ಉಗ್ರ ಸಂಘಟನೆಗಳು ಏಕೆ ಬೇಕು?; ಪಾಕಿಸ್ತಾನಕ್ಕೆ ತನ್ನದೇ ಮಾಜಿ ರಾಯಭಾರಿಯಿಂದ ಖಡಕ್ ಪ್ರಶ್ನೆ
ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದ ಭಾರತೀಯ ವಾಯುಪಡೆ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಈ ಮೂಲಕ ಪಾಕಿಸ್ತಾನದೊಳಗೆ ನುಗ್ಗಿ ಭಯೋತ್ಪಾದನೆಯ ವಿರುದ್ಧ ಸಮರ ಸಾರಿತ್ತು. ಪಾಕಿಸ್ತಾನದೊಳಗೆ ಉಗ್ರ ಸಂಘಟನೆಯ ನೆಲೆಗಳಿಗೆ ಅವಕಾಶ ನೀಡಿರುವುದಕ್ಕೆ ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಅಧಿಕಾರಿಯೇ ಆಕ್ಷೇಪ ಹೊರಹಾಕಿದ್ದಾರೆ. ಅಮೆರಿಕದ ಮಾಜಿ ಪಾಕಿಸ್ತಾನ ರಾಯಭಾರಿ ಪಾಕಿಸ್ತಾನಕ್ಕೂ ಜಿಹಾದಿ ಗುಂಪುಗಳಿಗೂ ಇರುವ ಸಂಪರ್ಕವನ್ನು ಪ್ರಶ್ನಿಸಿದ್ದಾರೆ.

ಇಸ್ಲಮಾಬಾದ್, ಮೇ 17: ಪಹಲ್ಗಾಮ್‌ನಂತಹ ದಾಳಿಗಳನ್ನು (Pahalgam Attack) ತಪ್ಪಿಸಲು ಜಿಹಾದಿ ಗುಂಪುಗಳನ್ನು ಮುಚ್ಚುವಂತೆ ಅಮೆರಿಕದ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ ಪಾಕಿಸ್ತಾನಕ್ಕೆ ಕೇಳಿಕೊಂಡಿದ್ದಾರೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಮಾಡಲು ಭಾರತ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದ ನಂತರ ಭಾರತ ಮತ್ತು ಪಾಕಿಸ್ತಾನ ಸಂಪೂರ್ಣ ಯುದ್ಧದ ಅಂಚಿಗೆ ಬಂದಿವೆ ಎಂದು ಅವರು ಒತ್ತಿ ಹೇಳಿದ್ದಾರೆ. “ನಮ್ಮ ದೇಶಕ್ಕೆ ಲಷ್ಕರ್, ಸಿಪಾ, ಜೈಶ್ ಮತ್ತು ದಿಫಾ-ಎ-ವತನ್ ಕೌನ್ಸಿಲ್ ಏಕೆ ಬೇಕು?” ಎಂದು ಹಕ್ಕಾನಿ ಪಾಕಿಸ್ತಾನದ ನಿಲುವನ್ನು ಪ್ರಶ್ನಿಸಿದ್ದಾರೆ.
ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳ ಉಪಸ್ಥಿತಿಯು ದಕ್ಷಿಣ ಏಷ್ಯಾ ಮತ್ತು ಇಡೀ ಜಗತ್ತಿಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ. ಪಾಕಿಸ್ತಾನವು ಪರಮಾಣು ಚಾಲಿತ ದೇಶವಾಗಿದ್ದು, ಆ ದೇಶದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಸುರಕ್ಷತೆಯ ಬಗ್ಗೆ ಆಗಾಗ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ.
