2027 ರವರೆಗೆ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಪಡೆಗಳ ಬೀಡು: ಇರಾನ್ ವಿರುದ್ಧ ಕಠಿಣ ಯುದ್ಧ ವಿಸ್ತರಣೆಗೆ ಮುಂದಾದ ಟ್ರಂಪ್ ಆಡಳಿತ

ಟ್ರಂಪ್ ಆಡಳಿತವು ಇರಾನ್ ವಿರುದ್ಧ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಸೇನಾ ನಿಯೋಜನೆಯನ್ನು 2027ರವರೆಗೆ ವಿಸ್ತರಿಸಿದೆ. ಸಣ್ಣ ಮಟ್ಟದ ಕಾರ್ಯಾಚರಣೆಯು ಇದೀಗ ಪೂರ್ಣ ಪ್ರಮಾಣದ ಸಮರವಾಗಿ ಮಾರ್ಪಟ್ಟಿದ್ದು, ಇರಾನ್ ಆರ್ಥಿಕತೆಯನ್ನು ದುರ್ಬಲಗೊಳಿಸುವುದು ಗುರಿ. ಹಾರ್ಮುಜ್ ಜಲಸಂಧಿ ನಿಯಂತ್ರಣ, ಇರಾನ್‌ನ ರಾಡಾರ್‌ಗಳ ನಾಶ ಹಾಗೂ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಪರಿಣಾಮ ಇದರ ಪ್ರಮುಖ ಅಂಶಗಳು. ಅಮೆರಿಕದ ದೀರ್ಘಕಾಲೀನ ಯುದ್ಧತಂತ್ರವು ಜಾಗತಿಕ ರಾಜತಾಂತ್ರಿಕ ಸಂಬಂಧಗಳ ಮೇಲೂ ಪ್ರಭಾವ ಬೀರಲಿದೆ.

2027 ರವರೆಗೆ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಪಡೆಗಳ ಬೀಡು: ಇರಾನ್ ವಿರುದ್ಧ ಕಠಿಣ ಯುದ್ಧ ವಿಸ್ತರಣೆಗೆ ಮುಂದಾದ ಟ್ರಂಪ್ ಆಡಳಿತ
ಡೊನಾಲ್ಡ್​ ಟ್ರಂಪ್
Image Credit source: The New Newyorker

Updated on: Sep 04, 2026 | 8:11 AM

ವಾಷಿಂಗ್ಟನ್, ಸೆಪ್ಟೆಂಬರ್ 04: ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯನ್ನು ಅಮೆರಿಕ ಸರ್ಕಾರ ಇನ್ನಷ್ಟು ವಿಸ್ತರಿಸಿದ್ದು, ಮಧ್ಯಪ್ರಾಚ್ಯದಲ್ಲಿ ಯುಎಸ್ ಸಶಸ್ತ್ರ ಪಡೆಗಳ ನಿಯೋಜನೆಯನ್ನು 2027 ರವರೆಗೆ ವಿಸ್ತರಿಸಲು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಸಮ್ಮತಿ ಸೂಚಿಸಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದಲ್ಲಿ ಆರಂಭವಾದ ಈ ಮಿಲಿಟರಿ ಬಿಕ್ಕಟ್ಟು ಸಣ್ಣ ಮಟ್ಟದ ಕಾರ್ಯಾಚರಣೆಯಿಂದ ಇದೀಗ ದೀರ್ಘಾವಧಿಯ ಪೂರ್ಣ ಪ್ರಮಾಣದ ಸಮರವಾಗಿ ಬದಲಾಗಿದ್ದು, ಇರಾನ್ ಅನ್ನು ಆರ್ಥಿಕ ಹಾಗೂ ತಾಂತ್ರಿಕವಾಗಿ ಸಂಪೂರ್ಣ ಮಣಿಸುವ ಮುಕ್ತ ತಂತ್ರಗಾರಿಕೆಯನ್ನು ಅಮೆರಿಕ ರೂಪಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಅಮೆರಿಕದ ಬೃಹತ್ ಸೇನಾ ನಿಯೋಜನೆ ಮತ್ತು ಸೈನಿಕರ ಮೇಲಿನ ಒತ್ತಡ

