ಟಿವಿ ಚಾನೆಲ್‌ಗಳ ಬಹಿಷ್ಕಾರಕ್ಕೆ ಡೊನಾಲ್ಡ್ ಟ್ರಂಪ್ ತಿರುಗೇಟು: ಶ್ವೇತಭವನದಿಂದಲೇ ಆರಂಭವಾಯ್ತು 24/7 ಟ್ರಂಪ್ ಟಿವಿ

ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾಧ್ಯಮಗಳ ಪ್ರವೇಶ ನಿರ್ಬಂಧಕ್ಕೆ ಪ್ರತಿಕ್ರಿಯೆಯಾಗಿ ‘ಟ್ರಂಪ್ ಟಿವಿ’ ಎಂಬ 24/7 ಲೈವ್ ಸ್ಟ್ರೀಮಿಂಗ್ ವೇದಿಕೆ ಆರಂಭಿಸಿದ್ದಾರೆ. ಶ್ವೇತಭವನದಿಂದಲೇ ನೇರವಾಗಿ ಜನರಿಗೆ ಮಾಹಿತಿ ತಲುಪಿಸುವುದು ಇದರ ಉದ್ದೇಶ. ಇದು ಪತ್ರಿಕಾ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಮಾಧ್ಯಮಗಳು ಆರೋಪಿಸಿದ್ದು, ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿವೆ. ಈ ಬೆಳವಣಿಗೆ ಪ್ರಜಾಪ್ರಭುತ್ವದ ಮೇಲಿನ ಆತಂಕಕ್ಕೆ ಕಾರಣವಾಗಿದೆ.

ಟಿವಿ ಚಾನೆಲ್‌ಗಳ ಬಹಿಷ್ಕಾರಕ್ಕೆ ಡೊನಾಲ್ಡ್ ಟ್ರಂಪ್ ತಿರುಗೇಟು: ಶ್ವೇತಭವನದಿಂದಲೇ ಆರಂಭವಾಯ್ತು 24/7 ಟ್ರಂಪ್ ಟಿವಿ
ಡೊನಾಲ್ಡ್​ ಟ್ರಂಪ್
Image Credit source: PTI

Updated on: Sep 22, 2026 | 9:00 AM

ವಾಷಿಂಗ್ಟನ್, ಸೆಪ್ಟೆಂಬರ್ 22: ಸಿಎನ್‌ಎನ್ ಸೇರಿದಂತೆ ಪ್ರಮುಖ ಮಾಧ್ಯಮ ಸಂಸ್ಥೆಗಳ ಪ್ರವೇಶ ನಿರ್ಬಂಧ ವಿರೋಧಿಸಿ ಅಮೆರಿಕದ ದಿಗ್ಗಜ ಸುದ್ದಿ ವಾಹಿನಿಗಳು ಅಧ್ಯಕ್ಷರ ಕವರೇಜ್ ಬಹಿಷ್ಕರಿಸಿದ ಬೆನ್ನಲ್ಲೇ, ಡೊನಾಲ್ಡ್ ಟ್ರಂಪ್ ಆಡಳಿತವು ‘ಟ್ರಂಪ್ ಟಿವಿ’ ಎಂಬ 24/7 ಲೈವ್ ಸ್ಟ್ರೀಮಿಂಗ್ ವೇದಿಕೆಯನ್ನು ಅಧಿಕೃತವಾಗಿ ಆರಂಭಿಸಿದೆ. ಆಡಳಿತದ ಪ್ರಮುಖ ಭಾಷಣಗಳು, ಅಧಿಕೃತ ಪ್ರಕಟಣೆಗಳು ಮತ್ತು ಕಾರ್ಯಕ್ರಮಗಳನ್ನು ಮುಖ್ಯವಾಹಿನಿ ಮಾಧ್ಯಮಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಜನರಿಗೆ ತಲುಪಿಸಲು ಶ್ವೇತಭವನದ ಯೂಟ್ಯೂಬ್ ಚಾನೆಲ್ ಮೂಲಕ ಈ ನಿರಂತರ ಪ್ರಸಾರವನ್ನು ಶುರು ಮಾಡಲಾಗಿದೆ.

