ಭಾರತದಲ್ಲಿ ಹೊಸ ಇವಿ ಕಾರು ಬಿಡುಗಡೆಗಾಗಿ ಟೀಸರ್ ಪ್ರಕಟಿಸಿದ ಎಂಜಿ ಮೋಟಾರ್
ಎಂಜಿ ಮೋಟಾರ್ ಕಂಪನಿ ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಇದೀಗ ಹೊಸ ಕಾರಿನ ಟೀಸರ್ ಚಿತ್ರವನ್ನು ಹಂಚಿಕೊಂಡಿದೆ.
ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕಾರು ಮಾದರಿಗಳ ಜೊತೆಗೆ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲೂ ಮುಂಚೂಣಿಯಲ್ಲಿರುವ ಎಂಜಿ ಮೋಟಾರ್ (MG Motor) ಕಂಪನಿಯು ಇದೀಗ ಮತ್ತೊಂದು ಹೊಸ ಇವಿ ಉತ್ಪನ್ನ ಬಿಡುಗಡೆಗೆ ಸಿದ್ದವಾಗುತ್ತಿದೆ. ಮಾರುಕಟ್ಟೆಯಲ್ಲಿ ಸದ್ಯ ಜೆಡ್ಎಸ್ ಇವಿ ಮತ್ತು ಕಾಮೆಟ್ ಇವಿ ಕಾರುಗಳ ಮೂಲಕ ಎಲೆಕ್ಟ್ರಿಕ್ ಕಾರುಗಳ ವಿಭಾಗದ ಬೇಡಿಕೆ ಅರಿತಿರುವ ಎಂಜಿ ಮೋಟಾರ್ ಹೊಸ ತಂತ್ರಜ್ಞಾನ ಪ್ರೇರಿತ ಕ್ಲೌಡ್ ಇವಿ ಕಾರನ್ನು ರಸ್ತೆಗಿಳಿಸುತ್ತಿದ್ದು, ಹೊಸ ಕಾರು ಬಿಡುಗಡೆಯ ಕುರಿತಾಗಿ ಮೊದಲ ಬಾರಿಗೆ ಟೀಸರ್ ಚಿತ್ರದ ಮೂಲಕ ಖಚಿತಪಡಿಸಿದೆ.
ಹೊಸದಾಗಿ ಬಿಡುಗಡೆ ಮಾಡಲು ನಿರ್ಧರಿಸಲಾಗಿರುವ ಕ್ಲೌಡ್ ಇವಿ ಕಾರು ಜೆಡ್ಎಸ್ ಇವಿ ಮತ್ತು ಕಾಮೆಟ್ ಇವಿ ಕಾರುಗಳ ನಡುವಿನ ಸ್ಥಾನ ಪಡೆದುಕೊಳ್ಳಲಿದ್ದು, ಇದು ಅತ್ಯಾಧುನಿಕ ವಿನ್ಯಾಸ ಭಾಷೆಯೊಂದಿಗೆ ಅಭಿವೃದ್ದಿಗೊಂಡಿದೆ. ಚೀನಿ ಮಾರುಕಟ್ಟೆಯಲ್ಲಿ ಈಗಾಗಲೇ ಇದು ಮಾರಾಟದಲ್ಲಿದ್ದು, ವುಲ್ಲಿಂಗ್ ಮೋಟಾರ್ ನಿರ್ಮಾಣದ ಕ್ಲೌಡ್ ಇವಿ ಕಾರು ಮಾದರನ್ನೇ ಎಂಜಿ ಮೋಟಾರ್ ಕಂಪನಿ ಇದೀಗ ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ.
ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸಾಕಷ್ಟು ಹೊಸ ಬದಲಾವಣೆಗೊಂದಿಗೆ ಕ್ಲಾಡ್ ಇವಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಇದು ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರ ಹಲವು ಬೇಡಿಕೆಗಳನ್ನು ಪೂರೈಸಲಿದೆ. ಇದು 4,295 ಎಂಎಂ ಉದ್ದಳತೆಯೊಂದಿಗೆ ಅತ್ಯಾಧುನಿಕ ವಿನ್ಯಾಸದೊಂದಿಗೆ ಹಲವಾರು ಐಷಾರಾಮಿ ಫೀಚರ್ಸ್ ಗಳನ್ನು ಪಡೆದುಕೊಂಡಿರಲಿದ್ದು, ಹೊಸ ಇವಿ ಕಾರು ಮಾದರಿಯಲ್ಲಿ ಎಂಜಿ ಕಂಪನಿಯು ಭರ್ಜರಿ ಮೈಲೇಜ್ ನೀಡುವ ವಿವಿಧ ಬ್ಯಾಟರಿ ಪ್ಯಾಕ್ ಆಯ್ಕೆ ನೀಡಲಿದೆ.
ಕ್ಲೌಡ್ ಇವಿ ಹೊಸ ಕಾರಿನ ಟಾಪ್ ಎಂಡ್ ಮಾದರಿಯು 50.6 kWh ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಪ್ರತಿ ಚಾರ್ಜ್ ಗೆ 460 ಕಿ.ಮೀ ಮೈಲೇಜ್ ನೀಡಲಿದ್ದು, ಇದು ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಹೊಂದಿರಲಿದೆ. ಹಾಗೆಯೇ ಹೊಸ ಇವಿ ಕಾರಿನಲ್ಲಿ ಆಧುನಿಕ ಕಾರುಗಳಲ್ಲಿ ಫೀಚರ್ಸ್ ಗಳಾದ ಎಲ್ಇಡಿ ಲೈಟ್ಸ್, ಫ್ಲಶ್ ಡೋರ್ ಹ್ಯಾಂಡಲ್ಸ್, ಡ್ಯುಯಲ್ ಡಿಜಿಟಲ್ ಸ್ಕ್ರೀನ್, 360 ಡಿಗ್ರಿ ಕ್ಯಾಮೆರಾ, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಕನೆಕ್ಡೆಡ್ ಕಾರ್ ಟೆಕ್ ಸೇರಿದಂತೆ ವಿವಿಧ ಸೌಲಭ್ಯಗಳಿರಲಿವೆ.
ಜೊತೆಗೆ ಹೊಸ ಕಾರಿನಲ್ಲಿ ಗರಿಷ್ಠ ಸುರಕ್ಷತೆಗಾಗಿ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ನೀಡಲಾಗುತ್ತಿದ್ದು, ಇದು ಸಂಭಾವ್ಯ ಅಪಘಾತಗಳನ್ನು ತಡೆಯುವ ಮೂಲಕ ಪ್ರಾಣಹಾನಿ ಪ್ರಕರಣಗಳನ್ನು ತಡೆಯಲಿದೆ. ಹೀಗಾಗಿ ಹೊಸ ಕ್ಲೌಡ್ ಇವಿ ಕಾರು ತಂತ್ರಜ್ಞಾನ ಮತ್ತು ಬ್ಯಾಟರಿ ಪ್ಯಾಕ್ ಗಳಿಗೆ ಅನುಗುಣವಾಗಿ ರೂ. 18 ಲಕ್ಷದಿಂದ ರೂ. 20 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದ್ದು, ಇದು ಬೆಲೆ ವಿಚಾರವಾಗಿ ಬಿವೈಡಿ ಇ6 ಎಂಪಿವಿ ಕಾರಿಗೆ ಇದು ಪೈಪೋಟಿ ನೀಡಲಿದೆ.
Published On - 10:29 pm, Sun, 28 July 24