
ನವದೆಹಲಿ, ಜುಲೈ 3: ಎಐ ಹೈಪ್ ವಿಪರೀತವಾಗಿ ಹೆಚ್ಚುತ್ತಿದೆ. ಕೃತಕ ಬುದ್ಧಿಮತ್ತೆಯ ಮಾದರಿಗಳನ್ನು ಅಳವಡಿಸಿ, ಇಡೀ ಕಂಪನಿ ಕೆಲಸವನನ್ನು ಆಟೊಮೇಶನ್ ಮಾಡಿ ಯಂತ್ರದ ಶಕ್ತಿಗೆ ಒಪ್ಪಿಸುವ ದೊಡ್ಡ ಕನಸು ಕಾರ್ಪೊರೇಟ್ ಜಗತ್ತಿನಲ್ಲಿ ಮನೆ ಮಾಡುತ್ತಿದೆ. ಮನುಷ್ಯ ಕಾರ್ಮಿಕರೆಲ್ಲರ ಕೆಲಸಗಳನ್ನು ಯಂತ್ರಗಳೇ ಮಾಡಿಬಿಡಬಲ್ಲುವು ಎಂಬ ನಂಬಿಕೆಯಿಂದ ಅನೇಕ ಕಾರ್ಪೊರೇಟ್ ಕಂಪನಿಗಳು ಲೇಆಫ್ ಮೇಲೆ ಲೇ ಆಫ್ ಮಾಡುತ್ತಲೇ ಇವೆ. ಈ ಮಧ್ಯೆ, ಯಂತ್ರಗಳಿಗಿಂತ ಮನುಷ್ಯ ಕಾರ್ಮಿಕರೇ ಎಷ್ಟೋ ವಾಸಿ ಎಂದು ಜ್ಞಾನೋದಯ ಹೊಂದುತ್ತಿರುವ ಕಂಪನಿಗಳು ಒಂದೊಂದಾಗಿ ಹೆಚ್ಚುತ್ತಿವೆ. ಸಿಎನ್ಬಿಸಿ ವರದಿ ಪ್ರಕಾರ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದಿಂದಾಗಿ ಕೆಲಸ ಕಳೆದುಕೊಂಡಿದ್ದ ಉದ್ಯೋಗಿಗಳನ್ನು ಕೆಲ ಕಂಪನಿಗಳು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುತ್ತಿವೆ.
ಕಳೆದ ಕೆಲವು ಸಮಯದಿಂದ ಎಐ ತಂತ್ರಜ್ಞಾನದ ಹಾವಳಿಯಿಂದಾಗಿ ಜಗತ್ತಿನಾದ್ಯಂತ ಹಲವು ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದವು. ಆದರೆ, ಈಗ ಸ್ವಯಂಚಾಲಿತ ತಂತ್ರಜ್ಞಾನಗಳು (automation) ಅಂದುಕೊಂಡಷ್ಟು ಯಶಸ್ಸು ನೀಡದ ಕಾರಣ, ಫೋರ್ಡ್ (Ford), ಐಬಿಎಂ (IBM) ಮತ್ತು ಕಾಮನ್‌ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ (CBA) ನಂತಹ ಪ್ರಮುಖ ಸಂಸ್ಥೆಗಳು ತಾವು ತೆಗೆದುಹಾಕಿದ್ದ ಉದ್ಯೋಗಿಗಳನ್ನು ಮತ್ತೆ ಕೆಲಸಕ್ಕೆ ಕರೆಸಿಕೊಳ್ಳುತ್ತಿವೆ ಎಂದು ಈ ವರದಿ ಹೇಳುತ್ತಿದೆ.
ಇದನ್ನೂ ಓದಿ: ಬಲಿಷ್ಠ ಆರ್ಥಿಕ ಸೂಚಕಗಳು: ಭಾರತದ ಬೆಳವಣಿಗೆಯ ಹಾದಿ ಇನ್ನಷ್ಟು ಸುದೃಢ
ವಾಹನಗಳ ಗುಣಮಟ್ಟವನ್ನು ಪರಿಶೀಲಿಸಲು ಫೋರ್ಡ್ ಸಂಸ್ಥೆಯು (Ford) ಎಐ ತಂತ್ರಜ್ಞಾನವನ್ನು ಬಳಸಿತ್ತು. ಆದರೆ ತಂತ್ರಜ್ಞಾನವು ಗುಣಮಟ್ಟದ ದೋಷಗಳನ್ನು ಪತ್ತೆಹಚ್ಚಲು ವಿಫಲವಾದಾಗ, ಕಂಪನಿಯು ಕಳೆದ ಮೂರು ವರ್ಷಗಳಲ್ಲಿ 350 ಕ್ಕೂ ಹೆಚ್ಚು ಅನುಭವಿ ಇಂಜಿನಿಯರ್‌ಗಳನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಂಡಿದೆ. ಈ ಅನುಭವಿಗಳು ಬಂದ ನಂತರ ಎಐ ಪರಿಕರಗಳನ್ನು ಸುಧಾರಿಸಿದ್ದಲ್ಲದೆ, ಕಂಪನಿಗೆ ಕೋಟ್ಯಂತರ ರೂಪಾಯಿ ವಾರಂಟಿ ಮತ್ತು ವಾಹನ ಮರುಕರೆಸಿಕೊಳ್ಳುವ (recall) ವೆಚ್ಚವನ್ನು ಉಳಿಸಿಕೊಟ್ಟಿದ್ದಾರೆ.
