
ವಾಷಿಂಗ್ಟನ್, ಸೆಪ್ಟೆಂಬರ್ 21: ಯುದ್ಧ ನಿಲ್ಲಿಸಲು ಕತಾರ್ ಮೂಲಕ ಇರಾನ್ 7 ಷರತ್ತುಗಳನ್ನು ವಿಧಿಸಿ ‘ನಿರ್ಣಾಯಕ ಯುದ್ಧ’ದ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರಮಣಕಾರಿ ಪ್ರತಿಕ್ರಿಯೆ ನೀಡಿದ್ದಾರೆ. ತಾವು ಇರಾನ್ ವಿಚಾರದಲ್ಲಿ ‘ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮನಸ್ಥಿತಿಯಲ್ಲಿದ್ದೇವೆ’ ಎಂದು ಹೇಳಿರುವ ಟ್ರಂಪ್, ಮುಂಬರುವ ದಿನಗಳಲ್ಲಿ ‘ಬಹಳ ದೊಡ್ಡ ವಿಷಯಗಳು ಸಂಭವಿಸಲಿವೆ’ ಎಂದು ಮುನ್ಸೂಚನೆ ನೀಡಿದ್ದಾರೆ. ಇರಾನ್ ಸರಿಯಾಗಿ ವರ್ತಿಸದಿದ್ದರೆ ಆ ದೇಶವನ್ನು ಸಂಪೂರ್ಣ ಸ್ಫೋಟಿಸಬೇಕೆ ಅಥವಾ ಆರ್ಥಿಕವಾಗಿ ಧ್ವಂಸಗೊಳಿಸಬೇಕೆ ಎಂಬ ಮೂರು ಆಯ್ಕೆಗಳು ತಮ್ಮ ಮುಂದಿವೆ ಎಂದು ಅವರು ಗುಡುಗಿದ್ದಾರೆ.
ಟ್ರಂಪ್ ಮುಂದಿಟ್ಟ 3 ಆಯ್ಕೆಗಳು: ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಇರಾನ್ ಜೊತೆ ವ್ಯವಹರಿಸಲು ತಮ್ಮ ಮುಂದೆ ಮೂರು ಮಾರ್ಗಗಳಿವೆ ಎಂದಿದ್ದಾರೆ.
ಇರಾನ್ ದೇಶವನ್ನು ಸಂಪೂರ್ಣವಾಗಿ ‘ಅಳಿಸಿಹಾಕುವುದು’ (ಸರ್ವನಾಶ).
ಅವರ ಆರ್ಥಿಕತೆಯನ್ನು ಸಂಪೂರ್ಣವಾಗಿ ಕುಸಿಯಲು ಬಿಡುವುದು (ಆರ್ಥಿಕ ದಿಗ್ಬಂಧನ).
ರಾಜತಾಂತ್ರಿಕ ಮಾತುಕತೆಯ ಮೂಲಕ ಒಪ್ಪಂದಕ್ಕೆ (Deal) ಬರುವುದು.
ಪೆಜೆಶ್ಕಿಯಾನ್ ಜೊತೆ ಮಾತುಕತೆಗೆ ಮುಕ್ತ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಭಾಗವಹಿಸಲು ನ್ಯೂಯಾರ್ಕ್‌ಗೆ ಆಗಮಿಸಲಿರುವ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತುಕತೆ ನಡೆಸಲು ತಾವು ‘ಬಹುಶಃ ಮುಕ್ತರಾಗಿದ್ದೇವೆ’ ಎಂದು ಟ್ರಂಪ್ ಹೇಳಿರುವುದು ರಾಜತಾಂತ್ರಿಕ ಕುತೂಹಲ ಮೂಡಿಸಿದೆ.
ಹಾರ್ಮುಜ್‌ನಲ್ಲಿ 109 ಹಡಗುಗಳ ದಿಗ್ಬಂಧನ: ಜುಲೈ 14 ರಿಂದ ಇರಾನ್ ಬಂದರುಗಳ ಮೇಲೆ ಹೇರಲಾಗಿರುವ ನೌಕಾ ದಿಗ್ಬಂಧನವನ್ನು ಯುಎಸ್ ಮಿಲಿಟರಿ ತೀವ್ರಗೊಳಿಸಿದೆ. ನಿಯಮ ಪಾಲಿಸದ 109 ವಾಣಿಜ್ಯ ಸರಕು ಸಾಗಣೆ ಹಡಗುಗಳನ್ನು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಪಡೆಗಳು ಹಾರ್ಮುಜ್ ಜಲಸಂಧಿಯ ಬಳಿ ಮಾರ್ಗ ಬದಲಿಸಿ ಮರುನಿರ್ದೇಶಿಸಿವೆ.
