Russia Ukraine War: ರಷ್ಯಾ ವಿರುದ್ಧ ಮತ್ತೊಮ್ಮೆ ಉಕ್ರೇನ್​ಗೆ ಮುನ್ನಡೆ, ಉಪವಾಸ ಬೀಳಲಿದೆ ದಾಳಿಗೆ ಬಂದ ರಷ್ಯನ್ ಸೇನೆ

ಉಕ್ರೇನ್​ ಮೇಲಿನ ದಾಳಿಗೆಂದು ಬಂದು, ಗೆದ್ದ ಸ್ಥಳಗಳಲ್ಲಿ ನೆಲೆಯೂರಿರುವ ಸಾವಿರಾರು ರಷ್ಯನ್ ಸೈನಿಕರಿಗೆ ಆಹಾರ, ಇಂಧನ ಮತ್ತು ಔಷಧಗಳು ಸರಬರಾಜು ಇದೇ ಮಾರ್ಗದಲ್ಲಿ ಪೂರೈಕೆಯಾಗಬೇಕು.

Russia Ukraine War: ರಷ್ಯಾ ವಿರುದ್ಧ ಮತ್ತೊಮ್ಮೆ ಉಕ್ರೇನ್​ಗೆ ಮುನ್ನಡೆ, ಉಪವಾಸ ಬೀಳಲಿದೆ ದಾಳಿಗೆ ಬಂದ ರಷ್ಯನ್ ಸೇನೆ
ರಷ್ಯಾ ಟ್ಯಾಂಕ್​ಗಳನ್ನು ಒಡೆಯುತ್ತಿರುವ ಉಕ್ರೇನ್ ಯೋಧರು (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 04, 2022 | 7:38 AM

