ಕಾಬೂಲ್: ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ (Russia invasion Of Ukraine) ಅಲ್ಲಿನ ಯುದ್ಧದ ವಿಚಾರಗಳ ನಡುವೆ ಅಫ್ಘಾನಿಸ್ತಾನವನ್ನು ಜಗತ್ತು ಮರೆಯಬಾರದು ಎಂದು ವಿಶ್ವಸಂಸ್ಥೆ ನಿರಾಶ್ರಿತರ ಮುಖ್ಯಸ್ಥ ಹೇಳಿದ್ದಾರೆ. ಸದ್ಯ ನಾಲ್ಕು ದಿನಗಳ ಅಫ್ಘಾನಿಸ್ತಾನ ಪ್ರವಾಸದಲ್ಲಿರುವ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮೀಷನ್ ಮುಖ್ಯಸ್ಥ ಫಿಲಿಪ್ಪೋ ಗ್ರಾಂಡಿ, ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸುತ್ತಿದೆ. ಅಲ್ಲಿಗೆ ನೆರವು ನೀಡುವ ರಾಷ್ಟ್ರಗಳ ಸಂಖ್ಯೆ ಹೆಚ್ಚಾಗಿದೆ. ಜಾಗತಿಕವಾಗಿ ಉಕ್ರೇನ್-ರಷ್ಯಾ ಯುದ್ಧದ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಅಫ್ಘಾನಿಸ್ತಾನವನ್ನು ಅಂತಾರಾಷ್ಟ್ರೀಯ ಸಮುದಾಯಗಳು ಮರೆಯಬಾರದು. ಇಲ್ಲಿಗೆ ಮಾನವೀಯ ನೆರವಿನ ಅಗತ್ಯ ತುಂಬ ಇದೆ. ಹೀಗಾಗಿ ಇಲ್ಲಿನ ತಾಲಿಬಾನ್ ಸರ್ಕಾರದೊಂದಿಗೆ ಕೂಡ ಸಂಪರ್ಕದಲ್ಲಿದ್ದುಕೊಂಡು, ಅಗತ್ಯ ನೆರವು ನೀಡಬೇಕು ಎಂದು ಅವರು ಕರೆಕೊಟ್ಟಿದ್ದಾರೆ.
ಸದ್ಯ ಇಡೀ ಜಗತ್ತಿನ ಗಮನ ಉಕ್ರೇನ್ ಕಡೆಗೆ ಇದೆ. ಅದೂ ಇರಲಿ, ಆದರೆ ಅದರ ಮಧ್ಯೆ ಬಾಕಿ ಜಾಗತಿಕ ವಿಷಯಗಳನ್ನು ಮರೆಯಬಾರದು. ಅದರಲ್ಲಿ ಅಫ್ಘಾನಿಸ್ತಾನದ ಪರಿಸ್ಥಿತಿಯೂ ಒಂದು. ಸದ್ಯ ಅಫ್ಘಾನ್ಗೆ ಜಗತ್ತಿನ ಇತರ ರಾಷ್ಟ್ರಗಳ ಗಮನ ಮತ್ತು ಸಹಾಯ ಬೇಕು. ಸಂಪನ್ಮೂಲಗಳ ನೆರವು ಬೇಕು ಎಂದು ಗ್ರಾಂಡಿ ಅಫ್ಘಾನಿಸ್ತಾನದಲ್ಲಿಯೇ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ಅಫ್ಘಾನಿಸ್ತಾನವನ್ನು ನಿರ್ಲಕ್ಷ ಮಾಡಿದರೆ ತುಂಬ ಅಪಾಯ ಆಗುತ್ತದೆ. ಇಲ್ಲಿಗೆ ಅಗತ್ಯ ನೆರವು ನೀಡದೆ ಇದ್ದರೆ ಜನಜೀವನ ನಡೆಯುವುದೇ ಕಷ್ಟವಾಗುತ್ತದೆ. ಇಡೀ ಜಗತ್ತಿನಲ್ಲಿ ಯಾವುದೇ ಬಿಕ್ಕಟ್ಟು ಇದ್ದರೂ, ಏನೇ ಸಮಸ್ಯೆಗಳು ನಡೆಯುತ್ತಿದ್ದರೂ ಅಫ್ಘಾನಿಸ್ತಾನಕ್ಕೆ ಬರುವ ಮಾನವೀಯ ನೆರವು ನಿಲ್ಲಬಾರದು ಎಂದೂ ಹೇಳಿದ್ದಾರೆ.
