆಸ್ಲಾ ಎಲೆಕ್ಟ್ರಿಕ್​ ಕಾರು ಕಂಪನಿ ಸಿಇಒ, ವಿಶ್ವದ ನಂಬರ್​ 1 ಶ್ರೀಮಂತ ಎಲಾನ್​ ಮಸ್ಕ್(Elon Musk)​, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ರನ್ನು ನೇರವಾಗಿ ಫೈಟ್​ಗೆ ಆಹ್ವಾನಿಸಿದ್ದಾರೆ. ​ ಟ್ವೀಟ್ ಮಾಡಿರುವ ಎಲಾನ್​ ಮಸ್ಕ್​, ನನ್ನೊಂದಿಗೆ ದ್ವಂದ್ವ ಯುದ್ಧಕ್ಕೆ ಆಗಮಿಸುವಂತೆ ಪುಟಿನ್​​ರಿಗೆ ನೇರವಾಗಿ ಸವಾಲು ಹಾಕುತ್ತಿದ್ದೇನೆ ಎಂದು ಹೇಳಿದ್ದಾರೆ. ಉಕ್ರೇನ್​ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾ ವಿರುದ್ಧ ಅನೇಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಕಂಪನಿಗಳು ರಷ್ಯಾ ಮೇಲೆ ನಿರ್ಬಂಧವನ್ನೂ ವಿಧಿಸಿವೆ. ರಷ್ಯಾ-ಉಕ್ರೇನ್​ ಯುದ್ಧ ಮೂರನೇ ವಾರಕ್ಕೆ ಕಾಲಿಟ್ಟ ಬೆನ್ನಲ್ಲೇ ಟ್ವೀಟ್ ಮಾಡಿರುವ ಎಲಾನ್​ ಮಸ್ಕ್​, ನನ್ನೊಂದಿಗೆ ಯುದ್ಧಕ್ಕೆ ಬನ್ನಿ ಎಂದು ಪುಟಿನ್​​ರನ್ನು ಕರೆದಿದ್ದಾರೆ.

ಎಲಾನ್​ ಮಸ್ಕ್​ ಟ್ವೀಟ್​ಗೆ ರಷ್ಯಾದ ಸ್ಪೇಸ್​ ಏಜೆನ್ಸಿಯ ಮಹಾನಿರ್ದೇಶಕ ಡಿಮಿಟ್ರಿ ರೊಗೊಝಿನ್​​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮಸ್ಕ್​ ಟ್ವೀಟ್​​ನ್ನು ರೀಟ್ವೀಟ್ ಮಾಡಿಕೊಂಡಿರುವ ಅವರು, ನೀವು ಇನ್ನೂ ಚಿಕ್ಕವರು, ಸಣ್ಣ ಸೈತಾನ ಮತ್ತು ದುರ್ಬಲರು. ಪುಟಿನ್ ವಿರುದ್ಧ ಹೋರಾಡುವುದಕ್ಕೂ ಮೊದಲು ನನ್ನೊಂದಿಗೆ ಯುದ್ಧಕ್ಕೆ ಬನ್ನಿ ಎಂದು ಆಹ್ವಾನಿಸಿದ್ದಾರೆ. ಅಂದರೆ ರಷ್ಯಾದ ಕವಿ ಅಲೆಕ್ಸಾಂಡರ್​ ಪುಷ್ಕಿನ್​​ರ ಕವಿತೆಗಳನ್ನು ಉಲ್ಲೇಖಿಸಿ, ಈ ಸಾಲುಗಳನ್ನು ಬರೆದಿದ್ದಾರೆ.

