Union Budget 2022: ಸರ್ಕಾರವು ಕೆ- ಆಕಾರದ ಚೇತರಿಕೆ ತಡೆಯಬೇಕು ಎಂದ ರಘುರಾಮ್ ರಾಜನ್

Union Budget 2022: ಸರ್ಕಾರವು ಕೆ- ಆಕಾರದ ಚೇತರಿಕೆ ತಡೆಯಬೇಕು ಎಂದ ರಘುರಾಮ್ ರಾಜನ್
ರಘುರಾಮ್ ರಾಜನ್ (ಸಂಗ್ರಹ ಚಿತ್ರ)

2022ರ ಕೇಂದ್ರ ಬಜೆಟ್​ಗೆ ಪೂರ್ವವಾಗಿ ಆರ್​ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಮಾತನಾಡಿ, ಸರ್ಕಾರವು ಕೆ ಆಕಾರದ ಚೇತರಿಕೆಯನ್ನು ತಡೆಯಬೇಕು ಎಂದು ಹೇಳಿದ್ದಾರೆ.

TV9kannada Web Team

| Edited By: Srinivas Mata

Jan 26, 2022 | 8:11 AM

ಭಾರತದ ಆರ್ಥಿಕತೆಯು “ಪ್ರಕಾಶಯುತವಾದ ಕೆಲವು ಕ್ಷೇತ್ರಗಳು ಮತ್ತು ಹಲವಾರು ಗಾಢವಾದ ಕಲೆಗಳನ್ನು” ಹೊಂದಿದೆ ಮತ್ತು ಸರ್ಕಾರವು ಅದರ ವೆಚ್ಚವನ್ನು “ಎಚ್ಚರಿಕೆಯಿಂದ” ನಿಗದಿಪಡಿಸಬೇಕು. ಹೀಗೆ ಮಾಡುವುದರಿಂದ ಯಾವುದೇ ದೊಡ್ಡ ಕೊರತೆಗಳು ಆಗುವುದಿಲ್ಲ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಆರ್​ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ (Raghuram Rajan) ಈಚೆಗೆ ಹೇಳಿದ್ದಾರೆ. ತಮ್ಮ ಸ್ಪಷ್ಟ ಆಲೋಚನೆ ಹಾಗೂ ಮಾತುಗಳಿಗೆ ಹೆಸರಾದ ವ್ಯಕ್ತಿ ಡಾ. ರಘುರಾಮ್ ರಾಜನ್. ಅಂದಹಾಗೆ, ಕೊರೊನಾ ಸಾಂಕ್ರಾಮಿಕ ಬಿಕ್ಕಟ್ಟಿನಿಂದ ಆರ್ಥಿಕತೆಯ K-ಆಕಾರದ ಚೇತರಿಕೆಯನ್ನು ತಡೆಯಲು ಸರ್ಕಾರವು ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ K- ಆಕಾರದ ಚೇತರಿಕೆಯು ಸಾಂಕ್ರಾಮಿಕ ಬಿಕ್ಕಟ್ಟಿನಿಂದ ಗಮನಾರ್ಹವಾಗಿ ಪ್ರಭಾವಿತವಾಗಿರುವ ಸಣ್ಣ ವ್ಯವಹಾರಗಳು ಮತ್ತು ಕೈಗಾರಿಕೆಗಳಿಗಿಂತ ತಂತ್ರಜ್ಞಾನ ಮತ್ತು ದೊಡ್ಡ ಬಂಡವಾಳ ಸಂಸ್ಥೆಗಳು ಹೆಚ್ಚು ವೇಗವಾಗಿ ಚೇತರಿಸಿಕೊಳ್ಳುವ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.

“ಆರ್ಥಿಕತೆಯ ಬಗ್ಗೆ ನನ್ನ ಹೆಚ್ಚಿನ ಚಿಂತೆ ಮಧ್ಯಮ ವರ್ಗ, ಸಣ್ಣ ಮತ್ತು ಮಧ್ಯಮ ವಲಯ ಮತ್ತು ನಮ್ಮ ಮಕ್ಕಳ ಮನಸ್ಸಿಗೆ ಗಾಯದ ಬಗ್ಗೆ ಆಗಿದೆ. ಇವೆಲ್ಲವೂ ಬೇಡಿಕೆಯ ಕೊರತೆಯಿಂದಾಗಿ ಆರಂಭಿಕ ಮರುಕಳಿಸುವಿಕೆ ನಂತರ ಕಾರ್ಯರೂಪಕ್ಕೆ ಬರುತ್ತವೆ. ಈ ಎಲ್ಲದರ ಒಂದು ಲಕ್ಷಣವೆಂದರೆ, ದುರ್ಬಲ ಬಳಕೆಯ ಬೆಳವಣಿಗೆ. ಅದರಲ್ಲೂ ವಿಶೇಷವಾಗಿ ಸಾಮೂಹಿಕ ಬಳಕೆಯ ಸರಕುಗಳಿಗೆ,” ಎಂದು ರಘುರಾಮ್ ರಾಜನ್ ಪಿಟಿಐಗೆ ಇ-ಮೇಲ್ ಸಂದರ್ಶನದಲ್ಲಿ ತಿಳಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.

