ಮೊಜ್ತಬಾ ಖಮೇನಿ ಇರಾನ್‌ನಲ್ಲಿಯೇ ಇಲ್ಲವಂತೆ; ಇಸ್ರೇಲ್ ಹೇಳಿದ್ದೇನು?

ಸೌದಿ ಅರೇಬಿಯಾದ 'ಅಲ್-ಹದತ್' ಸುದ್ದಿ ಸಂಸ್ಥೆಯು ಇಸ್ರೇಲ್‌ನ ಭದ್ರತಾ ಮೂಲವೊಂದನ್ನು ಉಲ್ಲೇಖಿಸಿ, ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಪ್ರಸ್ತುತ ಇರಾನ್‌ನಲ್ಲಿ ಇಲ್ಲ ಎಂದು ಪ್ರತಿಪಾದಿಸಿದೆ. ಫೆಬ್ರವರಿ 28ರಂದು ನಡೆದ ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ವೈಮಾನಿಕ ದಾಳಿಯಲ್ಲಿ ತಂದೆ ಮೃತಪಟ್ಟ ನಂತರ ಮೊಜ್ತಬಾ ಖಮೇನಿ ಇರಾನ್‌ನ ಸುಪ್ರೀಂ ನಾಯಕರಾಗಿ ನೇಮಕಗೊಂಡಿದ್ದರು. ಆದರೆ ಅಧಿಕಾರ ವಹಿಸಿಕೊಂಡಾಗಿನಿಂದ ಅವರು ಒಮ್ಮೆಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಕೇವಲ ಲಿಖಿತ ಹೇಳಿಕೆಗಳನ್ನು ಮಾತ್ರ ನೀಡುತ್ತಿದ್ದಾರೆ.

ಮೊಜ್ತಬಾ ಖಮೇನಿ ಇರಾನ್‌ನಲ್ಲಿಯೇ ಇಲ್ಲವಂತೆ; ಇಸ್ರೇಲ್ ಹೇಳಿದ್ದೇನು?
Mojtaba Khamenei
Image Credit source: Getty Image

Updated on: Jul 19, 2026 | 4:31 PM

ಟೆಹ್ರಾನ್, ಜುಲೈ 19: ಇರಾನ್‌ನ ನೂತನ ಸುಪ್ರೀಂ ನಾಯಕ (Iran Supreme Leader) ಮೊಜ್ತಬಾ ಖಮೇನಿ (Mojtaba Khamenei) ಸದ್ಯಕ್ಕೆ “ಇರಾನ್‌ನಲ್ಲಿ ಇಲ್ಲ” ಎಂದು ಇಸ್ರೇಲ್‌ನ ಭದ್ರತಾ ಮೂಲವೊಂದು ಹೇಳಿದೆ. ಇಸ್ರೇಲ್ ನೀಡಿದ ಮಾಹಿತಿಯನ್ನಿಟ್ಟುಕೊಂಡು ಸೌದಿ ಅರೇಬಿಯಾದ ಪ್ರಮುಖ ಸುದ್ದಿ ಸಂಸ್ಥೆ ‘ಅಲ್-ಹದತ್’ ಇಂದು ಈ ವರದಿಯನ್ನು ಪ್ರಕಟಿಸಿದೆ. ಆದರೆ, ಮೊಜ್ತಬಾ ಖಮೇನಿ ಪ್ರಸ್ತುತ ಎಲ್ಲಿದ್ದಾರೆ ಎಂಬುದರ ಕುರಿತು ಯಾವುದೇ ನಿಖರವಾದ ಪುರಾವೆಗಳನ್ನು ನೀಡಿಲ್ಲ. ಅಮೆರಿಕ ಮತ್ತು ಇಸ್ರೇಲ್​ನ ತೀವ್ರವಾದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಖಮೇನಿ ಅದಾದ ಬಳಿಕ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಭದ್ರತಾ ದೃಷ್ಟಿಯಿಂದ ತಮ್ಮ ತಂದೆ ಅಯತೊಲ್ಲಾ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಕೂಡ ಮೊಜ್ತಬಾ ಖಮೇನಿ ಭಾಗಿಯಾಗಿರಲಿಲ್ಲ. ಇದು ಸಹಜವಾಗಿಯೇ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಫೆಬ್ರವರಿ 28ರಂದು ನಡೆದ ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ವೈಮಾನಿಕ ದಾಳಿಯಲ್ಲಿ ತಂದೆ ಅಲಿ ಖಮೇನಿ ಮೃತಪಟ್ಟ ನಂತರ ಮೊಜ್ತಬಾ ಖಮೇನಿ ಇರಾನ್‌ನ ಸುಪ್ರೀಂ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಅಧಿಕಾರಕ್ಕೆ ಬಂದಾಗಿನಿಂದ ಅವರು ಒಮ್ಮೆಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರು ಕೇವಲ ಲಿಖಿತ ಹೇಳಿಕೆಗಳ ಮೂಲಕ ಮಾತ್ರ ಸಂವಹನ ನಡೆಸುತ್ತಿದ್ದಾರೆ.

