
ನವದೆಹಲಿ, ಮೇ 13: ಚೀನಾದ ಆಲಿಬಾಬಾ ಗ್ರೂಪ್ಗೆ ಸೇರಿದ ಆ್ಯಂಟ್ ಗ್ರೂಪ್ ಸಂಸ್ಥೆ (Ant Group) ಪೇಟಿಎಂನಲ್ಲಿ (Paytm) ಹೊಂದಿರುವ ತನ್ನ ಕೆಲ ಷೇರುಗಳನ್ನು ಮಾರಲಿದೆ ಎನ್ನುವಂತಹ ವರದಿಯೊಂದು ರಾಯ್ಟರ್ಸ್ ಸುದ್ದಿ ಸಂಸ್ಥೆಯಿಂದ ಬಿಡುಗಡೆಯಾಗಿದೆ. ಈ ವರದಿ ಪ್ರಕಾರ ಪೇಟಿಎಂನ (One97 Communications Ltd) ಶೇ. 4.1ರಷ್ಟು ಷೇರುಗಳನ್ನು ಆ್ಯಂಟ್ ಗ್ರೂಪ್ ಮಾರಹೊರಟಿದೆಯಂತೆ. ಯಾರು ಈ ಷೇರುಗಳನ್ನು ಖರೀದಿಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲವಾದರೂ ಪ್ರತೀ ಷೇರಿಗೆ 809.75 ದರದಲ್ಲಿ ಮಾರಾಟ ಮಾಡಲಿದೆ ಎಂದು ಹೇಳಲಾಗಿದೆ. ಸದ್ಯ ಪೇಟಿಎಂ ಷೇರುಬೆಲೆ 850 ರೂ ಆಸುಪಾಸಿನಲ್ಲಿದೆ.
ಪೇಟಿಎಂ ಕಂಪನಿಯಲ್ಲಿ ಆ್ಯಂಟ್ ಗ್ರೂಪ್ ಸುಮಾರು ಶೇ. 20ರ ಆಸುಪಾಸಿನಷ್ಟು ಷೇರುಪಾಲು ಹೊಂದಿತ್ತು ಎನ್ನಲಾಗುತ್ತಿದೆ. 2023ರ ಆಗಸ್ಟ್ ತಿಂಗಳಲ್ಲಿ ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಅವರಿಗೆ ಏ. 10.3ರಷ್ಟು ಷೇರುಗಳನ್ನು ಆ್ಯಂಟ್ ಮಾರಿತ್ತು. ಅದಾದ ಬಳಿಕ, 2025ರ ಮಾರ್ಚ್ನಲ್ಲಿ ಇರುವ ಸ್ಥಿತಿ ಪ್ರಕಾರ ಈ ಚೀನೀ ಮೂಲದ ಸಂಸ್ಥೆಯು ಪೇಟಿಎಂನಲ್ಲಿ ಹೊಂದಿರುವ ಷೇರುಪಾಲು ಶೇ. 9.85ರಷ್ಟಿದೆ. ಈಗ ಶೇ. 4.1 ಷೇರು ಮಾರಿದ್ದೇ ಅದಲ್ಲಿ, ಅದರ ಷೇರುಪಾಲು ಶೇ. 5.75ಕ್ಕೆ ಇಳಿಯುತ್ತದೆ.
