ನವದೆಹಲಿ: ವಿಶ್ವದ ಪ್ರಮುಖ ಕಾರ್ಖಾನೆಯಾಗಲು ಹೊರಟಿರುವ ಭಾರತ ವಿಶ್ವಕ್ಕೆ ದೊಡ್ಡ ಮಾರುಕಟ್ಟೆಯೂ ಆಗಿದೆ. ಚೀನಾದಂತೆ ಭಾರತದ ಮಾರುಕಟ್ಟೆ ಅರ್ಧ ಮುಚ್ಚಿಲ್ಲ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಬಂಡವಾಳ ಹೂಡಲು ಬಹುರಾಷ್ಟ್ರೀಯ ಕಂಪನಿಗಳು ಮುಗಿಬೀಳುತ್ತವೆ. ವಿಶ್ವ ಇಕಾಮರ್ಸ್ ದಿಗ್ಗಜ ಅಮೇಜಾನ್ (Amazon) ಭಾರತದಲ್ಲಿ ಬಂಡವಾಳ ಹೆಚ್ಚಿಸಲು ನಿರ್ಧರಿಸಿದೆ. ಈಗಾಗಲೇ 11 ಬಿಲಿಯನ್ ಡಾಲರ್ನಷ್ಟು (ಸುಮಾರು 90,000 ಕೋಟಿ ರೂ) ಮೊತ್ತದ ಬಂಡವಾಳವನ್ನು (Investment) ಭಾರತದಲ್ಲಿ ಹಾಕಿರುವ ಅಮೇಜಾನ್ ಮುಂಬರುವ ಎರಡು ಪಟ್ಟಿಗೂ ಹೆಚ್ಚು ಬಂಡವಾಳ ಹೆಚ್ಚಿಸಲಿದೆ. ವರದಿಗಳ ಪ್ರಕಾರ ಮುಂದಿನ 7 ವರ್ಷಗಳಲ್ಲಿ ಅಮೇಜಾನ್ ಹೆಚ್ಚುವರಿ 15 ಬಿಲಿಯನ್ ಡಾಲರ್ (ಸುಮಾರು 1.23 ಲಕ್ಷ ಕೋಟಿ ರೂ) ಹೆಚ್ಚುವರಿ ಬಂಡವಾಳ ಹೂಡುವ ನಿರೀಕ್ಷೆ ಇದೆ. ಇದರೊಂದಿಗೆ ಭಾರತದಲ್ಲಿ ಅಮೇಜಾನ್ನ ಒಟ್ಟು ಹೂಡಿಕೆ 26 ಬಿಲಿಯನ್ ಡಾಲರ್, ಅಂದರೆ ಸುಮಾರು 2.13 ಲಕ್ಷ ಕೋಟಿ ರೂ ಆಗಲಿದೆ.
ಅಮೇಜಾನ್ ಭಾರತದಲ್ಲಿ ಹೆಚ್ಚುವರಿ ಬಂಡವಾಳ ಹೂಡಿಕೆಗೆ ಬದ್ಧವಾಗಿರುವ ವಿಚಾರವನ್ನು ಸ್ವತಃ ಅದರ ಸಿಇಒ ಆಂಡಿ ಜ್ಯಾಸಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿ, ವಾಗ್ದಾನ ಕೊಟ್ಟಿದ್ದಾರೆನ್ನಲಾಗಿದೆ. ಮೋದಿ ಅವರ ಅಮೆರಿಕ ಭೇಟಿ ವೇಳೆ ಈ ಬೆಳವಣಿಗೆ ಆಗಿದೆ.
‘2030ರಷ್ಟರಲ್ಲಿ ಭಾರತದಲ್ಲಿ 26ಬಿಲಿಯನ್ ಡಾಲರ್ನಷ್ಟು ಹೂಡಿಕೆ ಮಾಡಲು ಅಮೇಜಾನ್ ಬದ್ಧವಾಗಿರುವ ಬಗ್ಗೆ ಚರ್ಚಿಸಿದೆವು. ಸ್ಟಾರ್ಟಪ್ಗಳಿಗೆ ಬೆಂಬಲಿಸುವುದು, ಉದ್ಯೋಗಸೃಷ್ಟಿ, ರಫ್ತಿಗೆ ಉತ್ತೇಜನ, ವ್ಯಕ್ತಿಗಳ ಸಬಲೀಕರಣ, ಸಣ್ಣ ಉದ್ಯಮಗಳ ಜಾಗತಿಕ ಸ್ಪರ್ಧಾತ್ಮಕತೆ ಇತ್ಯಾದಿಗೆ ನೆರವು ಒದಗಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ’ ಎಂದು ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಅಮೇಜಾನ್ ಸಿಇಒ ಟ್ವೀಟ್ ಮಾಡಿದ್ದಾರೆ.
