ಐಸಿಸ್ ಸ್ಲೀಪರ್ ಸೆಲ್‌ನ ಇಬ್ಬರು ಉಗ್ರರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಎನ್ಐಎ
ಮುಂಬೈ ವಿಮಾನ ನಿಲ್ದಾಣದಲ್ಲಿ ಎನ್ಐಎ ಅಧಿಕಾರಿಗಳು ಐಸಿಸ್ ಸ್ಲೀಪರ್ ಸೆಲ್‌ನ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ. 2023ರ ಪುಣೆ ಐಇಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರನ್ನು ಬಂಧಿಸಲಾಗಿದೆ. ಅಬ್ದುಲ್ಲಾ ಫೈಯಾಜ್ ಶೇಖ್ ಮತ್ತು ತಲ್ಹಾ ಖಾನ್ ಎಂಬವರನ್ನು ಬಂಧಿಸಲಾಗಿದ್ದು, ಇವರು ಇಂಡೋನೇಷ್ಯಾದಿಂದ ಬರುತ್ತಿದ್ದಾಗ ಬಂಧನಕ್ಕೊಳಗಾಗಿದ್ದಾರೆ. ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಸ್ಥಾಪಿಸುವ ಸಂಚಿನೊಂದಿಗೆ ವಿವಿಧ ವಿಧ್ವಂಸಕ ಕೃತ್ಯಗಳಿಗೆ ಆರೋಪಿಗಳು ಸಂಚು ಹೂಡಿದ್ದರು.

ಮುಂಬೈ, ಮೇ 17: ಐಸಿಸ್ ಸ್ಲೀಪರ್ ಸೆಲ್‌ನ (ISIS Sleeper cell) ಇಬ್ಬರು ಉಗ್ರರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai Airport) ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಶನಿವಾರ ಬೆಳಗ್ಗೆ ತಿಳಿಸಿದ್ದಾರೆ. 2023 ರಲ್ಲಿ ಪುಣೆಯಲ್ಲಿ ಐಇಡಿಗಳ ತಯಾರಿಕೆ ಮತ್ತು ಪರೀಕ್ಷೆಗೆ ಸಂಬಂಧಿಸಿದ ಪ್ರಕರಣದಲ್ಲಿ ಇವರಿಬ್ಬರು ಎನ್ಐಎಗೆ ಬೇಕಾಗಿದ್ದರು. ಬಂಧಿತರನ್ನು ಅಬ್ದುಲ್ಲಾ ಫೈಯಾಜ್ ಶೇಖ್ ಅಲಿಯಾಸ್ ಡಯಾಪರ್‌ವಾಲಾ ಮತ್ತು ತಲ್ಹಾ ಖಾನ್ ಎಂದು ಗುರುತಿಸಲಾಗಿದೆ. ಆರೋಪಿಗಳು ಶುಕ್ರವಾರ ರಾತ್ರಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಎನ್ಐಎ ಬಲೆಗೆ ಬಿದ್ದಿದ್ದಾರೆ. ಇವರು ಇಂಡೋನೇಷ್ಯಾದ ಜಕಾರ್ತಾದಿಂದ ಭಾರತಕ್ಕೆ ಬರುತ್ತಿದ್ದರು. ಈ ಸಂದರ್ಭದಲ್ಲಿ ವಲಸೆ ಬ್ಯೂರೋ ಅವರನ್ನು ತಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ಅವರನ್ನು ವಶಕ್ಕೆ ಪಡೆದುಕೊಂಡು ಬಂಧಿಸಲಾಯಿತು ಎಂದು ಎನ್ಐಎ ಪ್ರಕಟಣೆ ತಿಳಿಸಿದೆ. ಇಬ್ಬರು ಆರೋಪಿಗಳು ಎರಡು ವರ್ಷಗಳಿಗೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದರು. ಮುಂಬೈನ ಎನ್ಐಎ ವಿಶೇಷ ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.
ಅಬ್ದುಲ್ಲಾ ಫೈಯಾಜ್ ಶೇಖ್ ಅಲಿಯಾಸ್ ಡಯಾಪರ್‌ವಾಲಾ ಮತ್ತು ತಲ್ಹಾ ಖಾನ್ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 3 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಎನ್‌ಐಎ ಈ ಹಿಂದೆ ಘೋಷಿಸಿತ್ತು.
ಬಂಧಿತ ಉಗ್ರರು ಈಗಾಗಲೇ ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಈಗಾಗಲೇ ಬಂಧಿಸಲ್ಪಟ್ಟಿರುವ ಮತ್ತು ನ್ಯಾಯಾಂಗ ಬಂಧನದಲ್ಲಿರುವ ಎಂಟು ಇತರ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ ಪುಣೆ ಸ್ಲೀಪರ್ ಸೆಲ್ ಸದಸ್ಯರು ಸಹ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಎನ್ಐಎ ತಿಳಿಸಿದೆ.