ಡಾ. ರಘುರಾಮ್ ರಾಜನ್ ಸದ್ಯಕ್ಕೆ ಶಿಕಾಗೋ ವಿಶ್ವವಿದ್ಯಾನಿಲಯದ ಬೂತ್ ಸ್ಕೂಲ್ ಆಫ್ ಬಿಜಿನೆಸ್‌ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಯಾವಾಗಲೂ ಆರ್ಥಿಕತೆಯು ಕೆಲವು ಪ್ರಕಾಶಮಾನವಾದ ಕ್ಷೇತ್ರಗಳನ್ನು ಮತ್ತು ಹಲವಾರು ಗಾಢವಾದ ಕಲೆಗಳನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ. “ಪ್ರಕಾಶಯುತವಾದ ಕ್ಷೇತ್ರಗಳು ಅಂದರೆ ದೊಡ್ಡ ಸಂಸ್ಥೆಗಳ ಆರೋಗ್ಯ, ಐಟಿ ಮತ್ತು ಐಟಿ-ಎನೇಬಲ್ಡ್ ವಲಯಗಳು, ಬೆಳವಣಿಗೆ ಆಗುತ್ತಿರುವ ವ್ಯಾಪಾರ, ಹಲವಾರು ಕ್ಷೇತ್ರಗಳಲ್ಲಿ ಯುನಿಕಾರ್ನ್‌ಗಳ ಹೊರಹೊಮ್ಮುವಿಕೆ ಮತ್ತು ಹಣಕಾಸು ಕ್ಷೇತ್ರದ ಕೆಲವು ಭಾಗಗಳ ಬಲ,” ಎಂದು ಅವರು ಹೇಳಿದ್ದಾರೆ.

ಖರೀದಿಸುವ ಶಕ್ತಿ ಕಡಿಮೆ ಮತ್ತೊಂದೆಡೆ, “ಕಪ್ಪು ಕಲೆಗಳು” ಅಂದರೆ ನಿರುದ್ಯೋಗದ ಪ್ರಮಾಣ ಮತ್ತು ಕಡಿಮೆ ಕೊಳ್ಳುವ ಶಕ್ತಿ, ವಿಶೇಷವಾಗಿ ಕೆಳ ಮಧ್ಯಮ ವರ್ಗದವರಲ್ಲಿ, ಆರ್ಥಿಕ ಒತ್ತಡವನ್ನು ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳು ಅನುಭವಿಸುತ್ತಿವೆ. “ಅತ್ಯಂತ ಕ್ಷೀಣವಾದ ಸಾಲದ ಬೆಳವಣಿಗೆ ಸೇರಿದಂತೆ ಮತ್ತು ನಮ್ಮ ಶಾಲಾ ಶಿಕ್ಷಣದ ದುರಂತ ಸ್ಥಿತಿ”. ವೈದ್ಯಕೀಯವಾಗಿ ಮತ್ತು ಆರ್ಥಿಕ ಚಟುವಟಿಕೆಯಲ್ಲಿ ಒಮಿಕ್ರಾನ್ ಹಿನ್ನಡೆ ಆಗಿದೆ ಎಂದು ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಆದರೆ K -ಆಕಾರದ ಆರ್ಥಿಕ ಚೇತರಿಕೆಯ ಸಾಧ್ಯತೆಯ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. “K-ಆಕಾರದ ಚೇತರಿಕೆ ತಡೆಯಲು ನಾವು ಹೆಚ್ಚಿನದನ್ನು ಮಾಡಬೇಕಾಗಿದೆ. ಜೊತೆಗೆ ನಮ್ಮ ಮಧ್ಯಮ ಅವಧಿಯ ಬೆಳವಣಿಗೆಯ ಸಾಮರ್ಥ್ಯವನ್ನು ಕಡಿಮೆಗೊಳಿಸಬಹುದು,” ಎಂದಿದ್ದಾರೆ.

