Miracle: 12 ದಿನ ನಂತರವೂ ಬದುಕುಳಿದ ವ್ಯಕ್ತಿ; ಟರ್ಕಿಯಲ್ಲಿ ಸಾವು, ನೋವು, ಅಚ್ಚರಿಗಳ ಸರಮಾಲೆ
Turkey Earthquake: ಟರ್ಕಿಯಲ್ಲಿ ಭೂಕಂಪವಾಗಿ 12 ದಿನಗಳ ಬಳಿಕ ಸಾವಿನ ಸಂಖ್ಯೆ 45 ಸಾವಿರ ಗಡಿ ದಾಟಿದೆ. ಘಾನಾ ಫುಟ್ಬಾಲ್ ಆಟಗಾರನ ಮೃತದೇಹ ಸಿಕ್ಕಿದೆ. 45 ವರ್ಷದ ವ್ಯಕ್ತಿಯೊಬ್ಬ 12 ದಿನಗಳ ಬಳಿಕ ಕಟ್ಟಡಗಳ ಅವಶೇಷಗಳಡಿ ಜೀವಂತ ಸಿಕ್ಕಿರುವ ಅಚ್ಚರಿ ಘಟನೆಯೂ ನಡೆದಿದೆ.
ಇಸ್ತಾಂಬುಲ್: ಟರ್ಕಿ ದೇಶದಲ್ಲಿ ಭೂಕಂಪವಾಗಿ (Turkey Earthquake) 12 ದಿನಗಳಾದವು. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಈಗಲೂ ಒಬ್ಬ ವ್ಯಕ್ತಿ ಜೀವಂತ ಸಿಕ್ಕಿರುವ ಘಟನೆ ಬೆಳಕಿಗೆ ಬಂದಿದೆ. ನಿನ್ನೆಯಷ್ಟೇ ಮೂವರು ವ್ಯಕ್ತಿಗಳನ್ನು ಕಟ್ಟಡಗಳ ಅವಶೇಷಗಳ ಅಡಿಯಿಂದ ಹೊರತಂದು ಪಾರು ಮಾಡಲಾಗಿತ್ತು. ಇವತ್ತು 45 ವರ್ಷದ ವ್ಯಕ್ತಿಯೊಬ್ಬನನ್ನು ಕಾಪಾಡಲಾಗಿದೆ.
ಇದೇ ವೇಳೆ, ಟರ್ಕಿ ಭೂಕಂಪ ದುರಂತದಿಂದ ಸಾವನ್ನಪ್ಪಿದವರ ಸಂಖ್ಯೆ 45 ಸಾವಿರ ಗಡಿ ದಾಟಿ ಹೋಗಿದೆ. ಅದೃಷ್ಟಕ್ಕೆ ಕಳೆದ ಎರಡು ದಿನಗಳಿಂದ ಸಾವಿನ ಸಂಖ್ಯೆ ಏರಿಕೆಯ ಗತಿ ಕಡಿಮೆಗೊಂಡಿದೆ. ಆದರೆ ಈಗಲೂ ನೂರಾರು ಕಟ್ಟಡಗಳ ಅವಶೇಷಗಳನ್ನು ಇನ್ನೂ ಸಂಪೂರ್ಣವಾಗಿ ತೆರವುಗೊಳಿಸಿಲ್ಲ. ಹೀಗಾಗಿ, ಸಾವಿನ ಸಂಖ್ಯೆ ಇನ್ನಷ್ಟು ಏರಿದರೆ ಅಚ್ಚರಿ ಇರುವುದಿಲ್ಲ.
ಭಾರತ ಸೇರಿದಂತೆ ಹಲವು ದೇಶಗಳಿಂದ ಟರ್ಕಿಗೆ ಹೋಗಿರುವ ತಂಡಗಳು ವ್ಯಾಪಕವಾಗಿ ರಕ್ಷಣಾ ಕಾರ್ಯಗಳನ್ನು ನಡೆಸುತ್ತಿದ್ದಾರೆ. ದಿನವೂ ಕೆಲವೊಂದಿಷ್ಟು ಜನರು ಜೀವಂತ ಸಿಗುತ್ತಿದ್ದಾರೆ. ಐದಾರು ದಿನಗಳವರೆಗೆ ಮಗು ಜೀವ ಹಿಡಿದುಕೊಂಡು ಬದುಕಿತ್ತು. ಕೆಲ ಮಕ್ಕಳೂ ಕೆಲ ದಿನಗಳ ಕಾಲ ಅವಶೇಷಗಳ ಅಡಿಯಲ್ಲಿ ಬದುಕಿ ಉಳಿದಿದ್ದುಂಟು. ಆದರೆ 11 ಮತ್ತು 12ನೇ ದಿನ ಬಳಿಕ ನಾಲ್ವರು ವ್ಯಕ್ತಿಗಳು ಬದುಕಿರುವುದು ಅಚ್ಚರಿ ಹುಟ್ಟಿಸಿದೆ. ವಿಪರೀತ ಚಳಿಯ ವಾತಾವರಣದಲ್ಲೂ ಇವರು ಬದುಕಿರುವುದು ಪವಾಡಸದೃಶ ಎಂದೇ ಹೇಳಲಾಗುತ್ತಿದೆ. ಇಂದು ಟರ್ಕಿಯ ಸಿರಿಯಾ ಗಡಿ ಬಳಿಯ ಹಟೇ ಪ್ರಾಂತ್ಯದಲ್ಲಿ 45 ವರ್ಷದ ಹಕನ್ ಯಾಸಿನೋಗ್ಲು ಎಂಬ ವ್ಯಕ್ತಿ ಜೀವಂತ ಸಿಕ್ಕಿದ್ದಾರೆ. ರಕ್ಷಣಾ ಕಾರ್ಯಕರ್ತರು ಈತನನ್ನು ಕಟ್ಟಡಗಳ ಅವಶೇಷಗಳಿಂದ ಹೊರತಂದು ಸ್ಟ್ರೆಚರ್ನಲ್ಲಿ ಸಾಗಿಸುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಹುತೇಕ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿದ್ದ ಇವರನ್ನು ಸ್ಟ್ರೆಚರ್ಗೆ ಕಟ್ಟಿ ಹೊತ್ತುಹೋಗಲಾಗಿತ್ತು. ನಿನ್ನೆ ಜೀವಂತ ಸಿಕ್ಕ ಮೂವರು ವ್ಯಕ್ತಿಗಳಲ್ಲಿ 14 ವರ್ಷದ ಒಬ್ಬ ಬಾಲಕನೂ ಇದ್ದಾನೆ.
