ರಷ್ಯಾ ಪರಮಾಣು ಶಸ್ತ್ರಾಸ್ತ್ರ ಪ್ರಯೋಗಕ್ಕೆ ಸಿದ್ಧವಾಗಿದೆಯಾ? -ಸರ್ಕಾರದ ವಕ್ತಾರ ಹೇಳಿದ್ದೇನು?
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಶುರು ಮಾಡಿ ಒಂದು ತಿಂಗಳು ಕಳೆದಿದೆ. ಉಕ್ರೇನ್ ಕೂಡ ರಷ್ಯಾಕ್ಕೆ ತಲೆ ಬಾಗುತ್ತಿಲ್ಲ. ರಷ್ಯಾದ ಅನೇಕ ಹಿರಿಯ ಸೇನಾಧಿಕಾರಿಗಳನ್ನೂ ಉಕ್ರೇನ್ ಹತ್ಯೆಗೈದಿದೆ.
ರಾಷ್ಟ್ರದ ಅಸ್ತಿತ್ವಕ್ಕೇ ಅಪಾಯ ಎದುರಾದಾಗ ಮಾತ್ರ ರಷ್ಯಾ (Russia) ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಮಾಡುತ್ತದೆ ಎಂದು ಸರ್ಕಾರದ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಪಿಬಿಎಸ್ ನ್ಯೂಸ್ಹೋರ್ ಎಂಬ ಮಾಧ್ಯಮಕ್ಕೆ ನೀಡಿದ ಸಂದರ್ಶನದ ವೇಳೆ ಈ ಮಾತುಗಳನ್ನಾಡಿದ್ದಾರೆ. ನಾವು ಭದ್ರತೆ ವಿಚಾರದಲ್ಲಿ ನಮ್ಮದೇ ಆದ ಪರಿಕಲ್ಪನೆ, ಪದ್ಧತಿಯನ್ನು ಹೊಂದಿದ್ದೇವೆ. ನಮ್ಮ ರಾಷ್ಟ್ರದ ಅಸ್ತಿತ್ವಕ್ಕೇ ಅಪಾಯ ಬಂದಾಗ ಮಾತ್ರ ನಾವು ಪರಮಾಣು ಶಸ್ತ್ರಾಸ್ತ್ರ ಬಳಕೆ ಮಾಡುವ ಮೂಲಕ ಅದನ್ನು ತೊಡೆದು ಹಾಕುತ್ತೇವೆ ಎಂದಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಶುರು ಮಾಡಿ ಒಂದು ತಿಂಗಳು ಕಳೆದಿದೆ. ಉಕ್ರೇನ್ ಕೂಡ ರಷ್ಯಾಕ್ಕೆ ತಲೆ ಬಾಗುತ್ತಿಲ್ಲ. ರಷ್ಯಾದ ಅನೇಕ ಹಿರಿಯ ಸೇನಾಧಿಕಾರಿಗಳನ್ನೂ ಉಕ್ರೇನ್ ಹತ್ಯೆಗೈದಿದೆ. ರಷ್ಯಾ ಆಕ್ರಮಣಕ್ಕೆ ತುತ್ತಾದ ಉಕ್ರೇನ್ಗೆ ವಿಶ್ವದ ಅನೇಕ ರಾಷ್ಟ್ರಗಳು ಬೆಂಬಲ ನೀಡಿವೆ. ವಿವಿಧ ದೇಶಗಳ ಸ್ವಯಂ ಸೇವಕರು ಅಲ್ಲಿಗೆ ಹೋಗಿ ರಷ್ಯಾ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಈ ಮಧ್ಯೆ ರಷ್ಯಾ ಪರಮಾಣು ಶಸ್ತ್ರಾಸ್ತ್ರ ಬಳಕೆ ಮಾಡಬಹುದಾ ಎಂಬ ಚರ್ಚೆ ಹೊರಬೀಳುತ್ತಿದೆ. ಆದರೆ ಸದ್ಯ ಉಕ್ರೇನ್ನಲ್ಲಿ ನಡೆಯುತ್ತಿರುವ ಯಾವುದೇ ಬೆಳವಣಿಗೆಗಳೂ ಪರಮಾಣು ಶಸ್ತ್ರಾಸ್ತ್ರ ಬಳಕೆಗೆ ಕಾರಣವಾಗುವಂಥದ್ದಲ್ಲ ಎಂದು ಡಿಮಿಟ್ರಿ ಹೇಳಿದ್ದಾರೆ.
ಇವೆಲ್ಲವುಗಳ ಮಧ್ಯೆ ರಷ್ಯಾ -ಉಕ್ರೇನ್ ಮಧ್ಯೆ ಟರ್ಕಿಯ ಇಸ್ಟಾನ್ಬುಲ್ ಎಂಬಲ್ಲಿ ಮಾತುಕತೆ ನಡೆಯುತ್ತಿದೆ. ಉಕ್ರೇನ್ನಲ್ಲಿ ಸಿಲುಕಿರುವವರಿಗೆ ಮಾನವೀಯ ನೆರವು ನೀಡುವುದು ಈ ಮಾತುಕತೆಯ ಕನಿಷ್ಠ ಉದ್ದೇಶವಾಗಿದ್ದರೆ, ಕದನ ವಿರಾಮ ಘೋಷಣೆ ಗರಿಷ್ಠ ಉದ್ದೇಶವಾಗಿದೆ ಎಂದು ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವ ಕುಲೆಬಾ ತಿಳಿಸಿದ್ದಾರೆ. ಈ ಮಧ್ಯೆ ರಷ್ಯಾ ಸೈನಿಕರು ನಿರಂತರವಾಗಿ ಇಂಧನ ಸಂಗ್ರಹ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳುವ ಮೂಲಕ ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ ಎಂದು ಉಕ್ರೇನ್ ಸೇನೆ ಆರೋಪಿಸಿದೆ.
ಇದನ್ನೂ ಓದಿ: Babar Murder Case: ಖುಷಿನಗರದಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ಮುಸ್ಲಿಂ ವ್ಯಕ್ತಿಯ ಹತ್ಯೆ; 4 ಆರೋಪಿಗಳ ಬಂಧನ