ರಷ್ಯಾದಲ್ಲಿ ರಹಸ್ಯವಾಗಿ ಲ್ಯಾಂಡ್ ಆದ ಅಮೆರಿಕ ವಾಯುಪಡೆಯ ವಿಮಾನ; ಕಾರಣವೇನು?

ಅಮೆರಿಕದ 'ಬೋಯಿಂಗ್ ಸಿ-17ಎ ಗ್ಲೋಬ್‌ಮಾಸ್ಟರ್ III' (Boeing C-17A Globemaster III) ಮಿಲಿಟರಿ ವಿಮಾನವೊಂದು ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಲ್ಯಾಂಡ್ ಆಗಿದೆ. ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ 'ಟಾಸ್' (TASS) ವರದಿಯ ಪ್ರಕಾರ, ವಾಷಿಂಗ್ಟನ್ ಬಳಿಯ ಆಂಡ್ರ್ಯೂಸ್ ವಾಯುನೆಲೆಯಿಂದ ಹೊರಟಿದ್ದ ಈ ವಿಮಾನವು ಲಾತ್ವಿಯಾದ ರಿಗಾದಲ್ಲಿ ತಂಗಿದ್ದು, ನಂತರ ಮಾಸ್ಕೋ ಕಾಲಮಾನ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ರಷ್ಯಾದ ರಾಜಧಾನಿ ತಲುಪಿದೆ. ಉಕ್ರೇನ್ ಮತ್ತು ರಷ್ಯಾದ ಯುದ್ಧ ಮುಂದುವರೆದಿರುವ ಬೆನ್ನಲ್ಲೇ ಈ ಬೆಳವಣಿಗೆ ತೀವ್ರ ಚರ್ಚೆಗೆ ಕಾರಣವಾಗಿದೆ.

ರಷ್ಯಾದಲ್ಲಿ ರಹಸ್ಯವಾಗಿ ಲ್ಯಾಂಡ್ ಆದ ಅಮೆರಿಕ ವಾಯುಪಡೆಯ ವಿಮಾನ; ಕಾರಣವೇನು?
Us Military Plane
Image Credit source: TV9

Updated on: Aug 25, 2026 | 8:29 PM

ಮಾಸ್ಕೋ, ಆಗಸ್ಟ್ 25: ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ರಷ್ಯಾ (Russia War) ನಡುವೆ ತೀವ್ರ ರಾಜತಾಂತ್ರಿಕ ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ, ಅಮೆರಿಕ ಮಿಲಿಟರಿಯ ರಹಸ್ಯ ವಿಮಾನವೊಂದು ಇಂದು ರಷ್ಯಾದ ಮಾಸ್ಕೋದಲ್ಲಿರುವ ವ್ನುಕೊವೊ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಈ ದಿಢೀರ್ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಈ ವಿಮಾನವು ‘ಬೋಯಿಂಗ್ ಸಿ-17 ಗ್ಲೋಬ್‌ಮಾಸ್ಟರ್ III’ ಆಗಿದ್ದು, ಇದು ಅಮೆರಿಕದ ವಾಯುಪಡೆಯು ಸೇನಾ ಸಿಬ್ಬಂದಿ, ಮಿಲಿಟರಿ ಉಪಕರಣಗಳು ಹಾಗೂ ಸರಕುಗಳನ್ನು ದೂರದ ಪ್ರದೇಶಗಳಿಗೆ ಸಾಗಿಸಲು ಬಳಸುವ ಪ್ರಮುಖ ಸರಕು ಸಾಗಣೆ ವಿಮಾನವಾಗಿದೆ.

ವಿಮಾನದ ಕುರಿತು ಮಾಹಿತಿ ಇಲ್ಲ ಎಂದ ರಷ್ಯಾ:

