ಉಕ್ರೇನ್ನಿಂದ ಮರಳಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಧನಸಹಾಯ ಮಾಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಘೋಷಣೆ
ಉಕ್ರೇನ್ನಲ್ಲಿ ಫೆ.24ರಿಂದ ರಷ್ಯಾ ಆಕ್ರಮಣ ಮಾಡಲು ಶುರು ಮಾಡಿದೆ. ಆಗಿನಿಂದಲೂ ಕೇಂದ್ರ ಸರ್ಕಾರ ಆಪರೇಶನ್ ಗಂಗಾ ಮೂಲಕ ಅಲ್ಲಿ ಸಿಲುಕಿದ್ದ ಭಾರತದ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದೆ. ಸದ್ಯ ಉಕ್ರೇನ್ನಲ್ಲಿರುವ ಎಲ್ಲ ಭಾರತೀಯರನ್ನೂ ಸ್ಥಳಾಂತರ ಮಾಡಲಾಗಿದೆ.
ಉಕ್ರೇನ್ನಿಂದ ವಾಪಸ್ ದೇಶಕ್ಕೆ ಬಂದಿರುವ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಕೆ ಬಗ್ಗೆ ಪ್ರಶ್ನೆ ಎದ್ದಿರುವ ಬೆನ್ನಲ್ಲೇ ಒಂದೊಂದೇ ರಾಜ್ಯ ಸರ್ಕಾರಗಳು ಈ ವಿಚಾರದಲ್ಲಿ ತಮ್ಮದೇ ಆದ ನಿಲುವನ್ನು ಪ್ರಕಟಪಡಿಸುತ್ತಿವೆ. ಉಕ್ರೇನ್ನಿಂದ ಬಂದಿರುವ ಮಲಯಾಳಿ ವಿದ್ಯಾರ್ಥಿಗಳು ರಾಜ್ಯದಲ್ಲೇ ಶಿಕ್ಷಣ ಅಥವಾ ಬಾಕಿ ಇರುವ ಇಂಟರ್ನ್ಶಿಪ್ ಮುಂದುವರಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳುವುದಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಅದರ ಬೆನ್ನಲ್ಲೇ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಕೂಡ ಇಂಥದ್ದೇ ಘೋಷಣೆ ಮಾಡಿದ್ದಾರೆ. ಯಾರೆಲ್ಲ ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್ನಿಂದ ತೆಲಂಗಾಣಕ್ಕೆ ವಾಪಸ್ ಬಂದಿದ್ದಾರೋ, ಅವರು ಇಲ್ಲಿಯೇ ತಮ್ಮ ಶಿಕ್ಷಣ ಮುಂದುವರಿಸಲು ರಾಜ್ಯ ಸರ್ಕಾರದಿಂದ ಧನಸಹಾಯ ನೀಡುವುದಾಗಿ ಹೇಳಿದ್ದಾರೆ.
ಇಂದು ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್, ಯುದ್ಧನೆಲ ಉಕ್ರೇನ್ನಿಂದ ತೆಲಂಗಾಣದ ಸುಮಾರು 740 ವಿದ್ಯಾರ್ಥಿಗಳು ವಾಪಸ್ ಬಂದಿದ್ದಾರೆ. ನಮ್ಮ ಸರ್ಕಾರ ಅವರಿಗೆ ಸಹಾಯ ಮಾಡಲಿದೆ. ಅರ್ಧಕ್ಕೆ ನಿಂತ ಶಿಕ್ಷಣ ಮುಂದುವರಿಸಲು ಅವರಿಗೆ ಆರ್ಥಿಕ ನೆರವನ್ನೂ ನೀಡುತ್ತೇವೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೂ ಲಿಖಿತವಾಗಿ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಉಕ್ರೇನ್ನಲ್ಲಿ ಫೆ.24ರಿಂದ ರಷ್ಯಾ ಆಕ್ರಮಣ ಮಾಡಲು ಶುರು ಮಾಡಿದೆ. ಆಗಿನಿಂದಲೂ ಕೇಂದ್ರ ಸರ್ಕಾರ ಆಪರೇಶನ್ ಗಂಗಾ ಮೂಲಕ ಅಲ್ಲಿ ಸಿಲುಕಿದ್ದ ಭಾರತದ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದೆ. ಸದ್ಯ ಉಕ್ರೇನ್ನಲ್ಲಿರುವ ಎಲ್ಲ ಭಾರತೀಯರನ್ನೂ ಸ್ಥಳಾಂತರ ಮಾಡಲಾಗಿದೆ. ಆದರೆ ಹೀಗೆ ವಾಪಸ್ ಬಂದಿರುವವರೆಲ್ಲ ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಬಂದವರು. ಕೆಲವರಿಗೆ ಒಂದು ವರ್ಷದ ಇಂಟರ್ನ್ಶಿಪ್ ಬಾಕಿ ಇದೆ. ಹೀಗಾಗಿ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಕ್ರಮ ಕೈಗೊಳ್ಳುವುದು ಸರ್ಕಾರದ ಆದ್ಯತೆಯೂ ಆಗಿದೆ.
ಕೇಂದ್ರ ಸರ್ಕಾರ ಉಕ್ರೇನ್ನಲ್ಲಿದ್ದ ಎಲ್ಲ ವಿದ್ಯಾರ್ಥಿಗಳನ್ನೂ ರಕ್ಷಣೆ ಮಾಡಿದ್ದರೂ, ಕರ್ನಾಟಕದ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ಎಂಬುವರು ರಷ್ಯಾ ಸೇನೆಯ ದಾಳಿಗೆ ಮೃತಪಟ್ಟಿದ್ದಾರೆ. ದೇಶದಲ್ಲಿ ವೈದ್ಯಕೀಯ ಕೋರ್ಸ್ಗಳಿಗೆ ಡೊನೇಶನ್ ಕೊಟ್ಟು ಪೂರೈಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಇಲ್ಲಿಂದ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉಕ್ರೇನ್ ಸೇರಿ ಇನ್ನಿತರ ದೇಶಗಳಲ್ಲಿ (ಎಲ್ಲಿ ಕಡಿಮೆ ಖರ್ಚಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಬಹುದೋ ಅಲ್ಲಿ,) ಕಲಿಯಲು ಹೋಗುತ್ತಿದ್ದಾರೆ ಎಂಬ ವಿಷಯದ ಚರ್ಚೆಯೂ ಮುನ್ನೆಲೆಗೆ ಬಂದಿದ್ದು, ಅದನ್ನು ತಡೆಯಲು ಕೇಂದ್ರ ಸರ್ಕಾರ ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆಯೂ ಕುತೂಹಲ ಹುಟ್ಟಿದೆ.
ಇದನ್ನೂ ಓದಿ: ಭಾರತದ ಕ್ಷಿಪಣಿ ವ್ಯವಸ್ಥೆ ಅತ್ಯಂತ ವಿಶ್ವಾಸಾರ್ಹ, ಸುರಕ್ಷಿತ: ರಾಜ್ಯಸಭೆಯಲ್ಲಿ ರಾಜನಾಥ ಸಿಂಗ್