ತೈಲ ಬೆಲೆ ಇಳಿದರೂ ಭಾರತದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಮಾಡಿಲ್ಲ ಯಾಕೆ? ಕಾರಣ ಬಿಚ್ಚಿಟ್ಟ ಸಚಿವ ಹರ್ದೀಪ್
Why petrol price not reduced despite crude oil rates coming down: ಇರಾನ್ ಯುದ್ಧದಿಂದ ನಾಲ್ಕು ತಿಂಗಳು ಬಿಕ್ಕಟ್ಟು ಉದ್ಭವಿಸಿ, ತೈಲ ಬೆಲೆ ಗಗನಕ್ಕೇರಿತ್ತು. ಇದೀಗ ತೈಲ ಬೆಲೆ ಯುದ್ಧಕ್ಕೆ ಪೂರ್ವದ ಸ್ಥಿತಿಗೆ ಮರಳಿದೆ. ಆದರೆ, ತೈಲ ಬೆಲೆ ಇಳಿದರೂ ಭಾರತದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್, ಡೀಸಲ್ ಬೆಲೆಗಳನ್ನು ಇಳಿಸಿಲ್ಲ. ನಯಾರಾದ ಪೆಟ್ರೋಲ್ ಬೆಲೆ ಇಳಿದರೂ ಇವು ದರ ಕಡಿಮೆ ಮಾಡದಿರಲು ಏನು ಕಾರಣ? ಸಚಿವ ಹರ್ದೀಪ್ ಸಿಂಗ್ ಪುರಿ ವಿವರಿಸಿದ್ದಾರೆ.

ಮುಖ್ಯಾಂಶಗಳು
- ಯುದ್ಧದಿಂದ ತೈಲ ಬೆಲೆ ಗಗನಕ್ಕೇರಿ, ಇದೀಗ ಪೂರ್ವದ ಸ್ಥಿತಿಗೆ ಮರಳಿದೆ.
- ಆದರೆ, ತೈಲ ಬೆಲೆ ಇಳಿದರೂ ಭಾರತದಲ್ಲಿ ಪೆಟ್ರೋಲ್, ಡೀಸಲ್ ಬೆಲೆಗಳನ್ನು ಇಳಿಸಿಲ್ಲ.
- ನಯಾರಾದ ಪೆಟ್ರೋಲ್ ಬೆಲೆ ಇಳಿದರೂ ಇವು ದರ ಕಡಿಮೆ ಮಾಡದಿರಲು ಏನು ಕಾರಣ?
ನವದೆಹಲಿ, ಜುಲೈ 2: ಜಾಗತಿಕವಾಗಿ ತೈಲ ಬೆಲೆಗಳು ಗಣನೀಯವಾಗಿ ಇಳಿಕೆಯಾಗಿವೆ. ಅದರ ಬೆನ್ನಲ್ಲೇ ಮೊನ್ನೆ ನಯಾರ ಎನರ್ಜಿ ತನ್ನ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಕಡಿಮೆ ಮಾಡಿತ್ತು. ಆದರೆ, ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (Oil Marketing Companies) ಹಾಗೂ ಇತರ ಪೆಟ್ರೋಲ್ ಬಂಕ್‌ಗಳಲ್ಲಿ ಬೆಲೆ ತಗ್ಗಿಸಿಲ್ಲ. ಕಚ್ಚಾ ತೈಲ ಬೆಲೆ ತಗ್ಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಯಾವಾಗ ಇಳಿಕೆಯಾಗಲಿವೆ ಎಂಬ ಸಾರ್ವಜನಿಕರ ಬಹುದಿನಗಳ ಪ್ರಶ್ನೆಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಅವರು ಮಹತ್ವದ ಸುಳಿವು ನೀಡಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆಗಳು ಹೀಗೆಯೇ ಸ್ಥಿರವಾಗಿ ಮುಂದುವರಿದರೆ, ಮುಂದಿನ ಕೆಲವು ವಾರಗಳಲ್ಲಿ ಇಂಧನ ದರ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
“ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಪ್ರಸ್ತುತ ಇಳಿಮುಖವಾಗಿವೆ. ಆದರೆ, ಈ ಕಡಿಮೆ ದರದ ಸ್ಥಿತಿಯು ಮುಂದಿನ ಕೆಲವು ವಾರಗಳ ಕಾಲ ಹೀಗೆಯೇ ಸ್ಥಿರವಾಗಿ ಮುಂದುವರಿದರೆ, ನಾವು ದೇಶೀಯ ಮಾರುಕಟ್ಟೆಯಲ್ಲಿ ತೈಲ ದರ ಪರಿಷ್ಕರಣೆ (ಇಳಿಕೆ) ಕುರಿತು ಖಂಡಿತವಾಗಿಯೂ ಮರುಚಿಂತನೆ ನಡೆಸಲಿದ್ದೇವೆ,” ಎಂದು ಹರ್ದೀಪ್ ಸಿಂಗ್ ಪುರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತತ್ಕ್ಷಣಕ್ಕೆ ಪೆಟ್ರೋಲ್ ಬೆಲೆ ಇಳಿಸದೇ ಇರಲು ಏನು ಕಾರಣ?
