Adani group: ಎಫ್ಪಿಐ ಫಂಡ್ ಹೂಡಿಕೆದಾರರ ಖಾತೆಗೆ ನಿರ್ಬಂಧ ವಿಧಿಸಿರುವ ವರದಿ ನಿರಾಕರಿಸಿದ ಅದಾನಿ ಸಮೂಹ
ಅದಾನಿ ಸಮೂಹದ ಕಂಪೆನಿಗಳ ಷೇರು ಜೂನ್ 14, 2021ರ ಸೋಮವಾರ ಭಾರೀ ಕುಸಿತ ಕಂಡಿತು. ಅದಾನಿ ಸಮೂಹದ ಪ್ರಮುಖ ವಿದೇಶೀ ಹೂಡಿಕೆದಾರ ಫಂಡ್ಗಳ ಡಿಮ್ಯಾಟ್ ಖಾತೆಯನ್ನು NSDL ಸ್ಥಗಿತಗೊಳಿಸಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದ್ದು, ಕಂಪೆನಿಯು ಸುದ್ದಿಯನ್ನು ನಿರಾಕರಿಸಿದೆ.

ಅದಾನಿ ಸಮೂಹದ ಬಹುತೇಕ ಷೇರುಗಳ ಜೂನ್ 14ನೇ ತಾರೀಕಿನ ಸೋಮವಾರ ನಷ್ಟವನ್ನು ಅನುಭವಿಸಿದವು. ಮಾಧ್ಯಮಗಳ ವರದಿಯಂತೆ, ಅದಾನಿ ಕಂಪೆನಿಗಳ ಷೇರುಗಳನ್ನು ಹೊಂದಿರುವ ಮೂರು ಫಾರಿನ್ ಪೋರ್ಟ್ಫೋಲಿಯೋ ಇನ್ವೆಸ್ಟರ್ಸ್ (ಎಫ್ಪಿಐ) ಖಾತೆಗಳನ್ನು ನ್ಯಾಷನಲ್ ಸೆಕ್ಯೂರಿಟೀಸ್ ಡೆಪಾಡಿಟರಿ ಲಿಮಿಟೆಡ್ (ಎನ್ಎಸ್ಡಿಎಲ್)ನಿಂದ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿತ್ತು. ಈ ವರದಿಗೆ ಅದಾನಿ ಎಂಟರ್ಪ್ರೈಸಸ್ ಸ್ಪಷ್ಟನೆ ನೀಡಿದ್ದು, “ಮಾಧ್ಯಮಗಳ ವರದಿಗಳು ಭಾರೀ ತಪ್ಪಿನಿಂದ ಕೂಡಿವೆ. ಉದ್ದೇಶಪೂರ್ವಕವಾಗಿ ಹೂಡಿಕೆದಾರ ಸಮುದಾಯವನ್ನು ದಾರಿ ತಪ್ಪಿಸುವ ಸಲುವಾಗಿ ಹೀಗೆ ಮಾಡಲಾಗಿದೆ,” ಎನ್ನಲಾಗಿದೆ. ಅಂದ ಹಾಗೆ ಈ ಮೂರು ವಿದೇಶಿ ಫಂಡ್ಗಳು ಸೇರಿ ಅದಾನಿ ಸಮೂಹದ ನಾಲ್ಕು ಕಂಪೆನಿಗಳಲ್ಲಿ 43,500 ಕೋಟಿ ಮೌಲ್ಯದ ಷೇರುಗಳನ್ನು ಹೊಂದಿವೆ.
ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ನ ಬಿಎಸ್ಇ ಫೈಲಿಂಗ್ನಲ್ಲಿ ತಿಳಿಸಿರುವಂತೆ, ಈ ಫಂಡ್ಗಳ ಡಿಮ್ಯಾಟ್ ಅಕೌಂಟ್ಗಳ ಸ್ಥಿತಿಗೆ ಸಂಬಂಧಿಸಿದಂತೆ ಮತ್ತು ಜೂನ್ 14ನೇ ತಾರೀಕು 2021ನೇ ಇಸವಿಯಲ್ಲಿ ನೀಡಿರುವ ಲಿಖಿತ ಸ್ಪಷ್ಟನೆಯಂತೆ, ಯಾವ ಡಿಮ್ಯಾಟ್ ಖಾತೆಯಲ್ಲಿ ಕಂಪೆನಿಯ ಷೇರುಗಳಿವೆಯೋ ಅದನ್ನು ಸ್ಥಗಿತಗೊಳಿಸಿಲ್ಲ. ಇನ್ನು ಮಾಧ್ಯಮಗಳ ವರದಿಗೆ ಸಂಬಧಿಸಿದಂತೆ ಕಂಪೆನಿ ಮುಂದುವರಿದು ತಿಳಿಸಿದ್ದು, ಇದರಿಂದಾಗಿ ಹೂಡಿಕೆದಾರರಿಗೆ ಸರಿಪಡಿಸಲಾಗದಂಥ ಆರ್ಥಿಕ ನಷ್ಟ ದೊಡ್ಡ ಮಟ್ಟದಲ್ಲಿ ಸಂಭವಿಸುತ್ತದೆ ಹಾಗೂ ಸಮೂಹದ ವರ್ಚಸ್ಸಿಗೆ ಪೆಟ್ಟು ಬೀಳುತ್ತದೆ ಎನ್ನಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಅಲ್ಪ ಪ್ರಮಾಣದ ಹೂಡಿಕೆದಾರರ ಹಿತವನ್ನು ಕಾಪಾಡಲು ಈ ಪತ್ರವನ್ನು ನೀಡುತ್ತಿದ್ದೇವೆ ಎಂದು ಕಂಪೆನಿಯಿಂದ ಹೇಳಲಾಗಿದೆ.
ಅದಾನಿ ಸಮೂಹದ ಕಂಪೆನಿಗಳ ಷೇರುಗಳು ಸೋಮವಾರ ಶೇ 5ರಿಂದ ಶೇ 25ರಷ್ಟು ಕುಸಿತ ಕಂಡಿವೆ, ಅದಾನಿ ಎಂಟರ್ಪ್ರೈಸಸ್ ಷೇರಿನ ಬೆಲೆ ದಶಕದಲ್ಲೇ ಗರಿಷ್ಠ ಮಟ್ಟದ ಕುಸಿತವಾದ ಶೇ 25ರಷ್ಟು ಇಳಿಕೆಗೊಂಡಿದೆ. ಸ್ವಲ್ಪ ಮಟ್ಟಿಗೆ ನಷ್ಟದಿಂದ ಚೇತರಿಸಿಕೊಳ್ಳುವ ಮುನ್ನ ನಿಫ್ಟಿ- 50 ಸೂಚ್ಯಂಕದಲ್ಲಿ ಅದಾನಿ ಪೋರ್ಟ್ಸ್ ಅಂಡ್ ಎಕನಾಮಿಕ್ ಝೋನ್ ಶೇ 19ರಷ್ಟು ಕುಸಿದಿತ್ತು. ಎನ್ಎಸ್ಡಿಎಲ್ನಿಂದ ಅಲ್ಬುಲ ಇನ್ವೆಸ್ಟ್ಮೆಂಟ್ ಫಂಡ್, ಕ್ರೆಸ್ಟಾ ಫಂಡ್, ಎಪಿಎಂಎಸ್ ಇನ್ವೆಸ್ಟ್ಮೆಂಟ್ ಫಂಡ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಆ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಸಹ ವೆಬ್ಸೈಟ್ನಲ್ಲಿ ತಿಳಿಸಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ. ಮಾರ್ಚ್ 31, 2020ಕ್ಕೆ ಅನ್ವಯ ಆಗುವಂತೆ ಈ ಮೂರು ಫಂಡ್ಗಳು ಅದಾಗಿ ಸಮೂಹದ ಐದು ಕಂಪೆನಿಗಳಲ್ಲಿ ಶೇ 2.1ರಿಂದ ಶೇ 8.91ರಷ್ಟು ಷೇರಿನ ಪಾಲು ಹೊಂದಿವೆ. ಈ ಅಂಶವನ್ನು ಹೂಡಿಕೆದಾರರ ವಾರ್ಷಿಕ ಸಭೆಯಲ್ಲಿ ತಿಳಿಸಲಾಗಿತ್ತು.
