18 ವರ್ಷ ಅಡೋಬ್ ಸಿಇಒ ಆಗಿದ್ದ ಭಾರತ ಮೂಲದ ಶಾಂತನು ನಾರಾಯಣ್ ರಾಜೀನಾಮೆ

Adobe CEO Shantanu Narayen resignation, after leading the company for 18 yrs: ಫೋಟೋಶಾಪ್, ಇಲ್ಲಸ್ಟ್ರೇಟರ್ ಇತ್ಯಾದಿ ಅನೇಕ ಡಿಸೈನ್ ಸಾಫ್ಟ್​ವೇರ್​ಗಳನ್ನು ರಚಿಸಿರುವ ಅಡೋಬ್ ಕಂಪನಿಯ ಸಿಇಒ ಶಾಂತನು ನಾರಾಯಣ್ ರಾಜೀನಾಮೆ ನೀಡಿದ್ದಾರೆ. ಎಐ ಟೆಕ್ನಾಲಜಿಯಲ್ಲಿ ಕಂಪನಿಯನ್ನು ಮುನ್ನಡೆಸಲು ಹೊಸ ನಾಯಕತ್ವಕ್ಕೆ ಅವರು ದಾರಿ ಮಾಡಿಕೊಡುತ್ತಿದ್ದಾರೆ. ಹೈದರಾಬಾದ್ ಮೂಲದ ಶಾಂತನು 1988ರಲ್ಲಿ ಅಡೋಬ್ ಸೇರಿದ್ದರು. 2007ರಲ್ಲಿ ಸಿಇಒ ಆಗಿದ್ದರು.

18 ವರ್ಷ ಅಡೋಬ್ ಸಿಇಒ ಆಗಿದ್ದ ಭಾರತ ಮೂಲದ ಶಾಂತನು ನಾರಾಯಣ್ ರಾಜೀನಾಮೆ
ಶಾಂತನು ನಾರಾಯಣ್

Updated on: Mar 13, 2026 | 1:23 PM

ಕ್ಯಾಲಿಫೋರ್ನಿಯಾ, ಮಾರ್ಚ್ 13: ವಿಶ್ವದ ಅತಿದೊಡ್ಡ ಡಿಸೈನ್ ಸಾಫ್ಟ್​ವೇರ್ ಕಂಪನಿಯಾದ ಅಡೋಬ್ (Adobe) ಅನ್ನು ಎರಡು ದಶಕಗಳ ಕಾಲ ಮುನ್ನಡೆಸಿರುವ ಭಾರತ ಮೂಲದ ಶಾಂತನು ನಾರಾಯಣ್ (Shantanu Narayen) ಅವರು ರಾಜೀನಾಮೆ ನೀಡಿದ್ದಾರೆ. ಮಾರ್ಚ್ 12, ನಿನ್ನೆ ಅವರು ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದಾರೆ. ಎಐನಲ್ಲಿ ಕ್ಷಿಪ್ರ ಬದಲಾವಣೆಗಳಾಗುತ್ತಿರುವ ಹೊತ್ತಲ್ಲಿ ಹೊಸ ನಾಯಕತ್ವಕ್ಕೆ ಅವರು ಎಡೆ ಮಾಡಿಕೊಡುತ್ತಿದ್ಧಾರೆ. ಎರಡು ದಶಕಗಳ ಕಾಲ ಕಂಪನಿ ಮುನ್ನಡೆಸಿ ಈಗ ನಾಯಕತ್ವವನ್ನು ಮುಂದಿನ ತಲೆಮಾರಿಗೆ ಬಿಟ್ಟುಕೊಡುತ್ತಿದ್ದಾರೆ.

ಹೈದರಾಬಾದ್ ಮೂಲದ ಶಾಂತನು ನಾರಾಯಣ್ ಅವರು ಮುಂದಿನ ಸಿಇಒ ನೇಮಕವಾಗುವವರೆಗೂ ಆ ಸ್ಥಾನದಲ್ಲೇ ಮುಂದುವರಿಯಲಿದ್ದಾರೆ. ಹೊಸ ಸಿಇಒ ನೇಮಕದ ಬಳಿಕ ಅವರು ಅಡೋಬ್ ಆಡಳಿತ ಮಂಡಳಿಯ ಛೇರ್ಮನ್ ಸ್ಥಾನ ಅಲಂಕರಿಸುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ: ಮನೆಯಲ್ಲೇ ಅಡುಗೆ ಮಾಡಿಕೊಳ್ಳಿ, ತಿನ್ನಿ, ಕೆಲಸ ಮಾಡಿ: ಎಲ್​ಪಿಜಿ ಸಮಸ್ಯೆಗೆ ಎಚ್​ಸಿಎಲ್​ನಿಂದ ವರ್ಕ್ ಫ್ರಂ ಹೋಮ್ ಪರಿಹಾರ

