
ವಾಷಿಂಗ್ಟನ್, ನವೆಂಬರ್ 25: ಅಮೆರಿಕದ ಮಿಸ್ಸಿಸ್ಸಿಪ್ಪಿ ಕರಾವಳಿಯ ಹಾರ್ನ್ ದ್ವೀಪದ ಬಳಿ ಸಂಭವಿಸಿದ ವಿಮಾನ ದುರಂತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ನವೆಂಬರ್ 24ರಂದು ಸಮುದ್ರಕ್ಕೆ ಪತನಗೊಂಡ ಸೆಸ್ನಾ 210 ವಿಮಾನದಲ್ಲಿದ್ದ ನಾಲ್ವರು ವಯಸ್ಕರು ಮತ್ತು 8 ಹಾಗೂ 10 ವರ್ಷದ ಇಬ್ಬರು ಬಾಲಕರು ಮೃತಪಟ್ಟಿರುವುದನ್ನು ರಕ್ಷಣಾ ತಂಡಗಳು ಪತ್ತೆಹಚ್ಚಿವೆ. ಆರಂಭದಲ್ಲಿ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು. ಬಳಿಕ ಶೋಧ ಕಾರ್ಯಾಚರಣೆ ವೇಳೆ ವಿಮಾನದ ಅವಶೇಷಗಳೊಳಗೆ ಪ್ರಯಾಣಿಕರ ಮೃತದೇಹಗಳು ಪತ್ತೆಯಾಗಿವೆ.
ನವೆಂಬರ್ 24ರಂದು ಮಂಗಳವಾರ ಮಧ್ಯಾಹ್ನ ಸುಮಾರು 3.30ರ ವೇಳೆಗೆ ಮಿಸ್ಸಿಸ್ಸಿಪ್ಪಿಯ ಪಾಸ್ಕಗೌಲಾ ಪ್ರದೇಶದ ಬಳಿ ವಿಮಾನ ಪತನಗೊಂಡಿದೆ. ಇದು ನ್ಯೂ ಓರ್ಲಿಯನ್ಸ್‌ನ ಲೇಕ್‌ಫ್ರಂಟ್ ವಿಮಾನ ನಿಲ್ದಾಣದಿಂದ ಫ್ಲೋರಿಡಾದ ಫೋರ್ಟ್ ಮೈಯರ್ಸ್‌ನ ಪೇಜ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ವಿಮಾನವು ಹಾರ್ನ್ ದ್ವೀಪದಿಂದ ಸುಮಾರು ಎರಡು ಮೈಲಿ ಈಶಾನ್ಯ ಭಾಗದಲ್ಲಿ ಸಮುದ್ರಕ್ಕೆ ಬಿದ್ದಿದೆ. ವಿಮಾನದಲ್ಲಿದ್ದವರ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಅಮೆರಿಕದ ಕರಾವಳಿ ರಕ್ಷಣಾ ಪಡೆ ತಕ್ಷಣವೇ ಶೋಧ ಕಾರ್ಯಾಚರಣೆ ಆರಂಭಿಸಿತು.