ಸೋಮವಾರ ಸಂಜೆ 7 ಗಂಟೆಗೆ ಚಾಲನೆ ಪಡೆದ ‘ಟ್ರಂಪ್ ಟಿವಿ’, ರಿಯಲ್ ಟೈಮ್ ಅಪ್‌ಡೇಟ್‌ಗಳನ್ನು ನೀಡುತ್ತದೆ. ಟ್ರಂಪ್ ಅವರ ಪ್ರಮಾಣವಚನ ಸಮಾರಂಭ, ಐತಿಹಾಸಿಕ ಭಾಷಣಗಳು ಮತ್ತು ಸರ್ಕಾರದ ಪ್ರಮುಖ ನಿರ್ಧಾರಗಳ ದೃಶ್ಯಗಳನ್ನು ಯಾವುದೇ ಸುದ್ದಿ ವಾಹಿನಿಗಳ ಹಸ್ತಕ್ಷೇಪವಿಲ್ಲದೆ ದಿನದ 24 ಗಂಟೆಯೂ ನಿರಂತರವಾಗಿ ಪ್ರಸಾರ ಮಾಡಲಾಗುತ್ತಿದೆ.

ಟ್ರಂಪ್ ಅವರ ನೀತಿಗಳನ್ನು ತೀವ್ರವಾಗಿ ಟೀಕಿಸಿದ ಕಾರಣಕ್ಕೆ ಸಿಎನ್‌ಎನ್ , ಎಂಎಸ್ ನೌ ಮತ್ತು ಪೊಲಿಟಿಕೊ ಸಂಸ್ಥೆಗಳ ವರದಿಗಾರರನ್ನು ಶ್ವೇತಭವನಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿ, ಅವರ ಪ್ರೆಸ್ ಪಾಸ್‌ಗಳನ್ನು ರದ್ದುಗೊಳಿಸಲಾಗಿತ್ತು. ಸರ್ಕಾರದ ಈ ನಿರ್ಧಾರವು ಅಮೆರಿಕ ಸಂವಿಧಾನದ ಮೊದಲ ತಿದ್ದುಪಡಿ ಖಾತರಿಪಡಿಸಿರುವ ಪತ್ರಿಕಾ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿ ಸಿಎನ್‌ಎನ್, ಪೊಲಿಟಿಕೊ ಮತ್ತು ಎಂಎಸ್ ನೌ ಸಂಸ್ಥೆಗಳು ಟ್ರಂಪ್ ಆಡಳಿತದ ವಿರುದ್ಧ ಫೆಡರಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿವೆ.

5 ಪ್ರಮುಖ ನೆಟ್‌ವರ್ಕ್‌ಗಳಿಂದ ಬಹಿಷ್ಕಾರ: ಶ್ವೇತಭವನದ ಈ ಕ್ರಮವನ್ನು ಖಂಡಿಸಿ ಅಮೆರಿಕದ ದಿಗ್ಗಜ ಮಾಧ್ಯಮಗಳಾದ ಎಬಿಸಿ , ಸಿಬಿಎಸ್ , ಸಿಎನ್‌ಎನ್ , ಎನ್‌ಬಿಸಿ ಮತ್ತು ಫಾಕ್ಸ್ ನ್ಯೂಸ್ ಅಧ್ಯಕ್ಷ ಟ್ರಂಪ್ ಅವರ ಶ್ವೇತಭವನದ ಜಂಟಿ ಪತ್ರಿಕಾ ಪೂಲ್ ಕವರೇಜ್‌ನಲ್ಲಿ ಭಾಗವಹಿಸುವುದನ್ನು ಸ್ಥಗಿತಗೊಳಿಸಿ ಪ್ರತಿಭಟನೆ ದಾಖಲಿಸಿದವು.

ಮತ್ತಷ್ಟು ಓದಿ: ಗ್ರೀನ್‌ಲ್ಯಾಂಡ್‌ನಲ್ಲಿ ಯುಎಸ್ ಸೇನಾ ಬಲ ವೃದ್ಧಿಗೆ ಡೆನ್ಮಾರ್ಕ್ ಜೊತೆ ಒಪ್ಪಂದ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ

ಟ್ರಂಪ್ ಸಮರ್ಥನೆ: ಮಾಧ್ಯಮಗಳ ನಿರ್ಬಂಧವನ್ನು ಸಮರ್ಥಿಸಿಕೊಂಡ ಅಧ್ಯಕ್ಷ ಟ್ರಂಪ್, ಅವರು ನನ್ನನ್ನು ಬಹಿಷ್ಕರಿಸುವುದಾಗಿ ಹೇಳುತ್ತಾರೆ, ಆದರೆ ಎಂದಿಗೂ ಬಹಿಷ್ಕರಿಸಲು ಸಾಧ್ಯವಿಲ್ಲ. ನನ್ನ ಸುತ್ತಲೂ ಇರುವ ಪತ್ರಿಕಾ ಮಾಧ್ಯಮಗಳನ್ನು ನೋಡಿ, ಇದರ ಬಗ್ಗೆ ನಾನು ಚಿಂತಿಸುವುದಿಲ್ಲ ಎಂದು ಬಹಿಷ್ಕಾರದ ಬೆದರಿಕೆಯನ್ನು ಲಘುವಾಗಿ ತಳ್ಳಿಹಾಕಿದ್ದಾರೆ.

