ಉಕ್ರೇನ್ ಜೊತೆಗಿನ ಶಾಂತಿ ಒಪ್ಪಂದದ ನಡುವೆ ಇಂಧನ ಒಪ್ಪಂದಗಳ ಕುರಿತು ಅಮೆರಿಕ- ರಷ್ಯಾ ಚರ್ಚೆ
ಉಕ್ರೇನ್ ಶಾಂತಿಗಾಗಿ ಜಾಗತಿಕವಾಗಿ ಹೆಚ್ಚುತ್ತಿರುವ ಒತ್ತಡದ ಮಧ್ಯೆ ಅಮೆರಿಕ ಮತ್ತು ರಷ್ಯಾದ ಅಧಿಕಾರಿಗಳು ಇಂಧನ ಒಪ್ಪಂದಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ರಷ್ಯಾದಿಂದ ಭಾರತ ತೈಲ ಖರೀದಿಸುವ ಮೂಲಕ ಪರೋಕ್ಷವಾಗಿ ಉಕ್ರೇನ್ ಮೇಲಿನ ಯುದ್ಧಕ್ಕೆ ಹಣಸಹಾಯ ಮಾಡುತ್ತಿದೆ ಎಂದು ಆರೋಪಿಸಿ ಅಮೆರಿಕ ಭಾರತದ ಮೇಲೆ ಹೆಚ್ಚುವರಿ ಶೇ. 25ರಷ್ಟು ಸುಂಕ ವಿಧಿಸಿತ್ತು ಎಂಬುದು ಗಮನಾರ್ಹ ಸಂಗತಿ.

ಲಂಡನ್, ಆಗಸ್ಟ್ 26: ಇತ್ತೀಚೆಗಷ್ಟೇ ಅಮೆರಿಕಕ್ಕೆ ಭೇಟಿ ನೀಡಿದ್ದ ಉಕ್ರೇನ್ (Ukraine) ಅಧ್ಯಕ್ಷ ಝೆಲೆನ್ಸ್ಕಿ ಡೊನಾಲ್ಡ್ ಟ್ರಂಪ್ ಜೊತೆ ಮಾತುಕತೆ ನಡೆಸಿದ್ದರು. ಅವರಿಬ್ಬರ ನಡುವಿನ ಮಾತುಕತೆಗಳ ಹೊರತಾಗಿಯೂ ಇಂಧನ ಒಪ್ಪಂದಗಳ ಕುರಿತು ಅಮೆರಿಕ ಮತ್ತು ರಷ್ಯಾದ ಸರ್ಕಾರಿ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಷ್ಯಾ ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸಲು ಮತ್ತು ಅಮೆರಿಕ ರಷ್ಯಾದ ಮೇಲಿನ ನಿರ್ಬಂಧಗಳನ್ನು ಸಡಿಲಿಸಲು ಪ್ರೋತ್ಸಾಹಿಸಲು ಈ ಒಪ್ಪಂದಗಳನ್ನು ಮುಂದಿಡಲಾಗಿದೆ ಎನ್ನಲಾಗಿದೆ.
2022ರ ಫೆಬ್ರವರಿಯಲ್ಲಿ ಪ್ರಾರಂಭವಾದ ಉಕ್ರೇನ್ ಆಕ್ರಮಣದ ನಂತರದ ನಿರ್ಬಂಧಗಳಿಂದಾಗಿ ರಷ್ಯಾ ತನ್ನ ಇಂಧನ ವಲಯದಲ್ಲಿನ ಹೆಚ್ಚಿನ ಅಂತಾರಾಷ್ಟ್ರೀಯ ಹೂಡಿಕೆಯಿಂದ ಮತ್ತು ಪ್ರಮುಖ ಒಪ್ಪಂದಗಳನ್ನು ಮಾಡಿಕೊಳ್ಳುವುದರಿಂದ ಕೊಂಚ ಹಿಂದೆ ಸರಿದಿದೆ.
ಪಾಶ್ಚಿಮಾತ್ಯ ನಿರ್ಬಂಧಗಳ ಅಡಿಯಲ್ಲಿ ಆರ್ಕ್ಟಿಕ್ ಎಲ್‌ಎನ್‌ಜಿ 2ನಂತಹ ತನ್ನ ಎಲ್‌ಎನ್‌ಜಿ ಯೋಜನೆಗಳಿಗಾಗಿ ರಷ್ಯಾ ಯುಎಸ್ ಉಪಕರಣಗಳನ್ನು ಖರೀದಿಸುವ ನಿರೀಕ್ಷೆಯನ್ನು ಅವರು ಎತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಷ್ಯಾದಿಂದ ಪರಮಾಣು ಚಾಲಿತ ಐಸ್ ಬ್ರೇಕರ್ ಹಡಗುಗಳನ್ನು ಖರೀದಿಸುವುದು ಅಮೆರಿಕದ ಉದ್ದೇಶವಾಗಿತ್ತು ಎಂದು ಆಗಸ್ಟ್ 15ರಂದು ರಾಯಿಟರ್ಸ್ ವರದಿ ಮಾಡಿದೆ.
ಈ ತಿಂಗಳ ಆರಂಭದಲ್ಲಿ ಅಮೆರಿಕದ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅವರ ಹೂಡಿಕೆ ರಾಯಭಾರಿ ಕಿರಿಲ್ ಡಿಮಿಟ್ರಿವ್ ಅವರನ್ನು ಭೇಟಿಯಾದಾಗ ಈ ಮಾತುಕತೆ ನಡೆದಿದೆ ಎನ್ನಲಾಗಿದೆ. ಶ್ವೇತಭವನದೊಳಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಕೂಡ ಈ ಬಗ್ಗೆ ಚರ್ಚಿಸಲಾಗಿದೆ. ಆಗಸ್ಟ್ 15ರಂದು ನಡೆದ ಅಲಾಸ್ಕಾ ಶೃಂಗಸಭೆಯಲ್ಲಿಯೂ ಈ ಒಪ್ಪಂದಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಭಾರತಕ್ಕಿಂತ ಚೀನಾ ರಷ್ಯಾದ ಅತಿ ದೊಡ್ಡ ತೈಲ ಖರೀದಿದಾರ ದೇಶ; ಅಮೆರಿಕಕ್ಕೆ ಸಚಿವ ಜೈಶಂಕರ್ ಸಂದೇಶ
ಯುದ್ಧವನ್ನು ಕೊನೆಗೊಳಿಸಲು ದ್ವಿಪಕ್ಷೀಯ ಸಭೆಯ ಕಡೆಗೆ ಟ್ರಂಪ್ ಮತ್ತು ಅವರ ರಾಷ್ಟ್ರೀಯ ಭದ್ರತಾ ತಂಡವು ರಷ್ಯಾ ಮತ್ತು ಉಕ್ರೇನಿಯನ್ ಅಧಿಕಾರಿಗಳೊಂದಿಗೆ ತೊಡಗಿಸಿಕೊಳ್ಳುವುದನ್ನು ಮುಂದುವರೆಸಿದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಒಪ್ಪಂದಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