ತೈಲ ಕಂಪನಿಗಳು ಸಾಮಾನ್ಯವಾಗಿ ಕಚ್ಚಾ ತೈಲವನ್ನು 2 ತಿಂಗಳ ಮುಂಚಿತವಾಗಿಯೇ ಬುಕ್ ಮಾಡುತ್ತವೆ. ಪ್ರಸ್ತುತ ಕಂಪನಿಗಳು ಸಂಸ್ಕರಿಸುತ್ತಿರುವ (Processing) ಕಚ್ಚಾ ತೈಲವು ಏಪ್ರಿಲ್ ಅಥವಾ ಮೇ ತಿಂಗಳ ಆರಂಭದಲ್ಲಿ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ (West Asia Conflict) ಸಂದರ್ಭದಲ್ಲಿ ಗರಿಷ್ಠ ಬೆಲೆಗೆ ಖರೀದಿಸಿದ್ದಾಗಿದೆ. ಹಾಗಾಗಿಯೇ ಜಾಗತಿಕವಾಗಿ ಬೆಲೆ ಇಳಿದಿದ್ದರೂ ತಕ್ಷಣವೇ ಭಾರತದಲ್ಲಿ ದರ ಇಳಿಸಲು ಸಾಧ್ಯವಾಗಿಲ್ಲ ಎಂದು ಸಚಿವರು ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: ಮೋದಿ ಉದ್ಘಾಟನೆಗೂ ಮುನ್ನವೇ ಸೆಮಿಕಂಡಕ್ಟರ್ ಚಿಪ್ಗಳ ರಫ್ತು ಆರಂಭಿಸಿದ ಮುರುಗಪ್ಪ ಗ್ರೂಪ್ ಕಂಪನಿ
ತೈಲ ಕಂಪನಿಗಳ ನಷ್ಟ ಮತ್ತು ಪ್ರಸ್ತುತ ಸ್ಥಿತಿ
ಪಶ್ಚಿಮ ಏಷ್ಯಾ ಯುದ್ಧದ ಸಮಯದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು $120 ಡಾಲರ್‌ಗೆ ಏರಿಕೆಯಾಗಿತ್ತು. ಆದರೆ, ಭಾರತ ಸರ್ಕಾರವು ಗ್ರಾಹಕರಿಗೆ ಹೊರೆಯಾಗದಂತೆ ತಡೆಯಲು ಬೆಲೆಗಳನ್ನು ಗಗನಕ್ಕೇರಲು ಬಿಡಲಿಲ್ಲ. ಇದರಿಂದಾಗಿ ತೈಲ ಮಾರುಕಟ್ಟೆ ಕಂಪನಿಗಳು (OMCs) ಜೂನ್ 30ರ ವರೆಗಿನ ಅವಧಿಯಲ್ಲಿ ಒಟ್ಟು 74,781 ಕೋಟಿ ರೂ ಭಾರಿ ನಷ್ಟವನ್ನು ಭರಿಸಿವೆ.
ಜೂನ್ ದ್ವಿತೀಯಾರ್ಧದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ತಿಳಿಗೊಳಿಸಲು ಒಪ್ಪಂದ ಏರ್ಪಟ್ಟ ನಂತರ ಜಾಗತಿಕ ತೈಲ ಬೆಲೆಗಳು ಹಳೆಯ ಸ್ಥಿತಿಗೆ ಅಂದರೆ ಪ್ರತಿ ಬ್ಯಾರೆಲ್‌ಗೆ ಸುಮಾರು $70 ಡಾಲರ್‌ಗೆ ಇಳಿದಿವೆ.
