ಹೈಪರ್​ಸಾನಿಕ್ ಕ್ಷಿಪಣಿ ಪರೀಕ್ಷಿಸಿದ ರಷ್ಯಾ: 1000 ಕಿಮೀ ದೂರದ ಗುರಿ ಧ್ವಂಸ

ಹೈಪರ್​ಸಾನಿಕ್ ಕ್ಷಿಪಣಿ ಪರೀಕ್ಷಿಸಿದ ರಷ್ಯಾ: 1000 ಕಿಮೀ ದೂರದ ಗುರಿ ಧ್ವಂಸ
ರಷ್ಯಾ ಪರೀಕ್ಷೆ ಮಾಡಿದ ಹೊಸ ಕ್ಷಿಪಣಿ

ಶಬ್ದದ ವೇಗಕ್ಕಿಂತಲೂ ಹಲವು ಪಟ್ಟು ವೇಗದಲ್ಲಿ ಹಾರುವ ಈ ಕ್ಷಿಪಣಿಯನ್ನು ರಷ್ಯಾ ‘ಎಂದಿಗೂ ಸೋಲದ’ (Invincible) ಕ್ಷಿಪಣಿ ಎಂದು ಕರೆದಿದೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

May 29, 2022 | 2:35 PM

ಮಾಸ್ಕೊ: ಉಕ್ರೇನ್​ ಮೇಲಿನ ದಾಳಿಯನ್ನು ತೀವ್ರಗೊಳಿಸಿರುವ ರಷ್ಯಾ ಇದೇ ಹೊಸದೊಂದು ಕ್ಷಿಪಣಿಯ ಪರೀಕ್ಷೆ ಮಾಡಿದೆ. ನಿಗದಿತ ಗುರಿಯನ್ನು ಖಚಿತವಾಗಿ ಮುಟ್ಟುವ ಜೊತೆಗೆ ಎದುರಾಳಿಗಳು ಈ ಕ್ಷಿಪಣಿಯನ್ನು ತಡೆಯಲು ಆಗುವುದೇ ಇಲ್ಲ ಎಂದು ರಷ್ಯಾ ಹೇಳಿಕೊಂಡಿದೆ. ಹೈಪರ್​ಸಾನಿಕ್ (ಶಬ್ದದ ವೇಗಕ್ಕಿಂತಲೂ ಹಲವು ಪಟ್ಟು ವೇಗ) ವೇಗದಲ್ಲಿ ಹಾರುವ ಈ ಕ್ಷಿಪಣಿಯನ್ನು ರಷ್ಯಾ ‘ಎಂದಿಗೂ ಸೋಲದ’ (Invincible) ಕ್ಷಿಪಣಿ ಎಂದು ಕರೆದಿದೆ.

ರಷ್ಯಾದ ಯುದ್ಧನೌಕೆ ಅಡ್ಮಿರಲ್ ಗೊರ್​ಖೋವ್​ನಿಂದ ಬಾರೆಂಟ್ಸ್​ ಕ್ಷಿಪಣಿಯನ್ನು ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು. ಆರ್ಕಿಟಿಕ್​ನ ಬಿಳಿ ಸಮುದ್ರದಲ್ಲಿದ್ದ (ವೈಟ್ ಸೀ) 1,000 ಕಿಮೀ (625 ಮೈಲಿ) ದೂರದ ಗುರಿಯನ್ನು ನಿಖರವಾಗಿ ಧ್ವಂಸಗೊಳಿಸಿತು ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.

‘ಹೊಸ ಶಸ್ತ್ರಾಸ್ತ್ರಗಳ ಪರೀಕ್ಷಾ ಯೋಜನೆ’ಯ ಭಾಗವಾಗಿ ಕ್ಷಿಪಣಿಯನ್ನು ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು. ಅಕ್ಟೋಬರ್ 2020ರಲ್ಲಿ ಝಿರ್​ಕಾನ್ ಕ್ಷಿಪಣಿಯ ಮೊದಲ ಅಧಿಕೃತ ಪರೀಕ್ಷಾರ್ಥ ಉಡಾವಣೆಯು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಮಕ್ಷಮದಲ್ಲಿ ನಡೆಯಿತು. ಇದಾದ ನಂತರ ಸರಣಿ ಪರೀಕ್ಷೆಗಳು ನಡೆದಿದ್ದವು. ಯುದ್ಧನೌಕೆಗಳು ಮಾತ್ರವಲ್ಲದೆ ಸಬ್​ಮರೀನ್​ಗಳಿಂದಲೂ ರಷ್ಯಾ ಈ ಕ್ಷಿಪಣಿಯನ್ನು ಹಾರಿಬಿಟ್ಟಿತ್ತು.

ಕಳೆದ ಫೆಬ್ರುವರಿ 24ರಂದು ಉಕ್ರೇನ್​ ಮೇಲೆ ದಾಳಿ ನಡೆಸಿದ ನಂತರ ರಷ್ಯಾ ದೇಶವು ಹಲವು ಹೈಪರ್​ಸಾನಿಕ್ ಕ್ಷಿಪಣಿಗಳನ್ನು ಪರೀಕ್ಷಿಸಿದೆ. ಶಬ್ದದ ವೇಗಕ್ಕಿಂತಲೂ ಐದರಿಂದ 10 ಪಟ್ಟು ವೇಗದಲ್ಲಿ ಚಲಿಸುವ ಸಾಮರ್ಥ್ಯವಿರುವ ಈ ಕ್ಷಿಪಣಿಯು ಗರಿಷ್ಠ 1,000 ಕಿಮೀ ದೂರ ಕ್ರಮಿಸಬಲ್ಲದು.

ಕಳೆದ ಮಾರ್ಚ್​ ತಿಂಗಳಲ್ಲಿ ರಷ್ಯಾ ಮೊದಲ ಬಾರಿಗೆ ಅತ್ಯಂತ ನಿಖರವಾಗಿ ಗುರಿ ಮುಟ್ಟಬಲ್ಲ ಕಿನ್​ಝಾಲ್ ಕ್ಷಿಪಣಿಯ ಪರೀಕ್ಷೆ ನಡೆಸಿತ್ತು. ಈ ಕ್ಷಿಪಣಿಗಳು ರಷ್ಯಾ ಶಸ್ತ್ರಾಗಾರದಲ್ಲಿರುವ ಅಮೂಲ್ಯ ಶಸ್ತ್ರಗಳು ಎಂದು ವ್ಲಾದಿಮಿರ್ ಪುಟಿನ್ ಹೇಳಿದ್ದರು.

2018ರಲ್ಲಿ ಪುಟಿನ್ ಜಗತ್ತಿಗೆ ಪರಿಚಯಿಸಿದ ಹೊಸ ತಲೆಮಾರಿನ ಈ ಕ್ಷಿಪಣಿಗಳ ಹಾರಾಟವನ್ನು ಗುರುತಿಸುವುದು, ಬೆನ್ನಟ್ಟುವುದು, ಧ್ವಂಸಗೊಳಿಸುವುದು ಕಷ್ಟ. ಸಾಂಪ್ರದಾಯಿಕ ಕ್ಷಿಪಣಿ ನಿರೋಧಕ ವ್ಯವಸ್ಥೆಗಳು ಮತ್ತು ಕ್ಷಿಪಣಿ ನಿರೋಧಕ ಶಸ್ತ್ರಾಸ್ತ್ರಗಳು ಈ ನೂತನ ಕ್ಷಿಪಣಿಗಳನ್ನು ತಡೆಯಲಾರವು ಎಂದು ವಿಶ್ಲೇಷಿಸಲಾಗಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada