ಕೊವಿಡ್ ಪ್ರಕರಣಗಳು ಜಾಗತಿಕವಾಗಿ ಹೆಚ್ಚಾಗುತ್ತಿದ್ದಂತೆ ಒಮಿಕ್ರಾನ್ ಬಗ್ಗೆ ಇರುವ ತಪ್ಪು ಮಾಹಿತಿಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಕಳವಳ
ವಿಶ್ವ ಆರೋಗ್ಯಸಂಸ್ಥೆಯ ಕೊವಿಡ್-19 ತಾಂತ್ರಿಕ ಮುಖ್ಯಸ್ಥೆ ಮಾರಿಯಾ ವ್ಯಾನ್ ಕೆರ್ಖೋವ್ ಅವರು ಸಾಂಕ್ರಾಮಿಕ ರೋಗವು ಮುಗಿದಿದೆ, ಒಮಿಕ್ರಾನ್ ಸೌಮ್ಯವಾಗಿದೆ ಮತ್ತು ಇದು ಕೊವಿಡ್-19ನ ಕೊನೆಯ ರೂಪಾಂತರವಾಗಿದೆ ಎಂದು ತಪ್ಪು ಮಾಹಿತಿಯು ಹರಡುತ್ತಿದೆ
ಜಿನೀವಾ: ಕೊವಿಡ್-19 (Covid 19) ಸಾಂಕ್ರಾಮಿಕ ರೋಗದ ಸುತ್ತ ಹರಡುತ್ತಿರುವ ತಪ್ಪು ಮಾಹಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ (WHO) ಶನಿವಾರ, ತಪ್ಪು ಮಾಹಿತಿ ಸೇರಿದಂತೆ ಹಲವಾರು ಅಂಶಗಳು ಪ್ರಪಂಚದಾದ್ಯಂತ ಇತ್ತೀಚಿನ ಪ್ರಕರಣಗಳ ಹೆಚ್ಚಳಕ್ಕೆ ಉತ್ತೇಜನ ನೀಡುತ್ತಿವೆ ಎಂದು ಹೇಳಿದೆ. ವಿಶ್ವ ಆರೋಗ್ಯಸಂಸ್ಥೆಯ ಕೊವಿಡ್-19 ತಾಂತ್ರಿಕ ಮುಖ್ಯಸ್ಥೆ ಮಾರಿಯಾ ವ್ಯಾನ್ ಕೆರ್ಖೋವ್ (Maria Van Kerkhove) ಅವರು ಸಾಂಕ್ರಾಮಿಕ ರೋಗವು ಮುಗಿದಿದೆ, ಒಮಿಕ್ರಾನ್ ಸೌಮ್ಯವಾಗಿದೆ ಮತ್ತು ಇದು ಕೊವಿಡ್-19ನ ಕೊನೆಯ ರೂಪಾಂತರವಾಗಿದೆ ಎಂದು ತಪ್ಪು ಮಾಹಿತಿಯು ಹರಡುತ್ತಿದೆ. ಇದು ಬಹಳಷ್ಟು ಗೊಂದಲವನ್ನು ಉಂಟುಮಾಡುತ್ತಿದೆ ಮತ್ತು ವೈರಸ್ ಹೆಚ್ಚು ಪಸರಿಸುವುದಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ . “ನಮ್ಮಲ್ಲಿ ದೊಡ್ಡ ಪ್ರಮಾಣದ ತಪ್ಪು ಮಾಹಿತಿಗಳಿವೆ. ಒಮಿಕ್ರಾನ್ ಸೌಮ್ಯವಾಗಿದೆ . ಸಾಂಕ್ರಾಮಿಕ ರೋಗವು ಮುಗಿದಿದೆ . ಇದು ನಾವು ಎದುರಿಸಬೇಕಾದ ಕೊನೆಯ ರೂಪಾಂತರವಾಗಿದೆ ಎಂಬುದು ತಪ್ಪು ಮಾಹಿತಿ. ಇದು ನಿಜವಾಗಿಯೂ ಬಹಳಷ್ಟು ಗೊಂದಲವನ್ನು ಉಂಟುಮಾಡುತ್ತಿದೆ ಎಂದು ಕೆರ್ಖೋವ್ ಹೇಳಿದರು. ವ್ಯಾಕ್ಸಿನೇಷನ್‌ನ ಅಗತ್ಯವನ್ನು ಒತ್ತಿಹೇಳಿದ ಅವರು ಒಮಿಕ್ರಾನ್ ಸೇರಿದಂತೆ ತೀವ್ರವಾದ ರೋಗ ಮತ್ತು ಮರಣವನ್ನು ತಡೆಗಟ್ಟುವಲ್ಲಿ ಕೊವಿಡ್ -19 ಲಸಿಕೆಗಳು ನಂಬಲಾಗದಷ್ಟು ಪರಿಣಾಮಕಾರಿಯಾಗಿವೆ ಎಂದು ಹೇಳಿದ್ದಾರೆ.
