ಸೂಪರ್ ಸ್ಟೈಲಿಶ್ ಆಗಿಯೋ ಎರಡು ಹೊಸ ಎಸ್ಯುವಿ ಬಿಡುಗಡೆಗೆ ಸಿದ್ದವಾದ ರೆನಾಲ್ಟ್ ಮತ್ತು ನಿಸ್ಸಾನ್
ಬಜೆಟ್ ಬೆಲೆಯಲ್ಲಿ ಪ್ರೀಮಿಯಂ ಫೀಚರ್ಸ್ ಹೊಂದಿರುವ ಹೊಸ ಕಾರುಗಳ ಮೂಲಕ ಗಮನಸೆಳೆಯುತ್ತಿರುವ ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳ ಬಿಡಗಡೆ ಮಾಡುತ್ತಿವೆ.
ಭಾರತದಲ್ಲಿ ಸಹಭಾಗಿತ್ವ ಯೋಜನೆ ಅಡಿ ಹೊಸ ಕಾರುಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ರೆನಾಲ್ಟ್ ಮತ್ತು ನಿಸ್ಸಾನ್ (Renault and Nissan) ಕಂಪನಿಗಳು ಇದೀಗ ಮತ್ತೊಂದು ಬೃಹತ್ ಯೋಜನೆ ರೂಪಿಸಿವೆ. ಹೊಸ ಯೋಜನೆಯೊಂದಿಗೆ ಎರಡು ಕಂಪನಿಗಳು ತಮ್ಮದೇ ಬ್ರಾಂಡ್ ಅಡಿಯಲ್ಲಿ ತಲಾ ಒಂದೊಂದು ಮಧ್ಯಮ ಕ್ರಮಾಂಕದ ಎಸ್ಯುವಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರುಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆ ಆಧರಿಸಿ ಹೊಸ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿವೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಬಜೆಟ್ ಆವೃತ್ತಿಗಳ ಮೂಲಕ ಗ್ರಾಹಕರಲ್ಲಿ ಮುಂಚೂಣಿ ಸಾಧಿಸುತ್ತಿರುವ ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳು ಎಸ್ಯುವಿ ವಿಭಾಗಕ್ಕೆ ಸಂಪೂರ್ಣ ಹೊಸ ಕಾರು ಉತ್ಪನ್ನಗಳನ್ನು ಪರಿಚಯಿಸುತ್ತಿವೆ. ಹೊಸ ಕಾರುಗಳ ಬಿಡುಗಡೆಗಾಗಿ ಈಗಾಗಲೇ ವಿವಿಧ ಹಂತದ ಮಾರುಕಟ್ಟೆ ಅಧ್ಯಯನ ಮಾಡಲಾಗಿದ್ದು, ಇವು 5 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಬಿಡುಗಡೆಯಾಗಲಿವೆ.
ಇದನ್ನೂ ಓದಿ: ಕಡಿಮೆ ಬೆಲೆಗೆ 6 ಏರ್‌ಬ್ಯಾಗ್ ಗಳ ಸುರಕ್ಷತೆ ಹೊಂದಿರುವ ಕಾರುಗಳು!
ಹೊಸ ಯೋಜನೆ ಪರಿಚಯಿಸಲಾಗುತ್ತಿರುವ ರೆನಾಲ್ಟ್ ಕಾರು ಡಸ್ಟರ್ ಆಧರಿಸಿದ್ದು, ಇದು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ. ಹೊಸ ಡಸ್ಟರ್ ಕಾರು ಮಾದರಿಯು ಈ ಹಿಂದಿನ ಮಾದರಿಗಿಂತಲೂ ಭಾರೀ ಬದಲಾವಣೆ ಪಡೆದುಕೊಂಡಿದ್ದು, ಇದು 5 ಸೀಟರ್ ಮತ್ತು 7 ಸೀಟರ್ ಆಯ್ಕೆಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ನಿಸ್ಸಾನ್ ಕಂಪನಿಯು ಸ್ಥಗಿತಗೊಳಿಸಲಾಗಿರುವ ಕಿಕ್ಸ್ ಆಧರಿಸಿದ್ದು, ಇದು ಕೂಡಾ 5 ಸೀಟರ್ ಮತ್ತು 7 ಸೀಟರ್ ಆಯ್ಕೆ ಪಡೆದುಕೊಳ್ಳಲಿದೆ. ಆದರೆ ಹೊಸ ಕಾರುಗಳಲ್ಲಿ ಮೊದಲಿಗೆ 5 ಸೀಟರ್ ಆವೃತ್ತಿಗಳು ಮಾತ್ರ ಬಿಡುಗಡೆಯಾಗಲಿದ್ದು, ತದನಂತರವಷ್ಟೇ 7 ಸೀಟರ್ ಆವೃತ್ತಿಗಳು ಬಿಡುಗಡೆಯಾಗಲಿವೆ.
