Apple iPhone: ಇನ್ನೆರಡು ವರ್ಷದಲ್ಲಿ ಭಾರತದಲ್ಲಿ ಐಫೋನ್ ಉತ್ಪಾದನೆ ಶೇ. 7ರಿಂದ ಶೇ. 18ಕ್ಕೆ ಹೈಜಂಪ್ ಸಾಧ್ಯತೆ
Bank of America Executive's Prediction: 2022-23ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಶೇ. 7ರಷ್ಟು ಐಫೋನ್ ತಯಾರಿಕೆ ಆಗಿತ್ತು. ಬ್ಯಾಂಕ್ ಆಫ್ ಅಮೆರಿಕದ ತಜ್ಞರ ಅಂದಾಜಿನ ಪ್ರಕಾರ 2024-25ರಲ್ಲಿ ಭಾರತದಲ್ಲಿ ಐಫೋನ್ ತಯಾರಿಕೆ ಪ್ರಮಾಣ ಶೇ. 18ಕ್ಕೆ ಹೆಚ್ಚಬಹುದು.
ನವದೆಹಲಿ: ಭಾರತದಲ್ಲಿ ಮುಂದಿನ ಎರಡು ವರ್ಷದಲ್ಲಿ ಐಫೋನ್ ಉತ್ಪಾದನೆ (iPhone Production) ಪ್ರಮಾಣ ಗಣನೀಯವಾಗಿ ವೃದ್ಧಿಸುವ ಸಾಧ್ಯತೆ ಇದೆ. ಆ್ಯಪಲ್ ಸಂಸ್ಥೆಗೆ ಐಫೋನ್ ಅಸೆಂಬಲ್ (iPhone Assembling) ಮಾಡಿಕೊಡುವ ಫಾಕ್ಸ್ಕಾನ್ ಮತ್ತು ಪೆಗಾಟ್ರಾನ್ ಕಂಪನಿಗಳು ಭಾರತದಲ್ಲಿ ಘಟಕಗಳನ್ನು ಹೊಂದಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಐಫೋನ್ ಆರ್ಡರ್ ಪಡೆಯುವ ನಿರೀಕ್ಷೆ ಇದೆ. ಟಾಟಾ ಸಂಸ್ಥೆಯೂ ಐಫೋನ್ ತಯಾರಿಕೆಯಲ್ಲಿದೆ. ಚೀನಾದಿಂದ ಕ್ರಮೇಣವಾಗಿ ಐಫೋನ್ ತಯಾರಿಕೆ ಪ್ರಮಾಣ ಭಾರತಕ್ಕೆ ವರ್ಗವಾಗುತ್ತಿದೆ. ಸದ್ಯ 2022-23ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಶೇ. 7ರಷ್ಟು ಐಫೋನ್ ತಯಾರಿಕೆ ಆಗುತ್ತಿದೆ. ಬ್ಯಾಂಕ್ ಆಫ್ ಅಮೆರಿಕದ ತಜ್ಞರ ಅಂದಾಜಿನ ಪ್ರಕಾರ ಇನ್ನೆರಡು ವರ್ಷದಲ್ಲಿ, ಅಂದರೆ 2024-25ರಲ್ಲಿ ಭಾರತದಲ್ಲಿ ಐಫೋನ್ ತಯಾರಿಕೆ ಪ್ರಮಾಣ ಶೇ. 18ಕ್ಕೆ ಹೆಚ್ಚಬಹುದು. ಶೇ. 18ರಷ್ಟು ಐಫೋನ್ ಎಂದರೆ ಸಾಮಾನ್ಯ ಸಂಗತಿ ಅಲ್ಲ. ಈ ಪರಿ ಬೆಳವಣಿಗೆಗೆ ಭಾರತ ಸರ್ಕಾರದ ಪಿಎಲ್ಐ ಸ್ಕೀಮ್ ಕಾರಣವಾಗಬಹುದು.
‘ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳಿಗೆ ಜಾಗತಿಕ ಸರಬರಾಜು ಸರಪಳಿಯಲ್ಲಿ ಭಾರತ ಪರ್ಯಾಯ ಆಯ್ಕೆ ಆಗಬಲ್ಲುದು ಎಂಬ ನಂಬಿಕೆ ನಮ್ಮದು. ಬೇರೆ ವಲಯಗಳಲ್ಲೂ ಭಾರತ ಯಶಸ್ಸು ಸಾಧಿಸುವ ನಿರೀಕ್ಷೆಗಳಿವೆ. ಆಮದುಗಳನ್ನು ಕಡಿತಗೊಳಿಸಿ, ರಫ್ತುಗಳನ್ನು ಹೆಚ್ಚಿಸುವುದರಿಂದ ಭಾರತದ ಆರ್ಥಿಕ ಆರೋಗ್ಯಕ್ಕೆ ಉತ್ತಮವಾಗಬಹುದು’ ಎಂದು ಬ್ಯಾಂಕ್ ಆಫ್ ಅಮೇರಿಕಾದ ಭಾರತ ಸಂಶೋಧನೆ ವಿಭಾಗದ ಮುಖ್ಯಸ್ಥ ಆಮಿಶ್ ಶಾ ಅಭಿಪ್ರಾಯಪಟ್ಟಿದ್ದಾರೆ.
