
ವಾಷಿಂಗ್ಟನ್ , ನ.21: ಒಂದು ವಾರದ ಹಿಂದೆ ಭಾರತದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನ್ಯೂಯಾರ್ಕ್ನಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನೀಡಿದ ಸಂದರ್ಶನದಲ್ಲಿ ಭಾರತದ ಆರ್ಥಿಕತೆ ಅಪಾಯದಲ್ಲಿ ಎಂಬ ಹೇಳಿಕೆಯ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಆರ್ಥಿಕತೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿದ್ದಾರೆ. ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಎದುರಾದ ಹಿನ್ನಡೆಯ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಶ್ವೇತಭವನದಲ್ಲಿ ತಮ್ಮ ಮೊದಲ ಪ್ರಮುಖ ಸುದ್ದಿಗೋಷ್ಠಿ ನಡೆಸಿದರು. ಸುಮಾರು 90 ನಿಮಿಷಗಳ ಕಾಲ ನಡೆದ ಈ ಸುದ್ದಿಗೋಷ್ಠಿಯಲ್ಲಿ ತಮ್ಮ ಆಡಳಿತದ ನೀತಿಗಳನ್ನು ಸಮರ್ಥಿಸಿಕೊಂಡ ಟ್ರಂಪ್, ವಲಸೆ ಹಾಗೂ ಇತರ ಆಂತರಿಕ ವಿಚಾರಗಳಲ್ಲಿ ಡೆಮೊಕ್ರಾಟ್ ಪಕ್ಷದೊಂದಿಗೆ ಕೆಲಸ ಮಾಡಲು ಮುಕ್ತ ಮನಸ್ಸಿರುವುದಾಗಿ ಸಂಕೇತ ನೀಡಿದ್ದಾರೆ. ಈ ವೇಳೆ ಭಾರತದ ಆರ್ಥಿಕ ಬೆಳವಣಿಗೆಯನ್ನು ವಿಶೇಷವಾಗಿ ಉಲ್ಲೇಖಿಸಿದ ಟ್ರಂಪ್, ಕ್ವಾಡ್ ಒಕ್ಕೂಟದ ವಾಣಿಜ್ಯ ಸಾಮರ್ಥ್ಯವನ್ನು ಕೊಂಡಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾರತದ ಆರ್ಥಿಕ ಸಾಧನೆ ಮತ್ತು ಬಡ್ಡಿದರದ ವಾತಾವರಣವನ್ನು ಟ್ರಂಪ್ ಉಲ್ಲೇಖಿಸಿದರು. “ಭಾರತದತ್ತ ನೋಡಿ, ಅಲ್ಲಿ ಕಡಿಮೆ ಬಡ್ಡಿದರವಿದೆ ಮತ್ತು ಶೇ. 7ರಷ್ಟು ಆರ್ಥಿಕ ಬೆಳವಣಿಗೆ ದರವಿದೆ” ಎಂದು ಶ್ಲಾಘಿಸಿದ ಅವರು, ಕಡಿಮೆ ಬಡ್ಡಿದರಗಳೊಂದಿಗೆ ಅಮೆರಿಕ ಕೂಡ ಇದಕ್ಕಿಂತ ಹೆಚ್ಚಿನ ಬೆಳವಣಿಗೆ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.
ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳನ್ನೊಳಗೊಂಡ ಕ್ವಾಡ್ ಒಕ್ಕೂಟದ ಆರ್ಥಿಕ ಮತ್ತು ಕಾರ್ಯತಂತ್ರದ ಸಾಮರ್ಥ್ಯವನ್ನು ಟ್ರಂಪ್ ಒತ್ತಿಹೇಳಿದರು. ಆರ್ಥಿಕ ಭದ್ರತೆ, ಪೂರೈಕೆ ಸರಪಳಿ ಮತ್ತು ಸಾಗರ ಭದ್ರತೆಯಲ್ಲಿ ಕ್ವಾಡ್ ಸಹಕಾರ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು. ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮಾತನಾಡಿ, ಕ್ವಾಡ್ ಸದಸ್ಯ ರಾಷ್ಟ್ರಗಳು “ನಾಲ್ಕು ಅತ್ಯಂತ ಶಕ್ತಿಶಾಲಿ ಆರ್ಥಿಕತೆಗಳಾಗಿವೆ” ಮತ್ತು ಅಮೆರಿಕನ್ ಉತ್ಪನ್ನಗಳಿಗೆ ಮಾರುಕಟ್ಟೆ ಹಾಗೂ ಉದ್ಯೋಗ ಸೃಷ್ಟಿಸಲು ಒಟ್ಟಾಗಿ ಕೆಲಸ ಮಾಡಬಲ್ಲವು ಎಂದರು. ಅಲ್ಲದೆ, 2027ರ ಆರಂಭದಲ್ಲಿ ಕ್ವಾಡ್ ತನ್ನ ಚೊಚ್ಚಲ ‘ಬಿಸಿನೆಸ್ ಲೀಡರ್ಸ್ ಫೋರಂ’ ಆಯೋಜಿಸಲು ಯೋಜಿಸಿದ್ದು, ಭಾರತದ ಮುಂಬೈ ಮೊದಲ ಆವೃತ್ತಿಯ ಆತಿಥ್ಯ ವಹಿಸಲಿದೆ.
ಚಿಪ್ ತಯಾರಕ ಕಂಪನಿ ಎನ್ವಿಡಿಯಾ ಮಾಜಿ ಸಿಇಒ ಜೆನ್ಸನ್ ಹುವಾಂಗ್ ಅವರ ಮರಳುವಿಕೆಗೆ ಬೆಂಬಲ ಸೂಚಿಸಿದ ಟ್ರಂಪ್, ಅಮೆರಿಕವನ್ನು “ಎರಡನೇ ಅವಕಾಶಗಳ ದೇಶ” ಎಂದು ಬಣ್ಣಿಸಿದರು. ಆಯ್ಕೆಯಾಗಲಿರುವ ಡೆಮೊಕ್ರಾಟಿಕ್ ಬಹುಮತದ ಜನಪ್ರತಿನಿಧಿಗಳ ಸಭೆಯನ್ನು ಮಾತುಕತೆಗೆ ತರಲು ತಮ್ಮ ವೀಟೋ ಅಧಿಕಾರವನ್ನು ಬಳಸುವುದಾಗಿ ಟ್ರಂಪ್ ಎಚ್ಚರಿಸಿದರು. ಚೀನಾ ಕುರಿತ ತಮ್ಮ ನಿಲುವು ಮತ್ತು ಸುಧಾರಿತ ಚಿಪ್ ರಫ್ತು ನೀತಿಯನ್ನು ಸಮರ್ಥಿಸಿಕೊಂಡ ಅವರು, ಅಮೆರಿಕದ ಕಂಪನಿಗಳು ವಿದೇಶಗಳಲ್ಲಿ ಡೇಟಾ ಸೆಂಟರ್ಗಳನ್ನು ನಿರ್ಮಿಸುವುದನ್ನು ನಿರ್ಬಂಧಿಸುವ ಯೋಜನೆಗಳನ್ನು ಪ್ರಸ್ತಾಪಿಸಿದರು.
ಇರಾನ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ತಾವು ಬಯಸುವುದಾಗಿ ಪುನರುಚ್ಚರಿಸಿದ ಟ್ರಂಪ್, ಆದರೆ ಅಸಮರ್ಪಕ ಎಂದು ತಾವು ಭಾವಿಸುವ ಯಾವುದೇ ಷರತ್ತುಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥ ಸ್ಟೀಫನ್ ಮಿಲ್ಲರ್ ಕೂಡ ಉಪಸ್ಥಿತರಿದ್ದು ಮಾತನಾಡಿದರು. ಮುಂದಿನ ಎರಡು ವರ್ಷಗಳು ಅಮೆರಿಕದ ಇತಿಹಾಸದಲ್ಲೇ ಅತ್ಯುತ್ತಮ ಎರಡು ವರ್ಷಗಳಾಗಲಿವೆ ಎಂದು ಮಿಲ್ಲರ್ ಹೇಳಿದರು.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