ಮೋದಿ 3.0 ಸರ್ಕಾರದಲ್ಲಿ ಮಿಂಚುವ ಉದ್ಯಮಿ ಯಾರು? ಸಾಲ ತೀರಿಸಿ ಪುಟಿದೇಳುತ್ತಿರುವ ಅನಿಲ್ ಅಂಬಾನಿಗೆ ಹೊಸ ‘ಪವರ್’?
Reliance Power share price: ಅನಿಲ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಪವರ್ ಸಂಸ್ಥೆ ಈಗ ಸಂಪೂರ್ಣ ಸಾಲ ಮುಕ್ತವಾಗಿದೆ. ಇದರ ಜೊತೆಗೆ ಮೋದಿ 3.0 ಸರ್ಕಾರ ವಿದ್ಯುತ್ ಉತ್ಪಾದನಾ ವಲಯಕ್ಕೆ ಆದ್ಯತೆ ಕೊಡುತ್ತಿರುವುದು ರಿಲಾಯನ್ಸ್ ಪವರ್ಗೆ ಪುಷ್ಟಿ ಸಿಕ್ಕಂತಾಗಿದೆ. ಒಂದು ಕಾಲದಲ್ಲಿ 275 ರೂವರೆಗೆ ಏರಿದ್ದ ರಿಲಾಯನ್ಸ್ ಪವರ್ ಷೇರು ಈಗ ಮಿಂಚಿನಂತೆ ಪುಟಿದೇಳುತ್ತಿದೆ. ಅದರ ಷೇರುಬೆಲೆ ಈಗ 31 ರೂ ಆಸುಪಾಸಿನಲ್ಲಿದೆ.
ನವದೆಹಲಿ, ಜೂನ್ 12: ಒಂದು ಕಾಲದಲ್ಲಿ ಭಾರತದ ನಂಬರ್ ಒನ್ ಶ್ರೀಮಂತ ಎನಿಸಿದ್ದ ಅನಿಲ್ ಅಂಬಾನಿ ಇವತ್ತು ತಳದಲ್ಲಿ ನಿಂತು ಮೇಲೇರಲು ಯತ್ನಿಸುತ್ತಿರಬಹುದು. ಸಾಲ ಸೋಲಗಳಲ್ಲಿ ಮುಳುಗಿ ಹೋಗಿದ್ದ ಅವರು ಕ್ರಮೇಣವಾಗಿ ಚೇತರಿಕೆ ಕಾಣುತ್ತಿದ್ದಾರೆ. ಒಂದು ಕಾಲದಲ್ಲಿ ಬಹಳ ದೊಡ್ಡದಿದ್ದ ಅವರ ಉದ್ಯಮ ಸಾಮ್ರಾಜ್ಯ ಇವತ್ತು ಚಿಕ್ಕದಾಗಿದ್ದರೂ ಹಂತ ಹಂತವಾಗಿ ಸುಧಾರಣೆ ಕಾಣುತ್ತಿದೆ. ಮೋದಿ 3.0 ಸರ್ಕಾರ ಬಂದ ಬಳಿಕ ಅವರ ರಿಲಾಯನ್ಸ್ ಪವರ್ ಷೇರುಬೆಲೆ (Reliance Power share price) ಗರಿಷ್ಠವಾಗಿ ಏರುತ್ತಿದೆ. ರಿಲಾಯನ್ಸ್ ಪವರ್ಗೆ ಬೇಡಿಕೆ ಬರಲು ಮೋದಿ ಸರ್ಕಾರ ಬಂದಿರುವುದೊಂದೇ ಕಾರಣವಲ್ಲ, ಅ ಕಂಪನಿ ಸಾಲಮುಕ್ತಗೊಂಡಿರುವುದೂ ಇನ್ನೊಂದು ಕಾರಣ.
ಅನಿಲ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಪವರ್ ಸಂಸ್ಥೆ ಈಗ ಸಾಲದಿಂದ ಸಂಪೂರ್ಣ ಮುಕ್ತವಾಗಿದೆ. ಐಡಿಬಿಐ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಖ್, ಡಿಬಿಎಸ್ ಮೊದಲಾದ ವಿವಿಧ ಬ್ಯಾಂಕುಗಳಲ್ಲಿ ಇದ್ದ 800 ಕೋಟಿ ರೂ ಸಾಲವನ್ನು ರಿಲಾಯನ್ಸ್ ಪವರ್ ತೀರಿಸಉವಲ್ಲಿ ಯಶಸ್ವಿಯಾಗಿದೆ. ಅದರ ಕೆಲ ಆಸ್ತಿಗಳನ್ನು ಮಾರಿದ್ದರಿಂದ ಸಾಲ ತೀರಿಸಲು ಸಾಧ್ಯವಾಗಿದೆ.
ವರದಿಗಳ ಪ್ರಕಾರ ಅರುಣಾಚಲಪ್ರದೇಶದಲ್ಲಿ ಅದು ಪಡೆದಿದ್ದ 1,200 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಯನ್ನು ಟಿಎಚ್ಡಿಸಿಗೆ 128 ಕೋಟಿ ರೂಗ ಮಾರಾಟ ಮಾಡಿತ್ತು. ಮಹಾರಾಷ್ಟ್ರದ ವಶ್ಪೇಟ್ನಲ್ಲಿದ್ದ ಅದರ 45 ಮೆಗಾವ್ಯಾಟ್ ವಿಂಡ್ ಎನರ್ಜಿ ಯೋಜನೆಯನ್ನು 132 ಕೋಟಿ ರೂಗೆ ಜೆಎಸ್ಡಬ್ಲ್ಯು ರಿನಿವಬಲ್ ಎನರ್ಜಿ ಸಂಸ್ಥೆಗೆ ಸೇಲ್ ಮಾಡಿತ್ತು. ಇದರಿಂದ ಬಂದ ಹಣವನ್ನು ಸಾಲ ತೀರಿಸಲು ರಿಲಾಯನ್ಸ್ ಪವರ್ ಬಳಕೆ ಮಾಡಿದೆ.