ಮಾರ್ಚ್ 31ರಂದು ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಜಿಡಿಪಿ ಶೇ 9ಕ್ಕಿಂತ ಹೆಚ್ಚು ಬೆಳೆಯುವ ನಿರೀಕ್ಷೆಯಿದೆ. ಸಾಂಕ್ರಾಮಿಕ ರೋಗದಿಂದ ಗಮನಾರ್ಹವಾಗಿ ಹಾನಿಗೊಳಗಾದ ಆರ್ಥಿಕತೆಯು ಕಳೆದ ಹಣಕಾಸು ವರ್ಷದಲ್ಲಿ ಶೇ 7.3ರಷ್ಟು ಕುಸಿದಿದೆ. ಕೇಂದ್ರ ಬಜೆಟ್‌ಗೆ ಮುಂಚಿತವಾಗಿ, ರಘುರಾಮ್ ರಾಜನ್ ಅವರು ಬಜೆಟ್‌ಗಳು ದೂರದೃಷ್ಟಿಯನ್ನು ಒಳಗೊಂಡಿರುವ ದಾಖಲೆಗಳಾಗಿರಬೇಕು ಮತ್ತು ಭಾರತಕ್ಕಾಗಿ ಐದು ಅಥವಾ ಹತ್ತು ವರ್ಷಗಳ ದೃಷ್ಟಿಕೋನವನ್ನು ನೋಡಲು ಇಷ್ಟಪಡುತ್ತೇನೆ. ಮತ್ತು ಸರ್ಕಾರವು ಆ ರೀತಿಯ ಉದ್ದೇಶವುಳ್ಳ ಚೌಕಟ್ಟುಗಳ ಯೋಜನೆಯನ್ನು ಮತ್ತು ಸಂಸ್ಥೆಗಳು ಸ್ಥಾಪಿಸುವುದನ್ನು ನೋಡಲು ಇಷ್ಟಪಡುವುದಾಗಿ ಹೇಳಿದ್ದಾರೆ.

ಸರ್ಕಾರವು ಹಣಕಾಸಿನ ಬಲವರ್ಧನೆಗೆ ಹೋಗಬೇಕೇ ಅಥವಾ ಉತ್ತೇಜಕ ಕ್ರಮಗಳನ್ನು ಮುಂದುವರಿಸಬೇಕೇ ಎಂಬುದರ ಕುರಿತು ರಘುರಾಮ್ ರಾಜನ್ ಅವರು ಭಾರತದ ಹಣಕಾಸಿನ ಪರಿಸ್ಥಿತಿಯು ಸಾಂಕ್ರಾಮಿಕ ರೋಗದ ವಿಚಾರಕ್ಕೆ ಬಂದರೂ ಉತ್ತಮವಾಗಿಲ್ಲ ಮತ್ತು ಈ ಕಾರಣದಿಂದಾಗಿ ಹಣಕಾಸು ಸಚಿವೆ ಈಗ ಮುಕ್ತವಾಗಿ ಖರ್ಚು ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಆರ್ಥಿಕತೆಯ ಅತ್ಯಂತ ತೊಂದರೆಗೊಳಗಾದ ಕ್ಷೇತ್ರಗಳಲ್ಲಿನ ನೋವನ್ನು ನಿವಾರಿಸಲು ಈ ಸಮಯದಲ್ಲಿ ಸರ್ಕಾರವು ಅಗತ್ಯವಿರುವಲ್ಲಿ ಖರ್ಚು ಮಾಡಬೇಕಾಗಿದ್ದರೂ “ನಾವು ಭಾರಿ ಕೊರತೆಗಳು ಆಗದಂತೆ ಎಚ್ಚರಿಕೆಯಿಂದ ವೆಚ್ಚವನ್ನು ಗುರಿಪಡಿಸಬೇಕು,” ಎಂದು ಅವರು ಹೇಳಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2022-23 ಅನ್ನು ಮಂಡಿಸಲಿದ್ದಾರೆ.

ಏರುತ್ತಿರುವ ಹಣದುಬ್ಬರ ಹೆಚ್ಚುತ್ತಿರುವ ಹಣದುಬ್ಬರದ ಟ್ರೆಂಡ್​ ಬಗ್ಗೆ ಮಾತನಾಡಿದ ಡಾ. ರಾಜನ್, ಪ್ರತಿ ದೇಶದಲ್ಲಿ ಹಣದುಬ್ಬರವು ಕಳವಳಕಾರಿಯಾಗಿದೆ ಮತ್ತು ಭಾರತವು ಇದಕ್ಕೆ ಹೊರತಾಗಿರುವುದು ಕಷ್ಟ ಎಂದಿದ್ದಾರೆ. ಅವರ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ದೇಶದ ಏಕೀಕೃತ ಸಾಲಕ್ಕೆ ವಿಶ್ವಾಸಾರ್ಹ ಗುರಿಯನ್ನು ಘೋಷಿಸುವುದು ಮತ್ತು ಬಜೆಟ್‌ನ ಗುಣಮಟ್ಟದ ಬಗ್ಗೆ ಅಭಿಪ್ರಾಯ ನೀಡಲು ಸ್ವತಂತ್ರ ಹಣಕಾಸು ಮಂಡಳಿಯನ್ನು ಸ್ಥಾಪಿಸುವುದು ತುಂಬಾ ಉಪಯುಕ್ತ ಕ್ರಮಗಳು.

ಇದನ್ನೂ ಓದಿ: Raghuram Rajan: ಸ್ವಾತಂತ್ರ್ಯಾ ನಂತರ ಭಾರತ ಕಂಡ ಅತ್ಯಂತ ದೊಡ್ಡ ಸವಾಲು ಕೋವಿಡ್-19 ಬಿಕ್ಕಟ್ಟು ಎಂದ ರಘುರಾಮ್ ರಾಜನ್

Follow us on

Most Read Stories

Click on your DTH Provider to Add TV9 Kannada