ಭಾರತವನ್ನು ಇಸ್ಲಾಮಿಟ್ ರಾಷ್ಟ್ರ ಮಾಡುವ ಸಂಚು
ಐಸಿಸ್ ಸ್ಲೀಪರ್ ಸೆಲ್ ಸದಸ್ಯರು ಹಿಂಸಾಚಾರ ಮತ್ತು ಭಯೋತ್ಪಾದನೆಯ ಮೂಲಕ ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಸ್ಥಾಪಿಸುವ ಐಸಿಸ್ ಕಾರ್ಯಸೂಚಿಯನ್ನು ಮುಂದುವರಿಸಲು ಉದ್ದೇಶಿಸಿದ್ದರು. ಅಲ್ಲದೆ, ಭಾರತ ಸರ್ಕಾರದ ವಿರುದ್ಧ ಕದನ ನಡೆಸುವ ಮೂಲಕ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಸಂಚು ಹೂಡಿದ್ದರು. ಅವರು ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದರು ಎಂದು ಅದು ಎನ್ಐಎ ಹೇಳಿದೆ.
ಬಾಂಬ್ ತಯಾರಿಕೆ, ತರಬೇತಿ ಕಾರ್ಯಗಾರ ಆಯೋಜಿಸಿದ್ದ ಉಗ್ರರು
ಬಂಧಿತ ಉಗ್ರರು 2022-2023ರ ಅವಧಿಯಲ್ಲಿ ಪುಣೆಯಲ್ಲಿ ಬಾಂಬ್ ತಯಾರಿಕೆ ಮತ್ತು ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದ್ದರು. ಜೊತೆಗೆ ಅವರು ತಯಾರಿಸಿದ ಐಇಡಿಯನ್ನು ಪರೀಕ್ಷಿಸಲು ಸ್ಫೋಟವನ್ನು ನಡೆಸಿದ್ದರು ಎಂದು ಎನ್ಐಎ ಹೇಳಿದೆ.
ಇದನ್ನೂ ಓದಿ: ಪಾಕ್ಗೆ ಬೆಂಬಲವಾಗಿ ನಿಂತ ಚೀನಾ ಕಳ್ಳಾಟ ಬಟಾಬಯಲು, ಇಲ್ಲಿವೆ 10 ಪ್ರಮುಖ ಸಾಕ್ಷ್ಯಗಳು
ಪ್ರಕರಣದಲ್ಲಿ ಅಬ್ದುಲ್ಲಾ ಫೈಯಾಜ್ ಶೇಖ್ ಮತ್ತು ತಲ್ಹಾ ಖಾನ್ ಮಾತ್ರವಲ್ಲದೆ, ಮೊಹಮ್ಮದ್ ಇಮ್ರಾನ್ ಖಾನ್, ಮೊಹಮ್ಮದ್ ಯೂನಸ್ ಸಾಕಿ, ಅಬ್ದುಲ್ ಕದಿರ್ ಪಠಾಣ್, ಸಿಮಾಬ್ ನಾಸಿರುದ್ದೀನ್ ಕಾಜಿ, ಜುಲ್ಫಿಕರ್ ಅಲಿ ಬರೋಡಾವಾಲಾ, ಶಾಮಿಲ್ ನಾಚನ್, ಅಕಿಫ್ ನಾಚನ್ ಮತ್ತು ಶಾನವಾಜ್ ಆಲಂ ಅವರೂ ಬಂಧಿತರು ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಮುಂಬೈ ಏರ್ಪೋರ್ಟ್, ತಾಜ್ ಹೋಟೆಲ್‌ಗೆ ಬಾಂಬ್ ಬೆದರಿಕೆ
ಮುಂಬೈ ಏರ್ಪೋರ್ಟ್, ತಾಜ್ ಹೋಟೆಲ್ನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಮುಂಬೈ ವಿಮಾನ ನಿಲ್ದಾಣ ಪೊಲೀಸರಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ. ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ತಾಜ್ ಪ್ಯಾಲೇಸ್ ಹೋಟೆಲ್‌ಗೆ ದುಷ್ಕರ್ಮಿಯಿಂದ ಬಾಂಬ್ ಬೆದರಿಕೆ ಬಂದ ಕಾರಣ ತಪಾಸಣೆ ಹೆಚ್ಚಿಸಲಾಗಿದ್ದು, ಭದ್ರತೆ ಬಿಗಿಗೊಳಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