ಇದನ್ನೂ ಓದಿ: ಬೆಂಗಳೂರಿನ ಕಂಪನಿಗಳಿಂದ ಸ್ಪೈ ಸೆಟಿಲೈಟ್ಗಳ ತಯಾರಿಕೆ; ಪಾಕಿಸ್ತಾನದ ಮೇಲೆ ಹದ್ದಿನಗಣ್ಣಿಡಲು ಬಳಕೆ
ವಿಜಯ್ ಶೇಖರ್ ಶರ್ಮಾ ಹಾಗು ಕುಟುಂಬದವರು ಹೊಂದಿರುವ ಒಟ್ಟು ಷೇರುಪಾಲು ಶೇ. 14ರಷ್ಟಿರಬಹುದು. ಸೇಫ್ ಅಡ್ವೈಸರ್ಸ್ ಸಂಸ್ಥೆ (SAIF Advisors) ಇನ್ನೂ ಹೆಚ್ಚು ಷೇರುಪಾಲು ಹೊಂದಿದೆ. ಇದು ಹಾಂಕಾಂಗ್ ಮೂಲದ ಇನ್ವೆಸ್ಟ್ಮೆಂಟ್ ಕಂಪನಿಯಾಗಿದೆ. ಆದರೆ, ಶೇ 10.25ರಷ್ಟು ಷೇರುಪಾಲು ಹೊಂದಿರುವ ರೆಸಿಲಿಯೆಂಟ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಯು ವಿಜಯ್ ಶೇಖರ್ ಶರ್ಮಾ ಅವರ ಮಾಲಿಕತ್ವದ, ಆದರೆ, ವಿದೇಶದಲ್ಲಿರುವ ಸಂಸ್ಥೆಯಾಗಿದೆ. ಇದರದ್ದನ್ನೂ ಸೇರಿಸಿದರೆ ವಿಜಯ್ ಶೇಖರ್ ಶರ್ಮಾ ಹಾಗೂ ಕುಟುಂಬದವರ ಒಟ್ಟು ಷೇರು ಪಾಲು ಶೇ. 24ಕ್ಕಿಂತಲೂ ಹೆಚ್ಚಾಗುತ್ತದೆ. ಈಗ ಆ್ಯಂಟ್ಫಿನ್ ಮಾರಲಿರುವ ಶೇ. 4 ಷೇರುಗಳನ್ನು ವಿಜಯ್ ಶೇಖರ್ ಶರ್ಮಾ ಅವರೇ ಖರೀದಿಸುತ್ತಾರಾ ಎಂಬುದು ಗೊತ್ತಿಲ್ಲ. ಹಾಗೇನಾದರೂ ಆದರೆ, ಪೇಟಿಎಂನಲ್ಲಿ ಶರ್ಮಾ ಅವರ ಹಿಡಿತ ಮತ್ತಷ್ಟು ಬಿಗಿಗೊಳ್ಳುತ್ತದೆ.
ಇದನ್ನೂ ಓದಿ: ಅಮೆರಿಕ-ಚೀನಾ ಟ್ಯಾರಿಫ್ ಯುದ್ಧಕ್ಕೆ 90 ದಿನ ವಿರಾಮ; ಆಮದು ಸುಂಕ ಶೇ. 115ರಷ್ಟು ಇಳಿಕೆ; ರಾಜಿ ಮಾಡಿಕೊಂಡ ಬಲಾಢ್ಯ ದೇಶಗಳು
ಒನ್97 ಕಮ್ಯೂನಿಕೇಶನ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ ತ್ರೈಮಾಸಿಕ ವರದಿಯಲ್ಲಿ ನಾಲ್ಕನೇ ಕ್ವಾರ್ಟರ್ನಲ್ಲಿ ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿದೆ. ಜನವರಿಯಿಂದ ಮಾರ್ಚ್ವರೆಗಿನ ಕ್ವಾರ್ಟರ್ನಲ್ಲಿ 540 ಕೋಟಿ ರೂ ನಷ್ಟ ತೋರಿಸಿದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್ನಲ್ಲಿ ಅದು 550 ಕೋಟಿ ರೂ ನಷ್ಟ ಕಂಡಿತ್ತು.
ನಷ್ಟ ಕಡಿಮೆ ಮಾಡಿದೆಯಾದರೂ ಆದಾಯ ಇಳಿಕೆಯನ್ನು ನಿಯಂತ್ರಿಸಲಾಗಿಲ್ಲ. 2025 ಮಾರ್ಚ್ ಅಂತ್ಯದ ಕ್ವಾರ್ಟರ್ನಲ್ಲಿ ಪೇಟಿಎಂ ಆದಾಯ 1,912 ಕೋಟಿ ರೂ ಇದೆ. ಹಿಂದಿನ ವರ್ಷದ ಕ್ವಾರ್ಟರ್ನಲ್ಲಿ 2,267 ಕೋಟಿ ರೂ ಆದಾಯ ಗಳಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Tue, 13 May 25