Russia Vs Ukraine: ಸರಿಯಾಗ್ ಮಾತಾಡ್ರೀ: ಗುಪ್ತಚರ ಇಲಾಖೆ ಮುಖ್ಯಸ್ಥನಿಗೆ ತಾಕೀತು ಮಾಡಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

| Updated By: Digi Tech Desk

Updated on: Feb 24, 2022 | 10:58 AM

Vladimir Putin: ಉಕ್ರೇನ್​ನ ಡೊನೆಸ್ಕ್ ಮತ್ತು ಲುಹಂನ್ಸ್ಕ್ ಪ್ರಾಂತ್ಯಗಳ ಸ್ವಾತಂತ್ರ್ಯ ಒಪ್ಪಿಕೊಳ್ಳುವ ನಿಲುವಳಿಯನ್ನು ಇದೇ ಸಭೆಯಲ್ಲಿ ಪುಟಿನ್ ಮಂಡಿಸಿದರು

Russia Vs Ukraine: ಸರಿಯಾಗ್ ಮಾತಾಡ್ರೀ: ಗುಪ್ತಚರ ಇಲಾಖೆ ಮುಖ್ಯಸ್ಥನಿಗೆ ತಾಕೀತು ಮಾಡಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
Follow us on

ಮಾಸ್ಕೊ: ಉಕ್ರೇನ್ ವಿಚಾರದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ರ (Vladimir Putin) ಮುಂದಿನ ನಡೆ ಏನಿರಬಹುದು ಎಂಬ ಗೊಂದಲದಲ್ಲಿ ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ. ಆದರೆ ರಷ್ಯಾ ಅಧ್ಯಕ್ಷ ಪುಟಿನ್ ಮಾತ್ರ ತಮ್ಮ ನಡೆಯನ್ನು ಸಾಧ್ಯವಾದಷ್ಟೂ ಗುಪ್ತವಾಗಿ ಇರಿಸಲು ಯತ್ನಿಸುತ್ತಿದ್ದಾರೆ. ಭದ್ರತೆಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವ ರಷ್ಯಾದ ದೇಶದ ಅತ್ಯುನ್ನತ ಮಟ್ಟದ ಸಮಿತಿ ಸಭೆ ಈಚೆಗೆ ನಡೆಯಿತು. ಸಭೆಯಲ್ಲಿ ಗುಪ್ತಚರ ಇಲಾಖೆಯ ಮುಖ್ಯಸ್ಥರು ಮಾತನಾಡುವಾಗ ಪುಟಿನ್ ಹಲವು ಬಾರಿ ಮಧ್ಯಪ್ರವೇಶಿಸಿ ಅವರನ್ನು ತಿದ್ದಿದರು. ಮಾಧ್ಯಮಗಳಲ್ಲಿ ನೇರವಾಗಿ ಪ್ರಸಾರವಾದ ಭದ್ರತಾ ಮಂಡಳಿ ಸಭೆಯಲ್ಲಿ ಗುಪ್ತಚರ ಇಲಾಖೆ ಮುಖ್ಯಸ್ಥ ಸೆರ್ಗಿ ನರಿಶ್ಕಿನ್ ಮಾತನಾಡುತ್ತಿದ್ದಾಗ ಪುಟಿನ್ ಹಲವು ಬಾರಿ ಅಡ್ಡಿಪಡಿಸಿದರು. ‘ಸರಿಯಾಗಿ ಮಾತಾಡು, ಸರಿಯಾಗಿ ಮಾತಾಡು ಸೆರ್ಗಿ’ ಎಂದು ಹಲವು ಬಾರಿ ಪುಟಿನ್ ಮಧ್ಯಪ್ರವೇಶಿಸಿದರು. ಏನು ಮಾತನಾಡಬೇಕು ಎಂದು ತೋಚದೇ ಗುಪ್ತಚರ ಮುಖ್ಯಸ್ಥರು ತಡವರಿಸಿದಾಗ ಪುಟಿನ್ ಮುಗುಳ್ನಕ್ಕರು. ಒಟ್ಟಾರೆ ಅವರ ಹಾವಭಾವದಲ್ಲಿ ‘ಮುಂದೇನು ಮಾಡಬೇಕು ಎಂದು ನನಗೆ ಗೊತ್ತಿದೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ನಾನಿದ್ದೇನೆ’ ಎನ್ನುವ ಧೋರಣೆ ಎದ್ದು ಕಾಣುತ್ತಿತ್ತು.

