ಆರ್‌ಬಿಐ ಅಂದಾಜಿಗಿಂತಲೂ ಹೆಚ್ಚು ವೇಗದಲ್ಲಿ ಭಾರತದ ಆರ್ಥಿಕತೆ ಬೆಳೆಯಲಿದೆ: ಅರವಿಂದ್ ಪನಗರಿಯಾ
Indian economy to grow by atleast 7pc, says Arvind Panagariya: ಭಾರತದ ಆರ್ಥಿಕತೆಯು ಪ್ರಸಕ್ತ ಸಾಲಿನಲ್ಲಿ ಆರ್ಬಿಐನ ಅಂದಾಜನ್ನೂ ಮೀರಿಸಿ ಬೆಳೆಯಲಿದೆ ಎಂದು ಆರ್ಥಿಕಜ್ಞ ಅರವಿಂದ್ ಪನಗರಿಯಾ ಹೇಳಿದ್ದಾರೆ. ಕಳೆದ ವಾರದ ಎಂಪಿಸಿ ಸಭೆಯಲ್ಲಿ 2026-27ರ ವರ್ಷದಲ್ಲಿ ಜಿಡಿಪಿ ಶೇ. 6.7ರಷ್ಟು ಹೆಚ್ಚಬಹುದು ಎಂದು ಆರ್‌ಬಿಐ ಅಂದಾಜು ಮಾಡಿತ್ತು. ಅರವಿಂದ್ ಪನಗರಿಯಾ ಪ್ರಕಾರ ಆರ್ಥಿಕತೆಯು ಶೇ. 7ರ ದರದಲ್ಲಿ ಹೆಚ್ಚಬಹುದು.

ನವದೆಹಲಿ, ಆಗಸ್ಟ್ 10: ಭಾರತದ ಆರ್ಥಿಕತೆಯ ಬೆಳವಣಿಗೆಯ ವೇಗದ ವಿಚಾರದಲ್ಲಿ ಅರವಿಂದ್ ಪನಗರಿಯಾ (Arvind Panagariya) ಹೆಚ್ಚು ಆಶಾವಾದಿಯಾಗಿದ್ದಾರೆ. ಭಾರತದ ಜಿಡಿಪಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 6.7ರಷ್ಟು ಬೆಳೆಯಬಹುದು ಎಂದು ಆರ್‌ಬಿಐ ತನ್ನ ಇತ್ತೀಚಿನ ಎಂಪಿಸಿ ಸಭೆಯಲ್ಲಿ ಅಂದಾಜು ಮಾಡಿದೆ. ಆದರೆ, ಭಾರತದ ನೀತಿ ಆಯೋಗ್ನ ಮಾಜಿ ಉಪಾಧ್ಯಕ್ಷ ಹಾಗೂ ಈಗಿನ 16ನೇ ಹಣಕಾಸು ಆಯೋಗದ ಅಧ್ಯಕ್ಷರೂ ಆಗಿರುವ ಅರವಿಂದ್ ಪನಗರಿಯಾ ಅವರು ಭಾರತದ ಜಿಡಿಪಿಯ ಬೆಳವಣಿಗೆ ಶೇ. 7ಕ್ಕಿಂತ ಹೆಚ್ಚಿನ ದರದಲ್ಲಿ ಮುಂದುವರಿಯುತ್ತದೆ ಎಂದಿದ್ದಾರೆ. ಆರ್‌ಬಿಐ ಮಾಡಿರುವ ಅಂದಾಜು ತುಸು ಜಾಗರೂಕತೆಯಿಂದ ಕೂಡಿರಬಹುದು. ಆದರೆ, ವಾಸ್ತವಿಕ ಬೆಳವಣಿಗೆಯು ಅದಕ್ಕಿಂತ ಹೆಚ್ಚಿರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ಮನಿಕಂಟ್ರೋಲ್ ಎಕ್ಸ್ಕ್ಲೂಸಿವ್ ವರದಿಯಲ್ಲಿ ತಿಳಿಸಲಾಗಿದೆ.
ಶೇ. 7ಕ್ಕಿಂತ ಹೆಚ್ಚಿನ ಪ್ರಗತಿಯ ಭರವಸೆ
ಭಾರತದ ಆರ್ಥಿಕ ತಳಹದಿ ಬಲವಾಗಿದೆ. ಮೂಲಸೌಕರ್ಯ ವಿಸ್ತರಣೆ, ಜಿಎಸ್‌ಟಿ ವ್ಯವಸ್ಥೆಯ ಸುಧಾರಣೆ ಹಾಗೂ ಆದಾಯ ತೆರಿಗೆ ಹಂತಗಳ ಸರಳೀಕರಣದ ಪರಿಣಾಮವಾಗಿ ಭಾರತದ ಜಿಡಿಪಿ (GDP) ಪ್ರಗತಿಯು ಆರ್‌ಬಿಐ ಅಂದಾಜಿಸಿರುವುದಕ್ಕಿಂತ ಉತ್ತಮವಾಗಿರಲಿದೆ ಎಂದು ಪನಗರಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಣಕಾಸು ಸಂಸ್ಥೆಗಳು ಮತ್ತು ಆರ್‌ಬಿಐ ಸಾಮಾನ್ಯವಾಗಿ ಮುನ್ನೆಚ್ಚರಿಕೆಯಾಗಿ ಕೊಂಚ ಕಡಿಮೆ ಬೆಳವಣಿಗೆಯ ದರವನ್ನು ಪ್ರಕ್ಷೇಪಿಸುತ್ತವೆ (Underestimate). ಆದರೆ ಭಾರತವು ಇತ್ತೀಚಿನ ತ್ರೈಮಾಸಿಕಗಳಲ್ಲಿ ಸಾಧಿಸುತ್ತಿರುವ ವೇಗವನ್ನು ಗಮನಿಸಿದರೆ ಶೇ. 7 ರ ಗಡಿಯನ್ನು ಸುಲಭವಾಗಿ ದಾಟಲಿದೆ ಎಂದಿದ್ದಾರೆ.