50 ಸಾವಿರ ಸೈನಿಕರು, 19 ಯುದ್ಧನೌಕೆಗಳು: ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಅಮೆರಿಕದ 50 ಸಾವಿರ ಸೈನಿಕರು, ಎರಡು ಬೃಹತ್ ವಿಮಾನವಾಹಕ ನೌಕೆಗಳು , 13 ಕ್ಷಿಪಣಿ ವಿಧ್ವಂಸಕ ನೌಕೆಗಳು, ಪ್ಯಾರಾಟ್ರೂಪರ್ಸ್ ಮತ್ತು ಫೈಟರ್ ಸ್ಕ್ವಾಡ್ರನ್‌ಗಳು ಬೀಡುಬಿಟ್ಟಿವೆ.

ವಿಸ್ತರಿತ  ಅವಧಿ: ಮೂಲತಃ 9 ತಿಂಗಳಿಗೆ ನಿಗದಿಯಾಗಿದ್ದ ವಾಯು ರಕ್ಷಣಾ ಪಡೆಗಳು ಹಾಗೂ ನೌಕಾಪಡೆ ಸಿಬ್ಬಂದಿಯ ನಿಯೋಜನೆಯನ್ನು 12 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ವಿಸ್ತರಿಸಲಾಗಿದೆ.

ಯುಎಸ್‌ಎಸ್ ಡೆಲ್ಬರ್ಟ್ ಡಿ. ಬ್ಲಾಕ್ ಮತ್ತು ಯುಎಸ್‌ಎಸ್ ಸ್ಪ್ರೂನ್ಸ್: ಈ ಎರಡು ಪ್ರಮುಖ ವಿಧ್ವಂಸಕ ನೌಕೆಗಳ ಸುಮಾರು 300ಕ್ಕೂ ಹೆಚ್ಚು ಸಿಬ್ಬಂದಿ ವಿಶ್ರಾಂತಿಯಿಲ್ಲದೆ ಸಾಗರದಲ್ಲೇ ತಿಂಗಳುಗಟ್ಟಲೆ ಕಳೆಯುತ್ತಿದ್ದು, ಸೈನಿಕರು ಹಾಗೂ ಅವರ ಕುಟುಂಬಗಳ ಮೇಲೆ ಮಾನಸಿಕ ಮತ್ತು ದೈಹಿಕ ಒತ್ತಡ ಹೆಚ್ಚುತ್ತಿದೆ.

ಹಾರ್ಮುಜ್ ಜಲಸಂಧಿಯ ಮೇಲೆ ನಿಯಂತ್ರಣ: ಹಾರ್ಮುಜ್ ಜಲಸಂಧಿ ಈಗ ನಮ್ಮ ಸಂಪೂರ್ಣ ನಿಯಂತ್ರಣದಲ್ಲಿದೆ. ಅವರ ಆರ್ಥಿಕತೆ ಅಧೋಗತಿಗೆ ತಲುಪಿದೆ. ಇರಾನ್‌ನ ಜನತೆ ತಮ್ಮ ಆಡಳಿತಗಾರರ ವಿರುದ್ಧ ಯಾವಾಗ ಧಂಗೆಯೇಳುತ್ತಾರೆ ಎಂದು ಕಾದುನೋಡಬೇಕಿದೆ ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಮತ್ತಷ್ಟು ಓದಿ: ಇರಾನ್-ಅಮೆರಿಕ ನೀ ಕೊಡೆ ನಾ ಬಿಡೆ ಜಗ್ಗಾಟ; ಹಾರ್ಮುಜ್ ಜಲಸಂಧಿ ಅಮೆರಿಕದ ಭೂಭಾಗ ಎಂದು ಟ್ರಂಪ್ ಘೋಷಣೆ

ರಾಡಾರ್‌ಗಳು ಧ್ವಂಸ: ಅಮೆರಿಕವು ಇರಾನ್‌ನ ಪ್ರಮುಖ ನೌಕಾ ರಾಡಾರ್‌ಗಳು ಮತ್ತು ಕರಾವಳಿ ರಕ್ಷಣಾ ಸಾಧನಗಳನ್ನು ಕ್ಷಿಪಣಿ ದಾಳಿಯ ಮೂಲಕ ಧ್ವಂಸಗೊಳಿಸಿದೆ. ಇದರಿಂದಾಗಿ ಸಾಗರದಲ್ಲಿ ತಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನು ತಿಳಿಯುವ ಕಣ್ಣನ್ನೇ ಇರಾನ್ ಕಳೆದುಕೊಂಡಿದೆ ಎಂದು ಟ್ರಂಪ್ ಹೇಳಿದ್ದಾರೆ.

