ಹೈದರಾಬಾದ್, ಮೇ 23: ಜುಲೈನಲ್ಲಿ ನಡೆಯಲಿರುವ ಅನಂತ್ ಅಂಬಾನಿ, ರಾಧಿಕಾ ಮರ್ಚಂಟ್ ವಿವಾಹ ಮಹೋತ್ಸವದಲ್ಲಿ (Anant Ambani Radhika Merchant wedding) ಜಾಗತಿಕ ವಿಶೇಷ ಅತಿಥಿಗಳಿಗೆ ಸಿಲ್ವರ್ ಫಿಲಿಗ್ರೀ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ. ಅದಕ್ಕಾಗಿ ತೆಲಂಗಾಣದ ಕರೀಮ್ನಗರ್ ಜಿಲ್ಲೆಯ ಬೆಳ್ಳಿ ಕುಸುರಿ ಕಲೆಯ ಫಿಲಿಗ್ರಿಗೆ ಆರ್ಡರ್ ಕೊಡಲಾಗಿದೆ. ಕರೀಮ್ನಗರದ ಸಿಲ್ವರ್ ಫಿಲಿಗ್ರಿ ಕರಕುಶಲ ಕಲ್ಯಾಣ ಸಂಸ್ಥೆಯಾದ ಸಿಫ್ಕಾದಿಂದ (SIFKA) ಅಂಬಾನಿ ಮದುವೆಗೆ 400 ಸಂಖ್ಯೆಯ ಫಿಲಿಗ್ರಿಗಳು (silver filigree) ಸರಬರಾಜಾಗಲಿವೆ. ಭಾರೀ ಬೆಲೆಬಾಳುವ ವಸ್ತುಗಳಾಗಿವೆ. ಫಿಲಿಗ್ರಿ ಕಲೆ ಬಳಸಿ ಅಲಂಕರಿಸಲಾದ ಜ್ಯುವೆಲರಿ ಬಾಕ್ಸ್, ಪರ್ಸ್, ಟ್ರೇ, ಹಣ್ಣು ಬಟ್ಟಲು ಮತ್ತಿತರ ವಸ್ತುಗಳಿವು. 400 ಬೇರೆ ಬೇರೆ ಫಿಲಿಗ್ರಿ ಕಲಾಕೃತಿಗಳಿಗೆ ಆರ್ಡರ್ ಸಿಕ್ಕಿರುವ ವಿಚಾರವನ್ನು ಮಾಧ್ಯಮಗಳಿಗೆ ಸಿಫ್ಕಾ ಖಚಿತಪಡಿಸಿದೆ.
ಕರೀಮ್ನಗರದ ಈ ಫಿಲಿಗ್ರಿ ಕಲೆಗೆ ಜಿಐ ಟ್ಯಾಗ್ ಸಿಕ್ಕಿದೆ. ಮುಂಬೈನಲ್ಲಿರುವ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ನಲ್ಲಿ ಕೆಲ ವರ್ಷಗಳ ಹಿಂದೆ ಸಿಫ್ಕಾ ಅಧ್ಯಕ್ಷ ಆರೋಜು ಅಶೋಕ್ ಅವರು ಸಿಲ್ವರ್ ಫಿಲಿಗ್ರಿ ಕಲೆಯ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಆಗ ಅವು ನೀತಾ ಅಂಬಾನಿಯ ಗಮನ ಸೆಳೆದಿವೆ. 2023ರ ನವೆಂಬರ್ನಿಂದ ರಿಲಾಯನ್ಸ್ ರೀಟೇಲ್ನ ಸ್ವದೇಶ್ ಮಳಿಗೆಗೆ ಸಿಫ್ಕಾದಿಂದ ಫಿಲಿಗ್ರಿ ಕಲಾವಸ್ತುಗಳ ಸರಬರಾಜು ಆಗುತ್ತಾ ಬಂದಿದೆ. ಈ ಕೃತಿಗಳ ಗುಣಮಟ್ಟ ಮತ್ತು ಆಕರ್ಷಣೆಯ ಕಾರಣಕ್ಕೆ ಅಂತಾರಾಷ್ಟ್ರೀಯ ಮಟ್ಟದ ವಿಶೇಷ ಅತಿಥಿಗಳಿಗೆ ಮದುವೆಯಲ್ಲಿ ಉಡುಗೊರೆಯಾಗಿ ಕೊಡಲು ಅಂಬಾನಿ ಕುಟುಂಬ ನಿರ್ಧರಿಸಿದೆ.