ವಿಡಿಯೋ

ವೈಟ್ ಹೌಸ್ ಪ್ರೆಸ್ ಪೂಲ್ ಎಂದರೇನು?: ಸೀಮಿತ ಸ್ಥಳಾವಕಾಶವಿರುವ ಶ್ವೇತಭವನದಲ್ಲಿ ಪ್ರಮುಖ ಮಾಧ್ಯಮ ಸಂಸ್ಥೆಗಳು ಸರದಿಯಂತೆ ಕಾರ್ಯನಿರ್ವಹಿಸಿ, ಸಂಗ್ರಹಿಸಿದ ವರದಿ ಮತ್ತು ವಿಡಿಯೋ ಫೂಟೇಜ್‌ಗಳನ್ನು ಎಲ್ಲ ಸದಸ್ಯ ಮಾಧ್ಯಮಗಳಿಗೂ ಸಮಾನವಾಗಿ ಹಂಚಿಕೊಳ್ಳುವ ವ್ಯವಸ್ಥೆಯೇ ಪ್ರೆಸ್ ಪೂಲ್. ಟ್ರಂಪ್ ವಿರುದ್ಧದ ಪ್ರತಿಭಟನೆಯಲ್ಲಿ ಸಾಮಾನ್ಯವಾಗಿ ಅವರ ಪರವಾಗಿ ನಿಲ್ಲುವ ‘ಫಾಕ್ಸ್ ನ್ಯೂಸ್’ ಕೂಡ ಕೈಜೋಡಿಸಿರುವುದು ಈ ಬಿಕ್ಕಟ್ಟಿನ ತೀವ್ರತೆಯನ್ನು ತೋರಿಸುತ್ತದೆ.

ಮಾಧ್ಯಮಗಳ ವಿರುದ್ಧ ಟ್ರಂಪ್ ನಿರಂತರ ಸಂಘರ್ಷ: 2016 ರ ತಮ್ಮ ಮೊದಲ ಅವಧಿಯಿಂದಲೂ ಮುಖ್ಯವಾಹಿನಿಯ ಮಾಧ್ಯಮಗಳನ್ನು ಫೇಕ್ ನ್ಯೂಸ್ ಮತ್ತು ಜನರ ಶತ್ರು  ಎಂದು ಕರೆಯುತ್ತಾ ಬಂದಿರುವ ಟ್ರಂಪ್, ಪತ್ರಿಕಾ ಸಮಾವೇಶಗಳಲ್ಲಿ ನಿರಂತರವಾಗಿ ಜಟಾಪಟಿ ನಡೆಸುತ್ತಿದ್ದರು. ಇದೀಗ ನೇರವಾಗಿ ತಮ್ಮದೇ ಆದ ಸರ್ಕಾರಿ ಮಾಧ್ಯಮ ಪ್ರಸಾರವನ್ನು ಪ್ರಾರಂಭಿಸುವ ಮೂಲಕ ಮುಖ್ಯವಾಹಿನಿ ಸುದ್ದಿಮನೆಗಳಿಗೆ ಪರ್ಯಾಯ ಸೃಷ್ಟಿಸಲು ಮುಂದಾಗಿದ್ದಾರೆ.

ಸ್ವಾತಂತ್ರ್ಯದ ಮೇಲಿನ ಆತಂಕ: ಸರ್ಕಾರದ ಸುದ್ದಿಗಳನ್ನು ಮುಕ್ತವಾಗಿ ಪ್ರಶ್ನಿಸುವ ಪತ್ರಕರ್ತರನ್ನು ಹೊರಗಿಟ್ಟು, ಕೇವಲ ಸರ್ಕಾರದ ಪರ ಪ್ರಚಾರವನ್ನಷ್ಟೇ ಪ್ರಸಾರ ಮಾಡುವ ‘ಸ್ಟೇಟ್ ಮೀಡಿಯಾ’ ಮಾದರಿಯ ವೇದಿಕೆ ಸೃಷ್ಟಿಸುತ್ತಿರುವುದು ಅಮೆರಿಕದ ಪ್ರಜಾಪ್ರಭುತ್ವ ಮತ್ತು ಮುಕ್ತ ಪತ್ರಿಕೋದ್ಯಮಕ್ಕೆ ಅಪಾಯಕಾರಿ ಬೆಳವಣಿಗೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us