ರಾಜಕಾರಿಣಿಗಳ ಬೇಕಾಬಿಟ್ಟಿ ಬಳಕೆಯಿಂದ ಸವಕಲಾಯಿತು ಅಧ್ಯಾತ್ಮದ ಅನುಭೂತಿ ಕೊಡುವ ರಾಸಲೀಲೆ ಪದ
ಅಧ್ಯಾತ್ಮದ ಅನುಭೂತಿಯನ್ನು ಸಹೃದಯರಿಗೆ ದಾಟಿಸಲು ನಮ್ಮ ಮಹಾಕವಿಗಳು ಬಳಸಿದ ಈ ಪದವು ಇದೀಗ ರಾಜಕಾರಣಿಗಳ ಕ್ಷುಲ್ಲಕ ರಾಜಕಾರಣದ ಹೊಡೆತಕ್ಕೆ ನಲುಗಿ, ಬೈಗುಳ ಎಂಬಂತೆ ಬಳಕೆಯಾಗುತ್ತಿದೆ
ಯಾವುದೇ ರಾಜಕಾರಿಣಿಯ ಲಂಪಟತನ, ಅಕ್ರಮ ಸಂಬಂಧಗಳು ಬಯಲಿಗೆ ಬಂದಾಗ ಬಳಕೆಯಾಗುತ್ತಿರುವ ಪದ ‘ರಾಸಲೀಲೆ’. ಎಚ್.ವೈ.ಮೇಟಿ, ಹರತಾಳ್ ಹಾಲಪ್ಪ, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ರಾಜಕಾರಿಣಿಗಳು ತಮ್ಮ ವೈಯಕ್ತಿಕ ಬದುಕಿನಲ್ಲಿ ಮಾಡಿಕೊಂಡ ಭಾನಾಗಡಿಗಳನ್ನು ಪ್ರಸ್ತಾಪಿಸುವಾಗ ಬಳಕೆಯಾಗಿದ್ದು, ಈಗ ರಾಮನಗರದ ಬಿಜೆಪಿ ನಾಯಕ ಯೋಗೇಶ್ವರ್ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹೀಗಳೆಯಲು ಬಳಸುತ್ತಿರುವುದು ಸಹ ಇದೇ ‘ರಾಸಲೀಲೆ’ ಪದವನ್ನು. ಪರಂಪರೆಯ ಅನುಭವ ಹರಳುಗಟ್ಟಿರುವ, ಅಧ್ಯಾತ್ಮದ ಅನುಭೂತಿಯನ್ನು ಸಹೃದಯರಿಗೆ ದಾಟಿಸಲು ನಮ್ಮ ಮಹಾಕವಿಗಳು ಬಳಸಿದ ಈ ಪದವು ಇದೀಗ ರಾಜಕಾರಣಿಗಳ ಕ್ಷುಲ್ಲಕ ರಾಜಕಾರಣದ ಹೊಡೆತಕ್ಕೆ ನಲುಗಿ, ಬೈಗುಳ ಎಂಬಂತೆ ಬಳಕೆಯಾಗುತ್ತಿದೆ. ಒಂದು ಪದಕ್ಕೆ ಇದ್ದ ಗೌರವವನ್ನು ಅರ್ಥತೂಕವನ್ನು ಹಾಳುಮಾಡುವುದು ಎಂದರೆ ಒಂದು ಪರಂಪರೆಯನ್ನೇ ಅವಮಾನಿಸಿದಂತೆ. ಭಾರತೀಯ ಸಂಸ್ಕೃತಿಯ ಬಗ್ಗೆ ಉದ್ದಾನುದ್ದ ಭಾಷಣ ಬಿಗಿಯುವ ಬಿಜೆಪಿ ನಾಯಕರಿಗೂ ಇದು ಅರ್ಥವಾಗುತ್ತಿಲ್ಲ ಎನ್ನುವುದು ವಿಪರ್ಯಾಸ.