‘ಇಂದು ಏನು ಮಾತನಾಡಬೇಕು ಎನ್ನುವ ಬಗ್ಗೆ ನಾವು ನಿರ್ಧಾರ ಮಾಡಬೇಕಿದೆ’ ಎಂದು ಸೆರ್ಗಿ ಮಾತು ಅರಂಭಿಸಿದರು. ತಕ್ಷಣ ಮಧ್ಯಪ್ರವೇಶಿಸಿದ ಪುಟಿನ್, ‘ಹೀಗಂದ್ರೆ ಏನು ಅರ್ಥ? ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಏನಾಗಬಹುದು? ನಾವು ಮಾತುಕತೆ ಆರಂಭಿಸಬೇಕೆಂದು ನೀವು ಸಲಹೆ ನೀಡುತ್ತಿರುವಿರಾ’ ಎಂದು ಪ್ರಶ್ನಿಸಿದರು. ಪುಟಿನ್ ಪ್ರಶ್ನೆಗೆ ‘ಇಲ್ಲ’ ಎಂಬ ಉತ್ತರ ಗುಪ್ತಚರ ಮುಖ್ಯಸ್ಥರಿಂದ ಬಂತು. ‘ಹಾಗಿದ್ದರೆ ಸಾರ್ವಭೌಮತೆಗೆ ಮಾನ್ಯತೆ ನೀಡಬೇಕೆ? ನಿಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿ’ ಎಂಬ ಮತ್ತೊಂದು ಪ್ರಶ್ನೆ ಪುಟಿನ್ ಕಡೆಯಿಂದ ತೂರಿಬಂತು. ‘ನಾನು ಮಾನ್ಯತೆ ನೀಡಲು ಬೆಂಬಲಿಸುವ ಪ್ರಸ್ತಾವವನ್ನು ಬೆಂಬಲಿಸುತ್ತೇನೆ’ ಎಂದು ಗುಪ್ತಚರ ಇಲಾಖೆ ಮುಖ್ಯಸ್ಥರು ಸಾವರಿಸಿಕೊಂಡು, ನಿಧಾನವಾಗಿ ಉತ್ತರಿಸಿದರು.

ಈ ಉತ್ತರವೂ ಪುಟಿನ್​ಗೆ ತೃಪ್ತಿ ಕೊಡಲಿಲ್ಲ. ‘ನಿಮ್ಮ ಬೆಂಬಲ ಇದೆಯೇ? ಇಲ್ಲವೇ? ಸರಿಯಾಗಿ ಹೇಳಿ’ ಎಂದು ಪುಟಿನ್ ಮತ್ತೊಮ್ಮೆ ತಾಕೀತು ಮಾಡಿದರು. ‘ಡೊನೆಸ್ಕ್ ಮತ್ತು ಲುಹಂನ್ಸ್ಕ್​ ಪ್ರಾಂತ್ಯಗಳನ್ನು ರಷ್ಯಾ ಒಕ್ಕೂಟಕ್ಕೆ ಸೇರ್ಪಡೆ ಮಾಡುವ ಪ್ರಸ್ತಾವಕ್ಕೆ ನನ್ನ ಬೆಂಬಲವಿದೆ’ ಎಂದು ಸೆರ್ಗಿ ಸ್ಪಷ್ಟವಾಗಿ ಹೇಳಿದರು. ಈ ಮಾತೂ ಸಹ ಪುಟಿನ್ ಅವರಿಗೆ ಸಮಾಧಾನ ನೀಡಲಿಲ್ಲ. ‘ನಾವು ಆ ವಿಷಯ ಮಾತನಾಡುತ್ತಿಲ್ಲ. ಆ ಪ್ರಾಂತ್ಯಗಳ ಸ್ವಾತಂತ್ರ್ಯಕ್ಕೆ ನಾವು ಮಾನ್ಯತೆ ನೀಡಬೇಕೇ ಅಥವಾ ಬೇಡವೇ ಎಂಬ ವಿಚಾರ ಚರ್ಚೆಯಾಗಬೇಕಿದೆ’ ಎಂದು ಪುಟಿನ್ ತಮ್ಮ ಮನದ ಮಾತು ಸ್ಪಷ್ಟಪಡಿಸಿದರು. ‘ಅವರ ಸ್ವಾತಂತ್ರ್ಯಕ್ಕೆ ಮಾನ್ಯತೆ ನೀಡುವ ಪ್ರಸ್ತಾವಕ್ಕೆ ನನ್ನ ಸಹಮತವಿದೆ’ ಎಂದು ಗುಪ್ತಚರ ಇಲಾಖೆ ಮುಖ್ಯಸ್ಥರು ಹೇಳಿದರು.