ಭಾರತದ ಇಕಾಮರ್ಸ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಹೊಂದಿರುವ ಅಮೇಜಾನ್ ತಾನು ಭಾರತದಲ್ಲಿ 13ಲಕ್ಷದಷ್ಟು ನೇರ ಮತ್ತು ಪರೋಕ್ಷ ಉದ್ಯೋಗಸೃಷ್ಟಿಗೆ ಕಾರಣವಾಗಿರುವುದಾಗಿ ಇತ್ತೀಚೆಗೆ ಹೇಳಿಕೊಂಡಿತ್ತು. 62 ಲಕ್ಷ ಸಣ್ಣ ಉದ್ದಮಿಗಳನ್ನು ಡಿಜಿಟೈಸ್ ಮಾಡಿದ್ದೇವೆ. 7 ಬಿಲಿಯನ್ ಡಾಲರ್ ಮೊತ್ತದಷ್ಟು ರಫ್ತಿಗೆ ಕಾರಣವಾಗಿದ್ದೇವೆ ಎಂದೂ ಅಮೇಜಾನ್ ತನ್ನ ಬ್ಲಾಗ್ವೊಂದರಲ್ಲಿ ಹೇಳಿತ್ತು.
ಇದನ್ನೂ ಓದಿ: Forex Reserve: ಭಾರತದ ಫಾರೆಕ್ಸ್ ಮೀಸಲು ನಿಧಿ ಒಂದು ವಾರದಲ್ಲಿ 2.35 ಬಿಲಿಯನ್ ಡಾಲರ್ನಷ್ಟು ಹೆಚ್ಚಳ
ಭಾರತದ ಇಕಾಮರ್ಸ್ ಮಾರುಕಟ್ಟೆಯಲ್ಲಿ ಈವರೆಗೂ ಸಿಂಹಪಾಲು ಹೊಂದಿರುವುದು ಅಮೆಕನ್ ಕಂಪನಿಗಳೇ. ಒಂದು ಅಮೇಜಾನ್ ಮತ್ತೊಂದು ಫ್ಲಿಪ್ಕಾರ್ಟ್. ಫ್ಲಿಪ್ಕಾರ್ಟ್ ಮೂಲತಃ ಭಾರತೀಯರು ಸ್ಥಾಪಿಸಿದ ಸ್ಟಾರ್ಟಪ್ ಆದರೂ ಅಮೆರಿಕದ ರೀಟೇಲ್ ಚೈನ್ ದೈತ್ಯ ವಾಲ್ಮಾರ್ಟ್ ಸಂಸ್ಥೆ ಕೆಲ ವರ್ಷಗಳ ಹಿಂದೆ ಫ್ಲಿಪ್ಕಾರ್ಟ್ ಅನ್ನು ಖರೀದಿಸಿತ್ತು.
ಅಮೇಜಾನ್ಗೆ ಈಗ ನೇರವಾಗಿ ಪೈಪೋಟಿ ನೀಡುತ್ತಿರುವ ಭಾರತೀಯ ಕಂಪನಿ ಎಂದರೆ ಅದು ರಿಲಾಯನ್ಸ್ ಗ್ರೂಪ್ನದ್ದು. ರಿಲಾಯನ್ಸ್ ರೀಟೇಲ್ ಸಂಸ್ಥೆ ಅಮೇಜಾನ್ನಷ್ಟು ಆನ್ಲೈನ್ನಲ್ಲಿ ಇನ್ನೂ ಪ್ರಬಲವಾಗಿಲ್ಲ. ಆದರೆ, ಅದರ ಆಫ್ಲೈನ್ ಸ್ಟೋರ್ಗಳು ಬಹಳಷ್ಟು ಇದ್ದು, ಮುಂಬರುವ ವರ್ಷಗಳಲ್ಲಿ ಆನ್ಲೈನ್ ಉಪಸ್ಥಿತಿ ಹೆಚ್ಚಿಸಿಕೊಳ್ಳಲು ಹೊರಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