ಹೃದಯಾಘಾತಕ್ಕೊಳಗಾಗಿಲ್ಲ ಪುಟಿನ್, ಆರೋಗ್ಯವಾಗಿದ್ದಾರೆ ರಷ್ಯಾ ಅಧ್ಯಕ್ಷ: ಉನ್ನತ ಮೂಲಗಳಿಂದ ‘ಟಿವಿ9’ಗೆ ಮಾಹಿತಿ
ರಷ್ಯಾದ ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ, ಸೋಮವಾರ, 71 ವರ್ಷದ ವ್ಲಾದಿಮಿರ್ ಪುಟಿನ್ ದಿನವಿಡೀ ಕ್ರೆಮ್ಲಿನ್‌ನಲ್ಲಿ ತನ್ನ ಅಧಿಕೃತ ಕರ್ತವ್ಯಗಳನ್ನು ಮುಂದುವರೆಸಿದ್ದಾರೆ. ಪುಟಿನ್ ಸೋಮವಾರ ಸಂಜೆ ಬ್ರೆಜಿಲ್ ಅಧ್ಯಕ್ಷರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಾರೆ. ಅಧ್ಯಕ್ಷ ಪುಟಿನ್ ರಷ್ಯಾದ ಪ್ರದೇಶದ ಗವರ್ನರ್ ಅವರನ್ನು ಭೇಟಿಯಾಗಿದ್ದಾರೆ.
ನವದೆಹಲಿ, ಅಕ್ಟೋಬರ್ 24: ಕಳೆದ ಎರಡು ದಿನಗಳಿಂದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರ ಹೃದಯ ಸಂಬಂಧಿ ಕಾಯಿಲೆಯ ಬಗ್ಗೆ ಸುದ್ದಿ ಹರಡಿದೆ. ಅವರು ಹೃದಯಸ್ತಂಭನಕ್ಕೊಳಗಾಗಿದ್ದಾರೆ, ಹೃದಯಾಘಾತಕ್ಕೊಳಗಾಗಿ (Heart Attack) ಬಳಲುತ್ತಿದ್ದಾರೆ ಮತ್ತು ಅವರು ತಮ್ಮ ಕೋಣೆಯಲ್ಲಿ ನೆಲದ ಮೇಲೆ ಬಿದ್ದಿದ್ದರು ಎಂದು ಹೇಳಲಾಗುತ್ತಿದೆ. ನಂತರ ಅವರನ್ನು ಐಸಿಯುಗೆ ದಾಖಲಿಸಲಾಗಿದೆ ಎಂದೂ ಹೇಳಲಾಗಿದೆ. ಆದರೆ ‘ಟಿವಿ9’ಗೆ (TV9) ದೊರೆತ ಮಾಹಿತಿಯ ಪ್ರಕಾರ, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಮತ್ತು ಹೃದಯ ಸ್ಥಂಭನ ಅಥವಾ ಹೃದಯಾಘಾತಕ್ಕೊಳಗಾಗಿಲ್ಲ.
ರಷ್ಯಾದ ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ, ಸೋಮವಾರ, 71 ವರ್ಷದ ವ್ಲಾದಿಮಿರ್ ಪುಟಿನ್ ದಿನವಿಡೀ ಕ್ರೆಮ್ಲಿನ್‌ನಲ್ಲಿ ತನ್ನ ಅಧಿಕೃತ ಕರ್ತವ್ಯಗಳನ್ನು ಮುಂದುವರೆಸಿದ್ದಾರೆ. ಪುಟಿನ್ ಸೋಮವಾರ ಸಂಜೆ ಬ್ರೆಜಿಲ್ ಅಧ್ಯಕ್ಷರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಾರೆ. ಅಧ್ಯಕ್ಷ ಪುಟಿನ್ ರಷ್ಯಾದ ಪ್ರದೇಶದ ಗವರ್ನರ್ ಅವರನ್ನು ಭೇಟಿಯಾಗಿದ್ದಾರೆ. ಪುಟಿನ್ ಹೃದಯಾಘಾತಕ್ಕೆ ಸಂಬಂಧಿಸಿ ಟೆಲಿಗ್ರಾಂ ಚಾನಲ್ನ ಪ್ರಕಟಣೆಯಲ್ಲಿ ನೀಡಿದ ಸುದ್ದಿ ನಕಲಿಯಾಗಿದೆ.
ಭಾನುವಾರ ರಾತ್ರಿ ಪುಟಿನ್ ಅವರಿಗೆ ಹೃದಯಾಘಾತವಾಗಿದೆ ಎಂದು ಎಸ್ವಿಆರ್ ಹೆಸರಿನ ಟೆಲಿಗ್ರಾಂ ಚಾನಲ್ನಲ್ಲಿ ಹೇಳಿಕೊಳ್ಳಲಾಗಿತ್ತು. ಪುಟಿನ್ ತನ್ನ ಹೋಟೆಲ್ ಕೋಣೆಯಲ್ಲಿ ಹಾಸಿಗೆಯಿಂದ ನೆಲಕ್ಕೆ ಬಿದ್ದಿದ್ದರು. ಅವರಿಗೆ ಗಾಯಗಳಾಗಿದ್ದು, ಅವರ ಮೂಗಿನ ಮೇಲೆ ಗಂಭೀರವಾದ ಗಾಯಗಳಾಗಿವೆ. ಪುಟಿನ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಹೇಳಲಾಗಿತ್ತು. ಭದ್ರತಾ ಸಿಬ್ಬಂದಿ ನಂತರ ವೈದ್ಯರ ತಂಡವನ್ನೂ ಕರೆದರು ಎಂದು ಟೆಲಿಗ್ರಾಂ ಚಾನೆಲ್ ಹೇಳಿಕೊಂಡಿತ್ತು. ಚಿಕಿತ್ಸೆಯ ನಂತರ ಅಧ್ಯಕ್ಷರಿಗೆ ಪ್ರಜ್ಞೆ ಮರಳಿತು. ಅವರನ್ನು ಐಸಿಯುಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿದ್ದವು.
ಇದನ್ನೂ ಓದಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ಗೆ ಹೃದಯಸ್ತಂಭನ; ಐಸಿಯುನಲ್ಲಿ ಚಿಕಿತ್ಸೆ
ಜನರಲ್ ಎಸ್‌ವಿಆರ್‌ನ ಟೆಲಿಗ್ರಾಮ್ ಚಾನೆಲ್‌ನಲ್ಲಿ ಸುದೀರ್ಘ ಲೇಖನವನ್ನು ಹಂಚಿಕೊಳ್ಳಲಾಗಿತ್ತು. ಅದರಲ್ಲಿ ಮಾಸ್ಕೋ ಸಮಯದ ಪ್ರಕಾರ, ರಾತ್ರಿ 9:05 ಕ್ಕೆ ಭದ್ರತಾ ಸಿಬ್ಬಂದಿಗೆ ಪುಟಿನ್ ಅವರು ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ ಎಂದು ಬರೆಯಲಾಗಿತ್ತು. ಬಿದ್ದ ಸದ್ದು ಕೇಳಿದ ಭದ್ರತಾ ಸಿಬ್ಬಂದಿ ಪುಟಿನ್ ಕೋಣೆಯತ್ತ ಸಾಗಿ ನೋಡಿದ್ದರು. ಚಿಕಿತ್ಸೆಯ ನಂತರ ಪುಟಿನ್ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿತ್ತು. ಆದರೆ ‘ಟಿವಿ9’ ನ ರಷ್ಯಾದ ಮೂಲಗಳು ಈ ವರದಿಯನ್ನು ಅಲ್ಲಗಳೆದಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