ಅಮೆರಿಕದ ವಿಮಾನ ಅಥವಾ ಅದರ ಆಗಮನದ ಬಗ್ಗೆ ತಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ರಷ್ಯಾ ತಿಳಿಸಿದೆ. ಅಲ್ಲದೆ, “ಈ ವಾರ ಮಾಸ್ಕೋದಲ್ಲಿ ಅಮೆರಿಕ ಆಡಳಿತದ ಅಧಿಕಾರಿಗಳೊಂದಿಗೆ ಯಾವುದೇ ಸಭೆಗಳನ್ನು ನಡೆಸುವ ಯೋಜನೆ ಇಲ್ಲ” ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ. ಈ ವಿಮಾನದ ಕಾರ್ಯಾಚರಣೆಯ ಉದ್ದೇಶ ಮತ್ತು ಅದು ಸಾಗಿಸುತ್ತಿದ್ದ ಸರಕಿನ ಸ್ವರೂಪವನ್ನು ಅಮೆರಿಕದ ರಕ್ಷಣಾ ಇಲಾಖೆ ಆಗಲಿ ಅಥವಾ ರಷ್ಯಾದ ವಿದೇಶಾಂಗ ಸಚಿವಾಲಯವಾಗಲಿ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಈ ಹಾರಾಟವು ರಾಜತಾಂತ್ರಿಕ ಬೆಂಬಲ, ಕೈದಿಗಳ ವಿನಿಮಯ ಅಥವಾ ಇತರ ದ್ವಿಪಕ್ಷೀಯ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದೆಯೇ ಎಂಬುದರ ಕುರಿತು ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಇದನ್ನೂ ಓದಿ: ರಷ್ಯಾದ ಅಧ್ಯಕ್ಷ ಪುಟಿನ್ ಭೇಟಿಯಾದ ಭಾರತದ ವಿದೇಶಾಂಗ ಸಚಿವ ಜೈಶಂಕರ್

ಉಕ್ರೇನ್ ಯುದ್ಧ ಆರಂಭವಾದ ನಂತರ, ಅಮೆರಿಕ ತನ್ನ ಯುರೋಪಿಯನ್ ಮಿತ್ರರಾಷ್ಟ್ರಗಳೊಂದಿಗೆ ಮಾಸ್ಕೋ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ. ಇದರಲ್ಲಿ ಪರಸ್ಪರ ವಿಮಾನಯಾನ ನಿಷೇಧವೂ ಸೇರಿದೆ. ರಷ್ಯಾದ ವಿಮಾನಗಳು ಅಮೆರಿಕ ಮತ್ತು ಇಯು ವಾಯುಪ್ರದೇಶವನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ, ಮತ್ತು ರಷ್ಯಾ ಕೂಡ ತನ್ನ ವಾಯುಪ್ರದೇಶವನ್ನು ಅಮೆರಿಕ ಸೇರಿದಂತೆ ಇತರ ದೇಶಗಳಿಗೆ ಮುಚ್ಚಿದೆ.


ಬೋಯಿಂಗ್ ಸಿ-17ಎ ಗ್ಲೋಬ್‌ಮಾಸ್ಟರ್ III ಎಂಬುದು ಅಮೆರಿಕದ ವಾಯುಪಡೆಯಿಂದ ನಿರ್ವಹಿಸಲ್ಪಡುವ ಒಂದು ತಂತ್ರಜ್ಞಾನಾಧಾರಿತ ಮಿಲಿಟರಿ ಸಾಗಣೆ ವಿಮಾನವಾಗಿದೆ. ಇದನ್ನು ಸುದೀರ್ಘ ದೂರಕ್ಕೆ ಸೈನಿಕರು, ವಾಹನಗಳು ಮತ್ತು ಇತರ ಸೇನಾ ಸರಕುಗಳನ್ನು ವೇಗವಾಗಿ ತಲುಪಿಸಲು ವಿನ್ಯಾಸಗೊಳಿಸಲಾಗಿದೆ.

ಅಮೆರಿಕ ವಾಯುಪಡೆಯ ವಿವರಣೆಯ ಪ್ರಕಾರ, ಈ ವಿಮಾನವು ಸುಮಾರು 77,500 ಕೆಜಿ ತೂಕವನ್ನು ಹೊತ್ತೊಯ್ಯುವ ಗರಿಷ್ಠ ಸಾಮರ್ಥ್ಯವನ್ನು ಹೊಂದಿದೆ. ಇದರ ವಿಶಾಲವಾದ ಸರಕು ರೂಂನಲ್ಲಿ ಮಿಲಿಟರಿ ವಾಹನಗಳು ಮತ್ತು ಇತರ ಬೃಹತ್ ಉಪಕರಣಗಳನ್ನು ಇರಿಸಬಹುದು. ಈ ವಿಮಾನವು ಸುಮಾರು 53 ಮೀಟರ್ ಉದ್ದ, ಸುಮಾರು 52 ಮೀಟರ್ ರೆಕ್ಕೆಗಳ ಅಗಲವನ್ನು ಹೊಂದಿದೆ. ಇದು ಗಂಟೆಗೆ ಸುಮಾರು 450 ನಾಟ್‌ಗಳ ವೇಗದಲ್ಲಿ ಚಲಿಸಬಲ್ಲದು. ಮಿಲಿಟರಿ ಉಪಕರಣಗಳನ್ನು ಸಾಗಿಸುವುದರಿಂದ ಹಿಡಿದು ಸರ್ಕಾರಿ ಮತ್ತು ರಾಜತಾಂತ್ರಿಕ ಕಾರ್ಯಾಚರಣೆಗಳಿಗೆ ಬೆಂಬಲ ನೀಡುವವರೆಗೆ ಈ ವಿಮಾನವನ್ನು ಬಳಸಲಾಗುತ್ತದೆ. ಹೀಗಾಗಿ, ರಷ್ಯಾಕ್ಕೆ ಬಂದಿಳಿದಿ ಈ ವಿಮಾನದ ಆಗಮನವು ತೀವ್ರ ಊಹಾಪೋಹಗಳಿಗೆ ಕಾರಣವಾಗಿದೆ.