ಈ ಮಾತು ಕೇಳಿಸಿಕೊಂಡ ನಂತರ ಪುಟಿನ್ ಅವರು, ‘ಸಾಕಿನ್ನು ಹೊರಡಿ’ ಎನ್ನುವಂತೆ ತಲೆಯಲ್ಲಾಡಿಸಿದರು. ಗುಪ್ತಚರ ಇಲಾಖೆ ಮುಖ್ಯಸ್ಥ ಸೆರ್ಗಿ ನರಿಶ್ಕಿನ್ ವೇದಿಕೆಯಿಂದ ಹಿಂದೆ ಸರಿದರು. ಉಕ್ರೇನ್​ನ ಡೊನೆಸ್ಕ್ ಮತ್ತು ಲುಹಂನ್ಸ್ಕ್ ಪ್ರಾಂತ್ಯಗಳ ಸ್ವಾತಂತ್ರ್ಯ ಒಪ್ಪಿಕೊಳ್ಳುವ ನಿಲುವಳಿಯನ್ನು ಇದೇ ಸಭೆಯಲ್ಲಿ ಪುಟಿನ್ ಮಂಡಿಸಿದರು. ರಷ್ಯಾ ಸೇನೆಯನ್ನು ಶಾಂತಿಪಾಲನೆಗಾಗಿ ಈ ಪ್ರಾಂತ್ಯಗಳಿಗೆ ಕಳುಹಿಸಿಕೊಡುವ ನಿರ್ಣಯವನ್ನೂ ಸಭೆ ಅಂಗೀಕರಿಸಿತು. ಆದರೆ ರಷ್ಯದ ಈ ನಡೆಗೆ ವಿಶ್ವದ ಹಲವು ದೇಶಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿವೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಹಲವು ಐರೋಪ್ಯ ದೇಶಗಳ ನಾಯಕರು ರಷ್ಯಾ ವಿರುದ್ಧ ಸಾಕಷ್ಟು ದಿಗ್ಬಂಧನಗಳನ್ನು ಘೋಷಿಸಿದ್ದಾರೆ.

ಮತ್ತೊಂದು ದೇಶದ ಅನುಮತಿ ಇಲ್ಲದೆ ಆ ದೇಶಕ್ಕೆ ಯಾವುದೇ ದೇಶದ ಸೇನಾಪಡೆಗಳು ಪ್ರವೇಶಿಸಿದರೆ ಅದಕ್ಕೆ ಶಾಂತಿಪಾಲನೆಯ ಉದ್ದೇಶ ಇದೆ ಎಂದು ಯಾರೂ ಭಾವಿಸುವುದಿಲ್ಲ. ಅದು ಅತಿಕ್ರಮಣ ಮತ್ತು ಏಕಪಕ್ಷೀಯ ನಡೆ ಎನಿಸಿಕೊಳ್ಳುತ್ತದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೇರಸ್ ಹೇಳಿದ್ದಾರೆ.

ಇದನ್ನೂ ಓದಿ: Russia-Ukraine Crisis: ರಷ್ಯಾ- ಉಕ್ರೇನ್ ಉದ್ವಿಗ್ನತೆಯ ಎಫೆಕ್ಟ್; ಭಾರತದಲ್ಲೂ ಈ ವಸ್ತುಗಳ ಬೆಲೆಯೇರಿಕೆ ಸಾಧ್ಯತೆ

ಇದನ್ನೂ ಓದಿ: ಉಕ್ರೇನ್​ ಬಿಕ್ಕಟ್ಟಿನ ಕುರಿತು ಏಕಕಾಲದಲ್ಲಿ ಆರು ಭಾಷೆಗಳಲ್ಲಿ ವರದಿ ನೀಡಿದ ಪತ್ರಕರ್ತ: ವಿಡಿಯೋ ವೈರಲ್​

Published On - 5:20 pm, Wed, 23 February 22