ಇದೇ ವೇಳೆ, ಅಡೋಬ್​ನ ಸ್ವತಂತ್ರ ನಿರ್ದೇಶಕರಾದ ಫ್ರಾಂಕ್ ಕ್ಯಾಲ್ಡೆರೊನಿ ನೇತೃತ್ವದ ವಿಶೇಷ ಸಮಿತಿಯೊಂದು ರಚನೆಯಾಗಿದ್ದು, ಮುಂದಿನ ಸಿಇಒ ಆಯ್ಕೆ ಮಾಡಲಿದೆ. ಅಡೋಬ್ ಕಂಪನಿಯ ಒಳಗಿರುವ ವ್ಯಕ್ತಿಗಳು ಮತ್ತು ಹೊರಗಿನ ವ್ಯಕ್ತಿಗಳು ಎಲ್ಲರಿಗೂ ಅಡೋಬ್ ಸಿಇಒ ಆಗುವ ಅವಕಾಶ ಇದೆ. ಸೂಕ್ತ ಅಭ್ಯರ್ಥಿಗಳನ್ನು ಶೋಧಿಸಿ, ಆಯ್ಕೆ ಮಾಡುವ ಜವಾಬ್ದಾರಿ ಈ ಸಮಿತಿಯದ್ದಾಗಿರುತ್ತದೆ.

ಶಾಂತನು ನಾರಾಯಣ್ ಅವರು ಮುಂದಿನ ಸಿಇಒ ನೇಮಕವಾಗುವವರೆಗೂ ಸಿಇಒ ಆಗಿರುತ್ತಾರೆ. ನಂತರ, ಮಂಡಳಿ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಹೊಸ ಸಿಇಒ ಅವರು ಆ ಸ್ಥಾನಕ್ಕೆ ಹೊಂದಿಕೊಳ್ಳಲು ನೆರವು ನೀಡುವುದಾಗಿ ಶಾಂತನು ತಿಳಿಸಿದ್ದಾರೆ.

ಇದನ್ನೂ ಓದಿ: ಯುದ್ಧ ನಿಲ್ಲಿಸಲು ಇರಾನ್​ನ 3 ಷರತ್ತುಗಳು; ಭಾರತದ ಆರ್ಥಿಕತೆ ಮೇಲೇನು ಪರಿಣಾಮ? ಇಲ್ಲಿದೆ ಸಾಧ್ಯಾಸಾಧ್ಯತೆ

ಅಡೋಬ್ ಸಂಸ್ಥೆಯನ್ನು ಸ್ಥಾಪಿಸಿದವರು ಜಾನ್ ವಾರ್ನಾಕ್ ಮತ್ತು ಚುಕ್ ಗೆಶ್ಕೆ. 1988ರಲ್ಲಿ ಅಡೋಬ್ ಅನ್ನು ಸೇರಿದ ಶಾಂತನು ನಾರಾಯಣ್, 18 ವರ್ಷದ ಹಿಂದೆ 2007ರಲ್ಲಿ ಸಿಇಒ ಆಗಿ ಬಡ್ತಿ ಪಡೆದಿದ್ದರು. ಅವರ ನಾಯಕತ್ವದಲ್ಲಿ ಅಡೋಬ್​ನ ವಿವಿಧ ಉತ್ಪನ್ನಗಳು ಸಾಕಷ್ಟು ಬದಲಾವಣೆಗಳನ್ನು ಕಂಡಿವೆ. ಅಡೋಬ್ ಸೇರುವ ಮುನ್ನ ಶಾಂತನು ಅವರು ಆ್ಯಪಲ್ ಮೊದಲಾದ ಕಂಪನಿಗಳಲ್ಲಿ ಪ್ರಾಡಕ್ಟ್ ಡೆವಲಪ್ಮೆಂಟ್ ಕಾರ್ಯಗಳಲ್ಲಿ ಕೆಲಸ ಮಾಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us