ಸೌದಿಯ ಅಲ್-ಹದತ್ ವರದಿಯ ಪ್ರಕಾರ, ಪ್ರಸ್ತುತ ಮೊಜ್ತಬಾ ಖಮೇನಿ ಹೆಸರಿನಲ್ಲಿ ಹೊರಬರುತ್ತಿರುವ ಅಧಿಕೃತ ಸಂದೇಶಗಳನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ನ ನೂತನ ಮುಖ್ಯಸ್ಥ ಅಹ್ಮದ್ ವಾಹಿದಿ ಮತ್ತು ಇತರ ಉನ್ನತ ಅಧಿಕಾರಿಗಳು ಸಿದ್ಧಪಡಿಸುತ್ತಿದ್ದಾರೆ.

ಇದನ್ನೂ ಓದಿ: ಜೋರ್ಡಾನ್‌ ವಾಯುನೆಲೆಯಲ್ಲಿ ಇರಾನ್​ನಿಂದ ಅಮೆರಿಕದ ಹಲವು ಯುದ್ಧ ವಿಮಾನಗಳು ಧ್ವಂಸ

“ಇರಾನ್‌ನ ಆಂತರಿಕ ಭಿನ್ನಾಭಿಪ್ರಾಯಗಳು ತೀವ್ರಗೊಂಡಿದ್ದು, ಇದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದೆ” ಎಂದು ಇಸ್ರೇಲಿ ಭದ್ರತಾ ಮೂಲಗಳು ತಿಳಿಸಿವೆ. ಇರಾನ್ ಒಂದು ವೇಳೆ ಇಸ್ರೇಲ್ ಭೂಪ್ರದೇಶದ ಮೇಲೆ ದಾಳಿ ನಡೆಸಿದರೂ ಸಹ, ಅದಕ್ಕೆ ಪ್ರತಿಯಾಗಿ ಇರಾನ್ ವಿರುದ್ಧ ನಡೆಸಲಾಗುವ ಪ್ರತೀಕಾರದ ದಾಳಿಗಳಲ್ಲಿ ಇಸ್ರೇಲ್ ಭಾಗಿಯಾಗುವುದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಇಷ್ಟವಿಲ್ಲ ಎಂದು ಇಸ್ರೇಲಿ ಮೂಲಗಳು ತಿಳಿಸಿವೆ.

ಅಮೆರಿಕಾಗೆ ಇರಾನ್ ಎಚ್ಚರಿಕೆ:

ಇದಕ್ಕೂ ಮುನ್ನ, ಖಮೇನಿ ಹೆಸರಿನಲ್ಲಿ ಇರಾನ್ ಸರ್ಕಾರಿ ದೂರದರ್ಶನದಲ್ಲಿ ಪ್ರಸಾರವಾದ ಸಂದೇಶದಲ್ಲಿ, ಅಮೆರಿಕವು ಇಸ್ಲಾಮಿಕ್ ಗಣರಾಜ್ಯದ ಮೇಲೆ ದಾಳಿಯನ್ನು ಮುಂದುವರಿಸಿದರೆ ಮರೆಯಲಾಗದ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. ಕದನ ವಿರಾಮಕ್ಕೆ ಸಂಬಂಧಿಸಿದ ಮಧ್ಯಂತರ ಒಪ್ಪಂದದಿಂದ ಇರಾನ್ ಹಿಂದೆ ಸರಿಯುತ್ತಿದೆ ಎಂದು ಇರಾನ್ ಸಂಧಾನಕಾರರು ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಈ ಹೇಳಿಕೆ ಹೊರಬಿದ್ದಿದೆ.

ಇದನ್ನೂ ಓದಿ: ‘ಟ್ರಂಪ್‌ನನ್ನು ಕೊಲ್ಲುತ್ತೇವೆ’; ಇರಾನ್‌ನಲ್ಲಿ ಬೃಹತ್ ಬ್ಯಾನರ್!

ಅಮೆರಿಕದ ಮಿಲಿಟರಿ ಕ್ರಮಕ್ಕೆ ಇರಾನ್ ಮತ್ತು ಅದರ ಪ್ರಾದೇಶಿಕ ಮಿತ್ರರಾಷ್ಟ್ರಗಳ ಒಕ್ಕೂಟವಾದ ಆಕ್ಸಿಸ್ ಆಫ್ ರೆಸಿಸ್ಟೆನ್ಸ್ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಇರಾನ್ ಎಚ್ಚರಿಸಿದೆ. ಇದರ ಬೆನ್ನಲ್ಲೇ, ವಿಶ್ವದ ಒಟ್ಟು ಕಚ್ಚಾ ತೈಲದ ಐದನೇ ಒಂದು ಭಾಗ ರಫ್ತಾಗುವ ಹಾರ್ಮುಜ್ ಜಲಸಂಧಿಯ ನಿಯಂತ್ರಣಕ್ಕಾಗಿ ಎರಡೂ ದೇಶಗಳಿಂದ ಹೋರಾಟ ತೀವ್ರಗೊಂಡಿದೆ. ಇದರಿಂದ ಜಾಗತಿಕ ಇಂಧನ ಪೂರೈಕೆಯ ಮೇಲೆ ಭಾರಿ ಪರಿಣಾಮ ಉಂಟಾಗುವ ಆತಂಕ ಎದುರಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us