ನವದೆಹಲಿ, ನವೆಂಬರ್ 28: ಅಮೆರಿಕದ ಕೋರ್ಟ್ನಲ್ಲಿ ಸಲ್ಲಿಕೆಯಾದ ಚಾರ್ಜ್ಶೀಟ್ನಲ್ಲಿ ಗೌತಮ್ ಅದಾನಿ ಮೊದಲಾದವರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್ ಮತ್ತೆ ವಿವಾದದ ಸುಳಿಗೆ ಸಿಲುಕಿದೆ. ಆದರೆ, ಗೌತಮ್ ಅದಾನಿಯಾಗಲೀ ಅಥವಾ ಅವರ ಜೊತೆಗಾರರಾಗಲೀ ಅಮೆರಿಕದಲ್ಲಿ ಆರೋಪ ಎದುರಿಸುತ್ತಿಲ್ಲ ಎಂದು ಅದಾನಿ ಗ್ರೂಪ್ ಸ್ಪಷ್ಟಪಡಿಸಿದೆ. ಇದರ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಅದಾನಿ ಸ್ಟಾಕ್ಗಳು ಮೊನ್ನೆಯಿಂದ ಹಸಿರು ಬಣ್ಣಕ್ಕೆ ತಿರುಗಿವೆ. ಗ್ರೂಪ್ಗೆ ಅಂತಾರಾಷ್ಟ್ರೀಯ ಬೆಂಬಲವೂ ವ್ಯಕ್ತವಾಗತೊಡಗಿದೆ. ಹೂಡಿಕೆದಾರರು ಮತ್ತು ಸರ್ಕಾರಗಳು ಅದಾನಿ ಗ್ರೂಪ್ ಮೇಲೆ ವಿಶ್ವಾಸ ತೋರುವುದನ್ನು ಮುಂದುವರಿಸಿವೆ.
ಅಬುಧಾಬಿಯ ಇಂಟರ್ನ್ಯಾಷನಲ್ ಹೋಲ್ಡಿಂಗ್ ಕಂಪನಿಯು ಅದಾನಿ ಗ್ರೂಪ್ ಬಗ್ಗೆ ಸಕಾರಾತ್ಮಕ ನಿಲುವು ತೋರಿದೆ. ಅದಾನಿ ಗ್ರೂಪ್ನ ವಿದೇಶೀ ಹೂಡಿಕೆದಾರರಲ್ಲಿ ಐಎಚ್ಸಿ ಪ್ರಮುಖ ಸಂಸ್ಥೆ. ಸೋಲಾರ್ ಎನರ್ಜಿ ಉತ್ಪಾದನೆ ಸೇರಿದಂತೆ ಅದಾನಿ ಗ್ರೂಪ್ನ ಹಲವು ಯೋಜನೆಗಳಿಗೆ ಐಎಚ್ಸಿಯಿಂದ ಹಣಕಾಸು ಬೆಂಬಲ ಸಿಗುತ್ತಿದೆ.
ಶ್ರೀಲಂಕಾ ಪೋರ್ಟ್ಸ್ ಅಥಾರಿಟಿ ಸಂಸ್ಥೆಯೂ ಅದಾನಿ ಗ್ರೂಪ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ. ಶ್ರೀಲಂಕಾದ ಕೊಲಂಬೋದಲ್ಲಿ ಅದಾನಿ ಗ್ರೂಪ್ನಿಂದ ಬಂದರು ಅಭಿವೃದ್ಧಿ ಯೋಜನೆ ಚಾಲನೆಯಲ್ಲಿದೆ. ಒಂದು ಬಿಲಿಯನ್ ಡಾಲರ್ನ ಈ ಯೋಜನೆಯಲ್ಲಿ ಕೊಲಂಬೋ ಪೋರ್ಟ್ನಲ್ಲಿ ಒಂದು ಟರ್ಮಿನಲ್ ಅನ್ನು ಅದಾನಿ ಗ್ರೂಪ್ ನಿರ್ಮಿಸುತ್ತಿದೆ. ಇನ್ನೆರಡು ತಿಂಗಳಲ್ಲಿ ಈ ಪ್ರಾಜೆಕ್ಟ್ ಕಾರ್ಯಾಚರಣೆಗೆ ಬರಲಿದೆ. ಇದನ್ನು ರದ್ದು ಮಾಡುವ ಯಾವ ಇರಾದೆಯೂ ಈಗ ಇಲ್ಲ ಎಂದು ಶ್ರೀಲಂಕಾ ಪೋರ್ಟ್ಸ್ ಅಥಾರಿಟಿ ಛೇರ್ಮನ್ ಅಡ್ಮಿರಲ್ ಸಿರಿಮೇವಾನ್ ರಣಸಿಂಘೆ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: 2047ರೊಳಗೆ 1 ಟ್ರಿಲಿಯನ್ ಡಾಲರ್ ಗಾತ್ರದ್ದಾಗಲಿದೆ ಭಾರತದ ಔಷಧ ಉದ್ಯಮ
ಇನ್ನು, ತಾಂಜಾನಿಯಾ ಸರ್ಕಾರ ಕೂಡ ಅದಾನಿ ಗ್ರೂಪ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ. ಅದಾನಿ ಪೋರ್ಟ್ಸ್ ಜೊತೆ ಮಾಡಿಕೊಂಡಿರುವ ಎಲ್ಲಾ ಒಪ್ಪಂದಗಳಿಗೆ ಬದ್ಧವಾಗಿರುವುದಾಗಿ ಅಲ್ಲಿನ ಸರ್ಕಾರ ಹೇಳಿದೆ. ತಾಂಜೇನಿಯಾದ ದಾರ್ ಎಸ್ ಸಲಾಮ್ ಪೋರ್ಟ್ನ ಎರಡನೇ ಕಂಟೇನರ್ ಟರ್ಮಿನಲ್ ಅನ್ನು ಅಪರೇಟ್ ಮಾಡುವ 30 ವರ್ಷದ ಒಪ್ಪಂದವನ್ನು ಅದಾನಿ ಪೋರ್ಟ್ಸ್ ಪಡೆದಿದೆ. ಹಾಗೆಯೇ, ತಾಂಜಾನಿಯಾದ ಸರ್ಕಾರಿ ಸ್ವಾಮ್ಯದ ಇಂಟರ್ನ್ಯಾಷನಲ್ ಕಂಟೇನರ್ ಸರ್ವಿಸಸ್ ಸಂಸ್ಥೆಯಲ್ಲಿ ಶೇ. 95ರಷ್ಟು ಪಾಲನ್ನು ಅದಾನಿ ಪೋರ್ಟ್ಸ್ ಖರೀದಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