ಆಪಲ್ ಕಂಪೆನಿಯ Spring Loaded 2021 ಕಾರ್ಯಕ್ರಮ ಏಪ್ರಿಲ್ 20ರಂದು ಮುಗಿದಿದೆ. ಎಲ್ಲ ಬಗೆಯಲ್ಲೂ ಹೊಸದಾದ 2021 ಐಪ್ಯಾಡ್ ಪ್ರೋ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ಅದನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ M1 SoC ಇದೆ. ಆಪಲ್ ಆಪರೇಟಿಂಗ್ ಸಿಸ್ಟಮ್ ಜತೆ ಇದು ಇನ್ನಷ್ಟು ಗಾಢವಾಗಿ ಹೊಂದಿಕೊಳ್ಳುತ್ತದೆ. 12.9- ಇಂಚಿನ ಐಪ್ಯಾಡ್ ಪ್ರೋನಲ್ಲಿ ಆಕರ್ಷಕವಾದ ಲಿಕ್ವಿಡ್ ರೆಟಿನಾ XDR ಡಿಸ್ಪ್ಲೇ ಇದ್ದು, ಆಪಲ್ ಕಂಪೆನಿ ಹೇಳುವ ಪ್ರಕಾರ, ಪ್ರೋ ಡಿಸ್ಪ್ಲೇ XDRನಲ್ಲಿ ಅದ್ಯಾವ ಪ್ರಮಾಣದ ವೃತ್ತಿಪರ ಡಿಸ್ಪ್ಲೇ ನಿಖರತೆ ಇದೆಯೋ ಅದೇ ಪ್ರಮಾಣದಲ್ಲಿ ಇದೂ ಇದೆಯಂತೆ. ಅಂದಹಾಗೆ ಟ್ಯಾಬ್ಲೆಟ್ 11- ಇಂಚಿನದೂ ಸಿಗುತ್ತದೆ. ಇದರ ಜತೆಗೆ 24-ಇಂಚಿನ M1 ಮ್ಯಾಕ್, ಏರ್ಟ್ಯಾಗ್ ಟ್ರ್ಯಾಕರ್ ಮತ್ತು ಹೆಚ್ಚಿನ ಫ್ರೇಮ್ ರೇಟ್ ಎಚ್ಡಿಆರ್ ಪ್ಲೇಬ್ಯಾಕ್ ಜತೆಗೆ ಆಪಲ್ ಟಿವಿ 4K ಬಿಡುಗಡೆ ಮಾಡಲಾಗಿದೆ.
ಇನ್ನು 24 ಇಂಚಿನ ಐಮ್ಯಾಕ್ ಡಿಸ್ಪ್ಲೇ ಮತ್ತು ಅದರ ಮೈ 11.5 ಮಿಲಿಮೀಟರ್ನಷ್ಟು ತೆಳುವಾಗಿದೆ. ಏಳು ವಿವಿಧ ಬಣ್ಣಗಳಲ್ಲಿ ಐಮ್ಯಾಕ್ ಬರುತ್ತದೆ. ಮತ್ತು ಅದರ ಪವರ್ ಕೇಬಲ್ಗಳು, ಕೀಬೋರ್ಡ್ ಮತ್ತು ಮೌಸ್ ಇವೆಲ್ಲವೂ ಅವುಗಳಿಗೆ ಹೊಂದುವಂತೆ ಒಂದೇ ಬಣ್ಣದ್ದು ದೊರೆಯುತ್ತವೆ. ಇದು ಕೂಡ M1 SoC ವೈಶಿಷ್ಟ್ಯ ಹೊಂದಿದೆ. ಇದು ಎರಡು ಬಗೆಯ ಪರ್ಫಾರ್ಮೆನ್ಸ್ನಲ್ಲಿ ಲಭ್ಯ ಇದೆ.