ಅಪಘಾತಕ್ಕೂ ಮುನ್ನ ವಿಮಾನವು ಅಸಾಮಾನ್ಯ ವೇಗದಲ್ಲಿ ಕೆಳಕ್ಕೆ ಇಳಿಯುತ್ತಿತ್ತು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ನೀಡಿದ ಮಾಹಿತಿಯ ಪ್ರಕಾರ, ವಿಮಾನವು ನಿಮಿಷಕ್ಕೆ ಸುಮಾರು 10,000 ಅಡಿ ವೇಗದಲ್ಲಿ ಕೆಳಕ್ಕೆ ಇಳಿಯುತ್ತಿತ್ತು. ಮಧ್ಯಾಹ್ನ 3.45ರ ಸುಮಾರಿಗೆ ವಿಮಾನದೊಂದಿಗಿನ ಸಂಪರ್ಕ ಕಡಿತಗೊಂಡಿತ್ತು. ವಿಮಾನ ಏಕೆ ಇಷ್ಟು ವೇಗವಾಗಿ ಕೆಳಕ್ಕೆ ಇಳಿಯಿತು ಮತ್ತು ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಶೋಧ ಕಾರ್ಯಾಚರಣೆ ವೇಳೆ ಕರಾವಳಿ ರಕ್ಷಣಾ ಪಡೆಗೆ ವಿಮಾನದ ಕ್ಯಾಬಿನ್, ಒಂದು ಲೈಫ್ ರಾಫ್ಟ್ ಮತ್ತು ಮೂರು ಲೈಫ್ ಜಾಕೆಟ್‌ಗಳು ಪತ್ತೆಯಾಗಿದ್ದವು. ಆರಂಭದಲ್ಲಿ ಪ್ರಯಾಣಿಕರ ಸುಳಿವು ಸಿಕ್ಕಿರಲಿಲ್ಲ. ನಂತರ ರಕ್ಷಣಾ ತಂಡಗಳು ಮತ್ತು ಮುಳುಗು ತಜ್ಞರು ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಿ ವಿಮಾನದ ಅವಶೇಷಗಳೊಳಗೆ ಆರು ಮಂದಿಯ ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ. ಈ ಮೂಲಕ ನಾಪತ್ತೆಯಾಗಿದ್ದ ಎಲ್ಲ ಆರು ಪ್ರಯಾಣಿಕರ ಸಾವಿನ ಬಗ್ಗೆ ದೃಢಪಟ್ಟಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ:
ಸೈಬೀರಿಯಾದಲ್ಲಿ ರಷ್ಯಾದ ಸೇನಾ ವಿಮಾನ ಪತನ; 17 ಪ್ರಯಾಣಿಕರು ಸಾವು
ಈ ವಿಮಾನ ದುರಂತದ ಕುರಿತು ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ತನಿಖೆ ನಡೆಸಲಿವೆ. ಅಪಘಾತದ ತನಿಖೆಯ ನೇತೃತ್ವವನ್ನು ಎನ್ಟಿಎಸ್ಬಿ ವಹಿಸಲಿದೆ.
ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿತ್ತೇ? ಹವಾಮಾನ ವೈಪರೀತ್ಯ ಕಾರಣವೇ? ಅಥವಾ ಬೇರೆ ಯಾವುದಾದರೂ ಸಮಸ್ಯೆ ಎದುರಾಗಿತ್ತೇ ಎಂಬುದನ್ನು ತನಿಖೆಯ ನಂತರವೇ ತಿಳಿಯಬೇಕಿದೆ.
ಮಿಸ್ಸಿಸ್ಸಿಪ್ಪಿ ಕರಾವಳಿಯಲ್ಲಿರುವ ಹಾರ್ನ್ ದ್ವೀಪವು ಮೆಕ್ಸಿಕೊ ಕೊಲ್ಲಿಯಲ್ಲಿರುವ ನೈಸರ್ಗಿಕ ತಡೆಗೋಡೆ ದ್ವೀಪವಾಗಿದೆ. ಇದು ಗಲ್ಫ್ ಐಲ್ಯಾಂಡ್ಸ್ ನ್ಯಾಷನಲ್ ಸೀಶೋರ್ ಪ್ರದೇಶದ ಭಾಗವಾಗಿದೆ. ಇಲ್ಲಿ ಜನವಸತಿ ಕಡಿಮೆ ಇದ್ದು, ಖಾಸಗಿ ದೋಣಿಗಳ ಮೂಲಕವೇ ದ್ವೀಪವನ್ನು ತಲುಪಬಹುದು. ಈ ಕಾರಣದಿಂದ ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವುದು ಸವಾಲಿನ ಕೆಲಸವಾಗಿತ್ತು. ಈ ವಿಮಾನ ದುರಂತದ ನಿಖರ ಕಾರಣ ತಿಳಿಯಲು ತನಿಖೆ ಮುಂದುವರೆದಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:13 pm, Wed, 25 November 26