ಕಳೆದ ವರ್ಷ ಆಗಸ್ಟ್ನಲ್ಲಿ ಅಫ್ಘಾನಿಸ್ತಾನ ತಾಲಿಬಾನಿಗಳ ಕೈಸೇರಿದೆ. ಈ ವೇಳೆ ಅಲ್ಲಿಯೂ ಯುದ್ಧ, ಸಾವು-ನೋವು ಸಂಭವಿಸಿದೆ. ಸದ್ಯ ಅಫ್ಘಾನ್ ಆರ್ಥಿಕ ಪರಿಸ್ಥಿತಿ ನೆಲಕಚ್ಚಿದೆ. ಅಲ್ಲಿನ ಜನಜೀವನ, ಇತರ ರಾಷ್ಟ್ರಗಳು ನೀಡುವ ಮಾನವೀಯ ನೆರವಿನ ಮೇಲೆ ನಿಂತಿದೆ ಎಂದರೂ ತಪ್ಪಾಗಲಾರದು. ಇದೇ ತಿಂಗಳು ಅಲ್ಲಿ, ಆನ್ಲೈನ್ ನಿಧಿ ಸಂಗ್ರಹ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಕೆಲವು ದಾನಿ ದೇಶಗಳು, ವಿಶ್ವಸಂಸ್ಥೆ ಏಜೆನ್ಸಿಗಳು, ಅಫ್ಘಾನಿಸ್ತಾನ ನಾಗರಿಕ ಸಮಾಜ ಪಾಲ್ಗೊಳ್ಳಲಿದೆ. ಆಹಾರ, ಆಶ್ರಯ ಮತ್ತು ಆರೋಗ್ಯ ಸೇವೆಗಳು ಅದರಲ್ಲೂ ಮುಖ್ಯವಾಗಿ ಅಫ್ಘಾನ್ ಮಹಿಳೆಯರು, ಬಾಲಕಿಯರಿಗೆ ಆಶ್ರಯ, ಅಗತ್ಯ ವಸ್ತುಗಳ ಪೂರೈಕೆಯ ಬಗ್ಗೆ ಈ ಶೃಂಗಕಾರ್ಯಕ್ರಮ ಗಮನಹರಿಸಲಿದೆ.
ಕಿತ್ತು ತಿನ್ನುವ ಹಸಿವು
ಒಂದು ಸಮೀಕ್ಷೆಯ ಪ್ರಕಾರ ಅಫ್ಘಾನಿಸ್ತಾನದ ಒಟ್ಟು 38 ಮಿಲಿಯನ್ ಜನರಲ್ಲಿ ಕಳೆದ ಚಳಿಗಾಲದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಹಸಿವಿನಿಂದ ಬಳಲಿದ್ದಾರೆ ಎಂದು ವಿಶ್ವಸಂಸ್ಥೆ ಮತ್ತು ಇತರ ಜಾಗತಿಕ ಸಂಸ್ಥೆಗಳು ವರದಿ ಮಾಡಿವೆ. ಹೀಗಾಗಿ ಅಫ್ಘಾನಿಸ್ತಾನಕ್ಕೆ ನೆರವು ನೀಡುವುದನ್ನು ನಿಲ್ಲಿಸಬೇಡಿ ಎಂದು ಆಗಾಗ ಎಚ್ಚರಿಕೆ ನೀಡುತ್ತಲೇ ಇದೆ. ಇನ್ನು ಯುಎಸ್ ಸೇರಿ ಕೆಲವು ದೇಶಗಳು, ನಾವು ತಾಲಿಬಾನಿಗಳ ಆಡಳಿತ ಹೇಗೆ ಇರುತ್ತದೆ ಎಂಬುದನ್ನು ನೋಡಿಕೊಂಡು ನೆರವು ನೀಡುತ್ತೇವೆ. ಅವರು ಮಹಿಳೆಯರ ಹಕ್ಕುಗಳನ್ನು ಗೌರವಿಸಬೇಕು. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಹಾಗಾದಾಗ ಮಾತ್ರ ನೆರವು ನೀಡುತ್ತೇವೆ ಎಂದು ಹೇಳಿದ್ದವು.
ಇದನ್ನೂ ಓದಿ: IPL 2022: ಮುಂಬೈ ಸೇರಿಕೊಂಡ ರೋಹಿತ್-ಬುಮ್ರಾ, NCA ಯಿಂದ ಕ್ಲೀನ್ ಚಿಟ್ ಪಡೆದ ಇಶಾನ್ ಕಿಶನ್
Published On - 7:51 am, Wed, 16 March 22