ಉಳಿತಾಯ ಖಾತೆಗಳನ್ನು (Savings Bank Account) ತೆರೆಯಲು ಹಲವಾರು ಆಫರ್ ಗಳೊಂದಿಗೆ ಬ್ಯಾಂಕ್ ಗಳು ನಮ್ಮ ದುಂಬಾಲು ಬೀಳೋದು ಎಲ್ಲರಿಗೂ ಗೊತ್ತಿರುವ ವಿಷಯವೇ. ಖಾತೆ ಓಪನ್ ಮಾಡಿದವರಿಗೆ ಬ್ಯಾಂಕ್ ಗಳು ಬೇರೆ ಬೇರೆ ಬಗೆಯ ಸೌಲಭ್ಯ ಸೌಕರ್ಯಗಳನ್ನು (services) ಒದಗಿಸುತ್ತವೆ. ಹಾಗಾಗೇ ಜನ ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಗಳನ್ನು ವಿವಿಧ (various) ಬ್ಯಾಂಕ್ ಗಳಲ್ಲಿ ಆರಂಭಿಸುತ್ತಾರೆ. ಹೆಚ್ಚು ಉಳಿತಾಯ ಖಾತೆಗಳನ್ನು ಹೊಂದುವುದು ಒಂದರ್ಥದಲ್ಲಿ ಒಳ್ಳೆಯದೇ ಆದರೂ ಕೆಲವು ಅಂಶಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.
ಕನಿಷ್ಟ ಬ್ಯಾಲೆನ್ಸ್:
ನೀವು ಯಾವುದೇ ಬ್ಯಾಂಕಲ್ಲಿ ಖಾತೆ ತೆರೆದರೂ ನಿರ್ಧಾರಿತ ಕನಿಷ್ಟ ಮೊತ್ತವನ್ನು ಖಾತೆಯಲ್ಲಿ ಉಳಿಸಿರುವುದು ಅನಿವಾರ್ಯವಾಗಿದೆ. ಕನಿಷ್ಟ ಮೊತ್ತ ಎಷ್ಟಿರಬೇಕೆಂದು ಆಯಾ ಆಯಾ ಬ್ಯಾಂಕ್ ಗಳು ನಿರ್ಧರಿಸುತ್ತವೆ. ಇದು ಬ್ಯಾಂಕ್ ಗಳು ಒದಗಿಸುವ ಸೇವಾ ಮತ್ತು ನಿರ್ವಹಣಾ ವೆಚ್ಚವನ್ನು ಅವಲಂಬಿಸಿರುತ್ತದೆ. ಮಿನಿಮಮ್ ಬ್ಯಾಲೆನ್ಸ್ ಉಳಿಸಿಕೊಂಡಿರದ ಪಕ್ಷದಲ್ಲಿ ಬ್ಯಾಂಕ್ ಕೆಲವು ಶುಲ್ಕಗಳನ್ನು ಖಾತೆದಾರನ ಮೇಲೆ ಹೇರಬಹುದಾಗಿದೆ.
ನೀವು ಒಂದೆರಡು ಉಳಿತಾಯ ಖಾತೆಗಳನ್ನು ಹೊಂದಿದ್ದರೆ ಕನಿಷ್ಟ ಮೊತ್ತ ಉಳಿಸಿಕೊಳ್ಳುವುದು ಕಷ್ಟಕರವೆನಿಸಲಾರದು. ಆದರೆ, ಬಹಳಷ್ಟು ಖಾತೆಗಳನ್ನು ಓಪನ್ ಮಾಡಿದ್ದರೆ, ಅದು ಸವಾಲಿನ ಕೆಲಸವಾಗುವುದು ನಿಶ್ಚಿತ.