ಇದಕ್ಕೆ ಮ್ಯಾಕ್OS Big Sur (ಆಪರೇಟಿಂಗ್ ಸಿಸ್ಟಮ್) ಜತೆಗೆ ಯೂನಿವರ್ಸಲ್ ಆಪ್ಗಳ ಅನುಕೂಲ ದೊರೆಯುತ್ತದೆ. ಫುಲ್ ಎಚ್ಡಿ ಫೇಸ್ಟೈಮ್ ಕ್ಯಾಮೆರಾ, ಆರು-ಸ್ಪೀಕರ್ ಆಡಿಯೋ ಔಟ್ಪುಟ್ ಮತ್ತಿತರ ವೈಶಿಷ್ಟ್ಯಗಳಿವೆ. ಇನ್ನು ಹೊಸ ಐಮ್ಯಾಕ್ನಲ್ಲಿ ಥರ್ಮಲ್ ಪ್ಲೇಟ್ ಬದಲಿಸಲಾಗಿದೆ. ಇದರಿಂದಾಗಿ ಹೆಚ್ಚಿನ ಶಬ್ದ ಮಾಡದಂತೆ ಕಾರ್ಯ ನಿರ್ವಹಿಸುತ್ತದೆ. ಐಮ್ಯಾಕ್ನಲ್ಲಿ ಯುಎಸ್ಬಿ-ಸಿ 4 ಪೋರ್ಟ್ಗಳು, ಜತೆಗೆ ಎರಡು ಥಂಡರ್ಬೋಲ್ಟ್ 4, 6K ತನಕ ಹೊರಗಿನ ಡಿಸ್ಪ್ಲೇ ಸಪೋರ್ಟ್, ಪವರ್ ಬ್ರಿಕ್ನಲ್ಲಿ ಎಥರ್ನೆಟ್ ಪೋರ್ಟ್ ಇದೆ. 8K ವಿಡಿಯೋದ ಕೆಲಸ ಕೂಡ ಇದರಲ್ಲಿ ಮಾಡಬಹುದು. ಜತೆಗೆ ಏಕಕಾಲಕ್ಕೆ ಹಲವು ಕೆಲಸಗಳನ್ನು ಮಾಡಬಹುದಾಗಿದೆ. ಇದು ಹೇಗೆ ಕಾರ್ಯ ನಿರ್ವಹಿಸುತ್ತದೋ ಅದೇ ಬಗೆಯಲ್ಲಿ ಐಪ್ಯಾಡ್ ಪ್ರೋ ಕೂಡ ಕಾರ್ಯ ನಿರ್ವಹಿಸುತ್ತದೆ ಎಂದು ಆಪಲ್ ಹೇಳಿಕೊಂಡಿದೆ. ಹೊಸ ಕ್ಯಾಮೆರಾ ಪರಿಣಾಮಕಾರಿ ಆಗಿದ್ದು, ರಿಯಲ್- ಟೈಮ್ ಎಆರ್ ಮತ್ತು ವಿಆರ್ ವಿಶ್ಯುಯಲ್ಗಳನ್ನು ಹೊರತರಬಲ್ಲ ಸಾಮರ್ಥ್ಯ ಇದಕ್ಕಿದೆ.
ಐಒಎಸ್ನಲ್ಲಿ ಇರುವ ಫೈಂಡ್ ಮೈ ಆ್ಯಪ್ ಜತೆಗೆ ಏರ್ಟ್ಯಾಗ್ ಸಿಂಕ್ ಆಗುತ್ತದೆ. ಈ ಬಗ್ಗೆ ಒಂದು ವರ್ಷದಿಂದ ವದಂತಿಗಳು ಹರಿದಾಡುತ್ತಲೇ ಇದ್ದವು. ಬಳಕೆದಾರರು ತಮ್ಮ ಕೀಗಳು, ವ್ಯಾಲೆಟ್ಗಳನ್ನು ಹುಡುಕುವುದಕ್ಕೆ ಟ್ರ್ಯಾಕರ್ಸ್ನಲ್ಲಿ ಫೀಚರ್ ಇದೆ. ಆಪಲ್ ಟಿವಿ 4Kಗೆ ಸಿರಿ ರಿಮೋಟ್ ಇದೆ. ಇದರ ಜತೆಗೆ ಮುಖ್ಯವಾಗಿ ಹೈ ಫ್ರೇಮ್ ರೇಟ್ ಎಚ್ಡಿಆರ್ ಪ್ಲೇಬ್ಯಾಕ್ ಇದೆ. ಇದರಲ್ಲಿ ಟೀವಿ ಕ್ಯಾಲಿಬ್ರೇಷನ್ ಮೋಡ್ ಇದ್ದು, ಇದು ಐಫೋನ್ ಅನ್ನು ಬಳಸಿ, ಟೀವಿಯನ್ನು ಪ್ರೊಫೆಷನಲ್ ಸ್ಟ್ಯಾಂಡರ್ಡ್ಸ್ ಮಟ್ಟಕ್ಕೆ ಹೊಂದಿಸುತ್ತದೆ. ಅತಿ ಮುಖ್ಯವಾದ ಮತ್ತೊಂದು ಅಪ್ಡೇಟ್ ಅಂದರೆ, ಅದು ಐಫೋನ್ ಮತ್ತು ಐಫೋನ್ 12 ಮಿನಿ ಇವೆರಡು ನೇರಳೆ ಬಣ್ಣದಲ್ಲಿ ದೊರೆಯುತ್ತವೆ. ಅದರ ಜತೆಗೆ ಆಪಲ್ ಕಾರ್ಡ್ ಬಗ್ಗೆಯೂ ಹೇಳಲಾಯಿತು.