ಹೇಳಿಕೇಳಿ ಕರ್ನಾಟಕ ಭಕ್ತಿಪಂಥದ ತವರೂರು. ಕೀರ್ತನ ಸಾಹಿತ್ಯದ ಮೂಲಕ ಕೃಷ್ಣ ಕಥೆಗಳನ್ನು ಮನೆಮನೆಗೆ ತಲುಪಿಸಿದ ಹರಿದಾಸರ ನೆಲೆವೀಡು. ಇಂಥ ಹರಿದಾಸ ಪಂಥಕ್ಕೆ ತಾತ್ವಿಕ ಮೂಲವಾಗಿರು ಭಾಗವತ ಕೃತಿಯಲ್ಲಿ ಬರುವ ಕೃಷ್ಣನ ಬಾಲಲೀಲೆಗಳೊಂದಿಗೆ ಹೆಣೆದುಕೊಂಡಿರುವ ಪದ ಇದು. ‘ರಾಸ್’ ಎಂದರೆ ದೈವಿಕ ಆನಂದ ಅಥವಾ ನೃತ್ಯ ಮತ್ತು ಲೀಲಾ ಎಂದರೆ ನಾಟಕ ಅಥವಾ ಮಾಯೆ ಎಂದೂ ಅರ್ಥವಿದೆ. ಆರು ವರ್ಷದ ಕೃಷ್ಣ ಗೋಪಿಕೆಯರಿಗಾಗಿ ‘ಮಹಾ ರಾಸ್’ ಲೀಲೆಯನ್ನು ತೋರಿದ. ಗೀತಗೋವಿಂದ ಕೃತಿಯು ಇದನ್ನೇ ರಾಸ್ಲೀಲಾ ಎಂದು ಕೊಂಡಾಡುತ್ತದೆ.
ಭಾರತೀಯ ನಂಬಿಕೆಯಂತೆ ಮಹಾಭಾರತ ಕಥೆ ನಡೆದದ್ದು ದ್ವಾಪರ ಯುಗದಲ್ಲಿ. ಎಷ್ಟೋ ವರ್ಷ ಋಷಿಗಳಾಗಿ ತಪಸ್ಸು ಮಾಡಿದ್ದವರೇ ಗೋಪಿಕೆಯರಾಗಿ ಅವತಾರ ಮಾಡಿದ್ದರು ಎನ್ನುವು ನಂಬಿಕೆಯೂ ಇದೆ. ಪುಟ್ಟ ಕೃಷ್ಣನು ವೃಂದಾವನದಲ್ಲಿ ಗೋಪಿಕೆಯರೊಂದಿಗೆ ಸಂತಸದಿಂದ ಇದ್ದಾಗ ಒಮ್ಮೆ ಕೊಳಲು ನುಡಿಸಿದ. ಆ ಬೆಳದಿಂಗಳ ರಾತ್ರಿ ಒಂದು ದೊಡ್ಡ ಮಾಯೆ ಆವರಿಸಿಕೊಂಡಿತ್ತು.
ಯಮುನಾ ನದಿ ದಂಡೆಯಲ್ಲಿ ಕೃಷ್ಣ ಸುತ್ತ ನೆರೆದಿದ್ದ ರಾಧಾ ಮತ್ತು ಇತರ ಗೋಪಿಕೆಯರು ತಮ್ಮ ಜನ್ಮ ಪಾವನವಾಯಿತು ಏಂದುಕೊಂಡರು. ಆದರೆ ಸ್ವಲ್ಪ ಹೊತ್ತಿಗೆ ಅವರೆಲ್ಲರಿಗೂ ಇದು ದೇವರ ಕರುಣೆ ಎಂಬ ದಾಸ್ಯಭಾವ ಹೋಗಿ ತಮ್ಮ ಪುಣ್ಯವಿಶೇಷ ಎಂಬ ಅಹಂ ಬಂತು. ತಕ್ಷಣ ಮಾಯವಾದ. ವಿರಹದ ದುಃಖದಲ್ಲಿ ಗೋಪಿಕೆಯರು ಅತ್ತರು. ಅವರಲ್ಲಿ ಅಹಂಕಾರ ಹೋಗಿ ಮತ್ತು ಭಕ್ತಿ ನೆಲೆಸಿತು. ಕೃಷ್ಣ ಪ್ರತ್ಯಕ್ಷನಾದ. ಆ ರಾತ್ರಿ ಕೇವಲ ಭೂಮಿ ಮೇಲಿನ ಒಂದು ರಾತ್ರಿಯಷ್ಟೇ ಆಗಿರಲಿಲ್ಲ. ಬ್ರಹ್ಮನ ಆಯುಷ್ಯದ ಲೆಕ್ಕದಲ್ಲಿ ಒಂದು ರಾತ್ರಿಯನ್ನಾಗಿ ಕೃಷ್ಣ ಬದಲಿಸಿಬಿಟ್ಟ. ಅಂದರೆ ಅದು ಭೂಮಿಯ ಲೆಕ್ಕದಲ್ಲಿ 4.32 ಶತಕೋಟಿ ವರ್ಷಗಳೇ ಆಗಿದ್ದವು. ಈ ಒಟ್ಟು ಪ್ರಸಂಗ ರಾಸಲೀಲೆ ಎನಿಸಿಕೊಳ್ಳುತ್ತದೆ.