ಇತ್ತೀಚೆಗಷ್ಟೇ ಪ್ರಮುಖ ಖಾಸಗಿ ಇಂಧನ ವಿತರಕ ಸಂಸ್ಥೆಯಾದ ‘ನಯಾರಾ ಎನರ್ಜಿ’ (Nayara Energy) ತನ್ನ 7,000ಕ್ಕೂ ಹೆಚ್ಚು ಬಂಕ್‌ಗಳಲ್ಲಿ ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ ರೂ. 5 ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ರೂ. 3 ಇಳಿಕೆ ಮಾಡಿದೆ. ಇದು ಸರ್ಕಾರಿ ತೈಲ ಕಂಪನಿಗಳ ಮೇಲೂ ದರ ಇಳಿಸಲು ಒತ್ತಡ ತಂದಿದೆ.
ಇದನ್ನೂ ಓದಿ: ಹೊಸ ಇನ್ಕಮ್ ಟ್ಯಾಕ್ಸ್ ಕಾಯ್ದೆ; 2 ಐಟಿಆರ್ಗಳನ್ನು ಸಲ್ಲಿಸಬೇಕಾ ಎನ್ನುವ ಗೊಂದಲ ಕೆಲವರಲ್ಲಿ; ಇಲಾಖೆ ಸ್ಪಷ್ಟನೆ ಇದು
ವಿಮಾನ ಇಂಧನ, ಎಲ್ಪಿಜಿ ದರ ಇಳಿಕೆ
ದೇಶೀಯ ಏರ್‌ಲೈನ್ಸ್‌ಗಳಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಜುಲೈ 1 ರಿಂದ ಜಾರಿಗೆ ಬರುವಂತೆ ವಿಮಾನ ಇಂಧನ (ATF – Aviation Turbine Fuel) ದರವನ್ನು ಪ್ರತಿ ಲೀಟರ್‌ಗೆ 5 ರೂಪಾಯಿಗಳಷ್ಟು ಕಡಿತಗೊಳಿಸಿದೆ. ಇದರಿಂದಾಗಿ ಎಟಿಎಫ್ ದರ ಲೀಟರ್‌ಗೆ 115 ರೂಪಾಯಿಗಳಿಂದ 110 ರೂಗೆ ಇಳಿಕೆಯಾಗಿದೆ.
ಕಮರ್ಷಿಯಲ್ ಎಲ್ಪಿಜಿ ದರಗಳನ್ನೂ ಸರ್ಕಾರ ಕಡಿಮೆ ಮಾಡಿದೆ. ಈ ವಾಣಿಜ್ಯ ಗ್ಯಾಸ್ ಬೆಲೆ ಕಳೆದ ಒಂದು ವರ್ಷದಲ್ಲಿ ನಾಲ್ಕು ಬಾರಿ ಹೆಚ್ಚಳಗೊಂಡಿತ್ತು. ಈಗ ಬೆಲೆ ಸ್ವಲ್ಪ ಕಡಿಮೆ ಆಗಿರುವುದು ಹೊಟೆಲ್ ಉದ್ಯಮಗಳು ಹಾಗೂ ಗ್ರಾಹಕರಿಗೆ ಹೊರೆ ಕಡಿಮೆಗೊಂಡಂತಾಗಿದೆ.
ಒಟ್ಟಾರೆಯಾಗಿ, ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬದಲಾವಣೆಗಳು ಹೀಗೆಯೇ ಮುಂದುವರಿದರೆ, ಮುಂಬರುವ ದಿನಗಳಲ್ಲಿ ದೇಶದ ಸಾಮಾನ್ಯ ವಾಹನ ಸವಾರರಿಗೂ ಪೆಟ್ರೋಲ್-ಡೀಸೆಲ್ ದರ ಇಳಿಕೆಯ ರೂಪದಲ್ಲಿ ದೊಡ್ಡ ರಿಲೀಫ್ ಸಿಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:47 pm, Thu, 2 July 26




