ಪಾಕಿಸ್ತಾನದಲ್ಲಿ ತಾಲಿಬಾನ್​ನಿಂದ ಭೀಕರ ಬಾಂಬ್ ಸ್ಫೋಟ; 12 ಜನ ಸಾವು, 30 ಮಂದಿಗೆ ಗಾಯ

ಪಾಕಿಸ್ತಾನದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ‘ಅಮನ್ ಮೇಳ’ದ ಬಳಿ ಇಂದು ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ 12 ಜನರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸ್ಫೋಟವು ಜಿಲ್ಲೆಯ ದರಾಜಿಂದಾ ಪ್ರದೇಶದಲ್ಲಿ ನಡೆದಿದೆ. ಮಾಹಿತಿ ತಿಳಿದ ತಕ್ಷಣ ದರಾಜಿಂದಾ ನಿಲ್ದಾಣದ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆ ಆರಂಭಿಸಿದವು. ಗಾಯಾಳುಗಳಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಪಾಕಿಸ್ತಾನದಲ್ಲಿ ತಾಲಿಬಾನ್​ನಿಂದ ಭೀಕರ ಬಾಂಬ್ ಸ್ಫೋಟ; 12 ಜನ ಸಾವು, 30 ಮಂದಿಗೆ ಗಾಯ
ಪಾಕಿಸ್ತಾನದಲ್ಲಿ ತಾಲಿಬಾನ್​ನಿಂದ ಭೀಕರ ಬಾಂಬ್ ಸ್ಫೋಟ
Image Credit source: TV9

Updated on: Sep 26, 2026 | 10:16 PM

ಇಸ್ಲಮಾಬಾದ್, ಸೆಪ್ಟೆಂಬರ್ 26: ಪಾಕಿಸ್ತಾನದ ಖೈಬರ್ ಪಖ್ತುನ್‌ಖ್ವಾ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ರಸ್ತೆಬದಿಯ ಪೋಲಿಸ್ ಚೆಕ್‌ಪೋಸ್ಟ್ ಒಂದರ ಮೇಲೆ ಇಂದು ನಡೆದ ಭೀಕರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 12 ಜನರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಭೀಕರ ಸ್ಫೋಟವು ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ದರಾಜಿಂದಾ ಪ್ರದೇಶದ ‘ಅಮನ್ ಮೇಳ’ದ ಬಳಿ ಇರುವ ಜಂಟಿ ಭದ್ರತಾ ಚೆಕ್‌ಪೋಸ್ಟ್‌ನಲ್ಲಿ ಸಂಭವಿಸಿದೆ. ಸ್ಫೋಟಕಗಳಿಂದ ತುಂಬಿದ್ದ ವಾಹನವನ್ನು ಉಗ್ರರು ನೇರವಾಗಿ ಚೆಕ್‌ಪೋಸ್ಟ್‌ಗೆ ಡಿಕ್ಕಿ ಹೊಡೆಸಿದ್ದಾರೆ. ಸ್ಫೋಟಕ್ಕೂ ಮುನ್ನ ಬಂದೂಕುಧಾರಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು ಎನ್ನಲಾಗಿದೆ.

ದಾಳಿಯ ಹೊಣೆ ಹೊತ್ತ ಪಾಕಿಸ್ತಾನಿ ತಾಲಿಬಾನ್:

ಈ ಭೀಕರ ದಾಳಿಯ ಹೊಣೆಯನ್ನು ‘ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್’ ಅಲಿಯಾಸ್ ಪಾಕಿಸ್ತಾನಿ ತಾಲಿಬಾನ್ ಉಗ್ರ ಸಂಘಟನೆ ಹೊತ್ತಿದೆ. ಈ ಸಂಘಟನೆಯು 2021ರಲ್ಲಿ ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ಅಫ್ಘಾನ್ ತಾಲಿಬಾನ್‌ಗಿಂತ ಭಿನ್ನವಾಗಿದ್ದರೂ, ಅದರೊಂದಿಗೆ ನಿಕಟ ಮೈತ್ರಿ ಹೊಂದಿದೆ.

ಇದನ್ನೂ ಓದಿ: ‘ಕಾಶ್ಮೀರ ಪಾಕಿಸ್ತಾನದ ಜೀವನಾಡಿ, ಸಿಂಧೂ ನದಿ ನೀರು ತಡೆದರೆ ಯುದ್ಧ ಖಚಿತ’; ಭಾರತಕ್ಕೆ ಶೆಹಬಾಜ್ ಶರೀಫ್ ಬೆದರಿಕೆ

ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಉಗ್ರರ ದಾಳಿಗಳು ಗಣನೀಯವಾಗಿ ಹೆಚ್ಚಾಗಿದ್ದು, ಇವುಗಳಲ್ಲಿ ಹೆಚ್ಚಿನ ದಾಳಿಗಳ ಹೊಣೆಯನ್ನು ಟಿಟಿಪಿ ಮತ್ತು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಸಕ್ರಿಯವಾಗಿರುವ ಪ್ರತ್ಯೇಕತಾವಾದಿ ಸಂಘಟನೆ ‘ಬಲೂಚ್ ಲಿಬರೇಷನ್ ಆರ್ಮಿ’ (ಬಿಎಲ್​ಎ) ವಹಿಸಿಕೊಳ್ಳುತ್ತಿವೆ.


ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನೈಋತ್ಯ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ 13 ಅಫ್ಘಾನ್ ತಾಲಿಬಾನ್ ಉಗ್ರರು ಹತರಾಗಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ತಿಳಿಸಿದ ಎರಡು ದಿನಗಳಲ್ಲೇ ಈ ದಾಳಿ ನಡೆದಿದೆ. ಅಫ್ಘಾನಿಸ್ತಾನದ ಒಳಗಿರುವ ಉಗ್ರರ ಅಡಗುದಾಣಗಳ ಮೇಲೆ ಪಾಕಿಸ್ತಾನ ಸೇನೆಯು ನಡೆಸಿದ ವೈಮಾನಿಕ ದಾಳಿಯ ನಂತರ ಎರಡೂ ನೆರೆಹೊರೆಯ ದೇಶಗಳ ನಡುವೆ ಉದ್ವಿಗ್ನತೆ ತೀವ್ರಗೊಂಡಿದೆ. ಈ ಹೊಸ ಹಿಂಸಾಚಾರವು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಶಾಂತಿ ಸ್ಥಾಪಿಸಲು ಚೀನಾ, ಟರ್ಕಿ, ಕತಾರ್ ಮತ್ತು ಸೌದಿ ಅರೇಬಿಯಾ ದೇಶಗಳು ನಡೆಸುತ್ತಿರುವ ಸಂಧಾನ ಯತ್ನಗಳಿಗೆ ಭಾರಿ ಹಿನ್ನಡೆ ಉಂಟುಮಾಡಿದೆ.

ಇದನ್ನೂ ಓದಿ: ‘ಭಯೋತ್ಪಾದಕ ದೇಶ ನನ್ನನ್ನು ಈ ಪ್ರಶ್ನೆ ಕೇಳುತ್ತಿದೆಯೇ?’; ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಿ ಪತ್ರಕರ್ತನ ಮೈಚಳಿ ಬಿಡಿಸಿದ ಸಚಿವ ಜೈಶಂಕರ್!

ಟಿಟಿಪಿ ಉಗ್ರರು ಅಫ್ಘಾನ್ ನೆಲದಿಂದ ಕಾರ್ಯಾಚರಣೆ ನಡೆಸಲು ಅಫ್ಘಾನ್ ತಾಲಿಬಾನ್ ಅವಕಾಶ ನೀಡುತ್ತಿದೆ ಎಂದು ಪಾಕಿಸ್ತಾನ ಪದೇ ಪದೇ ಆರೋಪಿಸುತ್ತಿದ್ದು, ಗಡಿಪಾರ ದಾಳಿಗಳನ್ನು ತಡೆಯುವಂತೆ ಕಾಬೂಲ್ ಸರ್ಕಾರವನ್ನು ಒತ್ತಾಯಿಸಿದೆ. ಆದರೆ, ತಮ್ಮ ಮಣ್ಣನ್ನು ಇತರ ದೇಶಗಳ ವಿರುದ್ಧದ ದಾಳಿಗೆ ಬಳಸಲು ಬಿಡುತ್ತಿಲ್ಲ ಎಂದು ಅಫ್ಘಾನ್ ಅಧಿಕಾರಿಗಳು ಈ ಆರೋಪಗಳನ್ನು ನಿರಾಕರಿಸಿದ್ದಾರೆ.


ದಾಳಿಯ ಹಿನ್ನೆಲೆ:

ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯು ದಕ್ಷಿಣ ವಜೀರಿಸ್ತಾನದ ಬಳಿ ಇದೆ. ಇದು ಈ ಹಿಂದೆ ಉಗ್ರರ ಪ್ರಮುಖ ಅಡಗುದಾಣವಾಗಿದ್ದು, ಪಾಕಿಸ್ತಾನ ಸೇನೆಯು ಇಲ್ಲಿ ಹಲವು ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಿದೆ. ಇದಕ್ಕೂ ಮುನ್ನ, ಡಿಸೆಂಬರ್ 2023ರಲ್ಲಿ ಡೇರಾ ಇಸ್ಮಾಯಿಲ್ ಖಾನ್‌ನ ಪೋಲಿಸ್ ಠಾಣೆಯ ಮುಖ್ಯ ದ್ವಾರಕ್ಕೆ ಆತ್ಮಾಹುತಿ ದಾಳಿಕೋರನು ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿದ ಪರಿಣಾಮವಾಗಿ 23 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು. ಆ ದಾಳಿಯ ಹೊಣೆಯನ್ನು ಟಿಟಿಪಿಯ ಅಂಗಸಂಸ್ಥೆಯಾದ ‘ತೆಹ್ರೀಕ್-ಇ-ಜಿಹಾದ್ ಪಾಕಿಸ್ತಾನ್’ ವಹಿಸಿಕೊಂಡಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us