ಪಿಎಲ್ಐ ಸ್ಕೀಮ್ನಿಂದ ಐಫೋನ್ ಉತ್ಪಾದನೆಗೆ ಪುಷ್ಟಿ
ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್, ಅಂದರೆ ಉತ್ಪಾದನಾ ಜೋಡಿತ ಪ್ರೋತ್ಸಾಹಕ ಯೋಜನೆಯಲ್ಲಿ ಇಟ್ಟಿರುವ ಗುರಿಯ ದೆಸೆಯಿಂದ ಆ್ಯಪಲ್ ಸಂಸ್ಥೆ ತನ್ನ ಐಫೋನ್ಗಳ ಉತ್ಪಾದನೆಯನ್ನು ಸಾಕಷ್ಟು ಪ್ರಮಾಣದಲ್ಲಿ ಭಾರತಕ್ಕೆ ವರ್ಗಾಯಿಸಲು ಪ್ರೇರೇಪಿಸಬಹುದು. ಭಾರತದಲ್ಲಿ ಐಫೋನ್ ಮಾರಾಟದಲ್ಲೂ ಹೆಚ್ಚಳ ಕಾಣು ಸಾಧ್ಯತೆ ಇದೆ. 2024-25ರಲ್ಲಿ ಜಾಗತಿಕ ಐಫೋನ್ ಮಾರಾಟದಲ್ಲಿ ಭಾರತದ ಪಾಲು ಶೇ. 5ಕ್ಕಿಂತ ಹೆಚ್ಚಿನ ಮಟ್ಟಕ್ಕೆ ಏರಬಹುದು ಎಂದು ಬ್ಯಾಂಕ್ ಆಫ್ ಅಮೆರಿಕದ ಅಮಿಶ್ ಶಾ ಹೇಳಿದ್ದಾರೆ.
ಇದನ್ನೂ ಓದಿ: MRF Record: 1 ಷೇರಿಗೆ 1 ಲಕ್ಷ ರೂ; ಎಂಆರ್ಎಫ್ ಹೊಸ ದಾಖಲೆ; ಕುಬೇರರಾದರು ಷೇರುದಾರರು
ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಆ್ಯಪಲ್ನ ಪಾಲು ಶೇ. 4ರಷ್ಟಿರಬಹುದು. ಭಾರತದಲ್ಲಿ ಐಫೋನ್ ತಯಾರಾಗುತ್ತಿರುವುದು ಹಾಗೂ ಅವು ಕಡಿಮೆ ಬೆಲೆಗೆ ಲಭ್ಯವಾದರೆ ಭಾರತದಲ್ಲಿ ಐಫೋನ್ ಮಾರಾಟ ಪ್ರಮಾಣ ಹೆಚ್ಚಬಹುದು.
ಪರಿಪೂರ್ಣ ಉತ್ಪಾದನೆಯಲ್ಲಿ ಭಾರತಕ್ಕಿದೆ ಕಷ್ಟದ ಹಾದಿ….
ತಯಾರಿಕಾ ಕ್ಷೇತ್ರದಲ್ಲಿ ಚೀನಾ ಜೊತೆ ಭಾರತ ಪೈಪೋಟಿ ನಡೆಸಲು ಸಾಧ್ಯ ಇಲ್ಲ. ಸರ್ವಿಸ್ ಸೆಕ್ಟರ್ನತ್ತ ಭಾರತ ಗಮನ ಹರಿಸುವುದು ಉತ್ತಮ ಎಂದು ಮಾಜಿ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಸೇರಿದಂತೆ ಕೆಲ ತಜ್ಞರು ಆಗಾಗ್ಗೆ ಸಲಹೆ ನೀಡುವುದುಂಟು. ಇವರ ಅನಿಸಿಕೆಗಳು ಸತ್ಯಕ್ಕೆ ದೂರವಿಲ್ಲ ಎಂಬುದನ್ನು ಅಮಿಶ್ ಶಾಲ ಮಾತುಗಳು ದೃಢಪಡಿಸುತ್ತವೆ. ಬ್ಯಾಂಕ್ ಆಫ್ ಅಮೆರಿಕದ ಈ ಹಿರಿಯ ಅಧಿಕಾರಿ ಪ್ರಕಾರ ಐಫೋನ್ ತಯಾರಿಕೆಯಲ್ಲಿ ಶೇ. 70ರಷ್ಟು ವೆಚ್ಚವು ಮೊಬೈಲ್ನ ಡಿಸ್ಪ್ಲೇ, ಮೆಮೊರಿ ಕಾರ್ಡ್ ಮತ್ತು ಚಿಪ್ಗಳಿಂದ ಆಗುತ್ತವಂತೆ.
