
ವಾಷಿಂಗ್ಟನ್, ಸೆಪ್ಟೆಂಬರ್ 232: ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ನೇರ ಕೋರಿಕೆಯ ಮೇರೆಗೆ ಹೌತಿ ಬಂಡುಕೋರರ ನೆಲೆಗಳ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದ ಅಮೆರಿಕ ಸೇನೆಗೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಯ ಕ್ಷಣದಲ್ಲಿ ಬ್ರೇಕ್ ಹಾಕಿದ್ದಾರೆ. ಪೆಂಟಗನ್ ಗುರಿಗಳನ್ನು ಲಾಕ್ ಮಾಡಿ ಯುದ್ಧ ವಿಮಾನಗಳನ್ನು ಹಾರಾಟಕ್ಕೆ ಸನ್ನದ್ಧಗೊಳಿಸಿದ್ದರೂ, ಟ್ರಂಪ್ ದಿಢೀರನೆ ತಮ್ಮ ಮನಸ್ಸು ಬದಲಾಯಿಸಿ ದಾಳಿ ರದ್ದುಗೊಳಿಸುವಂತೆ ಆದೇಶಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಸೌದಿ ಒತ್ತಡಕ್ಕೆ ಕರಗಿದ್ದ ಟ್ರಂಪ್: ಸೌದಿಯ ಕಚ್ಚಾ ತೈಲ ಪೈಪ್‌ಲೈನ್ ಹಾಗೂ ರಾಜಧಾನಿ ರಿಯಾದ್ ಮೇಲೆ ಇರಾನ್ ಬೆಂಬಲಿತ ಹೌತಿ ಪಡೆಗಳು ನಿರಂತರ ದಾಳಿ ನಡೆಸುತ್ತಿರುವುದರಿಂದ ಸೌದಿ ರಕ್ಷಣಾ ಪಡೆ ಕಂಗಾಲಾಗಿತ್ತು. ಸೆಪ್ಟೆಂಬರ್ 17 ರಂದು ಪ್ರಿನ್ಸ್ ಸಲ್ಮಾನ್, ಟ್ರಂಪ್ ಅವರಿಗೆ ಕರೆ ಮಾಡಿ ಹೌತಿಗಳ ಮೇಲೆ ದಾಳಿ ನಡೆಸುವಂತೆ ಬಲವಾಗಿ ಮನವಿ ಮಾಡಿದ್ದರು.
ಕೊನೆ ಕ್ಷಣದ ಯು-ಟರ್ನ್: ಸೌದಿ ಮನವಿಗೆ ಸ್ಪಂದಿಸಿ ಟ್ರಂಪ್ ಯುಎಸ್ ಸೇನೆಗೆ ದಾಳಿ ನಡೆಸಲು ಹಸಿರು ನಿಶಾನೆ ತೋರಿದ್ದರು. ಪೆಂಟಗನ್ ಕೂಡ ಗುರಿಗಳ ಪಟ್ಟಿ ಅಂತಿಮಗೊಳಿಸಿತ್ತು. ಆದರೆ, ಟ್ರಂಪ್ ಆಡಳಿತದ ಹಿರಿಯ ಸಲಹೆಗಾರರು “ನಾವು ಈಗಾಗಲೇ ಇರಾನ್ ಜೊತೆ ತೀವ್ರ ಸಂಘರ್ಷದಲ್ಲಿದ್ದೇವೆ, ಈ ಹೊತ್ತಿನಲ್ಲಿ ಮತ್ತೊಂದು ಯುದ್ಧ ಮುಂಚೂಣಿ ತೆರೆಯುವುದು ತರವಲ್ಲ” ಎಂದು ಎಚ್ಚರಿಸಿದ್ದರಿಂದ ಟ್ರಂಪ್ ಕೊನೆ ಕ್ಷಣದಲ್ಲಿ ದಾಳಿ ನಿಲ್ಲಿಸಲು ನಿರ್ದೇಶಿಸಿದರು.
ಮತ್ತಷ್ಟು ಓದಿ:
ಪಾಕಿಸ್ತಾನ ಹೊತ್ತು ತಂದಿಲ್ಲ ಅಮೆರಿಕ ಸಂದೇಶ: ನಖ್ವಿ ಟೆಹ್ರಾನ್ ಪ್ರವಾಸದ ಅಸಲಿ ಸತ್ಯ ಬಿಚ್ಚಿಟ್ಟ ಇರಾನ್
ಹೌತಿಗಳು ನಮ್ಮ ಮೇಲೆ ದಾಳಿ ಮಾಡಲ್ಲ ಎಂದ ಟ್ರಂಪ್: ಫಾಕ್ಸ್ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ವಾಷಿಂಗ್ಟನ್ ಹೌತಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರು ಅಮೆರಿಕ ಮೇಲೆ ದಾಳಿ ಮಾಡದಿರಲು ಒಪ್ಪಿಕೊಂಡಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ, ಮಿಲಿಟರಿ ನೆರವು ಕೋರಿದ್ದ ಯೆಮನ್ ಆಡಳಿತ ಮಂಡಳಿ ಮುಖ್ಯಸ್ಥ ರಶಾದ್ ಅಲ್-ಅಲಿಮಿ ಅವರಿಗೂ ಟ್ರಂಪ್ ಯಾವುದೇ ಭರವಸೆ ನೀಡಿಲ್ಲ.
