ಜಗತ್ತಿನ ಮುಂದೆ ಬೆತ್ತಲಾದ ಕಾಂಗ್ರೆಸ್; ಎಐ ಸಮಿಟ್​ನಲ್ಲಿ ಕಾಂಗ್ರೆಸ್ಸಿಗರ ಅರೆಬೆತ್ತಲೆ ಪ್ರತಿಭಟನೆಗೆ ಹಲವರ ಅಸಮಾಧಾನ

AI Impact Summit, congress shirtless protest not gone well with many visitors: ದೆಹಲಿಯ ಭಾರತ್ ಮಂಟಪಂನಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ಸಿನ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬಟ್ಟೆ ಕಳಚಿ ಅರೆಬೆತ್ತಲೆಯಾಗಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಈ ಘಟನೆಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಗತ್ತಿನ ಮುಂದೆ ಬೆತ್ತಲಾದ ಕಾಂಗ್ರೆಸ್; ಎಐ ಸಮಿಟ್​ನಲ್ಲಿ ಕಾಂಗ್ರೆಸ್ಸಿಗರ ಅರೆಬೆತ್ತಲೆ ಪ್ರತಿಭಟನೆಗೆ ಹಲವರ ಅಸಮಾಧಾನ
ಕಾಂಗ್ರೆಸ್ಸಿಗರ ಪ್ರತಿಭಟನೆ

Updated on: Feb 20, 2026 | 4:36 PM

ನವದೆಹಲಿ, ಫೆಬ್ರುವರಿ 20: ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಸಮಿಟ್ (AI Impact Summit) ಇಡೀ ಜಗತ್ತಿನ ಗಮನ ಸೆಳೆದಿದೆ. ಶೃಂಗಸಭೆಯ ಕೊನೆಯ ದಿನವಾದ ಶುಕ್ರವಾರ ಭಾರತೀಯ ಯುವ ಕಾಂಗ್ರೆಸ್ ಪಕ್ಷದ 10 ಕಾರ್ಯಕರ್ತರು ಅಂಗಿ ತೆಗೆದು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದೂ ಕೂಡ ಸಾಕಷ್ಟು ಪ್ರಚಾರ ಪಡೆದಿದೆ. ಸಮಿಟ್ ನಡೆಯುತ್ತಿರುವ ಸ್ಥಳದಲ್ಲೇ ಹತ್ತು ಮಂದಿ ದಿಢೀರನೇ ಶರ್ಟ್ ಬಿಚ್ಚಿ, ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಎಐ ಸಮಿಟ್​ನಲ್ಲಿ ಪ್ರಧಾನಿಗಳು ದೇಶವನ್ನು ಮಾರಿದ್ದಾರೆ ಎಂದು ಪ್ರತಿಭಟಿಸಿದ್ದಾರೆ.

ಆದರೆ, ಯುವ ಕಾಂಗ್ರೆಸ್ಸಿಗರ ಈ ವಿನೂತನ ಪ್ರತಿಭಟನೆ ಎಲ್ಲರಿಗೂ ಪಥ್ಯವಾಗಿಲ್ಲ. ದೇಶ ವಿದೇಶಗಳಿಂದ ಸಮಿಟ್​ನಲ್ಲಿ ಪಾಲ್ಗೊಳ್ಳಲು ಬಂದಿರುವ ಅತಿಥಿಗಳ ಮುಂದೆ ನಡೆದ ಈ ಪ್ರತಿಭಟನೆ ಹಲವರಿಗೆ ಅಸಮಾಧಾನ ತಂದಿದೆ. ದೇಶವನ್ನು ಬೆತ್ತಲುಗೊಳಿಸಲು ಕಾಂಗ್ರೆಸ್ ಯತ್ನಿಸಿ, ತಾನೇ ಬೆತ್ತಲಾಗಿದೆ ಎಂದು ಕೆಲವರು ಟೀಕಿಸಿದ್ದಾರೆ.