ಇದನ್ನೂ ಓದಿ: ಎನ್ಆರ್ಐಗಳು ವಿದೇಶೀಯನ್ನು ವಿವಾಹವಾದರೆ ಭಾರತದಲ್ಲಿರುವ ಅವರ ಆಸ್ತಿ ಏನಾಗುತ್ತೆ? ಇಲ್ಲಿದೆ ವಿವರ
ಭಾರತದಲ್ಲಿ ಒಡಿಶಾ ಸೇರಿದಂತೆ ಕೆಲವೆಡೆ ಫಿಲಿಗ್ರಿ ಕಲೆ ಉಳಿದುಕೊಂಡು ಬಂದಿದೆ. ಇದು ಬೆಳ್ಳಿಯ ತಂತಿ ಅಥವಾ ಎಳೆ ಬಳಸಿ ವಿವಿಧ ವಸ್ತುಗಳಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಕರೀಮ್ನಗರದಲ್ಲಿ ಶೇ. 92ರಷ್ಟು ಶುದ್ಧತೆಯ ಬೆಳ್ಳಿ ಬಳಸಿ ಸಂಪೂರ್ಣ ಕೈಯಿಂದಲೇ ಫಿಲಿಗ್ರಿ ರಚಿಸಲಾಗುತ್ತದೆ. 2007ರಲ್ಲಿ ಈ ಫಿಲಿಗ್ರಿಗೆ ಜಿಐ ಟ್ಯಾಗ್ ಸಿಕ್ಕಿದೆ.
ಕರೀಮ್ನಗರದಲ್ಲಿ ಕಳೆದ 400 ವರ್ಷಗಳಿಂದ ಫಿಲಿಗ್ರಿ ಕಲೆ ಅಸ್ತಿತ್ವದಲ್ಲಿದೆ. 150 ಕುಟುಂಬಗಳಿಂದ 300 ಕಲಾವಿದರು ಈಗಲೂ ಕೂಡ ಈ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ.
ಇದನ್ನೂ ಓದಿ: ಹತ್ತು ವರ್ಷದಿಂದ ಅಪ್ಡೇಟ್ ಆಗದ ಆಧಾರ್ ಕಾರ್ಡ್ ನಿಷ್ಕ್ರಿಯವಾಗುತ್ತಾ? ಯುಐಡಿಎಐ ಕೊಟ್ಟ ಮಾಹಿತಿ ಇದು
ಜಾಗತಿಕವಾಗಿ ಫಿಲಿಗ್ರೀ ಕಲೆಗೆ ಕ್ರಿಸ್ತಪೂರ್ವದ ಹಲವು ಶತಮಾನದ ಹಿಂದಿನಷ್ಟು ದೊಡ್ಡ ಇತಿಹಾಸವೇ ಇದೆ. ಗ್ರೀಕರಲ್ಲಿ ಈ ಕಲೆ ಖ್ಯಾತವಾಗಿತ್ತು. ಕುತೂಹಲವೆಂದರೆ ಭಾರತದಲ್ಲಿ ಇರುವ ಫಿಲಿಗ್ರೀ ಕಲೆಯ ಕೆತ್ತನೆ ಶೈಲಿ ಬಹುತೇಕ ಗ್ರೀಕರದ್ದಂತೆಯೇ ಇದೆ ಎನ್ನುತ್ತಾರೆ ಇತಿಹಾಸತಜ್ಞರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:35 pm, Thu, 23 May 24