BA.2 ಇದುವರೆಗಿನ ಅತ್ಯಂತ ಪ್ರಸರಣ ಹೊಂದಿರುವ ರೂಪಾಂತರವಾಗಿದೆ ಎಂದು ಕೆರ್ಖೋವ್ ಹೇಳಿದರು. “ಜನಸಂಖ್ಯೆಯ ಮಟ್ಟದಲ್ಲಿ BA.1 ಗೆ ಹೋಲಿಸಿದರೆ BA.2 ನ ತೀವ್ರತೆಯಲ್ಲಿ ಬದಲಾವಣೆಗಳನ್ನು ನಾವು ಕಾಣುವುದಿಲ್ಲ. ಆದಾಗ್ಯೂ, ಹೆಚ್ಚಿನ ಸಂಖ್ಯೆಯ ಪ್ರಕರಣಗಳೊಂದಿಗೆ ನೀವು ಆಸ್ಪತ್ರೆಗೆ ದಾಖಲಾಗುವ ಹೆಚ್ಚಳವನ್ನು ನೋಡುತ್ತೀರಿ ಎಂದು ಅವರು ಹೇಳಿದರು.
COVID-19 vaccines remain incredibly effective at preventing severe disease and death, including against Omicron @mvankerkhove pic.twitter.com/tXs8LU5Esz
— Cleavon MD ? ? ? (@Cleavon_MD) March 18, 2022
ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ತನ್ನ ಇತ್ತೀಚಿನ ಸಾಪ್ತಾಹಿಕ ಡೇಟಾದಲ್ಲಿ ಪ್ರಕರಣಗಳ ಏರಿಕೆಯನ್ನು ಉಲ್ಲೇಖಿಸಿ, ಕೊವಿಡ್ 19 ಸಾಂಕ್ರಾಮಿಕದ ಅಂತ್ಯವು ಬಹಳ ದೂರದಲ್ಲಿದೆ ಎಂದು ಹೇಳಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಹೊಸ ಸೋಂಕುಗಳು ಜಾಗತಿಕವಾಗಿ ಶೇಕಡಾ 8 ರಷ್ಟು ಏರಿಕೆ ಆಗಿದ್ದು, 11 ಮಿಲಿಯನ್ ಹೊಸ ಪ್ರಕರಣಗಳನ್ನು ದಾಖಲಿಸಿದೆ. ದಕ್ಷಿಣ ಕೊರಿಯಾ ಮತ್ತು ಚೀನಾವನ್ನು ಒಳಗೊಂಡಿರುವ ವಿಶ್ವ ಆರೋಗ್ಯಸಂಸ್ಥೆಯ ಪಶ್ಚಿಮ ಪೆಸಿಫಿಕ್ ಪ್ರದೇಶದಲ್ಲಿ ಪ್ರಕರಣ ಅತಿದೊಡ್ಡ ಜಿಗಿತ ಕಂಡಿದೆ. ಅಲ್ಲಿ ಪ್ರಕರಣಗಳು ಶೇಕಡಾ 25 ರಷ್ಟು ಮತ್ತು ಸಾವುಗಳು ಶೇಕಡಾ 27 ರಷ್ಟು ಏರಿಕೆಯಾಗಿದೆ.
ಯುರೋಪ್ ಮತ್ತೊಂದು ಕೊರೊನಾವೈರಸ್ ತರಂಗವನ್ನು ಎದುರಿಸುತ್ತಿದೆ ಎಂದು ಹಲವಾರು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಮಾರ್ಚ್ ಆರಂಭದಿಂದ ಆಸ್ಟ್ರಿಯಾ, ಜರ್ಮನಿ, ಸ್ವಿಟ್ಜರ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ಯುನೈಟೆಡ್ ಕಿಂಗ್‌ಡಂನಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ.
ಇದನ್ನೂ ಓದಿ: ಭಾರತದಲ್ಲಿ ಕೊವಿಡ್ 4ನೇ ಅಲೆಯ ಭೀತಿ; ಎಚ್ಚರ ವಹಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ
Published On - 2:41 pm, Sun, 20 March 22