ಭಾರತದಲ್ಲಿ ಯಾವುದರ ಬೆಲೆ ಎಷ್ಟು?
* ಹೊಸ ಆಪಲ್ ಟೀವಿ 4K ಜತೆಗೆ ಹೊಸ ಸಿರಿ ರಿಮೋಟ್: ರೂ. 18,990
* ಈ ಹಿಂದಿನ ಆಪಲ್ ಟೀವಿಗೂ ಬಳಸಬಹುದಾದ ರಿಮೋಟ್: ರೂ. 8,500 (ಏಪ್ರಿಲ್ 30ರಿಂದ ಪ್ರೀಆರ್ಡರ್, ಮೇ ಮಧ್ಯದಿಂದ ಮಾರಾಟ)
* ಏರ್ಟ್ಯಾಗ್: ಒಂದಕ್ಕೆ ರೂ. 3,190 ಹಾಗೂ 4ಕ್ಕೆ 10,900 (ಏಪ್ರಿಲ್ 30ರಿಂದ ಮಾರಾಟ)
* ನೇರಳೆ ಐಫೋನ್ (ಮತ್ತು 12 ಮಿನಿ): ಆರಂಭಿಕ ಬೆಲೆ ಮಿನಿ ರೂ. 69,900 ಹಾಗೂ ಐಫೋನ್ 12ಕ್ಕೆ ರೂ. 79,900
* ಐಮ್ಯಾಕ್ ಎರಡು ಪರ್ಫಾರ್ಮೆನ್ಸ್ ವೇರಿಯೆಂಟ್ನಲ್ಲಿ ಬರುತ್ತದೆ: ಬೇಸ್ ವೇರಿಯೆಂಟ್ ರೂ. 1,19,900ರಿಂದ ಶುರು, ನಾಲ್ಕು ಬಣ್ಣದಲ್ಲಿ ಲಭ್ಯ. ಮೇಲ್ಸ್ತರದ ಎರಡು ಸಂಗ್ರಹ ಸಾಮರ್ಥ್ಯದ್ದು 256GB ಮತ್ತು 512GB ಬರುತ್ತದೆ. ಇದರ ಬೆಲೆ ಕ್ರಮವಾಗಿ ರೂ. 1,39,900 ಮತ್ತು 1,59,900 ಇದೆ.
*ಹೊಸ ಐಪ್ಯಾಡ್ ಪ್ರೋ 11- ಇಂಚಿನ ಮಾಡೆಲ್ 128GB ಸಂಗ್ರಹ ಸಾಮರ್ಥ್ಯದ್ದು ರೂ. 71,900 ಹಾಗೂ ಅಷ್ಟೇ ಸಾಮರ್ಥ್ಯದ 12.9 ಇಂಚಿನ ಮಾಡೆಲ್ಗೆ 99,900 ರೂಪಾಯಿ ಇದೆ. 12.9 ಇಂಚಿನ 2021ರ ಆಪಲ್ ಐಪ್ಯಾಡ್ ಪ್ರೋ 2TB ಸಾಮರ್ಥ್ಯದ್ದು ರೂ. 1,98,900. ಟ್ಯಾಬ್ಲೆಟ್ಗಳ ಪ್ರೀಆರ್ಡರ್ ಏಪ್ರಿಲ್ 30ರಿಂದ ಶುರು ಆಗುತ್ತದೆ. ಮೇ ದ್ವಿತೀಯಾರ್ಧದಿಂದ ಮಾರಾಟ ಶುರು ಆಗುತ್ತದೆ.
ಇದನ್ನೂ ಓದಿ: Apple iPhone 12: ಆಪಲ್ ಐಫೋನ್ 12ರ ಜೋಡಣೆ ಭಾರತದಲ್ಲೇ ಆರಂಭ
(Apple company launched new products on April 20th. Here is the apple products price list in India)
Published On - 7:07 pm, Wed, 21 April 21