ಅಮೆರಿಕದ ಕಣ್ಗಾವಲು: ಅವರು ಏನು ಮಾಡುತ್ತಿದ್ದಾರೆ ಎಂಬುದು ನಮಗೆ ಸಂಪೂರ್ಣ ಗೋಚರಿಸುತ್ತದೆ. ನಾವು ನೋಡದೆ ಅವರೊಬ್ಬರೂ ಬಾತ್‌ರೂಮ್‌ಗೂ ಹೋಗಲು ಸಾಧ್ಯವಿಲ್ಲ ಎಂದು ತಮ್ಮ ಬೇಹುಗಾರಿಕಾ ಬಲವನ್ನು ಟ್ರಂಪ್ ಬಣ್ಣಿಸಿದ್ದಾರೆ.

ಜಾಗತಿಕ ತೈಲ ಮಾರುಕಟ್ಟೆಗೆ ಹೊಡೆತ: ವಿಶ್ವದ ಶೇ. 20 ಕ್ಕೂ ಹೆಚ್ಚು ಕಚ್ಚಾ ತೈಲ ಸಾಗಣೆಯಾಗುವ ಹಾರ್ಮುಜ್ ಜಲಸಂಧಿಯನ್ನು ಅಮೆರಿಕ ಯುದ್ಧನೌಕೆಗಳು ನಿರ್ಬಂಧಿಸುತ್ತಿರುವುದರಿಂದ, ಜಾಗತಿಕ ಇಂಧನ ಪೂರೈಕೆ ಮತ್ತು ತೈಲ ಬೆಲೆಗಳಲ್ಲಿ ಭಾರೀ ಏರಿಳಿತ ಉಂಟಾಗುವ ಆತಂಕ ಎದುರಾಗಿದೆ.

ಚುನಾವಣಾ ಭೀತಿ: ಈ ದೀರ್ಘಕಾಲೀನ ಸಮರದಿಂದಾಗಿ ಮುಂಬರುವ ಅಮೆರಿಕದ ನವೆಂಬರ್ ಮಧ್ಯಾವಧಿ ಚುನಾವಣೆಗಳಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂದು ಆಂತರಿಕ ವಲಯದಲ್ಲಿ ಕಳವಳ ವ್ಯಕ್ತವಾಗಿದ್ದರೂ, ಟ್ರಂಪ್ ಮಾತ್ರ ತಾವು ರಾಜಕೀಯ ಲಾಭ-ನಷ್ಟ ಲೆಕ್ಕಿಸದೆ ಕಾರ್ಯಾಚರಣೆ ಮುಂದುವರೆಸುವುದಾಗಿ ಖಡಕ್ ಆಗಿ ತಿಳಿಸಿದ್ದಾರೆ.

ದ್ವಿತೀಯ ನಿರ್ಬಂಧಗಳ ಬೆದರಿಕೆ : ಇರಾನ್ ಜೊತೆಗೆ ಯಾವುದೇ ರೀತಿಯ ವ್ಯಾಪಾರ ಮತ್ತು ಇಂಧನ ವಹಿವಾಟು ನಡೆಸುವ ಇತರ ದೇಶಗಳ ಮೇಲೂ ಅಮೆರಿಕ ಕಠಿಣ ನಿರ್ಬಂಧಗಳನ್ನು ಹೇರುವುದಾಗಿ ಎಚ್ಚರಿಸಿದ್ದು, ಇದು ಭಾರತ, ಚೀನಾ ಸೇರಿದಂತೆ ಹಲವು ರಾಷ್ಟ್ರಗಳ ಮೇಲೆ ನೇರ ರಾಜತಾಂತ್ರಿಕ ಪರಿಣಾಮ ಬೀರಲಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us