ಇದನ್ನೂ ಓದಿ: ದೇಶವೇ ತಲೆತಗ್ಗಿಸುವ ಕೆಲಸ; ಎಐ ಶೃಂಗಸಭೆಯಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಆಕ್ರೋಶ

‘ಪ್ರತಿಭಟನೆ ನಡೆಸಲು ಇದು ಸರಿಯಾದ ಸ್ಥಳ ಎಂಬುದು ಒಬ್ಬ ಸಂದರ್ಶಕನಾಗಿ ನನ್ನ ಅನಿಸಿಕೆ. ಇದರಿಂದ ದೇಶಕ್ಕೆ ಕೆಟ್ಟ ಪ್ರಚಾರ ಸಿಗುತ್ತದೆ. ಅಂತಾರಾಷ್ಟ್ರೀಯ ಕಾರ್ಯಕ್ರಮವೊಂದು ನಡೆಯುತ್ತಿರುವ, ಮತ್ತು ಎಐ ಬಗ್ಗೆ ಮಾತನಾಡುತ್ತಿರುವ ಸ್ಥಳದಲ್ಲಿ ಪ್ರತಿಭಟನೆ ನಡೆಯುವುದು ಸರಿಯಲ್ಲ. ಪ್ರಧಾನಿಗಳ ವಿರುದ್ಧ ಘೋಷಣೆಗಳನ್ನು ಕೂಗುವಾಗ ನಾನು ಬೂತ್​ನಲ್ಲೇ ನಿಂತಿದ್ದೆ. ಜಗಳ ಹುಟ್ಟುಹಾಕುವುದೇ ಈ ಪ್ರತಿಭಟನೆಯ ಉದ್ದೇಶ ಇತ್ತು ಎಂದನಿಸುತ್ತದೆ’ ಎಂದು ಸುಮಿತ್ ಪಟನಿ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆಗೆ ಬಂದ ಕೆಲ ಪ್ರತಿಕ್ರಿಯೆಗಳು

ಬಹಳಷ್ಟು ಜನರು ಇದೇ ಅಭಿಪ್ರಾಯವನ್ನು ಪುನರುಚ್ಚರಿಸಿದ್ದಾರೆ. ಜಗತ್ತು ಭಾರತದ ಬೆಳವಣಿಗೆ ಕಾಣಲು ಸೇರಿದರೆ, ಕಾಂಗ್ರೆಸ್ ಪಕ್ಷವು ಕಲಹ ಹುಟ್ಟುಹಾಕಲು ಆಸಕ್ತವಾಗಿದೆ ಎಂದು ಜುಬಿನ್ ಅಶಾರಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಅವರು ವಿಪಕ್ಷದ ಈ ವರ್ತನೆಯನ್ನು ಬಲವಾಗಿ ಖಂಡಿಸಿದ್ದಾರೆ.

ಇದನ್ನೂ ಓದಿ: ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ ಏಪ್ರಿಲ್​ನಿಂದ ಚಾಲನೆ ಸಾಧ್ಯತೆ; ಓಮನ್, ಬ್ರಿಟನ್ ಒಪ್ಪಂದಗಳೂ ಏಪ್ರಿಲ್​ನಲ್ಲೇ?

‘ಕಾಂಗ್ರೆಸ್​ನ ಹತಾಶೆ ಮತ್ತು ಅಹಂಕಾರದ ಪ್ರದರ್ಶನ ಇದು. ಮಿಸ್ಟರ್ ರಾಹುಲ್ ಗಾಂಧಿಯವರೆ, ಸರ್ಕಾರವನ್ನು ಗುರಿ ಮಾಡಲು ಭಾರತವನ್ನು ಹೀಯಾಳಿಸುವುದು ನಿಮ್ಮ ವಿರೋಧದ ಪರಿಕಲ್ಪನೆ ಎಂದಾಯಿತು. ನೀವು ಒಂದೆಡೆ ಇತ್ತೀಚಿನ ಟ್ರೇಡ್ ಡೀಲ್​ಗಳ ಬಗ್ಗೆ ಸುಳ್ಳುಗಳನ್ನು ಹೇಳುತ್ತಾ, ಭಾರತದ ಅಭಿವೃದ್ಧಿಗೆ ಭಂಗ ತರುತ್ತಿದ್ದೀರಿ. ಇನ್ನೊಂದೆಡೆ ನಿಮ್ಮ ಸೈನಿಕರು ಎಐ ಸಮಿಟ್​ನಲ್ಲಿ ಬಟ್ಟೆ ಬಿಚ್ಚಿ, 140 ಕೋಟಿ ಜನರಿಗೆ ಮುಜುಗರ ತಂದಿದ್ದಾರೆ. ಈ ಪ್ರತಿಭಟನೆಯು ನಿಮ್ಮ ಹಾಗೂ ನಿಮ್ಮ ಪಕ್ಷದ ದೃಷ್ಟಿತ್ವದ ಕೊರತೆಯನ್ನು ಎತ್ತಿ ತೋರಿಸುತ್ತದೆ’ ಎಂದು ಪೀಯೂಶ್ ಗೋಯಲ್ ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