ಕೀವ್: ದಾಳಿಕೋರ ರಷ್ಯನ್ ಪಡೆಗಳನ್ನು ಹಿಮ್ಮೆಟ್ಟಿಸಿರುವ ಉಕ್ರೇನ್ ಸೇನೆಯು (Russia Ukraine Conflict) ದಕ್ಷಿಣ ಭಾಗದಲ್ಲಿ ಮಹತ್ವದ ಮುನ್ನಡೆ ದಾಖಲಿಸಿದೆ. ನಿಪ್ರೊ ನದಿ (Dnipro River) ಆಸುಪಾಸಿನ ಪ್ರದೇಶಗಳನ್ನು, ಸೇನಾ ಕಾರ್ಯತಂತ್ರ ದೃಷ್ಟಿಯಿಂದ (Military Logistics) ಮಹತ್ವ ಪಡೆದಿರುವ ಲಿಮನ್ ನಗರವನ್ನು (Lyman City) ಉಕ್ರೇನ್ ಸೇನೆ ಮತ್ತೆ ತನ್ನ ವಶಕ್ಕೆ ಪಡೆದಿದೆ. ಉಕ್ರೇನ್​ ಮೇಲಿನ ದಾಳಿಗೆಂದು ಬಂದು, ಗೆದ್ದ ಸ್ಥಳಗಳಲ್ಲಿ ನೆಲೆಯೂರಿರುವ ಸಾವಿರಾರು ರಷ್ಯನ್ ಸೈನಿಕರಿಗೆ ಆಹಾರ, ಇಂಧನ ಮತ್ತು ಔಷಧಗಳು ಸರಬರಾಜು ಇದೇ ಮಾರ್ಗದಲ್ಲಿ ಪೂರೈಕೆಯಾಗಬೇಕು. ಉಕ್ರೇನ್ ಇನ್ನು ಸ್ವಲ್ಪವೇ ಮುಂದೊತ್ತಿದರೂ ಪೂರೈಕೆ ಮಾರ್ಗವೇ ಕಡಿತವಾಗಿ, ದಾಳಿಗೆ ಬಂದವರೇ ದಿಗ್ಬಂಧನಕ್ಕೆ ಸಿಲುಕುವ ಅಪಾಯ ಎದುರಾಗಲಿದೆ. ಗೆಲುವಿನ ಬಗ್ಗೆ ಉಕ್ರೇನ್ ಸರ್ಕಾರವು ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ‘ಉಕ್ರೇನ್​ನ ಟ್ಯಾಂಕ್ ಪಡೆಗಳು ಹಠಾತ್ ಸಂಘಟಿತ ದಾಳಿ ನಡೆಸಿದ್ದರಿಂದ ನಿಪ್ರೋ ನದಿಯ ಪಶ್ಚಿಮ ದಂಡೆಯಲ್ಲಿ ರಷ್ಯಾ ಪಡೆಗಳು ಗೆಲುವು ಸಾಧಿಸಿದ್ದ ಸಾವಿರಾರು ಕಿಲೋಮೀಟರ್​ಗಳಷ್ಟು ಪ್ರದೇಶ ಕೈತಪ್ಪಿತು. ವಿಶಾಲ ಭೂ ಪ್ರದೇಶ ಮತ್ತು ಹಲವು ಹಳ್ಳಿಗಳನ್ನು ಉಕ್ರೇನ್ ಪಡೆಗಳು ತಮ್ಮ ಸುಪರ್ದಿಗೆ ಪಡೆದಿವೆ’ ಎಂದು ರಷ್ಯಾದ ಸೇನಾ ಮೂಲಗಳನ್ನು ಉಲ್ಲೇಖಿಸಿ ಜಾಗತಿಕ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಉಕ್ರೇನ್​ನ ನಾಲ್ಕು ಪ್ರಾಂತ್ಯಗಳನ್ನು ಅಧಿಕೃತವಾಗಿ ರಷ್ಯಾ ಒಕ್ಕೂಟಕ್ಕೆ ಸೇರ್ಪಡೆಗೊಳಿಸುವ ಜನಮತಗಣನೆ ಆಧರಿತ ಪ್ರಸ್ತಾವಕ್ಕೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಹಿಹಾಕಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ. ಇತ್ತೀಚೆಗಷ್ಟೇ ಉಕ್ರೇನ್ ಸೇನೆಯು ಪೂರ್ವ ಭಾಗದಲ್ಲಿ ರಷ್ಯಾ ಸೇನೆಯನ್ನು ಹಿಮ್ಮೆಟ್ಟಿಸಿತ್ತು. ಇದೀಗ ದಕ್ಷಿಣದಲ್ಲಿ ಇಂಥದ್ದೇ ಜಯಗಳಿಸಿದೆ. ಉಕ್ರೇನ್ ಎದುರು ಸೋಲಲು ರಷ್ಯಾಕ್ಕೆ ಇಷ್ಟವಿಲ್ಲ. ಹೀಗಾಗಿ ರಷ್ಯಾದ ಮುಂದಿನ ನಡೆ ಏನಾಗಿರಲಿದೆ ಎಂದು ಇಡೀ ಜಗತ್ತು ಕಾತರದಿಂದ ಎದುರು ನೋಡುತ್ತಿದೆ.

ಖೆರ್ಸೋನ್​ ಪ್ರಾಂತ್ಯದಲ್ಲಿರುವ ರಷ್ಯಾ ಪರ ಆಡಳಿತಗಾರ ವ್ಲಾದಿಮಿರ್ ಸಾಲ್​ಡೊ ರಷ್ಯಾ ಪಡೆಗಳಿಗೆ ಆಗಿರುವ ಹಿನ್ನಡೆಯನ್ನು ಒಪ್ಪಿಕೊಂಡಿದ್ದಾರೆ. ‘ಈ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ. ನಿಪ್ರೊ ನದಿಯ ಬಲಕ್ಕಿದ್ದ ಜನವಸತಿ ಪ್ರದೇಶಗಳು ನಮ್ಮ ಕೈತಪ್ಪಿವೆ’ ಎಂದು ಹೇಳಿದ್ದಾರೆ. ಈ ಬೆಳವಣಿಗೆಯೊಂದಿಗೆ ಉಕ್ರೇನ್ ಪಡೆಗಳು ರಷ್ಯಾ ಗಡಿಗೆ ಸುಮಾರು 30 ಕಿಮೀ ಹತ್ತಿರಕ್ಕೆ ಬಂದಿವೆ. ಈ ಪ್ರದೇಶದಲ್ಲಿ ರಷ್ಯಾ ಪಡೆಗಳು ರಕ್ಷಣೆಗಾಗಿ ಕಂದಕಗಳನ್ನು ತೋಡಿ, ಫಿರಂಗಿಗಳನ್ನು ನೆಲೆಗೊಳಿಸಿದ್ದವು. ಅಷ್ಟರ ನಡುವೆಯೂ ಉಕ್ರೇನ್ ನಡೆಸಿದ ಹಠಾತ್ ಪ್ರತಿದಾಳಿಗೆ ಹಿಮ್ಮೆಟ್ಟಿರುವುದು ರಷ್ಯಾದ ಮಿಲಿಟರಿ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.