ಡಿಮಿಟ್ರಿ ರೊಗೊಝಿನ್ ಅವರಿಗೆ ಪ್ರತಿಕ್ರಿಯೆ ನೀಡಿದ ಎಲಾನ್​ ಮಸ್ಕ್​ ಮತ್ತೊಂದು ಟ್ವೀಟ್ ಮಾಡಿ, ಮೀಮ್​​ವೊಂದನ್ನು ಶೇರ್​ ಮಾಡಿದ್ದಾರೆ. ಅದರಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅಂಗಿಬಿಚ್ಚಿಕೊಂಡು ಕರಡಿ ಮೇಲೆ ಕುಳಿತಿದ್ದರೆ, ಎಲಾನ್ ಮಸ್ಕ್​ ಬೆಂಕಿಯುಗುಳುವ ಆಯುಧವನ್ನು ಹಿಡಿದಿರುವುದನ್ನು ನೋಡಬಹುದು. ಈ ಫೋಟೋವನ್ನು ಡಿಮಿಟ್ರಿ ಅವರನ್ನು ಉಲ್ಲೇಖಿಸಿ ಪೋಸ್ಟ್​ ಮಾಡಿದ ಮಸ್ಕ್​,   ನಿಮ್ಮೊಂದಿಗೆ ಸಂಧಾನ ತುಂಬ ಕಠಿಣ ಎಂಬುದು ನನಗೆ ಗೊತ್ತಿದೆ,  ನೀವು ಯುದ್ಧ ವೀಕ್ಷಿಸಬಹುದು, ಅದಕ್ಕಾಗಿ ಶೇ.10ರಷ್ಟು ಜಾಸ್ತಿ ಹಣವನ್ನೂ ಪಾವತಿಸಬಹುದು ಎಂದೂ ಹೇಳಿದ್ದಾರೆ.

ಎಲಾನ್​ ಮಸ್ಕ್​ ಉಕ್ರೇನ್​ಗೆ ನೆರವು ನೀಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಸ್ಟಾರ್​ಲಿಂಕ್​ ಬ್ರಾಡ್​ಬ್ಯಾಂಡ್​ ಇಂಟರ್​ನೆಟ್​ ಸೇವೆಯನ್ನು ಉಕ್ರೇನ್​ಗೆ ನೀಡಿದ್ದರು. ಅಂದು ಟ್ವೀಟ್​ ಮಾಡಿದ್ದ ಎಲಾನ್ ಮಸ್ಕ್​, ಉಕ್ರೇನ್​ನಲ್ಲಿ ಸದ್ಯ ಸ್ಟಾರ್​ಲಿಂಕ್​ ಇಂಟರ್​ನೆಟ್​ ಸಕ್ರಿಯವಾಗಿದೆ. ಇನ್ನೂ ಹಲವು ಸೇವೆಗಳನ್ನು ಅಲ್ಲಿ ಸಕ್ರಿಯಗೊಳಿಸಲಾಗುವುದು ಎಂದು ಹೇಳಿದ್ದರು. ಸ್ಟಾರ್​ಲಿಂಕ್​ ಎಂಬುದು ಸುಮಾರು 2 ಸಾವಿರ ಉಪಗ್ರಹಗಳ ಪುಂಜವಾಗಿದ್ದು, ಭೂಮಿಯಾದ್ಯಂತ ಉಪಗ್ರಹ ಆಧಾರಿತ ಇಂಟರ್​ನೆಟ್​ ಸೇವೆ ನೀಡುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತದೆ.

(ಇಲ್ಲಿ ಎಲಾನ್​ ಮಸ್ಕ್​ ಶೇರ್ ಮಾಡಿರುವ, ಪುಟಿನ್​ ಅಂಗಿ ಬಿಚ್ಚಿಕೊಂಡು ಕರಡಿ ಮೇಲೆ ಕುಳಿತಿರುವ ಫೋಟೋ ನೈಜವಾದದ್ದಲ್ಲ. ಇದು ಗ್ರಾಫಿಕ್​​ನಿಂದ ಸೃಷ್ಟಿಸಿದ್ದು ಎಂಬುದು ಹಲವು ಪ್ರಮುಖ ಮಾಧ್ಯಮಗಳ ಫ್ಯಾಕ್ಟ್​ಚೆಕ್​ನಿಂದ ಬಹಿರಂಗವಾಗಿದೆ)

ಇದನ್ನೂ ಓದಿ: ನಾವೆಲ್ಲ ಮೊದಲಿನ ಹಾಗೆಯೇ ಪ್ರೀತಿ-ವಿಶ್ವಾಸದಿಂದ ಒಟ್ಟಾಗಿ ಜೀವಿಸೋಣ ಎಂದರು ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್