ನೇರ ವೈಮಾನಿಕ ದಾಳಿ ನಡೆಸಲು ನಿರಾಕರಿಸಿದ ಬೆನ್ನಲ್ಲೇ, ಟ್ರಂಪ್ ಆಡಳಿತವು ಸೌದಿ ಅರೇಬಿಯಾಕ್ಕೆ ಭವಿಷ್ಯದ ಬೆದರಿಕೆಗಳನ್ನು ಎದುರಿಸಲು ಬರೋಬ್ಬರಿ 24.3ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ 48 ‘F-35’ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಮಾರಾಟ ಮಾಡಲು ಅನುಮೋದನೆ ನೀಡಿದೆ.
ಬಾಬ್ ಎಲ್-ಮಂಡೇಬ್ ಮತ್ತು ರೆಡ್ ಸೀ: ಕೆಂಪು ಸಮುದ್ರ ಮತ್ತು ಬಾಬ್ ಎಲ್-ಮಂಡೇಬ್ ಜಲಸಂಧಿಯ ಮೂಲಕ ಹಾದುಹೋಗುವ ಅಂತಾರಾಷ್ಟ್ರೀಯ ವಾಣಿಜ್ಯ ಹಡಗುಗಳ ಮೇಲೆ ಹೌತಿ ಬಂಡುಕೋರರು ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ಮುಂದುವರೆಸಿದ್ದಾರೆ. ಈ ಮಾರ್ಗದಲ್ಲಿ ಪೂರ್ಣಪ್ರಮಾಣದ ಸೇನಾ ಕಾರ್ಯಾಚರಣೆಗಿಳಿದರೆ ಜಾಗತಿಕ ತೈಲ ಬೆಲೆ ಗಗನಕ್ಕೇರಬಹುದೆಂಬ ಆತಂಕ ಅಮೆರಿಕಕ್ಕಿದೆ.
ಟ್ರಂಪ್‌ರ ‘ಅಮೆರಿಕ ಫಸ್ಟ್’ ನೀತಿ: ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಸೇನೆಯನ್ನು ಅನಗತ್ಯ ಯುದ್ಧಗಳಿಗೆ ತಳ್ಳಬಾರದು ಎಂಬುದು ಟ್ರಂಪ್ ಅವರ ದೀರ್ಘಕಾಲೀನ ನಿಲುವು. ಆದಾಗ್ಯೂ, ಗಲ್ಫ್ ಮಿತ್ರರಾಷ್ಟ್ರಗಳಿಗೆ ದುಬಾರಿ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಮೂಲಕ ಅಮೆರಿಕದ ಆರ್ಥಿಕ ಲಾಭವನ್ನು ಕಾಪಾಡಿಕೊಳ್ಳುವ ರಣತಂತ್ರವನ್ನು ಅವರು ಪಾಲಿಸುತ್ತಿದ್ದಾರೆ.
ಇರಾನ್-ಹೌತಿ ನೆಕ್ಸಸ್: ಇರಾನ್‌ನಿಂದ ನೇರ ಆರ್ಥಿಕ ಮತ್ತು ಶಸ್ತ್ರಾಸ್ತ್ರ ಬೆಂಬಲ ಪಡೆಯುತ್ತಿರುವ ಹೌತಿಗಳು, ಒಂದು ವೇಳೆ ಅಮೆರಿಕ ದಾಳಿ ನಡೆಸಿದರೆ ಸೌದಿ ಅರೇಬಿಯಾದ ತೈಲ ಸಂಸ್ಕರಣಾಗಾರಗಳ ಮೇಲೆ ಭೀಕರ ಪ್ರತಿದಾಳಿ ನಡೆಸುವ ಎಚ್ಚರಿಕೆ ನೀಡಿದ್ದರು. ಟ್ರಂಪ್‌ರ ಈ ಹಿನ್ನಡೆಯು ಗಲ್ಫ್ ವಲಯದಲ್ಲಿ ಸೌದಿ-ಯುಎಸ್ ರಕ್ಷಣಾ ಸಂಬಂಧದ ವಿಶ್ವಾಸಾರ್ಹತೆಯ ಬಗ್ಗೆ ಹೊಸ ಚರ್ಚೆ ಹುಟ್ಟುಹಾಕಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