ಇದನ್ನೂ ಓದಿ: ಮಗಳ PPF ಹಣ ಹಿಂಪಡೆದ ತಂದೆ: ಬಡ್ಡಿ ಸಮೇತ ಮರಳಿಸಲು ಕೋರ್ಟ್ ಆದೇಶ; ಏನಿವೆ ಪಿಪಿಎಫ್ ನಿಯಮಗಳು?
ಇತ್ತೀಚಿನ ವರ್ಷಗಳಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಆರ್‌ಬಿಐ ಹಾಗೂ ಇತರ ದೇಶ ವಿದೇಶಗಳ ಏಜೆನ್ಸಿಗಳ ಲೆಕ್ಕಾಚಾರಕ್ಕಿಂತಲೂ ಹೆಚ್ಚೇ ದಾಖಲು ಮಾಡಿದೆ. ಹೀಗಾಗಿ, ಪನಗರಿಯಾ ವ್ಯಕ್ತಪಡಿಸಿರುವ ಅಭಿಪ್ರಾಯ ಸಂದರ್ಭೋಚಿತ ಎನಿಸಬಹುದು.
ಸುಧಾರಣೆಗಳ ಬಲ: ಕೇಂದ್ರ ಸರ್ಕಾರ ಮಾತ್ರವಲ್ಲದೆ ರಾಜ್ಯ ಸರ್ಕಾರಗಳೂ ಸಹ ಕೈಗಾರಿಕಾ, ಕಾರ್ಮಿಕ ಮತ್ತು ಮೂಲಸೌಕರ್ಯ ವಲಯಗಳಲ್ಲಿ ತರುತ್ತಿರುವ ಸುಧಾರಣೆಗಳು ಆರ್ಥಿಕತೆಗೆ ದೊಡ್ಡ ಶಕ್ತಿ ನೀಡುತ್ತಿವೆ ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷರು ಹೇಳಿದ್ದಾರೆ.
ಪ್ರಗತಿಗೆ ಎದುರಾಗಬಹುದಾದ ಸವಾಲುಗಳು ಮತ್ತು ಸಲಹೆಗಳು
ಆರ್ಥಿಕತೆಯು ದೀರ್ಘಾವಧಿಯಲ್ಲಿ ಹೆಚ್ಚಿನ ವೇಗದಲ್ಲಿ ಸಾಗಲು ಪನಗರಿಯಾ ಅವರು ಕೆಲ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ:
- ಉದ್ಯೋಗ ಸೃಷ್ಟಿ: ಕೇವಲ ಜಿಡಿಪಿ ಬೆಳೆದರೆ ಸಾಲದು, ಹೆಚ್ಚಿನ ಕೌಶಲ ಮತ್ತು ಉತ್ತಮ ವೇತನ ನೀಡುವ ಉದ್ಯೋಗಗಳನ್ನು ಸೃಷ್ಟಿಸುವುದು ಪ್ರಸ್ತುತ ಭಾರತದ ಮುಂದಿರುವ ಪ್ರಮುಖ ಆಕಾಂಕ್ಷೆಯಾಗಿದೆ.
- ಕಾರ್ಮಿಕ ಕಾಯ್ದೆಗಳ ಅನುಷ್ಠಾನ: ರಾಜ್ಯಗಳು ನಾಲ್ಕು ಪ್ರಮುಖ ಕಾರ್ಮಿಕ ಸಂಹಿತೆಗಳನ್ನು (Labour Codes) ಶೀಘ್ರವೇ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು.
- ಖಾಸಗೀಕರಣ ಮತ್ತು ವ್ಯಾಪಾರ: ತಂತ್ರಜ್ಞಾನೇತರ ಮತ್ತು ನಾನ್-ಸ್ಟ್ರಾಟೆಜಿಕ್ ರಂಗಗಳಲ್ಲಿ ಖಾಸಗೀಕರಣಕ್ಕೆ ಚುರುಕು ಮುಟ್ಟಿಸುವುದು ಹಾಗೂ ಜಾಗತಿಕ ಮಟ್ಟದಲ್ಲಿ (ಅಮೆರಿಕ ಮತ್ತು ಇಯು ಜೊತೆ) ಪ್ರಮುಖ ಮುಕ್ತ ವ್ಯಾಪಾರ ಒಪ್ಪಂದಗಳನ್ನು (FTA) ಜಾರಿಗೆ ತರುವುದು ಅಗತ್ಯವಾಗಿದೆ.
ಇದನ್ನೂ ಓದಿ: ‘ಈ ದಿನ ಬರುತ್ತೆಂದು ಭಾವಿಸಿರಲಿಲ್ಲ’- ಸೌರಶಕ್ತಿ ಕ್ಷೇತ್ರದಲ್ಲಿ ಭಾರತದ ಹವಾ ಕಂಡು ಬೆಚ್ಚಿಬಿದ್ದ ಚೀನೀಯರು
ಒಟ್ಟಾರೆಯಾಗಿ, ಜಾಗತಿಕ ಮಟ್ಟದ ಸವಾಲುಗಳ ನಡುವೆಯೂ ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಕಾಯ್ದುಕೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