ಇದನ್ನೂ ಓದಿ: ನಮ್ಮ ವಾಯುನೆಲೆಗಳನ್ನು ಭಾರತದ ಕ್ಷಿಪಣಿಗಳು ಉಡಾಯಿಸಿದೆ, ಕೊನೆಗೂ ಒಪ್ಪಿಕೊಂಡ ಪಾಕ್ ಪ್ರಧಾನಿ
“ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಭಾರತ ಮತ್ತು ಪಾಕಿಸ್ತಾನವನ್ನು ಸಂಪೂರ್ಣ ಯುದ್ಧದ ಅಂಚಿಗೆ ಕೊಂಡೊಯ್ದಿತು. ಭವಿಷ್ಯದಲ್ಲಿ ಇದನ್ನು ತಪ್ಪಿಸಲು ಪಾಕಿಸ್ತಾನದೊಳಗೆ ಜಿಹಾದಿ ಗುಂಪುಗಳನ್ನು ಮುಚ್ಚುವುದು ಮುಖ್ಯ. ಸುಸಜ್ಜಿತ ಸಶಸ್ತ್ರ ಪಡೆಗಳಿರುವ ಪಾಕ್ ದೇಶಕ್ಕೆ ಲಷ್ಕರ್, ಸಿಪಾ, ಜೈಶ್ ಮತ್ತು ದಿಫಾ-ಇ-ವತನ್ ಕೌನ್ಸಿಲ್ ಏಕೆ ಬೇಕು?” ಎಂದು ಹುಸೇನ್ ಹಕ್ಕಾನಿ ಪ್ರಶ್ನಿಸಿದ್ದಾರೆ.
A terrorist attack in Pahalgam led India and Pakistan to the brink of total war. To avoid that in future, it is important to shut down Jihadi groups. With well equipped armed forces, why does the country need Lashkar, Sipah, Jaish, & their Difa-e-Watan Council? pic.twitter.com/kf4PXukPTJ
— Husain Haqqani (@husainhaqqani) May 14, 2025
ಇದಕ್ಕೂ ಮೊದಲು, ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಾಕಿಸ್ತಾನದ ಬಳಿ ಇರುವ ಪರಮಾಣು ಶಸ್ತ್ರಾಸ್ತ್ರಗಳ ಸುರಕ್ಷತೆಯನ್ನು ಪ್ರಶ್ನಿಸಿದ್ದರು. ಆ ಪರಮಾಣು ಶಸ್ತ್ರಾಸ್ತ್ರಗಳನ್ನು ಅಂತಾರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯ (IAEA) ಮೇಲ್ವಿಚಾರಣೆಗೆ ಒಳಪಡಿಸಬೇಕು ಎಂದು ಹೇಳಿದ್ದರು.
ಇದನ್ನೂ ಓದಿ: ಐಸಿಸ್ ಸ್ಲೀಪರ್ ಸೆಲ್ನ ಇಬ್ಬರು ಉಗ್ರರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಎನ್ಐಎ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಅಮಾಯಕರ ಜೀವಗಳನ್ನು ಬಲಿತೆಗೆದುಕೊಂಡ ಭೀಕರ ಭಯೋತ್ಪಾದಕ ದಾಳಿಯ ನಂತರ ಭಾರತ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು. ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ ಭಯೋತ್ಪಾದಕ ಶಿಬಿರಗಳ ವಿರುದ್ಧ ಭಾರತ ನಡೆಸಿದ ದಾಳಿಯೇ ಆಪರೇಷನ್ ಸಿಂಧೂರ್. ಮೇ 7ರಂದು ಭಾರತವು ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ನಿಖರವಾದ ದಾಳಿ ನಡೆಸಿತು. ನಂತರ ಪಾಕಿಸ್ತಾನವು ಮೇ 8, 9 ಮತ್ತು 10 ರಂದು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. 26 ಸೇನಾ ನೆಲೆಗಳನ್ನು ಹೊಡೆಯಲು ಪಾಕಿಸ್ತಾನ ಮಾಡಿದ ಪ್ರಯತ್ನಗಳಿಗೆ ಪ್ರತೀಕಾರವಾಗಿ ಮೇ 10ರಂದು ಭಾರತೀಯ ಸೇನೆಯು ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳೊಂದಿಗೆ 8 ಪಾಕಿಸ್ತಾನಿ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡಿತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