ಇದನ್ನೂ ಓದಿ: No Boss: ಉದ್ಯೋಗಿಗಳ ಮಾತು ನಂಬಿ ಮ್ಯಾನೇಜರ್ ಹುದ್ದೆಗಳನ್ನೇ ತೊಲಗಿಸಿದ ಕಂಪನಿ; ಆಮೇಲಾಯಿತು ನೋಡಿ ಅಚ್ಚರಿ
ಸದ್ಯದ ಪರಿಸ್ಥಿತಿಯಲ್ಲಿ ಈ ಪ್ರಮುಖ ಹಾರ್ಡ್ವೇರ್ಗಳನ್ನು ಭಾರತದಲ್ಲಿ ತಯಾರಿಸುವುದು ಕಷ್ಟ. ಯಾಕೆಂದರೆ, ಈ ಹಾರ್ಡ್ವೇರ್ಗಳ ಉತ್ಪಾದನೆಗೆ ಉನ್ನತ ತಂತ್ರಜ್ಞಾನ ಹಾಗೂ ಹೆಚ್ಚು ಬಂಡವಾಳದ ಅವಶ್ಯಕತೆ ಇದೆ. ಇಂಥ ಹಾರ್ಡ್ವೇರ್ಗಳ ತಯಾರಿಕೆಗೆ ಸೌಲಭ್ಯಗಳಿದ್ದರೆ ಅಂಥ ದೇಶದ ಪ್ರೊಡಕ್ಷನ್ ವ್ಯಾಲ್ಯೂ ಹೆಚ್ಚಿರುತ್ತದೆ. ಭಾರತದಲ್ಲಿ ಸದ್ಯ ಉತ್ಪಾದನಾ ಮೌಲ್ಯ ಸೇರ್ಪಡೆಯು ಶೇ. 18ರಷ್ಟಿದೆ. ಆದರೆ, ಚೀನಾ ಶೇ. 38 ಮತ್ತು ವಿಯೆಟ್ನಾಂ ಶೇ. 24ರಷ್ಟು ಪ್ರೊಡಕ್ಷನ್ ವ್ಯಾಲ್ಯೂ ಆ್ಯಡ್ ಹೊಂದಿವೆ. ಬಹಳಷ್ಟು ಜಾಗತಿಕ ಸಂಸ್ಥೆಗಳು ಚೀನಾದಲ್ಲಿ ತಯಾರಿಕೆಗೆ ಮುಂದಾಗುವುದು ಇದೇ ಕಾರಣಕ್ಕೆಯೇ.
ಆದರೆ, ಭಾರತವೂ ಈ ಮಾರ್ಗದಲ್ಲಿ ಕ್ರಮಿಸುವ ಅವಕಾಶಗಳಿವೆ. ಆಮಿಶ್ ಶಾ ಪ್ರಕಾರ ಚೀನಾ ಮತ್ತು ವಿಯೆಟ್ನಾಂ ದೇಶಗಳಲ್ಲಿ ಪ್ರೊಡಕ್ಷನ್ ವ್ಯಾಲ್ಯೂ ಒಮ್ಮೆಗೇ ಹೆಚ್ಚಾಗಿದ್ದಲ್ಲ. ದೊಡ್ಡ ಮಟ್ಟದ ಉತ್ಪಾದನೆಗೆ ತೆರೆದುಕೊಂಡ ಫಲವಾಗಿ ಹಂತ ಹಂತವಾಗಿ ಮತ್ತು ದೀರ್ಘಾವಧಿಯಲ್ಲಿ ಈ ಮೌಲ್ಯ ಹೆಚ್ಚಾಗಿತ್ತು. ಭಾರತದಲ್ಲೂ ಅದೇ ರೀತಿ ಸಾಧನೆ ಆಗುವ ಸಾಧ್ಯತೆ ಇಲ್ಲದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