ಹಣ ವಿತ್ ಡ್ರಾ ಮಾಡುವ ಮಿತಿ:
ನಿಮ್ಮ ಉಳಿತಾಯ ಖಾತೆಗೆ ಲಿಂಕ್ ಆಗಿರುವ ಡೆಬಿಟ್ ಕಾರ್ಡ್ ಗಳಿಂದ ದಿನವೊಂದರಲ್ಲಿ ಸೀಮಿತ ಮೊತ್ತದವರೆಗೆ ಮಾತ್ರ ಹಣ ವಿತ್ ಡ್ರಾ ಮಾಡಬಹುದಾಗಿದೆ. ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಗಳನ್ನು ಹೊಂದಿರುವುದು ಇಂಥ ಸಂದರ್ಭಗಳಲ್ಲಿ ಅನುಕೂಲಕರವಾಗಿ ಪರಿಣಮಿಸುತ್ತದೆ. ಬೇರೆ ಬೇರೆ ಖಾತೆಗಳಿಂದ ದೊಡ್ಡ ಮೊತ್ತದ ಹಣವನ್ನು ನೀವು ವಿತ್ ಡ್ರಾ ಮಾಡಬಹುದು.
ಹೌದು; ನಿಮಗಿಷ್ಟವಾಗುವಷ್ಟು, ನಿಮ್ಮಿಂದ ಸಾಧ್ಯವಾಗುವಷ್ಟು ಉಳಿತಾಯ ಖಾತೆಗಳನ್ನು ನೀವು ಹೊಂದಬಹುದಾಗಿದೆ. ಆದರೆ ನಿಮ್ಮ ಖಾತೆಯೊಂದರಲ್ಲಿ ಬಹಳ ಸಮಯದವರೆಗೆ ಯಾವುದೇ ಚಟುವಟಿಕೆ ಕಾಣದ ಪಕ್ಷದಲ್ಲಿ ಬ್ಯಾಂಕ್ ಅದನ್ನು ನಿಷ್ಕ್ರಿಯ ಖಾತೆ ಅಂತ ಪರಿಗಣಿಸುತ್ತದೆ.
ಹಾಗೆಯೇ, ಖಾತೆಯನ್ನು ದೀರ್ಘಾವಧಿವರೆಗೆ ಚಟುವಟಿಕೆರಹಿತವಾಗಿಟ್ಟರೆ, ಬ್ಯಾಂಕ್ ತರಹೇವಾರಿ ಶುಲ್ಕಗಳನ್ನು ಹೇರಬಹುದಾಗಿದೆ. ಹಾಗಾದಲ್ಲಿ ನಿಮ್ಮ ಖಾತೆಯಲ್ಲಿನ ಮೊತ್ತ ಕಮ್ಮಿಯಾಗುತ್ತಾ ಹೋಗುತ್ತದೆ.
ಬ್ಯಾಂಕ್ ಶುಲ್ಕಗಳು:
ಬ್ಯಾಂಕ್ ಗಳು ಹಲವಾರು ಸೇವೆಗಳನ್ನು ಉಚಿತವಾಗಿ ಒದಗಿಸುತ್ತವೆ, ಆದರೆ ಕೆಲ ಸೇವೆಗಳ ಮೇಲೆ ಶುಲ್ಕ ವಸೂಲಿಯಾಗುತ್ತದೆ. ಬ್ಯಾಂಕ್ ನಿಮ್ಮ ಅಕೌಂಟ್ ಮೇಲೆ ವಿಧಿಸುವ ಶುಲ್ಕಗಳ ಬಗ್ಗೆ ನೀವು ತಿಳಿದುಕೊಂಡಿರಬೇಕು.
ಬಹಳಷ್ಟು ಸಂದರ್ಭಗಳಲ್ಲಿ ಗ್ರಾಹಕರಿಗೆ ಬ್ಯಾಂಕ್ ಶುಲ್ಕಗಳ ಬಗ್ಗೆ ಅರಿವೇ ಇರೋದಿಲ್ಲ. ಹಾಗಾಗಿ, ಖಾತೆಯನ್ನು ಆರಂಭಿಸುವಾಗ ಮತ್ತು ಅವರ ಯಾವುದಾದರೂ ಪ್ರಾಡಕ್ಟ್ ಖರೀದಿಸುವಾಗ ಬ್ಯಾಂಕ್ ಸಿಬ್ಬಂದಿಯಿಂದ ಸಮಗ್ರ ಮಾಹಿತಿಯನ್ನು ಸಂಗ್ರಹಿಸಬೇಕು.