ಕಲೆ, ಭಕ್ತಿ, ಅಹಂಕಾರ, ವಿರಹ, ದಾಸ್ಯ, ಕರುಣೆ, ಒಲವು ಎಲ್ಲವೂ ಮೈದುಂಬಿಕೊಂಡ ವಿಶೇಷ ಸನ್ನಿವೇಶವನ್ನು ವ್ಯಾಸರು ಭಾಗವತದಲ್ಲಿ ಕಟ್ಟಿಕೊಟ್ಟಿದ್ದಾರೆ. ಕನ್ನಡದಲ್ಲಿಯೂ ಪು.ತಿ.ನರಸಿಂಹಾಚಾರ್ಯರ ಗೋಕುಲ ನಿರ್ಗಮನ ಸೇರಿದಂತೆ ಹಲವು ಸಾಹಿತ್ಯ ಕೃತಿಗಳು ಈ ಸನ್ನಿವೇಶದ ಭಾವವನ್ನು ಮೈದುಂಬಿ ವರ್ಣಿಸಿವೆ. ವ್ಯಾಸರಂಥ ಮಹಾ ಸಾಹಿತಿ ರೂಪಿಸಿ, ಸಾವಿರಾರು ಕವಿಗಳು ವಿಸ್ತರಿಸಿದ ಒಂದು ಮಹಾನ್ ಕಲ್ಪನೆ ರಾಸಲೀಲೆ. ಅದನ್ನು ಕೇವಲ ಎರಡು ದೇಹಗಳ (ಅಕ್ರಮ) ಸಂಬಂಧಕ್ಕೆ ಸೀಮಿತಗೊಳಿಸಿ ಮಾತನಾಡುವ ರಾಜಕಾರಿಣಿಗಳಿಗೆ ಕವಿಹೃದಯ ಎಂದಾದರೂ ಅರ್ಥವಾಗಲು ಸಾಧ್ಯವೇ?
ಇದನ್ನೂ ಓದಿ: Russia Economy: ದಿವಾಳಿಯತ್ತ ಸಾಗಿರುವ ರಷ್ಯಾಗೆ ಉಕ್ರೇನ್ ಯುದ್ಧದಲ್ಲಿ 2 ದಿನಕ್ಕೆ ಆದ ನಷ್ಟ 38 ಸಾವಿರ ಕೋಟಿ ರೂಪಾಯಿ
ಇದನ್ನೂ ಓದಿ: ಕುಮಾರಸ್ವಾಮಿ ಹೋಟೆಲ್ನಲ್ಲಿ ರಾಸಲೀಲೆ ಮಾಡಿಕೊಂಡಿದ್ದ, ಇನ್ಮುಂದೆ ಹೆಚ್ಡಿಕೆ ಬಗ್ಗೆ ಏಕವಚನದಲ್ಲಿ ಮಾತಾಡುವೆ -ಯೋಗೇಶ್ವರ್
Published On - 7:28 am, Tue, 15 March 22