
ನವದೆಹಲಿ, ಮೇ 18: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ (CNG) ಬೆಲೆಗಳ ಸತತ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ಸಾಮಾನ್ಯ ಜನರಿಗೆ ಈಗ ಮತ್ತೊಂದು ಆರ್ಥಿಕ ಪೆಟ್ಟು ಬೀಳುವ ಆತಂಕ ಎದುರಾಗಿದೆ. ಇಂಧನ ದರಗಳ ಏರಿಕೆಯ ಬೆನ್ನಲ್ಲೇ, ಮುಂದಿನ ದಿನಗಳಲ್ಲಿ ಸಾರ್ವಜನಿಕರ ಮನೆಬಾಗಿಲಿಗೆ ಬರುವ ವಿದ್ಯುತ್ ಬಿಲ್ ಕೂಡ ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ. ವಿದ್ಯುತ್ನ ಮಾಸಿಕ ನಿಗದಿತ ಶುಲ್ಕವನ್ನು ಏರಿಸಲು ಕೇಂದ್ರೀಯ ವಿದ್ಯುತ್ ಪ್ರಾಧಿಕಾರ (CEA- Central Electricity Authority) ಯೋಜಿಸಿದೆ. ಈ ಪ್ರಸ್ತಾಪ ಜಾರಿಯಾದರೆ, ವಿದ್ಯುತ್ ಬಳಕೆದಾರರಿಗೆ ಹೊರೆ ಹೆಚ್ಚಲಿದೆ.
ಈ ಸುದ್ದಿಯ ಮುಖ್ಯಾಂಶಗಳು:
ಇದನ್ನೂ ಓದಿ: ಡಾಲರ್ ಎದುರು 96 ದಾಟಿ ಸಾರ್ವಕಾಲಿಕ ಕೆಳಮಟ್ಟಕ್ಕೆ ಕುಸಿದ ರೂಪಾಯಿ; ಭಾರತೀಯ ಕರೆನ್ಸಿಯ ಐತಿಹಾಸಿಕ ಕಳಪೆ ಸಾಧನೆ
ವರದಿಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಗ್ರಾಹಕರು ತಮ್ಮ ಮನೆಗಳ ಮೇಲೆ ‘ರೂಫ್‌ಟಾಪ್ ಸೋಲಾರ್’ (ಸೌರಶಕ್ತಿ) ಅಳವಡಿಸಿಕೊಳ್ಳುತ್ತಿದ್ದಾರೆ. ದೊಡ್ಡ ಕೈಗಾರಿಕೆಗಳು ಕೂಡ ಸ್ವಂತ ವಿದ್ಯುತ್ ಉತ್ಪಾದನೆಗೆ (Captive Power) ಆದ್ಯತೆ ನೀಡುತ್ತಿವೆ. ಇದರಿಂದಾಗಿ ವಿದ್ಯುತ್ ಸರಬರಾಜು ಕಂಪನಿಗಳ (Discoms) ಆದಾಯಕ್ಕೆ ಭಾರಿ ನಷ್ಟ ಉಂಟುಮಾಡುತ್ತಿದ್ದು, ಮೂಲಸೌಕರ್ಯ ನಿರ್ವಹಣೆ ಹಾಗೂ ಉದ್ಯೋಗಿಗಳ ವೇತನದ ವೆಚ್ಚವನ್ನು ಸರಿದೂಗಿಸಲು ಮಾಸಿಕ ನಿಗದಿತ ಶುಲ್ಕವನ್ನು ಹೆಚ್ಚಿಸಲು ‘ಫೋರಂ ಆಫ್ ರೆಗ್ಯುಲೇಟರ್ಸ್’ ಮುಂದೆ ಪ್ರಸ್ತಾಪ ಇಡಲಾಗಿದೆ.
ಪ್ರಸ್ತುತ ವಿದ್ಯುತ್ ಕಂಪನಿಗಳು ತಮ್ಮ ಬಹುಪಾಲು ವೆಚ್ಚವನ್ನು ಗ್ರಾಹಕರು ಬಳಸುವ ಪ್ರತಿ ಯೂನಿಟ್ ಆಧಾರದ ಮೇಲೆ ವಸೂಲಿ ಮಾಡುತ್ತವೆ. ಗ್ರಾಹಕರ ವಿದ್ಯುತ್ ಬಳಕೆ ಕಡಿಮೆಗೊಂಡರೆ ಡಿಸ್ಕಾಂಗಳ ಆದಾಯಕ್ಕೆ ಕತ್ತರಿ ಬೀಳುತ್ತದೆ. ವಿದ್ಯುತ್ ಪ್ರಸರಣದ ಮೂಲಸೌಕರ್ಯ, ನೆಟ್ವರ್ಕ್ ಮೈಂಟೆನೆನ್ಸ್, ವಿದ್ಯುತ್ ಉತ್ಪಾದಕರಿಗೆ ಪಾವತಿ, ಸಿಬ್ಬಂದಿ ವೇತನದ ವೆಚ್ಚವು ಒಟ್ಟಾರೆ ವೆಚ್ಚದ ಶೇ. 38ರಿಂದ 56ರಷ್ಟಿದೆ. ಈಗ ಇರುವ ನಿಗದಿತ ಶುಲ್ಕದಿಂದ ಸಿಗುವ ಆದಾಯವು ಒಟ್ಟಾರೆ ಆದಾಯದ ಶೇ. 9ರಿಂದ 20ರಷ್ಟಿದೆ. ಹೊಸ ಪ್ರಸ್ತಾಪದ ಪ್ರಕಾರ, ದೇಶೀಯ ಮತ್ತು ಕೃಷಿ ಗ್ರಾಹಕರಿಗೆ ನಿಗದಿತ ಶುಲ್ಕವನ್ನು ಶೇಕಡಾ 25 ರಷ್ಟು ಹೆಚ್ಚಿಸಲು ಯೋಜಿಸಲಾಗಿದೆ. ಇನ್ನು ಕೈಗಾರಿಕಾ ಮತ್ತು ವಾಣಿಜ್ಯ ಬಳಕೆದಾರರಿಗೆ 2030 ರ ವೇಳೆಗೆ ಈ ನಿಗದಿತ ಶುಲ್ಕವನ್ನು 100 ರಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ.
ಇದನ್ನೂ ಓದಿ: ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆ ಏರಿಕೆ; ಇಲ್ಲಿದೆ ದರಪಟ್ಟಿ
ಅಂದರೆ, ಭವಿಷ್ಯದಲ್ಲಿ ನೀವು ಕರೆಂಟ್ ಬಳಸಲಿ ಅಥವಾ ಬಿಡಲಿ, ಕನಿಷ್ಠ ನಿಗದಿತ ಶುಲ್ಕದ ರೂಪದಲ್ಲೇ ದೊಡ್ಡ ಮೊತ್ತದ ಬಿಲ್ ಪಾವತಿಸುವುದು ಕಡ್ಡಾಯವಾಗಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಈ ‘ಕರೆಂಟ್ ಶಾಕ್’ ಗಾಯದ ಮೇಲೆ ಬರೆ ಎಳೆದಂತಾಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