ತೈಲ ಸಾಗಣೆ ತೀವ್ರ ಕುಸಿತ: ಸಂಘರ್ಷದ ಪರಿಣಾಮವಾಗಿ ವಿಶ್ವದ ಪ್ರಮುಖ ಇಂಧನ ಹೆದ್ದಾರಿಯಾದ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರ ಗಣನೀಯವಾಗಿ ಕುಸಿದಿದೆ. ದಿನಕ್ಕೆ ಸರಾಸರಿ 16 ಹಡಗುಗಳು ಸಂಚರಿಸುತ್ತಿದ್ದ ಜಾಗದಲ್ಲಿ ಸೆಪ್ಟೆಂಬರ್ 17 ರಂದು ಕೇವಲ 4 ಸರಕು ಹಡಗುಗಳು ಮಾತ್ರ ಸಂಚರಿಸಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಮತ್ತಷ್ಟು ಓದಿ: ಪಾಕಿಸ್ತಾನ ಹೊತ್ತು ತಂದಿಲ್ಲ ಅಮೆರಿಕ ಸಂದೇಶ: ನಖ್ವಿ ಟೆಹ್ರಾನ್ ಪ್ರವಾಸದ ಅಸಲಿ ಸತ್ಯ ಬಿಚ್ಚಿಟ್ಟ ಇರಾನ್
ನ್ಯೂಯಾರ್ಕ್‌ನಲ್ಲಿ ಹೈವೋಲ್ಟೇಜ್ ಅಧಿವೇಶನ: ಸೆಪ್ಟೆಂಬರ್ ಕೊನೆಯ ವಾರದಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆಯಲಿದ್ದು, ಜಗತ್ತಿನ ಕಣ್ಣು ಈಗ ನ್ಯೂಯಾರ್ಕ್ ಮೇಲೆ ನೆಟ್ಟಿದೆ. ಒಂದೆಡೆ ಕದನದ ಬೆದರಿಕೆ, ಇನ್ನೊಂದೆಡೆ ಮುಖಾಮುಖಿ ಸಭೆಯ ಸಾಧ್ಯತೆಗಳಿರುವುದು ಉಭಯ ದೇಶಗಳ ನಡುವಿನ ತೀವ್ರ ರಾಜತಾಂತ್ರಿಕ ಹಗ್ಗಜಗ್ಗಾಟವನ್ನು ತೋರಿಸುತ್ತದೆ.
ಜಾಗತಿಕ ಇಂಧನ ಬಿಕ್ಕಟ್ಟಿನ ಭೀತಿ: ವಿಶ್ವದ ಒಟ್ಟು ತೈಲ ಬಳಕೆಯ ಸುಮಾರು ಶೇಕಡಾ 20 ರಷ್ಟು ಭಾಗ ಹಾರ್ಮುಜ್ ಜಲಸಂಧಿಯ ಮೂಲಕವೇ ಹಾದುಹೋಗುತ್ತದೆ. ಯುಎಸ್ ನೌಕಾಪಡೆಯ ನಿರಂತರ ದಿಗ್ಬಂಧನ ಮತ್ತು ಇರಾನ್‌ನ ಪ್ರತೀಕಾರದ ಬೆದರಿಕೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ದಿಢೀರ್ ಏರಿಕೆಯಾಗಲು ಕಾರಣವಾಗಬಹುದು.
ಯುದ್ಧ ಸನ್ನದ್ಧತೆ: ಇರಾನ್ ಈಗಾಗಲೇ ಅಮೆರಿಕದ ಯುದ್ಧನೌಕೆಗಳನ್ನು ಗುರಿಯಾಗಿಸಬಲ್ಲ ಮಲ್ಟಿ-ವಾರ್‌ಹೆಡ್ ಕ್ಷಿಪಣಿಗಳನ್ನು ಸನ್ನದ್ಧವಾಗಿರಿಸಿದ್ದು, ಅಮೆರಿಕ ತನ್ನ ‘ಯುಎಸ್‌ಎಸ್ ಜಾನ್ ಪಾಲ್ ಜೋನ್ಸ್’ ಸೇರಿದಂತೆ ಬಲಿಷ್ಠ ಯುದ್ಧನೌಕೆಗಳನ್ನು ಗಲ್ಫ್ ಕರಾವಳಿಯಲ್ಲಿ ಜಮಾವಣೆ ಮಾಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