ಕಳೆದ ವರ್ಷ ಕಾಮನ್‌ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ (CBA) ತನ್ನ ಗ್ರಾಹಕ ಸೇವಾ ವಿಭಾಗದ (Customer Service) 40 ಕ್ಕೂ ಹೆಚ್ಚು ಉದ್ಯೋಗಿಗಳನ್ನು ತೆಗೆದುಹಾಕಿ, ಅವರ ಜಾಗಕ್ಕೆ ಎಐ ವಾಯ್ಸ್ ಬೋಟ್ (AI voice bot) ಅನ್ನು ನಿಯೋಜಿಸಿತ್ತು. ಆದರೆ, ಈ ತಂತ್ರಜ್ಞಾನವು ಗ್ರಾಹಕರ ಒತ್ತಡ ಮತ್ತು ವಿನಂತಿಗಳನ್ನು ನಿಭಾಯಿಸಲು ಸಾಧ್ಯವಾಗದೆ ಕರೆಗಳ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು. ಇದರಿಂದಾಗಿ ಬ್ಯಾಂಕ್ ತನ್ನ ನಿರ್ಧಾರವನ್ನು ಬದಲಾಯಿಸಿ, ಉದ್ಯೋಗಿಗಳನ್ನು ಮತ್ತೆ ಕೆಲಸಕ್ಕೆ ತಂದಿದೆ.
ಅಮೆರಿಕದ ಚಿಪ್ ಕಂಪನಿಯಾದ ಐಬಿಎಂನಲ್ಲಿ (IBM) ಮಾನವ ಸಂಪನ್ಮೂಲ (HR) ವಿಭಾಗದಲ್ಲಿ ಎಐ ವ್ಯವಸ್ಥೆಯನ್ನು ಜಾರಿಗೆ ತಂದಾಗ, ಅದು ಶೇ. 94 ರಷ್ಟು ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸಿತು. ಆದರೆ ನೈತಿಕ ನಿರ್ಧಾರಗಳು (ethical judgment) ಬೇಕಾಗುವ ಬಾಕಿ ಉಳಿದ ಶೇ. 6 ರಷ್ಟು ಪ್ರಮುಖ ಸಂದರ್ಭಗಳನ್ನು ನಿಭಾಯಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ಜೊತೆಗೆ, ಆರಂಭಿಕ ಹಂತದ (entry-level) ಉದ್ಯೋಗಿಗಳನ್ನು ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನುರಿತ ಉದ್ಯೋಗಿಗಳ ಕೊರತೆ ಎದುರಾಗುತ್ತದೆ ಎಂಬುದನ್ನು ಅರಿತು, ಐಬಿಎಂ ಈಗ ಹೊಸಬರ ನೇಮಕಾತಿಯನ್ನು ಮೂರು ಪಟ್ಟು ಹೆಚ್ಚಿಸಲು ನಿರ್ಧರಿಸಿದೆ.
ಇದನ್ನೂ ಓದಿ: ತೈಲ ಬೆಲೆ ಇಳಿದರೂ ಭಾರತದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಮಾಡಿಲ್ಲ ಯಾಕೆ? ಕಾರಣ ಬಿಚ್ಚಿಟ್ಟ ಸಚಿವ ಹರ್ದೀಪ್
‘Robert Half’ ಎಂಬ ಸ್ಟಾಫಿಂಗ್ ಸಂಸ್ಥೆಯ ದತ್ತಾಂಶದ ಪ್ರಕಾರ, ಅಮೆರಿಕಾದಲ್ಲಿ ಎಐ ಕಾರಣ ನೀಡಿ ಉದ್ಯೋಗಿಗಳನ್ನು ತೆಗೆದುಹಾಕಿದ್ದ ಪ್ರತಿ ಮೂವರು ಹೈರಿಂಗ್ ಮ್ಯಾನೇಜರ್‌ಗಳಲ್ಲಿ ಒಬ್ಬರು, ಅದೇ ಹುದ್ದೆಗೆ ಅಥವಾ ಅದಕ್ಕೆ ಸಮನಾದ ಹುದ್ದೆಗೆ ಮತ್ತೆ ಮನುಷ್ಯರನ್ನೇ ನೇಮಕ ಮಾಡಿಕೊಂಡಿದ್ದಾರೆ.
‘Orgvue’ ವರದಿಯ ಪ್ರಕಾರ, ಎಐ ತಂತ್ರಜ್ಞಾನ ಅಳವಡಿಕೆಯಿಂದಾಗಿ ಉದ್ಯೋಗ ಕಡಿತ ಮಾಡಿದ್ದ ಶೇ. 55 ರಷ್ಟು ಉದ್ಯಮ ಮುಖ್ಯಸ್ಥರು, ತಾವು ಮಾಡಿದ ನಿರ್ಧಾರ ತಪ್ಪು ಎಂದು ಒಪ್ಪಿಕೊಂಡಿದ್ದಾರೆ.
ಒಟ್ಟಾರೆಯಾಗಿ, ಎಐ ತಂತ್ರಜ್ಞಾನವು ಮನುಷ್ಯರ ಬುದ್ಧಿವಂತಿಕೆ ಮತ್ತು ಅನುಭವಕ್ಕೆ ಸಂಪೂರ್ಣ ಪರ್ಯಾಯವಾಗಲು ಸಾಧ್ಯವಿಲ್ಲ ಎಂಬುದು ಈಗ ದೊಡ್ಡ ಕಂಪನಿಗಳಿಗೆ ಮನವರಿಕೆಯಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:19 pm, Fri, 3 July 26