ವಿಶ್ವದ ಅತಿ ದೊಡ್ಡ ಟೆಕ್ ಕಂಪೆನಿಯಾದ ಆಪಲ್ನ ಸಿಇಒ ಟಿಮ್ ಕುಕ್ ಅವರು ವಿಶ್ವದಲ್ಲೇ ಅತಿ ಹೆಚ್ಚು ವೇತನ ಪಡೆಯುವಂಥ ಸಿಇಒಗಳಲ್ಲಿ ಒಬ್ಬರು. ಆ ಕಂಪೆನಿಯ ಹಣಕಾಸು ವರ್ಷ ಸೆಪ್ಟೆಂಬರ್ನಿಂದ ಶುರುವಾಗಿ, ಅದರ ಮುಂದಿನ ಆಗಸ್ಟ್ ತನಕ ಇರುತ್ತದೆ. ಕಳೆದ ಹಣಕಾಸು ವರ್ಷದಲ್ಲಿ, ಅಂದರೆ 2020ರ ಸೆಪ್ಟೆಂಬರ್ನಿಂದ 2021ರ ಆಗಸ್ಟ್ ತನಕದ ಹಣಕಾಸು ವರ್ಷದಲ್ಲಿ ಆಪಲ್ ಕಂಪೆನಿಯೇ ತಿಳಿಸಿರುವ ಪ್ರಕಾರ ಟಿಮ್ ಕುಕ್ ಅವರಿಗೆ ಎಷ್ಟು ವೇತನ ಸಂದಾಯ ಆಗಿದೆ ಗೊತ್ತೆ? ಜನವರಿ 6ನೇ ತಾರೀಕಿನಂದು ಎಸ್ಇಸಿ ಫೈಲಿಂಗ್ನಲ್ಲಿ ತಿಳಿಸಿರುವಂತೆ 9.87 ಕೋಟಿ ಅಮೆರಿಕನ್ ಡಾಲರ್ (98.73 ಮಿಲಿಯನ್ ಯುಎಸ್ಡಿ) ವೇತನ ರೂಪದಲ್ಲಿ ಪಾವತಿಸಲಾಗಿದೆ. ಇಷ್ಟು ಮೊತ್ತವನ್ನು ಭಾರತದ ರೂಪಾಯಿ ಲೆಕ್ಕದಲ್ಲಿ ಇವತ್ತಿಗೆ ಲೆಕ್ಕಾಚಾರ ಹಾಕಿ ಹೇಳುವುದಾದರೆ, 733.58 ಕೋಟಿ ಆಗುತ್ತದೆ. ಇದರಲ್ಲಿ ಸಂಬಳ ಹಾಗೂ ಸವಲತ್ತು ಮತ್ತು ಇತರ ಬೆನಿಫಿಟ್ಗಳು ಸಹ ಒಳಗೊಂಡಿವೆ. ಯಾವುದಕ್ಕೆ ಎಷ್ಟು ಪಾವತಿಸಲಾಗಿದೆ ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
– ಸಂಬಳ: 30 ಲಕ್ಷ ಯುಎಸ್ಡಿ
– ಆಪಲ್ನ ಹಣಕಾಸು ಹಾಗೂ ಪರಿಸರ ಸುಸ್ಥಿರ ಗುರಿಯನ್ನು ತಲುಪಿದ್ದಕ್ಕಾಗಿ 1.2 ಕೋಟಿ ಯುಎಸ್ಡಿ ಬೋನಸ್
– ಇತರ ಕಾಂಪೆನ್ಸೇಷನ್ 13.9 ಲಕ್ಷ ಯುಎಸ್ಡಿ (ವೈಯಕ್ತಿಕ ವಿಮಾನ ಪ್ರಯಾಣ 712,488 ಡಾಲರ್, ಸೆಕ್ಯೂರಿಟಿ 630,630 ಡಾಲರ್, 401 (k) ಪ್ಲಾನ್ಗೆ ಕೊಡುಗೆಯಾಗಿ 17,400 ಯುಎಸ್ಡಿ, ಜೀವ ವಿಮಾ ಪ್ರೀಮಿಯಂಗಳು 2964 ಡಾಲರ್ ಮತ್ತು ರಜಾ ದಿನದ ನಗದು 23,077 ಡಾಲರ್)
– 8.23 ಕೋಟಿ ಡಾಲರ್ ಮೌಲ್ಯದ ಸ್ಟಾಕ್ಗಳು
ಈ ದಶಕವು ಆಪಲ್ ಕಂಪೆನಿಗೆ ದಾಖಲಾರ್ಹವಾದದ್ದು. 2021ರಲ್ಲಿ ಕುಕ್ ಅವರಿಗೆ ಈಕ್ವಿಟಿ ಷೇರು ದೊರೆತಿದೆ. 2011ರಲ್ಲಿ ಅವರು ಸಿಇಒ ಆಗಿ ಪದೋನ್ನತಿ ಪಡೆದ ನಂತರ ಮೊದಲ ಬಾರಿಗೆ ಇದನ್ನು ಪಡೆದಿದ್ದಾರೆ ಎಂದು ಫೈಲಿಂಗ್ನಲ್ಲಿ ತಿಳಿಸಲಾಗಿದೆ. ಆಪಲ್ನ ಗಾತ್ರ, ಪರ್ಫಾರ್ಮೆನ್ಸ್, ಸಿಇಒ ಆಗಿ ಕುಕ್ ಅವರು ಪಾತ್ರ ಹಾಗೂ ಪರ್ಫಾರ್ಮೆನ್ಸ್ ಗಮನಿಸಿ ಈ ಸ್ಟಾಕ್ ಅವಾರ್ಡ್ ನೀಡಲಾಗಿದೆ ಎಂದು ಆಪಲ್ ಕಂಪೆನಿ ಹೇಳಿದೆ. ಅಂದಹಾಗೆ, 3 ಲಕ್ಷ ಕೋಟಿ ಅಮೆರಿಕನ್ ಡಾಲರ್ ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ತಲುಪಿದ ಜಗತ್ತಿನ ಮೊದಲ ಕಂಪೆನಿಯಾಗಿ ಆಪಲ್ ಹೊರಹೊಮ್ಮಿತು.
ಅಚ್ಚರಿಯ ಸಂಗತಿ ಏನೆಂದರೆ, ಇಷ್ಟು ದೊಡ್ಡ ಮೊತ್ತದ ವೇತನ ಪಡೆದುಕೊಂಡ ಹೊರತಾಗಿಯೂ ಅಮೆರಿಕದಲ್ಲಿ ಅತಿ ಹೆಚ್ಚು ವೇತನ ಪಡೆದ ಸಿಇಒಗಳ ಪಟ್ಟಿಯಲ್ಲಿ ಟಿಮ್ ಕುಕ್ಗೆ ಎಂಟನೇ ಸ್ಥಾನ ಎಂದು 2021ರ ಆಗಸ್ಟ್ನಲ್ಲಿ ಬ್ಲೂಮ್ಬರ್ಗ್ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ: Apple Inc Market Cap: 3 ಟ್ರಿಲಿಯನ್ ಯುಎಸ್ಡಿ ಮಾರುಕಟ್ಟೆ ಬಂಡವಾಳ ಮೌಲ್ಯ ಮುಟ್ಟಿದ ಮೊದಲ ಕಂಪೆನಿ ಆಪಲ್
Published On - 12:58 pm, Fri, 7 January 22