ಇದನ್ನೂ ಓದಿ: ಕರ್ನಾಟಕ, ಭಾರತ ಸರ್ಕಾರ ಮಾಡಬೇಕು ಮನಸು: ವೇದಾಂತ ಛೇರ್ಮನ್ ಅನಿಲ್ ಅಗರ್ವಾಲ್ ‘ಚಿನ್ನ’ದ ಕನಸು
ಈ ಎರಡು ಪ್ರಾಜೆಕ್ಟ್ ಕೈ ತಪ್ಪಿ ಹೋದರೂ ರಿಲಾಯನ್ಸ್ ಪವರ್ ಬಳಿ ಇರುವ ಘಟಕಗಳಲ್ಲಿ 5,900 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ ಇದೆ. ಉತ್ತರಪ್ರದೇಶದಲ್ಲಿ 3,960 ಮೆಗಾವ್ಯಾಟ್ ಸಸನ್ ಯುಎಂಪಿಪಿ ಮತ್ತು 1,200 ಮೆಗಾವ್ಯಾಟ್ ರೋಸಾ ಥರ್ಮಲ್ ಪವರ್ ಪ್ಲಾಂಟ್, ಈ ಎರಡು ವಿದ್ಯುತ್ ಉತ್ಪಾದನಾ ಘಟಕಗಳಿವೆ. ಸಾಸನ್ ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್ ವಿಶ್ವದ ಅತಿದೊಡ್ಡ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಘಟನಗಳಲ್ಲಿ ಒಂದಾಗಿದೆ.
ಹೊಸ ಸರ್ಕಾರದಲ್ಲಿ ವಿದ್ಯುತ್ ಉತ್ಪಾದನೆಗೆ ಆದ್ಯತೆ
ಮೊನ್ನೆ ಅಸ್ತಿತ್ವಕ್ಕೆ ಬಂದ ಮೋದಿ 3.0 ಸರ್ಕಾರದ ಪ್ರಮುಖ ಆದ್ಯತಾ ಕ್ಷೇತ್ರಗಳಲ್ಲಿ ವಿದ್ಯುತ್ ವಲಯ ಒಂದು. ಮುಂದಿನ ಐದು ವರ್ಷದಲ್ಲಿ ಪವರ್ ಸೆಕ್ಟರ್ನ ಕಂಪನಿಗಳಿಗೆ ಹುಲುಸಾಗಿ ಬೆಳೆಯುವ ವಾತಾವರಣ ಇರಲಿದೆ. ಅನಿಲ್ ಅಂಬಾನಿ ಒಂದಷ್ಟು ಬಂಡವಾಳ ಪಡೆಯಲು ಯಶಸ್ವಿಯಾದರೆ ಮುಂದಿನ ಐದು ವರ್ಷ ಅವರ ರಿಲಾಯನ್ಸ್ ಪವರ್ಗೆ ಉತ್ತಮ ಭವಿಷ್ಯ ಇರಬಹುದು ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ಟೆಸ್ಲಾ ಕಂಪನಿ ಕರ್ನಾಟಕಕ್ಕೆ ಬರುತ್ತಾ? ಬೃಹತ್ ಕೈಗಾರಿಕೆ ಸಚಿವ ಕುಮಾರಸ್ವಾಮಿ ಹೇಳಿದ್ದಿದು
ಇದೇ ನಿರೀಕ್ಷೆಯಲ್ಲಿ ಹೂಡಿಕೆದಾರರು ರಿಲಾಯನ್ಸ್ ಪವರ್ ಷೇರನ್ನು ಅಪ್ಪುತ್ತಿದ್ದಾರೆ. 15-16 ವರ್ಷಗಳ ಹಿಂದೆ 275 ರೂನಷ್ಟಿದ್ದ ರಿಲಾಯನ್ಸ್ ಪವರ್ ಷೇರುಬೆಲೆ 2020ರಲ್ಲಿ ಕೇವಲ ಒಂದು ರುಪಾಯಿಗೆ ಕುಸಿದು ಹೋಗಿತ್ತು. ಇದೀಗ 31-32 ರೂ ಆಸುಪಾಸಿನಲ್ಲಿ ನಿಧಾನವಾಗಿ ಮೇಲೇರುತ್ತಿದೆ. ಇದರ ಮಾರುಕಟ್ಟೆ ಬಂಡವಾಳ 12,670 ಕೋಟಿ ರೂ ಇದೆ. ಅದರ ಒಟ್ಟು ಷೇರುಗಳ ಸಂಖ್ಯೆ 2.281 ಕೋಟಿಯಷ್ಟಿದೆ. ರಿಲಾಯನ್ಸ್ ಪವರ್ ಮುಂದಿನ ದಿನಗಳಲ್ಲಿ ಎಷ್ಟು ಹೂಡಿಕೆದಾರರನ್ನು ಆಕರ್ಷಿಸುತ್ತದೆ ಎಂಬುದು ಸಂಸ್ಥೆಯ ಮುಂಬರುವ ಒಂದೆರಡು ತ್ರೈಮಾಸಿಕ ವರದಿಗಳಿಂದ ಗೊತ್ತಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