ಕಳೆದ ಒಂದೂವರೆ ವರ್ಷದಿಂದ ಇಡೀ ಜಗತ್ತು ಕೊರೊನಾ ವೈರಾಣುವಿನ (Coronavirus) ಹೊಡೆತಕ್ಕೆ ಸಿಲುಕಿ ತಲ್ಲಣಿಸಿದೆ. ಪದೇ ಪದೇ ರೂಪಾಂತರಗೊಂಡು (Mutation) ಕಾಡುತ್ತಿರುವ ಕೊರೊನಾ ಹತೋಟಿಗೆ ಸಿಗದೇ ಸತಾಯಿಸುತ್ತಿದೆ. ಇದರ ನಡುವೆಯೇ ಚೀನಾದಲ್ಲಿ ಕಾಣಿಸಿಕೊಂಡ ಮಂಕಿ ಬಿ ವೈರಸ್ (Monkey B Virus) ಕೂಡಾ ಆತಂಕಕ್ಕೆ ಕಾರಣವಾಗಿದೆ. ಇದೀಗ, ಆತಂಕಕಾರಿ ವೈರಾಣುಗಳ ಸಾಲಿಗೆ ಹೊಸದೊಂದು ಸೇರ್ಪಡೆಯಾಗಿದ್ದು, ಇಂಗ್ಲೆಂಡ್ನಲ್ಲಿ ಈಗಾಗಲೇ ತಳಮಳ ಹುಟ್ಟುಹಾಕಿದೆ. ನೊರೊವೈರಸ್ (Norovirus) ಅಥವಾ ವಾಮಿಟಿಂಗ್ ಬಗ್ (The Vomiting Bug) ಎಂದು ಕರೆಯಲ್ಪಡುವ ಈ ವೈರಾಣು ಇಂಗ್ಲೆಂಡ್ನಲ್ಲಿ ದಿನೇ ದಿನೇ ವ್ಯಾಪಿಸುತ್ತಿದೆ.
ನೊರೊವೈರಸ್ ಒಂದು ಸಾಂಕ್ರಾಮಿಕ ಕಾಯಿಲೆಗೆ ಕಾರಣವಾದ ವೈರಾಣುವಾಗಿದ್ದು, ಅಮೆರಿಕಾದಲ್ಲಿ ಆಹಾರದಿಂದ ಉಂಟಾಗುವ ಹೆಚ್ಚಿನ ಸಮಸ್ಯೆಗಳಿಗೆ ಇದೇ ವೈರಾಣು ಮೂಲವಾಗಿದೆ ಎಂದು ಸಿಡಿಸಿ (ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್) ಹೇಳಿದೆ. ಇದನ್ನು ಹೊಟ್ಟೆ ಜ್ವರ ಎಂದೂ ಕರೆಯಲಾಗುತ್ತಿದ್ದು, ಸಾಧಾರಣವಾಗಿ ಇದು ಕಾಲದಲ್ಲೂ ಕಾಣಿಸಿಕೊಳ್ಳುವುದಿಲ್ಲ.
ಗುಣಲಕ್ಷಣಗಳೇನು?
ನೊರೊವೈರಸ್ ದೇಹವನ್ನು ಪ್ರವೇಶಿಸಿದ 12ರಿಂದ 48 ಗಂಟೆಗಳೊಳಗೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸುಮಾರು ಮೂರ್ನಾಲ್ಕು ದಿನಗಳ ಕಾಲ ಬಾಧಿಸುವ ಈ ಕಾಯಿಲೆ ಹೊಟ್ಟೆನೋವು, ಅತಿಸಾರ, ವಾಕರಿಕೆ, ವಾಂತಿ, ಜ್ವರ, ಹೊಟ್ಟೆನೋವು, ಮೈಕೈ ನೋವು, ಸುಸ್ತಿಗೆ ಕಾರಣವಾಗುತ್ತದೆ. ಕೆಲವೊಮ್ಮೆ ಈ ಯಾವ ಗುಣಲಕ್ಷಣಗಳನ್ನೂ ತೋರಿಸದೆಯೂ ವೈರಾಣು ಬಾಧಿಸುವ ಸಾಧ್ಯತೆ ಇರುತ್ತದೆ ಎನ್ನುವುದನ್ನೂ ತಜ್ಞರು ಹೇಳುತ್ತಾರೆ.
ನೊರೊವೈರಸ್ ಸೋಂಕಿತರ ವಾಂತಿ ಹಾಗೂ ವಿಸರ್ಜಿಸಿದ ಕಲ್ಮಶಗಳಲ್ಲಿ ಸಕ್ರಿಯವಾಗಿರುತ್ತದೆ. ನಂತರ ಇದು ಯಾವುದೇ ಸ್ವರೂಪದಲ್ಲಿ ದೇಹವನ್ನು ಪ್ರವೇಶಿಸುವ ಸಾಧ್ಯತೆ ಇದ್ದು, ಆಹಾರ, ಅಶುದ್ಧ ನೀರಿನ ಮೂಲಕವೂ ಸೋಂಕು ತಗುಲುತ್ತದೆ. ವೈರಾಣು ಇರುವ ನೀರಿನಲ್ಲಿಯೇ ಬೆಳೆಯಲ್ಪಟ್ಟ ಆಹಾರ ಪದಾರ್ಥಗಳಿಗೆ ಇದು ಅಂಟಿಕೊಂಡಿರುವ ಸಾಧ್ಯತೆಯೂ ಇದ್ದು, ಅವುಗಳನ್ನು ಸ್ವಚ್ಛಗೊಳಿಸದೇ ಸೇವಿಸಿದಾಗ ಅಥವಾ ಅವುಗಳನ್ನು ಮುಟ್ಟಿದ ನಂತರ ಕೈ ತೊಳೆಯದೇ ಮುಖವನ್ನು ಸ್ಪರ್ಶಿಸಿಕೊಂಡಾಗ, ಊಟ ಮಾಡಿದಾಗ ವೈರಾಣು ದೇಹವನ್ನು ಪ್ರವೇಶಿಸುತ್ತದೆ.
ಈ ವೈರಾಣುವಿನಿಂದ ಹೆಚ್ಚಿನವರು ಯಾವುದೇ ಚಿಕಿತ್ಸೆ ಇಲ್ಲದೇ ಗುಣಮುಖರಾಗುವ ಸಾಧ್ಯತೆ ಇದೆಯಾದರೂ ವೃದ್ಧರು, ಚಿಕ್ಕ ಮಕ್ಕಳು ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾದ ಸ್ಥಿತಿ ಎದುರಾಗಬಹುದು. ಹೀಗಾಗಿ ಆರೋಗ್ಯವಂತರು, ಸದೃಢವಾಗಿರುವವರು ಈ ಕಾಯಿಲೆಯನ್ನು ಆರಾಮಾಗಿ ಎದುರಿಸಬಹುದಾದರೂ ಮಕ್ಕಳು ಹಾಗೂ ವೃದ್ಧರ ವಿಚಾರದಲ್ಲಿ ಅಗತ್ಯ ಎಚ್ಚರಿಕೆ ತೆಗೆದುಕೊಳ್ಳಲೇಬೇಕು.