ಇದರೊಂದಿಗೆ ಹೊಸ ಕಾರುಗಳ ಉತ್ಪಾದನೆಯನ್ನು ಮತ್ತಷ್ಟು ಸುಧಾರಣೆಗೊಳಿಸುವ ನಿಟ್ಟಿನಲ್ಲಿ ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳು ಸಿಎಂಎಫ್-ಬಿ ಪ್ಲ್ಯಾಟ್ ಫಾರ್ಮ್ ಅನ್ನು ಸಿದ್ದಪಡಿಸಿದ್ದು, ಇದೇ ಪ್ಲ್ಯಾಟ್ ಫಾರ್ಮ್ ನಲ್ಲಿ ಎರಡು ಕಂಪನಿಗಳು ಹಲವು ಹೊಸ ಕಾರು ಮಾದರಿಗಳನ್ನು ಪರಿಚಯಿಸಲಿವೆ.
ಈ ಮೂಲಕ 5 ಸೀಟರ್ ಸೌಲಭ್ಯದ ಹೊಸ ಎಸ್ಯುವಿ ಕಾರುಗಳು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಹೋಂಡಾ ಎಲಿವೇಟ್, ಎಂಜಿ ಆಸ್ಟರ್ ಕಾರುಗಳಿಗೆ ಪೈಪೋಟಿಯಾಗಲಿದ್ದರೆ, 7 ಸೀಟರ್ ಎಸ್ಯುವಿ ಮಾದರಿಗಳು ಮಾರುತಿ ಸುಜಕಿ ಗ್ರ್ಯಾಂಡ್ ವಿಟಾರಾ, ಎಂಜಿ ಹೆಕ್ಟರ್, ಹ್ಯುಂಡೈ ಅಲ್ಕಾಜರ್ ಮತ್ತು ಟಾಟಾ ಸಫಾರಿ ಕಾರುಗಳಿಗೆ ಪೈಪೋಟಿಯಾಗಲಿದೆ.
ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!
ಈ ಮೂಲಕ ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳು ಭಾರತದಲ್ಲಿ ಮತ್ತೊಂದು ಹಂತದ ಬೆಳವಣಿಗೆಯ ಸುಳಿವು ನೀಡಿದ್ದು, ಹೊಸ ಕಾರುಗಳನ್ನು ಮುಂಬರುವ ಕೆಲವೇ ದಿನಗಳಲ್ಲಿ ಹಂತ-ಹಂತವಾಗಿ ಪರಿಚಯಿಸಲಿವೆ. ಇದರ ಜೊತೆಯಲ್ಲಿ ಉಭಯ ಕಂಪನಿಗಳು ಎಲೆಕ್ಟ್ರಿಕ್ ಕಾರು ಮಾದರಿಗಳಿಗೂ ಯೋಜನೆ ರೂಪಿಸುತ್ತಿದ್ದು, ಹೊಸ ಇವಿ ಕಾರು ಮಾದರಿಗಳನ್ನು 2025ರ ವೇಳೆಗೆ ಪರಿಚಯಿಸುವ ಸಾಧ್ಯತೆಗಳಿವೆ.
Published On - 10:07 pm, Sun, 31 March 24