ಅದಾನಿ ಪವರ್, ಅದಾನಿ ಎಂಟರ್ಪ್ರೈಸಸ್, ಅದಾನಿ ಗ್ರೀನ್, ಅದಾನಿ ಟ್ರಾನ್ಸ್ಮಿಷನ್ ಮತ್ತು ಅದಾನಿ ಟೋಟಲ್ ಗ್ಯಾಸ್ನಲ್ಲಿ ಅವರು ಹೊಂದಿರುವ ಷೇರಿನ ಮೌಲ್ಯವು ಮಾರ್ಚ್ 2020ರ ಕೊನೆಯಿಂದ ಈಚೆಗೆ 56,932 ಕೋಟಿ ರೂಪಾಯಿ ಆಗಿದೆ ಎಂದು ಲೆಕ್ಕಾಚಾರ ತೆರೆದಿಟ್ಟಿದೆ ರಾಯಿಟರ್ಸ್. ಅದಾನಿ ಸಮೂಹ ಕಂಪೆನಿಗಳ ಷೇರುಗಳ ಬೆಲೆಯಲ್ಲಿ ಏರಿಕೆ ಆಗುತ್ತಿದ್ದಂತೆ ಅದರ ಅಧ್ಯಕ್ಷ ಗೌತಮ್ ಅದಾನಿ ಆಸ್ತಿ ಕೂಡ ಹೆಚ್ಚಳವಾಗಿ, ಏಷ್ಯಾದ ಎರಡನೇ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಕಳೆದ ವರ್ಷದಿಂದ ಶುಕ್ರವಾರದ ತನಕ ಅದಾನಿ ಎಂಟರ್ಪ್ರೈಸಸ್ ಷೇರುಗಳ ಬೆಲೆಯಲ್ಲಿ ಹತ್ತು ಪಟ್ಟು ಜಾಸ್ತಿ ಆಗಿದೆ. ಅದಾನಿ ಟ್ರಾನ್ಸ್ಮಿಷನ್ ಷೇರುಗಳು ಎಂಟು ಪಟ್ಟಿಗೂ ಹೆಚ್ಚಾಗಿದೆ ಮತ್ತು ಅದಾನಿ ಟೋಟಲ್ ಗ್ಯಾಸ್ ಷೇರಿನ ಬೆಲೆ ಶೇ 1,114ರಷ್ಟು ಹೆಚ್ಚಾಗಿದೆ. ಅದಾನಿ ಪೋರ್ಟ್ಸ್ ಶೇ 148, ಅದಾನಿ ಗ್ರೀನ್ ಶೇ 267 ಮತ್ತು ಅದಾನಿ ಪವರ್ ಕಳೆದೊಂದು ವರ್ಷದಿಂದ ನಾಲ್ಕು ಪಟ್ಟು ಹೆಚ್ಚಾಗಿದೆ. ಈ ಬೆಳವಣಿಗೆ ಬಗ್ಗೆ ಸೆಬಿ, ಎನ್ಎಸ್ಡಿಎಲ್ ಅಥವಾ ಅದಾನಿ ವಕ್ತಾರರು ಪ್ರತಿಕ್ರಿಯೆ ನೀಡಿಲ್ಲ.
(ಸುದ್ದಿ ಮೂಲ: ರಾಯಿಟರ್ಸ್ ವರದಿಯನ್ನು ಆಧರಿಸಿ ಮಿಂಟ್ ಪ್ರಕಟಿಸಿರುವ ಲೇಖನ)
ಇದನ್ನೂ ಓದಿ: ಷೇರುಪೇಟೆಯಲ್ಲಿ ಪತರಗುಟ್ಟಿದ ಅದಾನಿ ಕಂಪನಿಯ ಷೇರು ಬೆಲೆ; ಮೂರು ಗಂಟೆಯಲ್ಲಿ 92 ಸಾವಿರ ಕೋಟಿ ರೂ ಗಂಟು ನಷ್ಟ
ಇದನ್ನೂ ಓದಿ: Gautam Adani: 2021ರಲ್ಲಿ 3 ಲಕ್ಷ ಕೋಟಿ ರೂ.ಗೂ ಹೆಚ್ಚಾಯಿತು ಅದಾನಿ ಆಸ್ತಿ; ಇದು ಅಪಾಯದ ಅದೃಷ್ಟ ಎನ್ನುತ್ತಾರೆ ವಿಶ್ಲೇಷಕರು
(Adani group said, investors account not frozen by NSDL. Media reports blatantly erroneous)
Published On - 5:14 pm, Mon, 14 June 21




