
ಅಫ್ಘಾನ್, ನವೆಂಬರ್ 27: ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸಾರ್ವಜನಿಕ ಅಸ್ತಿತ್ವವನ್ನು ಸಂಪೂರ್ಣವಾಗಿ ಅಳಿಸಿಹಾಕುವ ಮತ್ತೊಂದು ಆಘಾತಕಾರಿ ಕ್ರಮವಾಗಿ, ಉತ್ತರದ ಬಾಲ್ಖ್ ಪ್ರಾಂತ್ಯದ ತಾಲಿಬಾನ್ ಆಡಳಿತವು ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು ಮತ್ತು ವೈದ್ಯಕೀಯ ದಾಖಲೆಗಳಲ್ಲಿ ಮಹಿಳೆಯರ ನಿಜವಾದ ಹೆಸರುಗಳನ್ನು ಬಳಸುವುದನ್ನು ನಿಷೇಧಿಸಿದೆ. ಮಹಿಳೆಯರ ಹೆಸರಿನ ಬದಲಿಗೆ ಕೇವಲ ‘ಬೀಬಿ’ ಎಂಬ ಪದವನ್ನು ಬಳಸುವಂತೆ ತಾಲಿಬಾನ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಮಜರ್-ಎ-ಷರೀಫ್ ಸೇರಿದಂತೆ ಬಾಲ್ಖ್ ಪ್ರಾಂತ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಕ್ಲಿನಿಕ್ಗಳು, ನ್ಯಾಯಾಲಯಗಳು ಮತ್ತು ಆಡಳಿತ ಕಚೇರಿಗಳಲ್ಲಿ ಮಹಿಳೆಯರ ನಿಜವಾದ ಹೆಸರನ್ನು ಕೂಗುವುದನ್ನು ಅಥವಾ ಬರೆಯುವುದನ್ನು ನಿಷೇಧಿಸಲಾಗಿದೆ. ವೈದ್ಯಕೀಯ ಪ್ರಿಸ್ಕ್ರಿಪ್ಷನ್ಗಳು, ಲ್ಯಾಬ್ ವರದಿಗಳು ಮತ್ತು ರೋಗಿಗಳ ನೋಂದಣಿ ಪುಸ್ತಕಗಳಲ್ಲಿ ಮಹಿಳಾ ರೋಗಿಗಳ ಹೆಸರಿನ ಜಾಗದಲ್ಲಿ ‘ಬೀಬಿ’ ಎಂದಷ್ಟೇ ನಮೂದಿಸಲಾಗುತ್ತಿದೆ.
ಒಂದೇ ಆಸ್ಪತ್ರೆಯಲ್ಲಿರುವ ಹತ್ತಾರು ಮಹಿಳಾ ರೋಗಿಗಳ ದಾಖಲೆಗಳಲ್ಲಿ ‘ಬೀಬಿ’ ಎಂದೇ ಹೆಸರು ನಮೂದಿಸುವುದರಿಂದ, ಒಬ್ಬರ ಔಷಧ ಅಥವಾ ಪರೀಕ್ಷಾ ವರದಿಗಳು ಮತ್ತೊಬ್ಬರಿಗೆ ಬದಲಾಗುವ ಗಂಭೀರ ಅಪಾಯ ಎದುರಾಗಿದೆ ಎಂದು ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಪುರುಷ ವೈದ್ಯರು ಮಹಿಳಾ ರೋಗಿಗಳನ್ನು ನೇರವಾಗಿ ಪರೀಕ್ಷಿಸುವುದಕ್ಕೆ ಈಗಾಗಲೇ ನಿರ್ಬಂಧವಿರುವುದರಿಂದ, ಈ ಹೊಸ ಆದೇಶವು ಮಹಿಳೆಯರ ಆರೋಗ್ಯ ಸೇವೆಯನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.
ಇದನ್ನೂ ಓದಿ: ಹೆಂಡತಿಯ ಮೂಳೆ ಮುರಿಯುವವರೆಗೂ, ಗಾಯ ಆಗುವವರೆಗೂ ಹೊಡೀಬಹುದು, ತಾಲಿಬಾನ್ನ ಭಯಾನಕ ಕಾನೂನಿಂದ ಬೆಚ್ಚಿಬಿದ್ದ ಮಹಿಳೆಯರು
ಬಾಲಕಿಯರ ಶಿಕ್ಷಣ, ಮಹಿಳೆಯರ ಉದ್ಯೋಗ ಮತ್ತು ಸಾರ್ವಜನಿಕ ಜೀವನದಲ್ಲಿ ಪಾಲ್ಗೊಳ್ಳುವಿಕೆಯ ಮೇಲೆ ತಾಲಿಬಾನ್ ವಿಧಿಸಿರುವ ವ್ಯಾಪಕ ನಿರ್ಬಂಧಗಳ ನಡುವೆಯೇ ಈ ಆದೇಶ ಹೊರಬಿದ್ದಿದೆ. ಅಫ್ಘಾನ್ನ ಕೆಲವು ಸಮುದಾಯಗಳಲ್ಲಿ ಮಹಿಳೆಯರನ್ನು ಸಾರ್ವಜನಿಕವಾಗಿ ಯಾರದೋ ಪತ್ನಿ ಅಥವಾ ಮಗಳು ಎಂದು ಕರೆಯುವ ಪದ್ಧತಿ ಮೊದಲಿನಿಂದಲೂ ಇದೆ. ಸಮಾಧಿ ಕಲ್ಲುಗಳ ಮೇಲೆಯೂ ಅವರ ಹೆಸರುಗಳನ್ನು ಕೆತ್ತದೆ ಬಿಟ್ಟುಬಿಡಲಾಗುತ್ತದೆ.
