ಐಟಿ ಹಾಗೂ ವೃತ್ತಿಪರ ಸೇವೆಗಳನ್ನು ಒದಗಿಸುವ ಆಕ್ಸೆಂಚರ್ ಕಂಪೆನಿಯು ಆಯಾ ಸಿಬ್ಬಂದಿ ಮೂಲವೇತನದ ಒಂದು ವಾರದ ಮೊತ್ತವನ್ನು ಬೋನಸ್ ಆಗಿ ನೀಡಲಿದೆ ಎಂದು ಗುರುವಾರ ಹೇಳಿದೆ. ಕೊರೊನಾ ಬಿಕ್ಕಟ್ಟಿನ ಸವಾಲು ಇರುವಾಗಲೂ ಒಂದು ಸಲದ ಈ ಬೋನಸ್ ವಿತರಣೆ ಮಾಡಲಾಗುತ್ತಿದೆ. ಉದ್ಯೋಗಿಗಳು ಕಂಪೆನಿಗೆ ನೀಡಿದ ಕೊಡುಗೆಗೆ ಪ್ರತಿಯಾಗಿ ಈ ಬೋನಸ್ ನೀಡಲಾಗುತ್ತಿದೆ. ಅಂದ ಹಾಗೆ ಭಾರತದಲ್ಲೇ ಆಕ್ಸೆಂಚರ್ ಕಂಪೆನಿಗೆ ಎರಡು ಲಕ್ಷ ಸಿಬ್ಬಂದಿ ಇದ್ದಾರೆ. ಫೆಬ್ರವರಿ 28, 2021ಕ್ಕೆ ಕೊನೆಯಾದ ಎರಡನೇ ತ್ರೈಮಾಸಿಕದಲ್ಲಿ ಆಕ್ಸೆಂಚರ್ ಕಂಪೆನಿಯು ಆದಾಯದಲ್ಲಿ ಶೇಕಡಾ 8ರಷ್ಟು ಬೆಳವಣಿಗೆ ಕಂಡು, 12.09 ಬಿಲಿಯನ್ ಅಮೆರಿಕನ್ ಡಾಲರ್ ತಲುಪಿತ್ತು.
ಕಂಪೆನಿಯ ನಿವ್ವಳ ಆದಾಯವು ಎರಡನೇ ತ್ರೈಮಾಸಿಕದಲ್ಲಿ 1.46 ಬಿಲಿಯನ್ ಡಾಲರ್ ಆಗಿತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ 1.25 ಬಿಲಿಯನ್ ಡಾಲರ್ ನಿವ್ವಳ ಲಾಭ ಬಂದಿತ್ತು. “ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಯಿಂದ ಕೆಳಗಿರುವವರಿಗೆ ಕಂಪೆನಿಯಿಂದ ಒಂದು ವಾರಕ್ಕೆ ಸಮನಾಗುವ ಮೂಲವೇತನದಷ್ಟು ಬೋನಸ್ ಘೋಷಣೆ ಮಾಡಲಾಗಿದೆ. ಈ ಸವಾಲಿನ ವರ್ಷದಲ್ಲಿ ಗ್ರಾಹಕರಿಗೆ ಆಕ್ಸೆಂಚರ್ ಸಿಬ್ಬಂದಿ ತೋರಿದ ಬದ್ಧತೆ ಹಾಗೂ ಅಭೂತಪೂರ್ವ ಕೊಡುಗೆಯನ್ನು ಗುರುತಿಸಿದೆ,” ಎಂದು ಹಣಕಾಸು ವರದಿಯಲ್ಲಿ ಕಂಪೆನಿಯು ಹೇಳಿದೆ.
ಕಳೆದ ವರ್ಷಕ್ಕೆ ಇದೇ ಅವಧಿಗೆ ಹೋಲಿಸಿದಲ್ಲಿ ಕಂಪೆನಿಯು ಹೊಸ ಬುಕ್ಕಿಂಗ್ 16 ಬಿಲಿಯನ್ ಯುಎಸ್ಡಿ ತಲುಪುವ ಮೂಲಕ ಶೇ 13ರಷ್ಟು ಏರಿಕೆ ದಾಖಲಿಸಿದೆ. “2021ರ ಹಣಕಾಸು ವರ್ಷದಲ್ಲಿ ಕಂಪೆನಿಯು ಕಾರ್ಯನಿರ್ವಹಣೆ ನಗದು ಹರಿವು 7.65 ಬಿಲಿಯನ್ನಿಂದ 8.15 ಬಿಲಿಯನ್ ಯುಎಸ್ಡಿ ನಿರೀಕ್ಷಿಸುತ್ತಿದೆ. ಈ ಹಿಂದೆ ಆ ಪ್ರಮಾಣ 6.65 ಬಿಲಿಯನ್ ಯುಎಸ್ಡಿಯಿಂದ 7.15 ಬಿಲಿಯನ್ ಯುಎಸ್ಡಿ ಇತ್ತು,” ಎಂದು ಆಕ್ಸೆಂಚರ್ ಹೇಳಿದೆ.
ಇದನ್ನೂ ಓದಿ: ಇನ್ಫೋಸಿಸ್ ಸಿಬ್ಬಂದಿ, ಹತ್ತಿರ ಸಂಬಂಧಿಗಳಿಗೆ ಕಂಪೆನಿಯೇ ಭರಿಸಲಿದೆ ಕೊರೊನಾ ಲಸಿಕೆ ವೆಚ್ಚ
Published On - 12:44 pm, Fri, 19 March 21