ಉಕ್ರೇನ್ ಆಡಳಿತವು ಈ ಗೆಲುವಿನ ಬಗ್ಗೆ ತುಟಿಕ್​ಪಿಟಿಕ್ ಎಂದಿಲ್ಲ. ಉಕ್ರೇನ್​ನ ಆಂತರಿಕ ವ್ಯವಹಾರಗಳ ಸಲಹೆಗಾರ ಆಂಟೊನ್ ಗೆರಶ್​ಚೆಂಕೊ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಫೋಟೊ ಉಕ್ರೇನ್ ಪಡೆಗಳ ಗೆಲುವನ್ನು ದೃಢಪಡಿಸಿದೆ. ಮಿಖೈಲಿವ್​ಕಾ ಎಂಬ ಗ್ರಾಮದಲ್ಲಿ ಹಾರುತ್ತಿದ್ದ ರಷ್ಯಾ ಮತ್ತು ರಷ್ಯಾ ಪರ ಸಂಘಟನೆಗಳ ಧ್ವಜಗಳನ್ನು ನೆಲಕ್ಕೆ ಹಾಕಿ, ಉಕ್ರೇನ್ ಧ್ವಜವನ್ನು ಹಾರಿಸಿದ್ದಾರೆ. ಇದು ರಷ್ಯಾ ಪಡೆಗಳನ್ನು 20 ಕಿಲೋಮೀಟರ್​ಗಳನ್ನು ಹಿಮ್ಮೆಟ್ಟಿಸಿದ ಸಂಕೇತವಾಗಿದೆ.

ಮಿಲಿಟರಿ ನೇಮಕಾತಿ ಮತ್ತು ಪುನರ್​ ಸಂಘಟನೆ ಪ್ರಕ್ರಿಯೆ ಆರಂಭಿಸಿರುವ ರಷ್ಯಾ ಮತ್ತೊಮ್ಮೆ ಉಕ್ರೇನ್ ಮೇಲೆ ಸಂಘಟಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಉಕ್ರೇನ್ ಪರ ದೃಢವಾಗಿ ನಿಂತಿರುವ ಅಮೆರಿಕ ಮತ್ತು ಐರೋಪ್ಯ ದೇಶಗಳನ್ನು ಮಣಿಸಲು ರಷ್ಯಾ ನೈಸರ್ಗಿಕ ಅನಿಲವನ್ನು (Natural Gas) ದಾಳವಾಗಿ ಬಳಸುತ್ತಿದೆ. ಈಗಾಗಲೇ ಜರ್ಮನಿ ಮತ್ತು ಇತರ ದೇಶಗಳಿಗೆ ಅನಿಲ ಸರಬರಾಜು ಮಾಡುವ ನಾರ್ಡ್​​ ಪೈಪ್​ಲೈನ್​ ಸೋರುವಂತೆ ಮಾಡಿದ್ದು, ಯೂರೋಪ್​ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಎದುರಾಗಿದೆ.

Published On - 7:38 am, Tue, 4 October 22