ಗುರುತಿಗಾಗಿ ನಡೆದ ಹೋರಾಟ:
ಅಫ್ಘಾನ್ ತಾಯಂದಿರ ಹೆಸರುಗಳು ತಮ್ಮ ಮಕ್ಕಳ ಜನನ ಪ್ರಮಾಣಪತ್ರಗಳಲ್ಲಿ ಕಾಣಿಸಿಕೊಳ್ಳುವಂತೆ ಒತ್ತಾಯಿಸಲು ಒಸ್ಮಾನಿ ಅವರು 2017ರಲ್ಲಿ ‘ವೇರ್ ಈಸ್ ಮೈ ನೇಮ್?’ ಎಂಬ ಅಭಿಯಾನವನ್ನು ಆರಂಭಿಸಿದ್ದರು. ಈ ಅಭಿಯಾನವು ತಾಯಂದಿರ ಹೆಸರನ್ನು ಸೇರಿಸುವುದನ್ನು ಖಚಿತಪಡಿಸಲು ನೆರವಾಗಿತ್ತು. ಬಾಲ್ಖ್ನ ಈ ಆದೇಶವು ಪ್ರಾಂತ್ಯದ ಅಧಿಕೃತ ದಾಖಲೆಗಳಲ್ಲಿ ಮಹಿಳೆಯರ ಹೆಸರುಗಳನ್ನು ಕೈಬಿಡುವ ಪದ್ಧತಿಯನ್ನು ಮತ್ತಷ್ಟು ವಿಸ್ತರಿಸಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನ: ಹೆಣ್ಣುಮಕ್ಕಳಿರುವ ವಸತಿ ಕಟ್ಟಡಗಳಲ್ಲಿ ಕಿಟಕಿಯೂ ಇರಬಾರದೆಂದು ತಾಲಿಬಾನ್ ಆದೇಶ
ಗಡಿಪಾರಾಗಿರುವ ಅಫ್ಘಾನ್ ಪತ್ರಕರ್ತೆ ಖದೀಜಾ ಅಮೀನ್ ಅವರು ತಮ್ಮ ಮಾಜಿ ಪತಿ ಮಕ್ಕಳೊಂದಿಗೆ ತೆರಳಿದ ನಂತರ ಇದೇ ರೀತಿಯ ಸಮಸ್ಯೆಯನ್ನು ಎದುರಿಸಿದ್ದರು. ಅವರ ಮಕ್ಕಳ ಅಫ್ಘಾನ್ ಜನನ ಪ್ರಮಾಣಪತ್ರಗಳಲ್ಲಿ ಆಕೆಯ ಹೆಸರು ಇರದ ಕಾರಣ, ತಾವೇ ಅವರ ತಾಯಿ ಎಂಬುದನ್ನು ಯುರೋಪಿಯನ್ ಅಧಿಕಾರಿಗಳಿಗೆ ಸಾಬೀತುಪಡಿಸಲು ಅವರಿಗೆ ಕಷ್ಟವಾಯಿತು. ಅವರು ಅದನ್ನು ಸಾಬೀತುಪಡಿಸುವಷ್ಟರಲ್ಲಿ ಪತಿ ಮಕ್ಕಳೊಂದಿಗೆ ಅಫ್ಘಾನಿಸ್ತಾನಕ್ಕೆ ತೆರಳಿದ್ದರು.
ಮೇ ತಿಂಗಳಲ್ಲಿ ಬಾಲ್ಖ್ ಪ್ರಾಂತ್ಯದಲ್ಲಿ ಜಾರಿಯಾದ ಈ ಹೊಸ ಆದೇಶವು ಮಹಿಳೆಯರ ಮೂಲಭೂತ ಗುರುತನ್ನೇ ಅಳಿಸಿಹಾಕುವ ಮತ್ತೊಂದು ಕ್ರೂರ ಹೆಜ್ಜೆಯಾಗಿದೆ ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಖಂಡಿಸಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