ಇದನ್ನೂ ಓದಿ: Terror Attack: ಪಾಕಿಸ್ತಾನದ ಕರಾಚಿ ಪೊಲೀಸ್ ಕಚೇರಿ ಮೇಲೆ ಉಗ್ರರ ದಾಳಿ; ಎಂಟು ಸಾವು
12 ದಿನಗಳ ಕಾಲ ಒಬ್ಬ ವ್ಯಕ್ತಿ ಅನ್ನ, ನೀರು ಯಾವುದೂ ಇಲ್ಲದೇ ಜೀವಂತ ಇರಲು ಸಾಧ್ಯವಾ? ಆಸ್ಟ್ರಿಯಾ ದೇಶದಲ್ಲಿ 1979ರಲ್ಲಿ ಒಬ್ಬ ವ್ಯಕ್ತಿಯನ್ನು ಪೊಲೀಸರು ಕೋಣೆಯೊಂದರಲ್ಲಿ ಕೂಡಿ ಹಾಕಿ ಮರೆತೇ ಹೋಗಿದ್ದರು. 18 ದಿನಗಳ ಕಾಲ ಈತ ಆಹಾರ, ನೀರು ಇಲ್ಲದೇ ಬದುಕಿದ್ದ. ಇಂಥ ಅಪರೂಪದ ವಿದ್ಯಮಾನಗಳು ಅಲ್ಲಲ್ಲಿ ನಡೆದಿವೆ. ಮಹಾತ್ಮ ಗಾಂಧಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರಾದರೂ ನೀರು ಕುಡಿಯುತ್ತಿದ್ದರು. ಟರ್ಕಿಯಲ್ಲಿ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಆಹಾರ, ನೀರು ಸಿಗುವುದು ಇರಲಿ, ಉಸಿರಾಡಲು ಸರಿಯಾಗಿ ಗಾಳಿ ಕೂಡ ಸಿಗುವುದಿಲ್ಲ. ಜೊತೆಗೆ ಕೊರೆಯುವ ಚಳಿ, ಇವೆಲ್ಲವನ್ನೂ ಸಹಿಸಿಕೊಂಡು ಒಂದು ವಾರಕ್ಕಿಂತ ಹೆಚ್ಚು ಕಾಲ ಜೀವ ಉಳಿಸಿಕೊಳ್ಳುವುದು ಪವಾಡವೇ ಸರಿ.
ಘಾನಾ ಫುಟ್ಬಾಲ್ ಅಟಗಾರ ನಿಧನ
We are profoundly saddened to learn that Christian Atsu has tragically lost his life in Turkey’s devastating earthquakes.
A talented player and a special person, he will always be fondly remembered by our players, staff and supporters.
Rest in peace, Christian. ??
— Newcastle United FC (@NUFC) February 18, 2023
ಟರ್ಕಿಯ ದಕ್ಷಿಣ ಭಾಗದ ಪ್ರಾಂತ್ಯವೊಂದರಲ್ಲಿ ಕಟ್ಟಡದ ಅವಶೇಷಗಳ ಅಡಿಯಲ್ಲಿ ಘಾನಾ ದೇಶದ ಫುಟ್ಬಾಲ್ ಅಟಗಾರ ಕ್ರಿಸ್ಟಿಯಾನ್ ಅಟ್ಸು ಮೃತದೇಹ ಪತ್ತೆಯಾಗಿದೆ. ಇಪಿಎಲ್ ಕ್ಲಬ್ ಚೆಲ್ಸೀಯ ಮಾಜಿ ಆಟಗಾರರಾಗಿದ್ದ 31 ವರ್ಷದ ಆಟ್ಸು ಟರ್ಕಿಯ ಫುಟ್ಬಾಲ್ ಕ್ಲಬ್ವೊಂದಕ್ಕೆ ಆಡುತ್ತಿದ್ದರೆನ್ನಲಾಗಿದೆ. ಅವರು ವಾಸವಿದ್ದ ಅಪಾರ್ಟ್ಮೆಂಟ್ ಭೂಕಂಪದಿಂದ ಕುಸಿದಿತ್ತು.