ಮಾಸ್ಕೋದಲ್ಲಿ ಅಮೆರಿಕ ವಿಮಾನ ಲ್ಯಾಂಡ್ ಆಗಿದ್ದೇಕೆ?:

ಈ ವಿಮಾನವು ಆಗಸ್ಟ್ 23ರಂದು ರಿಗಾ ತಲುಪುವ ಮೊದಲು, ಅಮೆರಿಕ ಅಧ್ಯಕ್ಷರ ‘ಏರ್ ಫೋರ್ಸ್ ಒನ್’ ವಿಮಾನದ ಪ್ರಮುಖ ನೆಲೆಯಾಗಿರುವ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಿಂದ ಹೊರಟಿತ್ತು ಎಂದು ವಿಮಾನದ ಹಾರಾಟದ ಇತಿಹಾಸ ತೋರಿಸುತ್ತದೆ. ಆಂಡ್ರ್ಯೂಸ್ ವಾಯುನೆಲೆಯು ಅಮೆರಿಕ ಸರ್ಕಾರದ ಉನ್ನತಾಧಿಕಾರಿಗಳ ಪ್ರಯಾಣದ ಪ್ರಮುಖ ಕೇಂದ್ರವಾಗಿರುವುದರಿಂದ, ಈ ಬೃಹತ್ ಸೇನಾ ವಿಮಾನ ಮಾಸ್ಕೋ ತಲುಪಿರುವುದು ನಾನಾ ರೀತಿಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.

ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತೀಯರ ಸಾವು, ನಾಪತ್ತೆ: ಬಾಧಿತ ಕುಟುಂಬಗಳ ನೆರವಿಗೆ ನೋಡಲ್ ಅಧಿಕಾರಿ ನೇಮಕಕ್ಕೆ ಸುಪ್ರೀಂ ಆದೇಶ

ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಸ್ಥಗಿತಗೊಂಡಿರುವ ರಾಜತಾಂತ್ರಿಕ ಮಾತುಕತೆಗಳಿಗೆ ಮರುಜೀವ ನೀಡಲು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮಾಸ್ಕೋಗೆ ಭೇಟಿ ನೀಡಬಹುದು ಎಂಬ ಊಹಾಪೋಹಗಳು ಕಳೆದ ಕೆಲವು ವಾರಗಳಿಂದ ಕೇಳಿಬರುತ್ತಿವೆ. ಮತ್ತೊಂದೆಡೆ, ಅಮೆರಿಕದ ವಿಶೇಷ ರಾಯಭಾರಿಗಳಾದ ಜೇರೆಡ್ ಕುಶ್ನರ್ ಹಾಗೂ ಸ್ಟೀವ್ ವಿಟ್ಕೋಫ್ ಮಾಸ್ಕೋಗೆ ಆಗಮಿಸುವ ಸಾಧ್ಯತೆಯಿದ್ದು, ಅದಕ್ಕೆ ಸಂಬಂಧಿಸಿದ ಸಿದ್ಧತೆಗಾಗಿ ಈ ಗ್ಲೋಬ್‌ಮಾಸ್ಟರ್ ವಿಮಾನ ಬಂದಿರಬಹುದು. ಈ ವರ್ಷದ ಜನವರಿಯಲ್ಲಿ ಅಮೆರಿಕದ ನಿಯೋಗವು ಉಕ್ರೇನ್ ಶಾಂತಿ ಮಾತುಕತೆಗಾಗಿ ಮಾಸ್ಕೋಗೆ ಭೇಟಿ ನೀಡಿದಾಗ ಕೊನೆಯ ಬಾರಿಗೆ ನೇರ ಅಮೆರಿಕ ವಿಮಾನ ರಷ್ಯಾದಲ್ಲಿ ಇಳಿದಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us